HomePage_Banner
HomePage_Banner
HomePage_Banner

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಮಠದ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ : ಮಹೇಶ್‌ಕುಮಾರ್ ಕರಿಕ್ಕಳ

ಸುಮಾರು 2೦೦ ವರ್ಷಗಳಿಂದಲೂ ಸರಕಾರದ ಆಡಳಿತ ನಿಯಂತ್ರಣದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪುಟ ನರಸಿಂಹ ಸ್ವಾಮಿ ಮಠದ ವಶಕ್ಕೆ ನೀಡುವಂತೆ ಶ್ರೀ ಮಠದ ಸ್ವಾಮೀಜಿಯವರು ಲಾಯರ್ ನೋಟೀಸು ನೀಡಿದ್ದಾರೆ. ದೇವಳದ ಆದಾಯದ ಮೇಲೆ ಕಣ್ಣಿಟ್ಟುಕೊಂಡು ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಈ ರೀತಿ ಮಾಡಿದ್ದಾರೆ. ಶ್ರೀ ಮಠದ ವಿರುಧ್ಧ ಕಾನೂನಾತ್ಮಕವಾದ ಇಲಾಖಾ ನಿಯಮಾನುಸಾರವಾದ ತಕ್ಕ ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸಿರುವುದಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ದೇವಸ್ಥಾನದ ಹಿತ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರೂ ಆಗಿರುವ ಮಹೇಶ್‌ಕುಮಾರ್ ಕರಿಕ್ಕಳ ಹೇಳಿದ್ದಾರೆ.

