ವಾರಣಾಸಿಯಲ್ಲಿ ಡಾ| ಯು.ಪಿ.ಶಿವಾನಂದ ಇಂದು ನಾಮಪತ್ರ ಸಲ್ಲಿಕೆ : ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾದ ಸ್ಪರ್ಧೆ

Advt_Headding_Middle
Advt_Headding_Middle

ಆಡಳಿತವು ದಿಲ್ಲಿಯಿಂದ ಹಳ್ಳಿಗಲ್ಲ, ಹಳ್ಳಿಯಿಂದ ದಿಲ್ಲಿಗೆ ಎಂಬುದನ್ನು ಪ್ರತಿಪಾದಿಸುವ ಸಲುವಾಗಿ ರಾಷ್ಟ್ರದ ಪ್ರಮುಖ ನಾಯಕರಾದ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿರುವ ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದರವರು ಸೋಮವಾರ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಲೋಕ ಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸ ಲಿದ್ದಾರೆ. ಶುಕ್ರವಾರ ಅವರು ನಾಮ ಪತ್ರ ಸಲ್ಲಿಸಲು ಪೂರ್ಣ ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ ಅಂದು ಪ್ರಧಾನಿ ನರೇಂದ್ರ ಮೋದಿಯವರು ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಭಾರೀ ಭದ್ರತೆ ಇದ್ದುದರಿಂದ ಸಕಾಲದಲ್ಲಿ ನಾಮಪತ್ರ ಸಲ್ಲಿಸಲು ಸಾಧ್ಯವಾಗಿಲ್ಲ. ಈಗಾಗಲೇ ಅಮೇಠಿ ಕ್ಷೇತ್ರದಿಂದ ಡಾ. ಯು.ಪಿ.ಶಿವಾನಂದರವರು ನಾಮಪತ್ರ ಸಲ್ಲಿಸಿದ್ದಾರೆ.


ರಾಷ್ಟ್ರೀಯ ಮಾಧ್ಯಮಗಳಲ್ಲಿ  ಸುದ್ದಿಯಾದ  ಡಾ. ಯು.ಪಿ.ಶಿವಾನಂದ ಸ್ಪರ್ಧೆ
ಮಹಾತ್ಮ ಗಾಂಧೀಜಿಯವರ ಮತ್ತು ರಾಮರಾಜ್ಯದ ಕನಸನ್ನು ನನಸು ಮಾಡುವ ಸಲುವಾಗಿ ಜನಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಡಾ. ಯು.ಪಿ. ಶಿವಾನಂದರು ಈ ಹಿನ್ನಲೆಯಲ್ಲಿಯೇ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸುತ್ತಿದ್ದಾರೆ.
“ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷಗಳಾದರೂ ಬ್ರಿಟಿಷರ ಕಾಲದ ಆಡಳಿತದ ದಾಸ್ಯದಿಂದ ನಾವು ಮುಕ್ತವಾಗಿಲ್ಲ. ಇಲ್ಲಿ ಪ್ರಜೆ ಗಳೇ ಪ್ರಭುಗಳಾಗಿಲ್ಲ. ನಮ್ಮ ಧ್ವನಿ ಯಾಗಲು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಯು ದಿಲ್ಲಿಯ ಆದೇ ಶಗಳಿಗೆ ಕಾಯುವಂತ ಪರಿಸ್ಥಿತಿ ಇದೆ. ಹೀಗಾಗಬಾರದು. ನಾವು ಆಯ್ಕೆ ಮಾಡಿದ ನಾಯಕರು ನಮ್ಮ ಪ್ರತಿನಿಧಿಯಾಗಬೇಕು.
ಉದಾಹರಣೆಗೆ ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗ, ನೇತ್ರಾವತಿ ನದಿ ತಿರುವು ಯೋಜನೆ ಇಂತಹ ವಿಷಯಗಳಲ್ಲಿ ಜನರು ಮತ್ತು ಜನಪ್ರತಿನಿಧಿಗಳ ವಿರೋಧವಿದ್ದರೂ ಮೇಲಿನವರ ಇಚ್ಛೆಗೆ ಅನುಗುಣವಾಗಿ ನಡೆಯಬೇಕಾಗಿರುವುದರಿಂದ ಜನಪ್ರತಿನಿಧಿಗಳಿಗೆ ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಜನರ ಇಚ್ಛೆಗೆ ಅನುಗುಣವಾಗಿ ಕೆಲಸ ಮಾಡುವ ಶಕ್ತಿ ಬರಬೇಕೆಂಬ ಹಿನ್ನಲೆಯಲ್ಲಿ ನಮ್ಮ ಮತದಾನ ನಮ್ಮ ಪ್ರತಿನಿಧಿಯ ಆಯ್ಕೆಗಾಗಿ ಎಂದಾಗಬೇಕು. ದೇಶದ ನಾಯಕರ ಹೆಸರಿನಲ್ಲಿ ಮತದಾನ ಕೇಳುವುದು ಅಥವಾ ನೀಡುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಬಹುದು ಎಂದು ಪ್ರತಿಪಾದಿಸುವ ಡಾ| ಯು.ಪಿ.ಶಿವಾನಂದರು, ಈ ವಿಚಾರಗಳನ್ನು ದೇಶಾದ್ಯಂತ ಗಮನಕ್ಕೆ ತರುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದ ನಾಯಕರ ಗಮನ ಸೆಳೆಯುವ ಸಲುವಾಗಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಎ.ಐ.ಸಿ.ಸಿ. ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ದೇಶದ ಅನೇಕ ಮಾಧ್ಯಮಗಳು ವರದಿ ಪ್ರಾಶಸ್ತ್ಯ ನೀಡಿ ವರದಿ ಪ್ರಕಟಿಸಿದೆ. ಟಿ.ವಿ.ಮಾಧ್ಯಮಗಳು ಮತ್ತು ಪತ್ರಿಕೆಗಳು ಡಾ. ಯು.ಪಿ.ಶಿವಾನಂದರನ್ನು ಸಂದರ್ಶಿಸಿ ವರದಿ ಪ್ರಸಾರ ಮಾಡಿದೆ.


