HomePage_Banner
HomePage_Banner
HomePage_Banner
HomePage_Banner
Breaking News

ಅಂಗಾರರಿಗೆ ಮಂತ್ರಿ ಸ್ಥಾನ ತಪ್ಪಿದ ಹಿನ್ನೆಲೆ – ಸುಳ್ಯದಲ್ಲಿ ಬಿಜೆಪಿ ಮಂಡಲ ಸಮಿತಿ ತುರ್ತು ಸಭೆ – ಅಸಹಕಾರ ಚಳವಳಿಗೆ ನಿರ್ಧಾರ – ಹಲವರಿಂದ ರಾಜೀನಾಮೆ ಸಲ್ಲಿಕೆ

ಸುಳ್ಯ ಶಾಸಕ ಎಸ್. ಅಂಗಾರ ಅವರಿಗೆ ಕೊನೇ ಕ್ಷಣದಲ್ಲಿ ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಸುಳ್ಯ ಬಿಜೆಪಿ ತುರ್ತು ಸಭೆ ಸಡೆಸಿದ್ದು, ಪಕ್ಷದಿಂದ ಅಸಹಕಾರ ಚಳವಳಿ ನಡೆಸಲು ತೀರ್ಮಾನಿಸಿದೆ. ಜವಾಬ್ದಾರಿ ಹುದ್ದೆಗಳಲ್ಲಿರುವ ಹಲವರು ರಾಜಿನಾಮೆಯನ್ನೂ ನೀಡಿದ್ದಾರೆ.
ಪಕ್ಷದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಂಡಲ ಸಮಿತಿ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆಯವರು ಈ ಕುರಿತು ಮಾಹಿತಿ ನೀಡಿದರು. ಸುಳ್ಯಕ್ಕೆ ಸಿಗಬೇಕಾದ ಸ್ಥಾನ ಸಿಗದೆ ನಾವು ಆತಂಕಿತರಾಗಿದ್ದೇವೆ. ಸುದೀರ್ಘ ಕಾಲದಿಂದಲೂ ಇಲ್ಲಿ ಬಿಜೆಪಿಯನ್ನು ಮತದಾರರು ಗೆಲ್ಲಿಸುತ್ತಲೇ ಇದ್ದಾರೆ. ಜಿಲ್ಲೆಯಲ್ಲಿ ಎಲ್ಲಕಡೆ ಸೋತ ಸಂದರ್ಭದಲ್ಲೂ ಇಲ್ಲಿ ಬಿಜೆಪಿ ಗೆದ್ದಿದೆ. ಹೀಗಾಗಿ ಮಂತ್ರಿ ಪದವಿ ಬಹುಜನರ ಅಪೇಕ್ಷೆಯಾಗಿತ್ತು. ಅಂಗಾರರ ಪಕ್ಷನಿಷ್ಠೆ ಮತ್ತು ಕಾರ್ಯನಿರ್ವಹಣೆ ಕೂಡ ಇದಕ್ಕೆ ಪೂರಕವಾಗಿತ್ತು. ಆದರೂ ಕೊನೇ ಕ್ಷಣದಲ್ಲಿ ಮಂತ್ರಿಸ್ಥಾನ ಕೈ ತಪ್ಪಿದೆ. ಇದು ಪಕ್ಷ ಕಟ್ಟಿ ಬೆಳೆಸಿದವರಿಗೆ ನೋವು ತಂದಿದೆ. ಹೀಗಾಗಿ ಅಸಹಕಾರ ಚಳುವಳಿ ನಡೆಸಲು ತೀರ್ಮಾನಿಸಿದ್ದೇವೆ ಎಂದರು.
ಈ ನಿರ್ಧಾರದಂತೆ ಪಕ್ಷದ ಮೂಲಕ ಗೆದ್ದ ಜನಪ್ರತಿನಿಧಿಗಳು ಕಛೇರಿಗೆ ಹೋಗುವುದಿಲ್ಲ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ಪಕ್ಷವೂ ಕೂಡ ಜಿಲ್ಲಾ ಮತ್ತು ರಾಜ್ಯ ಘಟಕದೊಂದಿಗೆ ಅಸಹಕಾರ ಧೋರಣೆ ತಳೆಯುತ್ತದೆ. ಈಗಾಗಲೆ ಅನೇಕ ಮಂದಿ ತಮ್ಮ ಹುದ್ದೆಗಳಿಗೆ ರಾಜಿನಾಮೆಯನ್ನೂ ನೀಡಿದ್ದಾರೆ ಎಂದು ಹೇಳಿದರು.
ಅಂಗಾರರಿಗೆ ಮಂತ್ರಿಸ್ಥಾನವೇ ಸಿಗಬೇಕು. ಸಿಗುವ ಸ್ಪಷ್ಟ ಭರವಸೆ ನಮಗೆ ಬೇಕು. ಅಲ್ಲಿಯವರೆಗೆ ನಮ್ಮ ಈ ಅಸಹಕಾರ ಚಳುವಳಿ ಮುಂದುವರೆಯುತ್ತದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ೭೫ ಗ್ರಾಮಗಳ ೨೩೧ ಬೂತ್‌ಗಳಿಗೂ ಇದು ಅನ್ವಯವಾಗುತ್ತದೆ ಎಂದು ವೆಂಕಟ್ ವಳಲಂಬೆ ಹೇಳಿದರು.
ಬಿಜೆಪಿ ಹಿರಿಯ ಮುಖಂಡ ಎ.ವಿ. ತೀರ್ಥರಾಮ ಮಾತನಾಡಿ, ಸುಳ್ಯಕ್ಕೆ ನ್ಯಾಯ ಸಿಗಬೇಕೆಂದು ನಮ್ಮ ಚಳವಳಿ. ನಾಯಕರ ಕಣ್ಣುತೆರೆಸುವ ಪ್ರಕ್ರಿಯೆಯಾಗಿ ಇದು ಮೊದಲ ಹಂತ. ನಮ್ಮ ಬೇಡಿಕೆ ಈಡೇರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ಭಾಗೀರಥಿ ಮುರುಳ್ಯ, ಚನಿಯ ಕಲ್ತಡ್ಕ, ಸುಭೋದ್ ಶೆಟ್ಟಿ ಮೇನಾಲ, ಹರೀಶ್ ಕಂಜಿಪಿಲಿ, ದಿನೇಶ್ ಮೆದು, ಚಂದ್ರಶೇಖರ ಪನ್ನೆ, ಮುಳಿಯ ಕೇಶವ ಭಟ್, ಪಿ.ಕೆ. ಉಮೇಶ್, ಸುರೇಶ್ ಕಣೆಮರಡ್ಕ, ಮಹೇಶ್ ಕುಮಾರ್ ಮೇನಾಲ, ಮಾಧವ ಚಾಂತಾಳ, ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.