ನಿನ್ನೆ ಮಂಗಳೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳು ನಡೆಸುವ ಸರ್ಪ ಸಂಸ್ಕಾರ, ನಾಗ ಪ್ರತಿಷ್ಠೆ, ನಾಗಬಲಿ ಇತ್ಯಾದಿ ದೇವಸ್ಥಾನದ ಸೇವಾ ಪಟ್ಟಿಯಲ್ಲಿರುವ ಯಾವುದೇ ಸೇವೆಗಳನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದವರು ಹಾಗೂ ಸಂಬಂಧ ಪಟ್ಟ ಟ್ರಸ್ಟ್‌ಗಳು ಮತ್ತು ಕುಕ್ಕೆ ಕ್ಷೇತ್ರದಲ್ಲಿ ಇನ್ಯಾರೂ ಕೂಡಾ ಈ ಸೇವೆಗಳನ್ನು ಭಕ್ತಾದಿಗಳ ಸೇವೆಗಳಾಗಿ ನಡೆಸದಂತೆ ಸರಕಾರ ಧಾರ್ಮಿಕ ಪರಿಷತ್ತು, ಧಾರ್ಮಿಕ ದತ್ತಿ ಇಲಾಖೆ ಹಾಗೂ ವ್ಯವಸ್ಥಾಪನಾ ಸಮಿತಿಯವರು ಸೂಕ್ತ ಕ್ರಮ ಕೈಗೊಳ್ಳಲು ಸರಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಶ್ರೀ ಮಠದ ವಿರುಧ್ಧ ಕಾನೂನಾತ್ಮಕ ಇಲಾಖಾ ನಿಯಮಾನುಸಾರದ ತಕ್ಕ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿದೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳನ್ನು ಒತ್ತಾಯ ಪೂರ್ವಕವಾಗಿ ಮಠಕ್ಕೆ ಸಂಬಂಧ ಪಟ್ಟವರು ಮಠದಲ್ಲಿ ಸರ್ಪ ಸಂಸ್ಕಾರಾದಿ ಸೇವೆಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದು ಇದು ಭಕ್ತಾದಿಗಳಿಗೆ ಮೋಸ ಮಾಡುವ ಹುನ್ನಾರವಾಗಿದೆ. ಸರ್ಪ ಸಂಸ್ಕಾರಾದಿ ಸೇವೆಗಳು ದೇವಸ್ಥಾನದಲ್ಲೇ ಮಾಡಬೇಕೆಂಬ ನಿಯಮವಿದ್ದು, ಬೇರೆ ಕಡೆಗಳಲ್ಲಿ ಮಾಡಿದರೆ ಆ ಸೇವೆ ದೇವರಿಗೆ ಸಲ್ಲುವುದಿಲ್ಲ ಎಂದು ಹೇಳಿದರು. ಉಡುಪಿ ಪೇಜಾವರ ಶ್ರೀಗಳು ಮಠ ಹಾಗೂ ದೇವಸ್ಥಾನದ ನಡುವಿನ ಭಿನ್ನಾಭಿಪ್ರಾಯವನ್ನು ಶಮನ ಗೊಳಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು ದೇವಸ್ಥಾನ ಆಡಳಿತ ಮಂಡಳಿಯ ಅಹವಾಲುಗಳನ್ನು ನಾವು ಅವರಿಗೆ ನೀಡಿದ್ದು ಮುಖ್ಯವಾಗಿ ಸರ್ಪ ಸಂಸ್ಕಾರ ಸೇವೆಯನ್ನು ದೇವಸ್ಥಾನದಲ್ಲೇ ಮಾಡಬೇಕು ಮತ್ತು ಮೂಲೆಗೆ ಬಿದ್ದಿರುವ ಗಣಪತಿ ವಿಗ್ರಹಕ್ಕೆ ಗುಡಿ ಕಟ್ಟಬೇಕು ಮತ್ತು ಮಠವನ್ನು ಸುಬ್ರಹ್ಮಣ್ಯ ಮಠವೆಂದು ಕರೆಯದೆ ಸಂಪುಟ ನರಸಿಂಹ ಮಠ ಎಂದೇ ಕರೆಯಬೇಕು ಎಂಬ ಮೂರು ಬೇಡಿಕೆಗಳನ್ನು ಸಾರ್ವಜನಿಕರ, ಪತ್ರಕತರ್ತರ ಸಮ್ಮುಖದಲ್ಲೇ ಅಹವಾಲನ್ನು ಸಲ್ಲಿಸಿದೆ. ನಂತರ ಅವರು ಮಠಕ್ಕೆ ತೆರಳಿ ಸಾರ್ವಜನಿಕರನ್ನಾಗಲೀ ಅಥವಾ ಪತ್ರಕರ್ತರನ್ನಾಗಲೀ ಒಳ ಪ್ರವೇಶಿಸದಂತೆ ನಿರ್ಬಂಧ ಹೇರಿ ಮಾತುಕತೆ ನಡೆಸಿದ್ದಾರೆ. ಅಲ್ಲಿ ಏನು ನಡೆಯಿತೆಂದು ನಮಗೆ ತಿಳಿದಿಲ್ಲ.

ಜೂ.1೦ರ ಒಳಗಾಗಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ಪೇಜಾವರ ಸ್ವಾಮಿಗಳು ನಂತರ ನಮ್ಮನ್ನು ಸಂಪರ್ಕಿಸಲಿಲ್ಲ. ಸಂಧಾನ ಮಾತುಕತೆ ನಾಲ್ಕು ಗೋಡೆಯ ಮಧ್ಯೆ ನಡೆಯಬಾರದು. ಪೇಜಾವರ ಶ್ರೀಗಳ ಕುರಿತು ನಮಗೆ ಗೌರವವಿದೆ ಮತ್ತು ನಂಬಿಕೆಯಿದೆ. ಅವರು ವಿವಾದವನ್ನು ಬಗೆಹರಿಸಬಹುದು ಎಂಬ ವಿಶ್ವಾಸವೂ ಇದೆ ಎಂದು ಈ ಸಂದರ್ಭದಲ್ಲಿ ಮಹೇಶ್ ಕರಿಕ್ಕಳ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ದೇವಸ್ಥಾನದ ಹಿತ ರಕ್ಷಣಾ ವೇದಿಕೆ ಸದಸ್ಯರಾದ ಶಿವರಾಂ ರೈ, ಗುರುಪ್ರಸಾದ್ ಪಂಜ, ಶ್ರೀನಾಥ್ ಭಟ್ ಮತ್ತು ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.