ಬದುಕು ಬೆಸೆದ ಸೇತು ಬಂಧ ಮಳೆ ಕಸಿಯಿತು : ರಾಜ್ಯದಲ್ಲಿ ಎಂಟು ತೂಗುಸೇತುವೆ ಮಳೆಯಿಂದ ನಷ್ಟ

Advt_Headding_Middle
Advt_Headding_Middle
Advt_Headding_Middle

 

ಜನರ ಸಂಕಷ್ಟ ಅರಿತು ಮಿಡಿಯುತ್ತಿದೆ ಗಿರೀಶ್ ಭಾರದ್ವಾಜ್ ಮನ

ಒಡನಾಡಿಗೆ ಡಾ.ದಾಮ್ಲೆಯವರ ’ಸ್ನೇಹ’ ಸಾಂತ್ವನ

– ದುರ್ಗಾಕುಮಾರ್ ನಾಯರ್‌ ಕೆರೆ

ಪ್ರಕೃತಿಯ ರುದ್ರನರ್ತನ ಮನುಷ್ಯ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಭಾರೀ ಮಳೆ ಮನುಷ್ಯ ಬದುಕಿನ ನೆಮ್ಮದಿಯನ್ನೇ ಬಲಿ ತೆಗೆದುಕೊಂಡಿದೆ. ನೆರೆ ಮತ್ತು ಪ್ರವಾಹದಿಂದ ಜನರ ಸಂಕಷ್ಟ ದಿನೇ ದಿನೇ ಹೆಚ್ಚುತ್ತಿದೆ.

ಈ ಎಲ್ಲಾ ಆತಂಕಗಳ ಮಧ್ಯೆಯೇ ಮಳೆ ಮತ್ತು ಮರದ ಒತ್ತಡದಿಂದ ಹಾನಿ ಮತ್ತು ನಷ್ಟಕ್ಕೆ ಒಳಗಾಗಿರುವ ತೂಗುಸೇತುವೆಗಳು ಆ ಪ್ರದೇಶದ ಜನರನ್ನು ಮತ್ತೆ ಪ್ರತ್ಯೇಕಿಸುತ್ತಿದೆ. ಮನುಷ್ಯ ಬದುಕನ್ನು ಜೋಡಿಸಲೆಂದೇ ಕಟ್ಟಲಾಗಿದ್ದ ತೂಗುಸೇತುವೆಗಳು ಈಗ ಈ ಅವಸ್ಥೆಗೆ ಕಾರಣವಾದುದರಿಂದ ಜನರ ಸಂಕಟ ಅರಿತ ಸೇತುವೆಯ ರೂವಾರಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್ ಭಾರದ್ವಾಜ್ ಅಪಾರ ನೋವು ಅನುಭವಿಸುತ್ತಿದ್ದಾರೆ.


ಈಗಾಗಲೇ ಭಾರೀ ಮಳೆಯ ಹಿನ್ನೆಲೆಯಲ್ಲಿ ಉಂಟಾದ ಪ್ರವಾಹ ಮತ್ತು ಪ್ರವಾಹದಲ್ಲಿ ಕೊಚ್ಚಿ ಬಂದ ಮರಗಳ ಹೊಡೆತಕ್ಕೆ ಇವರು ರಾಜ್ಯದಲ್ಲಿ ನಿರ್ಮಿಸಿದ ಎಂಟು ತೂಗುಸೇತುವೆಗಳು ನಷ್ಟವಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ, ರಾಮದುರ್ಗ, ಮೊದಗ, ಉತ್ತರಕನ್ನಡ ಜಿಲ್ಲೆಯ ಸಹಸ್ರಲಿಂಗ, ಡೋಂಗ್ರಿ, ಕುಮಟಾ ತೂಗುಸೇತುವೆಗಳು ನಷ್ಟವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಕಾಂಡ್ಯ ಸೇತುವೆಗೂ ಹಾನಿಯಾಗಿದೆ. ಕೆಲವು ರಿಪೇರಿಯಾಗದ ರೀತಿಯಲ್ಲಿ ಹಾನಿಗೊಳಗಾಗಿದೆ. ಕೆಲವು ಫಿಲ್ಲರ್‌ಗಳು ಕುಸಿದಿದ್ದರೆ, ಮತ್ತೆ ಕೆಲವು ರೋಪ್‌ಗಳಿಗೆ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿದ ತೂಗುಸೇತುವೆಯಂತೂ ನಾಮಾವಶೇಷಗೊಂಡಿದೆ.

