ಬೆಳ್ಳಾರೆಯಿಂದ ಸುಳ್ಯದವರೆಗೆ ನಡೆಯಲಿದೆ ಗಾಂಧಿ ನಡಿಗೆ
ಸೆ. 29 ರಂದು ಸುಳ್ಯದಲ್ಲಿ ಪೂರ್ವಭಾವಿ ಕಾರ್ಯಾಗಾರ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 15೦ನೇ ಜನ್ಮದಿನವು ಮುಂದಿನ ಅಕ್ಟೋಬರ್ 2 ರಂದು ದೇಶಾದ್ಯಂತ ಆಚರಿಸಲ್ಪಡಲಿದ್ದು, ಸುಳ್ಯದ ಗಾಂಧಿ ಚಿಂತನ ವೇದಿಕೆಯು ಅಂದು ಗಾಂಧಿ ನಡಿಗೆಯ ಮೂಲಕ ಗಾಂಧಿ ಚಿಂತನೆಯ ಪ್ರಸರಣ ಕಾರ್ಯ ನಡೆಸಬೇಕೆಂಬ ಉದ್ದೇಶವನ್ನು ಹೊಂದಿದ್ದು, ಇದರ ಅಂಗವಾಗಿ ಬೆಳ್ಳಾರೆಯಿಂದ ಸುಳ್ಯದ ವರೆಗೆ ೧೫ ಕಿ.ಮೀ ನಡಿಗೆಯನ್ನು ಆಯೋಜಿಸಿದೆ.
ಗಾಂಧಿ ಚಿಂತನ ವೇದಿಕೆಯ ಸಂಚಾಲಕ ಹರೀಶ್ ಬಂಟ್ವಾಳ್ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಗಾಂಧಿ ಚಿಂತನ ವೇದಿಕೆಯ ನೇತೃತ್ವದಲ್ಲಿ ನಡೆಯುವ ಈ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಸುದ್ದಿ ಬಿಡುಗಡೆ ಸುಳ್ಯ, ಯುವಜನ ಸಂಯುಕ್ತ ಮಂಡಳಿ ಸುಳ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಲ್ಲದೆ ಇತರ ಸಂಘ ಸಂಸ್ಥೆಗಳು, ಗ್ರಾಮ ಪಂಚಾಯತ್ಗಳು, ಸಹಕಾರ ಸಂಘಗಳು, ಧಾರ್ಮಿಕ ಮತ್ತು ಶೈಕ್ಷಣಿಕ ಸಂಸ್ಥೆಗಳು ಸಹಯೋಗ ನೀಡಲಿವೆ.
ಅಕ್ಟೋಬರ್ ೦2 ರಂದು ಬೆಳಿಗ್ಗೆ 9.೦೦ ಗಂಟೆಗೆ ಬೆಳ್ಳಾರೆಯಲ್ಲಿ ಗಾಂಧಿನಡಿಗೆಯ ಉದ್ಘಾಟನೆ ನಡೆಯಲಿದ್ದು, ದರ್ಖಾಸ್ತು, ಐವರ್ನಾಡು, ಸೋಣಂಗೇರಿ, ಪೈಚಾರುಗಳಲ್ಲಿ ನಾಟಕ ಪ್ರದರ್ಶನ, ಭಜನೆ, ದೇಶಭಕ್ತಿಗೀತೆ, ಮೊದಲಾದವುಗಳ ಜೊತೆಗೆ ಕಿರುಸಭಾ ಕಾರ್ಯಕ್ರಮಗಳು ಕೂಡಾ ಸ್ಥಳೀಯ ಜನರ ಕೂಡುವಿಕೆಯೊಂದಿಗೆ ನಡೆಯಲಿದೆ. ಅಪರಾಹ್ನ 3.೦೦ ಗಂಟೆಗೆ ಸುಳ್ಯದ ಶಾಸ್ತ್ರೀ ವೃತ್ತ ತಲುಪುವ ಗಾಂಧಿ ನಡಿಗೆಯನ್ನು ಸುಳ್ಯದ ಮಹಾಜನತೆ ಸ್ವಾಗತಿಸಲಿದ್ದಾರೆ. ಅಲ್ಲಿಂದ ಗಾಂಧಿನಗರದ ವರೆಗೆ ನಡಿಗೆ ಸಾಗಿ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಜನಜಾಗೃತಿ ವೇದಿಕೆಯವರು ಹಮ್ಮಿಕೊಳ್ಳುವ ಗಾಂಧಿಜಯಂತಿ ಯೊಂದಿಗೆ ಸೇರಿಕೊಂಡು ಗಾಂಧಿ ಚಿಂತನಾ ಉಪನ್ಯಾಸದೊಂದಿಗೆ ಸಮಾರೋಪಗೊಳ್ಳಲಿದೆ.
ಗಾಂಧೀಜಿಯವರ ೧೫೦ನೇ ವರ್ಷಾಚರಣೆಯಾದುದರಿಂದ ಗಾಂಧಿ ನಡಿಗೆಯಲ್ಲಿ 15೦ ಮಂದಿ ಪೂರ್ಣವಾಗಿ ಭಾಗವಹಿಸುತ್ತಾರೆ. ಈ 15೦ ಮಂದಿಗೆ ಗಾಂಧಿ ಚಿಂತನೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಸೆಪ್ಟಂಬರ್ 29 ರಂದು ಆದಿತ್ಯವಾರ ರಥಬೀದಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಛೇರಿ ಆವರಣದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಈ ಕಾರ್ಯಾಗಾರವನ್ನು ಅಕಾಡೆಮಿ ಆಫ್ ಲಿಬರಲ್ ಏಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ, ಸುದ್ದಿ ಬಿಡುಗಡೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ| ಹರಪ್ರಸಾದ್ ತುದಿಯಡ್ಕ ಉದ್ಘಾಟಿಸುವರು. ಡಾ. ನರೇಂದ್ರ ರೈ ದೇರ್ಲ, ಮೈಸೂರಿನ ಛಲಪತಿ, ಡಾ. ಮನೋಹರ್, ಡಾ. ಚಂದ್ರಶೇಖರ ದಾಮ್ಲೆ ಮತ್ತು ಡಾ. ಸುಂದರ ಕೇನಾಜೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಮಹಾತ್ಮ ಗಾಂಧೀಜಿಯವರ ಬಗೆಗಿನ ಸಾಕ್ಷ್ಯ ಚಿತ್ರದ ಪ್ರದರ್ಶನ ಕೂಡಾ ಈ ಕಾರ್ಯಾಗಾರದಲ್ಲಿ ಇರುತ್ತದೆ ಎಂದು ಹರೀಶ್ ಬಂಟ್ವಾಳ್ ತಿಳಿಸಿದರು.
ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ಸಂತೋಷ್ ಕುಮಾರ್ ರೈ, ಮೇಲ್ವಿಚಾರಕಿ ಶ್ರೀಮತಿ ಉಷಾ ಕಲ್ಯಾಣಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಂಕರ ಪೆರಾಜೆ, ಗಾಮಧಿ ಚಿಂತನ ವೇದಿಕೆಯ ಸಂಚಾಲಕರುಗಳಾದ ದಿನೇಶ್ ಮಡಪ್ಪಾಡಿ, ಡಾ. ಸುಂದರ್ ಕೇನಾಜೆ ಪತ್ರಿಕಾಗೋಷ್ಠಿಯಲ್ಲಿದ್ದರು.