ಒಳ ಚರಂಡಿಯಲ್ಲಿ ಹರಿಯದ ಸುಳ್ಯದ ಕೊಳಚೆ ನೀರು

Advt_Headding_Middle
Advt_Headding_Middle

ಕಂದಡ್ಕ ಹೊಳೆಯ ಮೂಲಕ ಪಯಸ್ವಿನಿಯ ಒಡಲು ಸೇರುತ್ತಿದೆ, ಒಳಚರಂಡಿ ಆಗಿಯೂ ಉಪಯೋಗಕ್ಕಿಲ್ಲ


ಸುಳ್ಯ ನಗರದ ಹೋಟೆಲ್‌ಗಳ, ಚಿಕನ್ ಸೆಂಟರ್‌ಗಳ, ಮೀನು ಮಾರಾಟ ಮಳಿಗೆಗಳ, ಹಾಸ್ಟೆಲ್, ಆಸ್ಪತ್ರೆಗಳ ತ್ಯಾಜ್ಯ ತೆರೆದ ಚರಂಡಿಯಲ್ಲಿ ಹರಿದು ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗುತ್ತಿದೆ ಎಂಬ ಕಾರಣಕ್ಕಾಗಿ ಸುಳ್ಯಕ್ಕೆ ‘ಒಳಚರಂಡಿ ಯೋಜನೆ ಮಂಜೂರಾಯಿತು. ೩ ಕೋಟಿ ರೂ ವೆಚ್ಚ ದಲ್ಲಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿತು. ಆದರೆ ಈ ಒಳಚರಂಡಿಯನ್ನು ಸಮರ್ಪಕ ರೀತಿಯಲ್ಲಿ ಕಾರ್ಯ ರೂಪಕ್ಕೆ ತಾರದೆ ಇರುವುದರಿಂದ ನಗರದ ಕೊಳಚೆ ಎಲ್ಲ ತೆರೆದ ಚರಂಡಿಯಲ್ಲೆ ಹರಿದು, ಹಿಂದಿನಂತೆಯೇ ಕಾನತ್ತಿಲ ಬೈಲಿನ ಮೂಲಕ ಕಂದಡ್ಕ ಹೊಳೆ ಸೇರುತ್ತಿದೆ. ಅಲ್ಲಿಂದ ಕೊಳಚೆ ಹರಿದು ಜೀವನದಿ ಎನಿಸಿರುವ ಪಯಸ್ವಿನಿಯ ಒಡಲು ಸೇರಿ ಸಾರ್ವಜನಿಕ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಆದರೆ ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳಾಗಲೀ ದಿವ್ಯ ನಿರ್ಲಕ್ಷ್ಯ ದಿಂದಿದ್ದಾರೆ.


ಸುಳ್ಯದ ಸಾಮಾಜಿಕ ಹೋರಾಟ ಗಾರ ದಿನಕರ ಕಾನತ್ತಿಲರವರ ನಿರಂತರ ದೂರುಗಳ ಪರಿಣಾಮವಾಗಿ ೧೫ ವರ್ಷಗಳ ಹಿಂದೆ ಸುಳ್ಯ ನಗರಕ್ಕೆ ಒಳಚರಂಡಿ ಯೋಜನೆ ಮಂಜೂರಾಗಿ, ಕಾಮಗಾರಿ ಕೂಡಾ ಪೂರ್ಣಗೊಂಡಿತು. ಆದರೆ ಕಾಮಗಾರಿ ಸಮರ್ಪಕವಾಗಿಲ್ಲ- ಆಗಿದೆ ಎಂಬ ವಾದ-ಪ್ರತಿವಾದದಲ್ಲೆ ಕೆಲವು ವರ್ಷ ಕಳೆದು ಬಳಿಕ ಸುಮಾರು ೬೦ ರಷ್ಟು ತ್ಯಾಜ್ಯ ಸಂಪರ್ಕಗಳನ್ನು ಒಳಚರಂಡಿಗೆ ನೀಡಲಾಯಿತು.