ಈ ವಿಚಾರ ತಿಳಿದ ಗಿರೀಶ್ ಭಾರದ್ವಾಜ್ ತನ್ನೆದುರೇ ತನ್ನ ಕೃತಿಗಳು ನಾಶವಾಯಿತಲ್ಲಾ ಎಂಬ ನೋವಿಗೊಳಗಾಗಿದ್ದಾರೆ. ಗಿರೀಶ್ ಅವರ ನೋವಿಗೆ ಅರ್ಥವಿದೆ. ಯಾಕೆಂದರೆ ತೂಗುಸೇತುವೆ ನಿರ್ಮಾಣ ಅವರ ಪಾಲಿಗೆ ಕೇವಲ ಉದ್ಯಮವೋ, ವ್ಯವಹಾರವೋ, ಲಾಭ ನಷ್ಟಗಳ ಲೆಕ್ಕಾಚಾರವೋ ಆಗಿರಲಿಲ್ಲ. ಅದೊಂದು ಭಾವನಾತ್ಮಕ ಸಂಗತಿಯಾಗಿತ್ತು. ಪ್ರೀತಿ ಮತ್ತು ಸಂಬಂಧಗಳ ಬಂಧವಾಗಿತ್ತು. ಆ ಕಾರಣಕ್ಕಾಗಿಯೇ ಭಾರದ್ವಾಜ್ ಇಂದು ವಿಶ್ವಮಾನ್ಯರು ಮತ್ತು ಅದಕ್ಕಾಗಿಯೇ ಅವರಿಗೆ ಪದ್ಮಶ್ರೀಯಂತಹ ಉನ್ನತ ಪ್ರಶಸ್ತಿಗಳು ಅರಸಿ ಬಂತು.

ಆದರೆ ಪ್ರಕೃತಿಯ ಲೆಕ್ಕಾಚಾರ ಎಲ್ಲಕ್ಕಿಂತ ಮಿಗಿಲು. ಮಳೆಯ ರೌದ್ರನರ್ತನ ದೊಡ್ಡ ದೊಡ್ಡ ಸೇತುವೆಗಳನ್ನೇ ಅಡ್ಡಡ್ಡ ಮಲಗಿಸಿರುವಾಗ ತೂಗುಸೇತುವೆಗಳು ಅದಕ್ಕೊಂದು ಲೆಕ್ಕವಲ್ಲ. ಆದರೂ ಸೂಕ್ಷ್ಮ ಮನಸ್ಸಿನ ಗಿರೀಶ್ ಭಾರದ್ವಾಜ್ ಅವರಿಗೆ ಆ ಪ್ರದೇಶದ ಜನರು ಫೋನ್ ಮೂಲಕ ಮಾಹಿತಿ ನೀಡಿದಾಗ ಅವರು ಚಿಂತೆಗೊಳಗಾಗಿದ್ದಾರೆ. ಈ ನೋವನ್ನು ಅವರು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

