ಬಳ್ಪ ಬೋಗಾಯನ ಕೆರೆ ಆದರ್ಶ ಗ್ರಾಮದ ಆದಾಯದ ಮೂಲವಾಗುವುದೇ?!

Advt_Headding_Middle
Advt_Headding_Middle

ಗ್ರಾಮಕ್ಕೆ ಆಸರೆಯಾಗಿದ್ದ ಕೆರೆಯಲ್ಲೀಗ ಕೆಸರೇ ತುಂಬಿ ಹೋಗಿದೆ
ಒಂದು ಕಾಲದಲ್ಲಿ ಬಳ್ಪ ಗ್ರಾಮದ ಹಲವು ಕೃಷಿ ಭೂಮಿಗಳಿಗೆ ನೀರುಣಿಸುತ್ತಿದ್ದ ಸಂಸದರ ಆದರ್ಶ ಗ್ರಾಮವಾಗಿರುವ ಬಳ್ಪ ಗ್ರಾಮದ ಭೋಗಾಯನಕೆರೆ ಇಂದು ಹೂಳು ತುಂಬಿ ಅಭಿವೃದ್ಧಿ ಕಾಣದೆ ನೀರು ಸಂಪೂರ್ಣ ಬತ್ತಿಹೋಗಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಆದರೆ ಸುಮಾರು ೧.೨೫ಕೋಟಿ ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಿ ಪುನರ್‌ಚೇತನಗೊಳಿಸಲಾಗುವುದು ಎಂಬ ಸಂಸದರ ಆಶ್ವಾಸನೆ ಊರವರಿಗೆ ಸಂತಸವನ್ನು ತಂದುಕೊಟ್ಟಿದೆ.