ಅದು ಕೂಡಾ ಅಲ್ಲಲ್ಲಿ ಮ್ಯಾನ್ ಹೋಲ್‌ಗಳಲ್ಲಿ ತುಂಬಿ ಮೇಲೆ ಬಂದು ಹೊರಗೆ ಧುಮುಕಿ ದುರ್ನಾತ ಸಹಿಸಲಸಾಧ್ಯವಾಗುವಾಗ ನಗರ ಪಂಚಾಯತ್‌ನವರು ಬಂದು ಅದನ್ನು ಶುದ್ದೀಕರಿಸುವ ಪ್ರಕ್ರಿಯೆಗಳು ಕೂಡಾ ನಡೆಯ ತೊಡಗಿತು.
ಆದರೆ ನಗರ ವ್ಯಾಪ್ತಿಯ ಎಲ್ಲ ವ್ಯಾಪಾರಿ ಮಳಿಗೆಗಳ, ಹಾಸ್ಟೆಲ್, ಆಸ್ಪತ್ರೆಗಳ ತ್ಯಾಜ್ಯಗಳ ಸಂಪರ್ಕವನ್ನು ಒಳಚರಂಡಿಗೆ ಕೊಡಿಸಿ, ಅದು ಸರಾಗವಾಗಿ ಚೇಂಬರಿಂದ ಚೆಂಬರಿಗೆ ಹರಿದು ವೆಟ್‌ವೆಲ್‌ಸೇರಿ, ಅಲ್ಲಿಂದ ಹಳೆಗೇಟು ಹೊಸಗದ್ದೆಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಸಮರ್ಪಕವಾಗಿ ಸಾಗಿಸುವ ವ್ಯವಸ್ಥೆಯಾಗಲೀ, ತ್ಯಾಜ್ಯವನ್ನು ಒಳಚರಂಡಿಗೆ ಬಿಡುವವರಿಂದ ನಿಗದಿತ ಶುಲ್ಕ ಸ್ವೀಕರಿಸಿ, ತ್ಯಾಜ್ಯದ ತಲೆ ಬಿಸಿಯಿಂದ ಅವರನ್ನು ಮುಕ್ತರನ್ನಾಗಿಸುವ ಪ್ರಕ್ರಿಯೆಯಾಗಲೀ ನಗರ ಪಂಚಾಯತ್ ಕಡೆಯಿಂದ ಆಗಲಿಲ್ಲ. ಇದರಿಂದಾಗಿ ಶೇಕಡಾ ೫ ರಷ್ಟು ತ್ಯಾಜ್ಯ ಮಾತ್ರ ಒಳಚರಂಡಿಯ ಪೈಪುಗಳಲ್ಲಿ ಹರಿಯುವ ಹಾಗೂ ಶೇ.೯೫ರಷ್ಟು ತ್ಯಾಜ್ಯ ತೆರೆದ ಚರಂಡಿಯಲ್ಲೆ ಹರಿದು ಕಂದಡ್ಕ ಹೊಳೆ ಸೇರುವ ಘಟನೆ ನಿರಂತರ ನಡೆಯುತ್ತಲೇ ಇದೆ. ಅದರ ಜೊತೆಗೆ ಕೆಲವು ಕೋಳಿ ವ್ಯಾಪಾರಸ್ಥರು ತಮ್ಮಲ್ಲಿ ಉತ್ಪತ್ತಿಯಾಗುದ ಘನತ್ಯಾಜ್ಯವನ್ನು ಕೂಡಾ ಒಳಚರಂಡಿಯ ಚೇಂಬರ್‌ನೊಳಕ್ಕೆ ಹಾಕುವ ಮೂಲಕ ವ್ಯವಸ್ಥೆಯನ್ನು ಕೆಡಿಸುವ ಕಯ್ದಲ್ಲಿ ತೊಡಗಿದ್ದಾರೆ. ಇದಕ್ಕೆಲ್ಲ ಸೂಕ್ತ ಕ್ರಮಕೈಗೊಂಡು – ಸರಿಯಾದ ವ್ಯವಸ್ಥೆ ರೂಪಿಸಿ ಒಳಚರಂಡಿಯ ಉzಶವನ್ನು ಸಾರ್ಥಕಗೊಳಿಸಬೇಕಾದ ನಗರ ಪಂಚಾಯತ್ ಅಧಿಕಾರಿಗಳು ‘ಏನೂ ಮಾಡಲು ಆಗುತ್ತಿಲ್ಲ’ ಎಂದು ಕೈ ಚೆಲ್ಲಿ ಕುಳಿತಿದ್ದಾರೆ.