’ ನನಗೆ ಸೇತುವೆಗಿಂತಲೂ ಅಲ್ಲಿನ ಜನರು ಮತ್ತೊಮ್ಮೆ ಸಂಕಟಕ್ಕೆ ಈಡಾದ ಚಿತ್ರವೇ ಕಾಣಿಸುತ್ತದೆ. ಅವರ ಅಪಾರ ಪ್ರೀತಿ ಸಿಕ್ಕಿತ್ತು. ಎಲ್ಲವೂ ಕೊಚ್ಚಿಹೋಯಿತು. ಆ ಊರುಗಳ ಜನರ ದಿನನಿತ್ಯದ ಬದುಕಿಗೆ ಕೊಂಡಿಯಾಗಿದ್ದ ತೂಗುಸೇತುವೆ ನಾಶವಾಗಿರುವುದರಿಂದ ಅವರ ಬದುಕು ಮುಂದೆ ಹೇಗೆ ಎನ್ನುವುದೇ ನನಗೆ ಎದುರಾಗಿರುವ ಚಿಂತೆ’ ಎಂದು ’ಸುದ್ದಿ’ ದೊಂದಿಗೆ ಭಾವನೆ ಹಂಚಿಕೊಂಡಾಗ ಗಿರೀಶ್ ಭಾರಧ್ವಾಜರಲ್ಲಿ ದುಖ ಮಡುಗಟ್ಟಿತ್ತು. ಮಾತುಗಳು ಹೊರಡುತ್ತಿರಲಿಲ್ಲ.
“ಒಂದು ಸೇತುವೆಯೂ ಅವರ ಬಾಣಂತನದ ಕೂಸು ಎನ್ನುವ ರೀತಿಯಲ್ಲಿ ಮಾಡಿದ್ದರು. ಈ ದುರ್ಘಟನೆ ತನಗೆ ಪುತ್ರಶೋಕಕ್ಕೆ ಸಮಾನವಾದ ದುಖ ಎಂದು ಅವರು ನನ್ನಲ್ಲಿಗೆ ಬಂದು ಅತ್ತುಬಿಟ್ಟರು. ಅವರಿಗಾದ ನಷ್ಟದ ಮೌಲ್ಯವನ್ನು ಅಂದಾಜಿಸುವುದು ಸಾಧ್ಯವಿಲ್ಲ’ ಎನ್ನುತ್ತಾರೆ ಅವರ ಒಡನಾಡಿಯೂ ಆಗಿರುವ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ.

 

ಅತೀವ ನೋವು ಕಾಡಿದಾಗ ಗಿರೀಶ್ ಭಾರಧ್ವಾಜರು ಓಡೋಡಿ ಬಂದದ್ದೇ ಡಾ.ದಾಮ್ಲೆಯವರ ’ಸ್ನೇಹ’ದ ತಾಣಕ್ಕೆ. ಆ ಕ್ಷಣಗಳನ್ನು ದಾಮ್ಲೆಯವರೇ ಹೇಳಿಕೊಳ್ಳುವುದು ಹೀಗೆ :