ಬಳ ಪಟ್ಟಣವೆಂದು ಪುರಾತನವಾಗಿ ಪ್ರಖ್ಯಾತವಾದ ಬಳ್ಪ ಗ್ರಾಮವು ಕಡಬ ಸಂಸ್ಥಾನದ ಕದಂಬ ರಾಜರ ಆಧೀನದಲ್ಲಿತ್ತೆಂದು ಇತಿಹಾಸದ ಮೂಲಕ ತಿಳಿದುಬರುತ್ತದೆ. ಕದಂಬ ರಾಜರುಗಳಲ್ಲಿ ಓರ್ವನಾದ ಬೋಗವರ್ಮ ಎಂಬ ರಾಜನು ಬಳ್ಪದಲ್ಲಿ ನಿರ್ಮಿಸಿರುವ ವಿಶಾಲವಾದ ಕೆರೆಯೇ ಬೋಗರಾಯನ ಕೆರೆ ಅಥವಾ ಬೋಗಾಯನಕೆರೆ. ಈ ಕೆರೆಯು ಗ್ರಾಮದ ಹಲವು ಭಾಗಗಳ ಕೃಷಿ ಭೂಮಿಗಳಿಗೆ ನೀರುಣಿಸುವ ವಿಶೇಷ ವ್ಯವಸ್ಥೆಯನ್ನು ಹೊಂದಿತ್ತು. ಕಾಲ ಕ್ರಮೇಣ ಕೆರೆಯಲ್ಲಿ ಹೂಳು ತುಂಬಿ ಕೆರೆಯ ಆಳ ಕಡಿಮೆಯಾಗಿ ನೀರು ಇಂಗಿ ಹೋಗಿದೆ. ಆದಾಯದಲ್ಲಿ ರಾಜ್ಯದ ನಂ.೧ ದೇವಸ್ಥಾನವಾಗಿದ್ದು, ದಿನವೊಂದಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕೆಲವೇ ಕಿ.ಮೀ.ಗಳ ಅಂತರದಲ್ಲಿರುವ ಬಳ್ಪ ಗ್ರಾಮವು ಸಂಸದರ ಆದರ್ಶ ಗ್ರಾಮವಾಗಿದೆ.
ಇತ್ತೀಚೆಗೆ ನಡೆದ ಬಳ್ಪ ಗ್ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು ಗ್ರಾಮದಲ್ಲಿ ಸರಕಾರದ ಅನುದಾನ ಮತ್ತು ಕಂಪನಿಗಳ ಕೊಡುಗೆಯಿಂದ ಸುಮಾರು ೫ರಿಂದ ೬ ಕೋಟಿಯಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದ್ದು, ಬೋಗಾಯನಕೆರೆ ಅಭಿವೃದ್ಧಿಗಾಗಿ ೧.೨೫ ಕೋಟಿ ಮೊತ್ತವನ್ನು ವ್ಯಯಿಸಲಾಗುವುದು. ಪಿಲಿಕುಳದ ಮಾದರಿಯಲ್ಲಿ ಬೋಗಾಯನಕೆರೆ ಪರಿಸರವನ್ನು ಅಬಿವೃದ್ಧಿ ಪಡಿಸಿ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿರುವುದು ಭಾಗದ ಜನರಲ್ಲಿ ಸಂತಸವನ್ನು ತಂದಿದೆ. ನಳಿನ್ ಕುಮಾರ್‌ರವರೇ ಮತ್ತೆ ಸಂಸದರಾಗಿ ಆಯ್ಕೆಯಾದಲ್ಲಿ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕವಾದರೂ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದಾರೆ.
ಭವಿಷ್ಯದಲ್ಲಿ ಭೋಗಾಯನಕೆರೆ ಅಭಿವೃದ್ಧಿಯ ಮೂಲಕ ಬಳ್ಪ ಗ್ರಾಮವು ಪ್ರೇಕ್ಷಣೀಯ ಸ್ಥಳವಾಗಿ ಪರಿವರ್ತನೆಗೊಂಡರೆ ವಿಶೇಷವಾಗಿ ಶಿಲೆಯಿಂದಲೇ ನಿರ್ಮಾಣಗೊಂಡಿರುವ ಪುರಾತನ ದೇವಾಲಯವಾಗಿರುವ ಕಾಂಜಿ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಸುಮಾರು ೧೦-೧೨ ದೇವಾಲಯಗಳಿಗೂ ಹೊರಗಿನ ಭಕ್ತರ ಸಂಖ್ಯೆ ಹೆಚ್ಚಾಗಬಹುದು.
ಸದ್ಯದ ಮಟ್ಟಿಗೆ ಕೆರೆಯ ನೀರು ಬತ್ತಿಹೋಗಿದ್ದು, ಹೂಳೆತ್ತಲು ಕಾಲ ಕೂಡಿಬಂದಿದೆ. ಕೆಲಸ ಮಾಡಿಸುವವರಿಗೆ ದಿನ ಕೂಡಿಬರಬೇಕಷ್ಟೆ! ಈ ಕೆರೆಯಲ್ಲಿ ಅಗಾಧವಾಗಿ ಹೂಳು ತುಂಬಿರುವುದರಿಂದ ಅದನ್ನು ಯಾವ ಸ್ಥಳದಲ್ಲಿ ವಿಲೇವಾರಿ ಮಾಡುವುದು ಎಂಬುದನ್ನೂ ಯೋಚನೆ ಮಾಡಬೇಕಿದೆ. ನೀರು ಬತ್ತಿ ಹೋದರೂ ಕೆಸರಿನಲ್ಲಿಯೇ ಬದುಕುವ ಕೆಲವು ಜಲಚರಗಳು ಇಲ್ಲಿ ವಾಸವಿರಬಹುದು. ಮಳೆಗಾಲ ಬಂದು ನೀರು ತುಂಬಿಕೊಂಡಾಗ ಸ್ಥಳೀಯರು ಗಾಳ ಹಾಕಿ ಮೀನು ಹಿಡಿಯುವ ದೃಶ್ಯವನ್ನು ಕಾಣಬಹುದು. ಒಟ್ಟಿನಲ್ಲಿ ಈ ಕೆರೆಯ ಹೂಳೆತ್ತಿದರೆ, ಬೋಗಾಯನಕೆರೆ ಪ್ರವಾಸಿ ತಾಣವಾಗಿ ಪರಿವರ್ತನೆಗೊಂಡರೆ ದೇವಾಲಯಗಳ ನಗರಿಯಾಗಿರುವ ಬಳ್ಪ ಗ್ರಾಮಕ್ಕೆ ಸ್ಥಳೀಯವಾಗಿ ಆದಾಯದ ಮೂಲ ವಾಗುವುದರಲ್ಲಿ ಸಂದೇಹವಿಲ್ಲ.
(ವರದಿ: ಈಶ್ವರ ವಾರಣಾಶಿ)