ಈಗ ನಗರದ ಕೊಳಚೆ ಎಲ್ಲ ಮೊಗರ್ಪಣೆ ಸೇತುವೆಯ ಬಳಿ ಕಂದಡ್ಕ ಹೊಳೆಗೆ ಸೇರುತ್ತಿದೆ. ಆ ನೀರು ಹಸಿರು -ಕಪ್ಪು ಬಣ್ಣಕ್ಕೆ ತಿರುಗಿ ವಾಸನೆ ಬರತೊಡಗಿದೆ. ಮಳೆ ಬಂದ ಕೂಡಲೇ ಅದು ಪಯಸ್ವಿನಿ ಕಡೆಗೆ ಹರಿದು ನದಿ ಒಡಲು ಸೇರುತ್ತದೆ. ಇದನ್ನು ಸರಿ ಮಾಡಬೇಕಾದವರು ಯಾರು?.
ಕಲ್ ಚೆರ್ಪೆಯಲ್ಲಿ ಸ್ಥಾಪಿಸಲಾದ ಘನತ್ಯಾಜ್ಯ ಘಟಕವನ್ನು ವೈಜ್ಞಾನಿಕ ರೀತಿಯಲ್ಲಿ ಮುನ್ನಡೆಸುವುದಾಗಿ ಹೈಕೋರ್ಟಿಗೆ ಬರೆದು ಕೊಟ್ಟೂ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಕಲ್‌ಚೆರ್ಪೆ ಪ್ರದಶವನ್ನು ಗಬ್ಬೆಬ್ಬಿಸಿರುವ ನಗರ ಪಂಚಾಯತು, ಕಸ ವಿಲೇವಾರಿಗೆ ಬೇರೆ ದಾರಿ ಕಾಣದೆ ತನ್ನ ಕಚೇರಿ ಆವರಣವನ್ನೇ ಡಂಪಿಂಗ್ ಯಾರ್ಡ್ ಆಗಿ ಪಪರಿವರ್ತಿಸಿಕೊಂಡಿದೆ. ಹೀಗೆ ಮುಂದುವರಿದರೆ ಅಲ್ಲಿ ಮಾಸಿಕ ಸಭೆ ನಡೆಸಲೂ ಆಗದಂತಹ ಪರಿಸ್ಥಿತಿ ಬಂದೊದಗಿತು ಎಂಬ ಎಚ್ಚರಿಕೆಯೂ ಅವರಲ್ಲಿದ್ದಂತೆ ಕಾಣುತ್ತಿಲ್ಲ.
ಘನತ್ಯಾಜ್ಯದ ಕತೆ ಆ ರೀತಿಯಾ ದರೆ ನಗರದ ದ್ರವ ತ್ಯಾಜ್ಯದ ಪರಿಸ್ಥಿತಿ ಈ ರೀತಿ. ನ.ಪಂ.ಗೆ ಆಡಳಿತಾಧಿಕಾರಿ ಇರುವ ಈ ಸಂದರ್ಭದಲ್ಲಾದರೂ ಇದಕ್ಕೆ ಶಾಶ್ವತ ಪರಿಹಾರಕ್ಕೆ ಹೆಜ್ಜೆ ಇಡಬಹುದೆಂಬ ಆಶಾವಾದ ಜನರಲ್ಲಿದೆ.

ಇಡೀ ನಗರದ ತ್ಯಾಜ್ಯ ನಮ್ಮ ಕಾನತ್ತಿಲ ಬೈಲಲ್ಲಿ ಹರಿದು ಭಾರೀ ಸೊಳ್ಳೆಗಳು ಉತ್ಪತ್ತಿಯಾಗಿ ರೋಗ ಹರಡತೊಡಗಿದಾಗ ನಾನು ಹೋರಾಟ ಆರಂಭಿಸಿದ್ದೆ. ಆ ನಂತರ ಒಳಚರಂಡಿ ಮಂಜೂರಾಗಿ ಕೆಲಸ ನಡೆದರೂ ಹೊರಚರಂಡಿಯಲ್ಲಿ ಕೊಳಚೆ ಹರಿಯುವುದು ನಿಂತಿಲ್ಲ. ಕೊಳಚೆ ನದಿ ಸೇರಿ ಆರೋಗ್ಯಕ್ಕೆ ಮಾರಕವಾಗಿದೆ. ಈ ಕೊಳಚೆಗೆ ಮುಕ್ತಿ ದೊರೆಯಲೇ ಬೇಕು.

– ದಿನಕರ ಕಾನತ್ತಿಲ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.