” ಗ್ರಾಮೀಣ ಸಂಪರ್ಕ ಸೇತು ಸಾಧಕ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಸ್ವಭಾವತಃ ಎಲ್ಲರನ್ನೂ ಪ್ರೀತಿಯಿಂದ ಕಾಣುವವರು. ಅವರಿಗೆ ನನ್ನಲ್ಲಿ ಗೆಳೆತನಕ್ಕಿಂತ ಹೆಚ್ಚಿನ ಪ್ರೀತಿ. ಏನಾದರೂ ಭಾಷಣ ಮಾಡುವ ಅಥವಾ ಲೇಖನ ಬರೆಯುವ ಆಮಂತ್ರಣ ಬಂದಾಗ ಸಮಾಲೋಚನೆಗಾಗಿ ನಮ್ಮಲ್ಲಿಗೆ ಹಾಜರ್. ಆದರೆ ಈವತ್ತು “ನೀವು ಮನೆಯಲ್ಲೇ ಇದ್ದೀರಲ್ವೋ? ನಾನೀಗಲೇ ಬರುತ್ತೇನೆ” ಎಂದರು. ಏನು ವಿಷಯ ಎಂತ ಕೇಳಿದರೆ ಬಂದು ಹೇಳ್ತೇನೆ ಎಂದವರೇ ಫೋನಿಟ್ಟರು. ಗೇಟ್ ತೆರೆದಿಟ್ಟು ಕಾದೆ. ಗಿರೀಶ್ ಮನೆಯೊಳಗೆ ಬಂದವರೇ ಗಳಗಳನೆ ಅಳುವುದಕ್ಕಾರಂಭಿಸಿದರು. ಏನಾಯ್ತು ಗಿರೀಶ್ ಎಂದರೆ “ಹೋಯ್ತು…. ಹೋಯ್ತು…” ಎಂದು ಅತ್ತರು. ಏನು ಹೋಯ್ತು ಎಂತ ಕೇಳಿದರೆ ಹೇಳಲಾಗದಷ್ಟು ದುಃಖ ಒತ್ತರಿಸಿ ಬರುತ್ತಿತ್ತು. ಕೊನೆಗೊಮ್ಮೆ ಅರ್ಥಮಾಡಿಕೊಂಡೆ. ಅವರು ನಿರ್ಮಿಸಿದ ಏಳು ತೂಗುಸೇತುವೆಗಳು ಈ ಬಾರಿಯ ಅದ್ಭುತ ನೆರೆಗೆ ಕೊಚ್ಚಿ ಹೋಗಿವೆ. “ಅಯ್ಯೋ ನನ್ನ ಕಣ್ಣೆದುರೇ ಹೀಗಾಯಿತಲ್ಲಾ? ನನಗೆ ತುಂಬಾ ಒತ್ತಡ ಆಗ್ತಿದೆ. ತಡ್ಕೊಳ್ಳಿಕ್ಕೆ ಆಗ್ತಿಲ್ಲ. ನಿಮ್ಮಲ್ಲಿ ಹೇಳಿ ಹಗುರ ಮಾಡ್ಕೊಳ್ಳೋಣ ಅಂತ ಬಂದೆ” ಎಂದರು. ನಾನೂ ಎಲ್ಲರೂ ಹೇಳಬಹುದಾದ ರೀತಿಯಲ್ಲೇ ಹೇಳಿ ಸಮಾಧಾನಿಸಿದೆ. ಪ್ರಕೃತಿಯ ಎದುರು ಯಾರಾದರೂ ತಲೆಬಾಗಲೇ ಬೇಕು ಎಂದು ಮುಂತಾಗಿ ಹೇಳಿದೆ. ಒಂದಿಷ್ಟು ಹಗುರಾದಂತೆ ಕಂಡಿತು.