ರಾಜೀವಿ ಆರ್ ರೈಯವರು ಜಿ.ಪಂ. ಸದಸ್ಯೆಯಾಗಿದ್ದ ಸಂದರ್ಭದಲ್ಲಿ ಅನುದಾನ ಒದಗಿಸಿ ತಡೆಗೋಡೆ ನಿರ್ಮಾಣವಾಗಿರುವುದು ಬಿಟ್ಟರೆ ಬೇರೆ ಯಾವ ರೀತಿಯಲ್ಲೂ ಅಭಿವೃದ್ಧಿಯಾಗಿಲ್ಲ. ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾದಾಗ ಕೆರೆ ಅಭಿವೃದ್ಧಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ೫ ವರ್ಷವಾದರೂ ಈವರೆಗೆ ಯಾವುದೇ ಅಭಿವೃದ್ಧಿಯಾಗದಿರುವುದು ಗ್ರಾಮಸ್ಥರಿಗೆ ಬೇಸರವಾಗಿದೆ. ಇನ್ನಾದರೂ ಸಂಸದರು ಈ ನಿಟ್ಟಿನಲ್ಲಿ ಯೋಚಿಸಿ ಈ ಭಾಗದ ಜನರಿಗೆ ಪ್ರಯೋಜನವಾಗುವ ರೀತಿಯಲ್ಲಿ ಅಭಿವೃದ್ಧಿ ಪಡಿಸಲಿ. ನೀತಿ ಸಂಹಿತೆ ಅಡ್ಡ ಬುರುವುದಾದರೆ ತಾ.ಪಂ. ಸದಸ್ಯ ಅಶೋಕ್ ನೆಕ್ರಾಜೆಯವರು ೩.೨೦ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಪಡಿಸುತ್ತಿರುವುದು ಹೇಗೆ? ಈಗ ನೀರು ಬತ್ತಿ ಹೋಗಿದೆ. ಹೂಳೆತ್ತಲು ಇದು ಸಕಾಲ.

– ಪುಟ್ಟಣ್ಣ ಗೌಡ ಕುಳ, ಪ್ರಗತಿಪರ ಕೃಷಿಕರು

 

ಊರಿಗೆ ನೀರುಣಿಸುತ್ತಿದ್ದ ಕೆರೆಯಲ್ಲೀಗ ಬಾಟಲಿಗಳು, ಬಟ್ಟೆಗಳು, ಕಸ ಕಡ್ಡಿಗಳು ತುಂಬಿ ಹೋಗಿದೆ. ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಗ್ರಾಮದ ಅಮೂಲ್ಯ ಸಂಪತ್ತು ನಾಶದ ಅಂಚಿನಲ್ಲಿದೆ. ನನ್ನ ನೇತೃತ್ವದಲ್ಲಿ ದಾನಿಗಳ ಮೂಲಕ ಕೆರೆಯ ಹೂಳೆತ್ತಬೇಕೆಂದು ತೀರ್ಮಾನಿಸಿದ್ದೆ. ಆಗ ಸಂಸದರು ಅನುದಾನವನ್ನು ಒದಗಿಸಿ ಅಭಿವೃದ್ಧಿ ಪಡಿಸುವ ಭರವಸೆಯನ್ನು ನೀಡಿದರು. ಮುಖ್ಯ ರಸ್ತೆಯ ಬದಿಯಲ್ಲಿದ್ದು ನೂರಾರು ಜನರಿಗೆ ನೀರುಣಿಸುವ ಕೆರೆಯನ್ನು ೫ ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗದ ಸಂಸದರು ಗ್ರಾಮದ ಮೂಲೆಯಲ್ಲಿ ಎಷ್ಟು ಅಭಿವೃದ್ಧಿಪಡಿಸಿಯಾರು. ಇನ್ನಾದರೂ ಕೆರೆಯ ಅಭಿವೃದ್ಧಿಯಾಗಲಿ.
– ಅಶೋಕ್ ನೆಕ್ರಾಜೆ, ತಾ.ಪಂ. ಸದಸ್ಯರು ಸುಬ್ರಹ್ಮಣ್ಯ ಕ್ಷೇತ್ರ

 

ಮಾನ್ಯ ಸಂಸದರು ಸುಮಾರು ೧.೨೫ ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಯೋಜನೆ ಸಿದ್ಧವಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮುಂದಿನ ಕಾರ್ಯ ಸ್ಥಗಿತಗೊಂಡಿದೆ. ಭೋಗಾಯನಕೆರೆಯಲ್ಲಿ ನೀರಿನ ಮೂಲ ಇದ್ದು, ಸಮರ್ಪಕವಾಗಿ ಅಭಿವೃದ್ಧಿಯಾದಲ್ಲಿ ಇಡೀ ಗ್ರಾಮಕ್ಕೆ ಬೇಕಾಗುವಷ್ಟು ನೀರು ಸಿಗುವುದರಲ್ಲಿ ಸಂದೇಹವಿಲ್ಲ.

– ಪ್ರಕಾಶ್ ಮುಡ್ನೂರು, ಅಧ್ಯಕ್ಷರು, ಗ್ರಾ.ಪಂ. ಬಳ್ಪ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.