ಪ್ರಧಾನಿ ಮೋದಿ ವಿರುದ್ಧ ಕನ್ನಡಿಗನ ಸ್ಪರ್ಧೆ ಎಂದು ಪಬ್ಲಿಕ್ ಟಿ.ವಿ. ವರದಿ ಮಾಡಿದ್ದು, ಮೋದಿ ಕ್ಷೇತ್ರದಲ್ಲಿ ಕರಾವಳಿ ಪತ್ರಕರ್ತ ಸ್ಪರ್ಧಿಸುತ್ತಿದ್ದಾರೆ. ಘಟಾನುಘಟಿ ನಾಯಕರೇ ಸ್ಪರ್ಧೆಗೆ ಹಿಂದೆ ಬಿದ್ದಿರುವಾಗ ಕನ್ನಡಿಗರೊಬ್ಬರು ಇಲ್ಲಿ ಸ್ಪಧಿಸುತ್ತಿದ್ದಾರೆ ಎಂದು ಪಬ್ಲಿಕ್ ಟಿವಿ ವರದಿ ಮಾಡಿದ್ದು, ಡಾ. ಯು.ಪಿ.ಶಿವಾನಂದರ ಸಂದರ್ಶನವನ್ನು ಪ್ರಸಾರ ಮಾಡಿದ್ದಾರೆ.