“ನನಗೆ ಸೇತುವೆಗಿಂತಲೂ ಅಲ್ಲಿನ ಜನರು ಮತ್ತೊಮ್ಮೆ ಸಂಕಟಕ್ಕೆ ಬಿದ್ದ ಚಿತ್ರವೇ ಕಾಣಿಸ್ತದೆ. ಅವರ ಅಪಾರ ಪ್ರೀತಿ ಸಿಕ್ಕಿತ್ತು. ಎಲ್ಲಾ ಕೊಚ್ಚಿ ಹೋಯಿತು” ಎಂಬ ಭಾವನೆ ಗಿರೀಶ್ ಅವರಿಗಲ್ಲದೆ ಇನ್ನಾರಿಗೆ ಬಂದೀತು? ಒಂದೊಂದು ಸೇತುವೆಯೂ ಅವರ ಬಾಣಂತನದ ಕೂಸು ಎನ್ನುವಂತೆ ಮಾಡಿದ್ದರು. ಕೆಲಸ ಮಾಡುವಲ್ಲೇ ಡೇರೆ ಹಾಕಿ ಕಾರ್ಮಿಕರನ್ನು ಸಹೋದ್ಯೋಗಿಗಳೆಂದು ತಿಳಿದು ತಾಂತ್ರಿಕತೆಯಲ್ಲಾಗಲೀ ಕೆಲಸದಲ್ಲಾಗಲೀ ಒಂದಿಷ್ಟೂ ವ್ಯತ್ಯಯವಾಗದಂತೆ ನಿರ್ಮಿಸಿದ್ದರು. ಒಂದು ಸೇತುವೆ ಕಟ್ಟಲಾರಂಭಿಸಿದರೆ ಅದು ಪೂರ್ಣವಾಗದೆ ಇನ್ನೊಂದರ ಕೆಲಸ ಆರಂಭಿಸುತ್ತಿರಲಿಲ್ಲ. ಹೀಗಾಗಿ ಗಿರೀಶರಿಗೆ ಕುಸಿದು ಹೋದ ಒಂದೊಂದು ಸೇತುವೆಯ ಭೌತಿಕ ರಚನೆಯೊಂದಿಗೆ ಸಾಮಾಜಿಕ ಸಂಬಂಧ ಸೇತು ಕೂಡಾ ಕಡಿದಂತೆ ನೋವಾಗಿದೆ. ಇದು ತನಗೆ ಪುತ್ರಶೋಕಕ್ಕೆ ಸಮಾನವಾದ ದುಃಖ ಎಂಬ ಗಿರೀಶರ ಮಾತಿನಲ್ಲಿ ಅವರಿಗಾದ ನಷ್ಟದ ಮೌಲ್ಯವನ್ನು ಅಳೆಯಲು ಸಾಧ್ಯವಿಲ್ಲ.
ಸಾಮಾನ್ಯವಾಗಿ ಒಂದು ಕೆಲಸ ಮುಗಿಸಿ ಲೆಕ್ಕಾಚಾರ ಮುಗಿಸಿದ ಬಳಿಕ ಇಷ್ಟೊಂದು ಗಾಢವಾಗಿ ತನ್ನ ನಿರ್ಮಾಣಗಳ ಬಗ್ಗೆ ಭಾವನಾತ್ಮಕ ಬೆಸುಗೆ ಇಟ್ಟುಕೊಂಡಿರುವ ವ್ಯಕ್ತಿಗಳು ಸಿಗುವುದು ಅಪರೂಪದಲ್ಲಿ ಅಪರೂಪ ಇರಬಹುದು. ನನ್ನ ಕೃತಿಗಳು ನನ್ನೆದುರೇ ಕುಸಿಯುತ್ತಿರುವುದನ್ನು ನೋಡಿ ಸಹಿಸುವುದು ಹೇಗೆ ಎಂತ ಕೇಳುವ ಗೀರೀಶ್ ಅವರದ್ದು ಕರುಣಾರಸಾರ್ದ್ರ ಹೃದಯ ಎನ್ನುವುದಕ್ಕೆ ಪುರಾವೆಯೇನೂ ಬೇಡ. ಅವರನ್ನು ಬಹಳ ಹೊತ್ತು ಜತೆಯಲ್ಲಿರಿಸಿಕೊಂಡು ಯಾರ್ಯಾರದೋ ದುಃಖದುಮ್ಮಾನಗಳನ್ನು ಹೇಳಿ, ಮಹಾಮಳೆಯ ಮಹಾನೆರೆಗೆ ಬದುಕು ತತ್ತರಿಸಿದ ಜನರ ಸಂಕಷ್ಟಗಳನ್ನು ವಿಮರ್ಶಿಸಿ, ನಮ್ಮ ಸ್ನೇಹ ಶಾಲೆಯ ಸೂರ್ಯ ದೇವಾಲಯದಲ್ಲಿ ಒಂದಿಷ್ಟು ಹೊತ್ತು ಧ್ಯಾನ ಮಾಡಿದ ಬಳಿಕ ಮನಸ್ಸು ಹಗುರಾಯಿತು ಎಂದರು. ಅವರನ್ನು ಕಳುಹಿಸಿಕೊಟ್ಟ ಬಳಿಕ ಇಂತಹ ಮಹಾನ್ ವ್ಯಕ್ತಿಯ ಹೃದಯ ಹಗುರಾಗಿಸುವ ಯೋಗ ಸಿಕ್ಕಿದ್ದಕ್ಕಾಗಿ ಧನ್ಯತೆಯ ಭಾವ ಮೂಡಿ ನಾನೂ ಹಗುರಾದೆ”

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

1 Comment

  1. Satya K

    Shree Girish Bharadwajara mana midaddu sahaja…adre Damleyavaru avara TRP yilli summune hechisalu tumba prayatna pattiddare….yibbaru snetitara naduve nadeda sambhashane, tumba emotional, yidannu tanna doddatana (sanna) torikolalikke tumba chanda bardiddare.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.