ಮತದಾರರ ಜಾಗೃತಿಗಾಗಿ ಪತ್ರಕರ್ತನ ಸ್ಪರ್ಧೆ ಎಂದು ದಿಗ್ವಿಜಯ ನ್ಯೂಸ್ ವರದಿ ಮಾಡಿದ್ದು, ನಮೋ ವಿರುದ್ಧ ವಾರಣಾಸಿಯಲ್ಲಿ ಕನ್ನಡಿಗ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಚಾನೆಲ್‌ನ ದೆಹಲಿ ಬ್ಯೂರೋ ಮುಖ್ಯಸ್ಥ ರಾಘವ್ ಶರ್ಮ ವಾರಣಾಸಿಯಿಂದಲೇ ಡಾ. ಯು.ಪಿ.ಶಿವಾನಂದರ ಸಂದರ್ಶನ ನಡೆಸಿ, ಸ್ಪರ್ಧೆಯ ವಿಚಾರ, ಉದ್ಧೇಶ, ಮತ್ತಿತರ ವಿಚಾರಗಳ ಬಗ್ಗೆ ವರದಿ ಮಾಡಿದ್ದಾರೆ.
ನಮೋ ವಿರುದ್ಧ ಕನ್ನಡಿಗನ ಸ್ಪರ್ಧೆ ಎಂದು ಸುವರ್ಣ ನ್ಯೂಸ್ ಕೂಡಾ ವರದಿ ಪ್ರಸಾರ ಮಾಡಿದೆ. ಉತ್ತರ ಪ್ರದೇಶದ ಹಿಂದೂಸ್ಥಾನ್ ಸಂವಾದ್ ಎಂಬ ಹಿಂದಿ ಪತ್ರಿಕೆಯು ವಿಶೇಷ ವರದಿಯನ್ನು ಪ್ರಕಟಿಸಿದ್ದು, ಉನ್ನತ ಶಿಕ್ಷಣ ಪಡೆದವರೂ ಅಮೇಠಿ ಚುನಾವಣ ಕಣದಲ್ಲಿದ್ದಾರೆ ಎಂದು ಬರೆದಿದೆ. ಇಂಡಿಯನ್ ಎಕ್ಸ್‌ಪ್ರೆಸ್ ಕೂಡಾ ಡಾ. ಯು.ಪಿ.ಶಿವಾನಂದರ ಸ್ಪರ್ಧೆಯ ಕುರಿತು ವರದಿ ಪ್ರಕಟಿಸಿದೆ.
ಪ್ರಧಾನಿ ಮೊದಿ ವಿರುದ್ಧ ಕರಾವಳಿ ಪತ್ರಕರ್ತನ ಸ್ಪರ್ಧೆ, ಅಮೇಠಿಯಲ್ಲೂ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧೆ, ರಾಜರ ಬದಲು ಪ್ರಜೆಗಳ ಅಧಿಕಾರ ಬೇಕು ಎನ್ನುವ ಪ್ರತಿಪಾದನೆ ಎನ್ನುವ ವಿಶೇಷ ಲೇಖನವನ್ನು ಕನ್ನಡಪ್ರಭ ಪ್ರಕಟಿಸಿದೆ. ವಿಜಯವಾಣಿ, ವಾರ್ತಾಭಾರತಿ ಪತ್ರಿಕೆಗಳು ಕೂಡಾ ವರದಿ ಪ್ರಕಟಿಸಿದೆ.

ಡಾ. ಯು.ಪಿ.ಶಿವಾನಂದರವರು ಪ್ರಸ್ತುತ ವಾರಣಾಸಿಯಲ್ಲಿದ್ದು, ನಾಮಪತ್ರ ಸಲ್ಲಿಕೆಯ ಬಳಿಕ ಅಮೇಠಿಗೆ ತೆರಳಿ ಅಲ್ಲಿ ಪ್ರಚಾರ ಮತ್ತು ಜನಜಾಗೃತಿ ಕಾರ್ಯ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಡಾ. ಶಿವಾನಂದರ ಪುತ್ರಿ ಸಿಂಚನಾ ಊರುಬೈಲು ಕೂಡಾ ಅವರ ಜೊತೆಗಿದ್ದಾರೆ.

ಹರೀಶ್ ಬಂಟ್ವಾಳ್ ವಾರಣಾಸಿಗೆ


ಡಾ.ಯು.ಪಿ.ಶಿವಾನಂದರ ಜನಜಾಗೃತಿ ಕಾರ್ಯವನ್ನು ಬೆಂಬಲಿಸುವ ಸಲುವಾಗಿ ಸುದ್ದಿ ಬಿಡುಗಡೆಯ ಪ್ರಧಾನ ವರದಿಗಾರ ಹರೀಶ್ ಬಂಟ್ವಾಳ್ ಮತ್ತು ಪುತ್ತೂರಿನ ಪಶುಪತಿ ಶರ್ಮ ಕೂಡಾ ವಾರಣಾಸಿಗೆ ತೆರಳಿದ್ದು, ನಾಳೆಯಿಂದ ಅಮೇಠಿಗೆ ತೆರಳಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.