HomePage_Banner
HomePage_Banner
HomePage_Banner
HomePage_Banner
Breaking News

ತಹಶೀಲ್ದಾರ್ ನೇತೃತ್ವದಲ್ಲಿ ನಿರ್ಮಾಣಗೊಂಡ ‘ಬೆಳಕು-2’ ಮನೆ ಶಾಸಕರ ಮೂಲಕ ಹಸ್ತಾಂತರ

ಗ್ರಾಮ ಮಟ್ಟದಲ್ಲಿ ವಸತಿರಹಿತರು ಹಾಗೂ ನಿವೇಶನ ರಹಿತರ ಪಕ್ಕಾ ಸರ್ವೆ: ಅಂಗಾರ

ಸುಳ್ಯ ತಾಲೂಕನ್ನು ಗುಡಿಸಲು ಮುಕ್ತವಾಗಿಸುವ ಗುರಿ: ಕುಂಞಿ ಅಹಮ್ಮದ್

ಸ್ವಂತ ಮನೆ ಇಲ್ಲದೆ ಕಷ್ಟ ಎದುರಿಸುತ್ತಿದ್ದ ಅಜ್ಜಾವರದ ಅಡ್ಪಂಗಾಯ ಮಹಮ್ಮದ್ ಕುಂಞಿಯವರಿಗೆ ಸುಳ್ಯ ತಹಶೀಲ್ದಾರ್ ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಮನೆ ನಿರ್ಮಿಸಿಕೊಡಲಾಗಿದ್ದು, ಈ ಮನೆಯ ಹಸ್ತಾಂತರ ಕಾರ್ಯಕ್ರಮವು ಶಾಸಕರ ಮೂಲಕ ಇಂದು ನೆರವೇರಿತು.


ನೂತನವಾಗಿ ನಿರ್ಮಾಣಗೊಂಡ ‘ಬೆಳಕು-2’ ಮನೆಯನ್ನು ಸುಳ್ಯ ಶಾಸಕ ಎಸ್.ಅಂಗಾರ ಉದ್ಘಾಟಿಸಿ, ಮನೆ ಒಡೆಯನಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮನುಷ್ಯತ್ವ ಹೇಳುವಂತದ್ದಲ್ಲ. ಜಾರಿಗೊಳಿಸುವಂತದ್ದು. ಆದರೆ ಮನುಷ್ಯತ್ವ ಕಳೆದು ಹೋದ ಕಾರಣದಿಂದ ಪ್ರಕೃತಿ ವಿಕೋಪಗಳು ಎದುರಾಗುತ್ತಿವೆ. ಎಲ್ಲವನ್ನೂ ಇನ್ನೊಬ್ಬರು ಮಾಡಬೇಕೆಂದು ಕಾಯುವ ದಿನಗಳಲ್ಲಿ ದಾನಿಗಳ ನೆರವಿನೊಂದಿಗೆ ಬೆಳಕು ನೀಡುವ ಕಾರ್ಯ ಮಾಡಿರುವುದು ಮಾನವೀಯವಾದುದು. ಇಂತಹ ಗುಣ ಹೆಚ್ಚಲಿ ಎಂದು ಹೇಳಿದರು.


ಕಾರ್ಯಾಂಗ ಹಾಗೂ ಶಾಸಕಾಂಗದಲ್ಲಿ ಬದಲಾವಣೆಗಳು ಅಗತ್ಯ. ಪ್ರಾಮಾಣಿಕತೆಯಿಂದ ಕೆಲಸ ಕಾರ್ಯಗಳು ನಡೆಯಬೇಕಾಗಿದೆ. ಪ್ರತೀ ಗ್ರಾಮದಲ್ಲಿ ನಿವೇಶನ ರಹಿತರ ಮತ್ತು ವಸತಿ ರಹಿತರ ಪಕ್ಕಾ ಸರ್ವೆ ಮಾಡಿ ಅಧಿಕಾರಿಗಳು ಸಿದ್ಧಪಡಿಸಬೇಕು. ಅಂತಹವರಿಗೆ ಸರಕಾರದ ವತಿಯಿಂದಲೇ ಸೂರು ಕಲ್ಪಿಸುವ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಶಾಸಕರು ಹೇಳಿದರು.

ಶೀಘ್ರದಲ್ಲೇ ಕಂದಾಯ ಸಚಿವರು ಸುಳ್ಯಕ್ಕೆ ಬರಲಿದ್ದು, ಈ ಸಂದರ್ಭದಲ್ಲಿ ಇಲ್ಲಿನ ಕಂದಾಯ ಸಮಸ್ಯೆಗಳ ಕುರಿತು ಅವರ ಗಮನಕ್ಕೆ ತರಲಾಗುವುದು ಎಂದು ಅವರು ಹೇಳಿದರು.

ಗುಡಿಸಲು ಮುಕ್ತ ತಾಲೂಕಿನ ಗುರಿ
ಬೆಳಕು ಯೋಜನೆಯ ರೂವಾರಿ, ಸುಳ್ಯ ತಹಶೀಲ್ದಾರ್ ಕುಂಞಿ ಅಹ್ಮದ್ ಮಾತನಾಡಿ, ದ.ಕ. ಜಿಲ್ಲೆ ಮೊಳಹಳ್ಳಿ ಶಿವರಾಯರಂತಹ ಸಹಕಾರಿಗಳ ನೆಲೆ. ಹೀಗಾಗಿ ಇಲ್ಲಿ ಸಹಕಾರ ಗುಣಗಳು ಮೇಳೈಸಿವೆ. ಈ ಕಾರಣದಿಂದಲೇ ಇಂತಹ ಮಾನವೀಯ ಕಾರ್ಯಗಳು ಇಲ್ಲಿ ನಡೆದಿದೆ ಎಂದು ಹೇಳಿದರು.
ಅನೇಕ ನಿಯಮಗಳ ಕಾರಣದಿಂದ ಅರ್ಹ ಫಲಾನುಭವಿಗಳಿಗೆ ಸರಕಾರಿ ಯೋಜನೆಗಳ ವಸತಿಗಳು ಸಿಗಲು ಅವಕಾಶವಾಗುವುದಿಲ್ಲ. ಈ ಕಾರಣದಿಂದ ಇಂತಹ ಕಾರ್ಯಗಳನ್ನು ಮಾಡಲು ಮುಂದೆ ಬಂದಿದ್ದೇವೆ. ಇದು ೨ನೇ ಮನೆಯಾಗಿದ್ದು, ೩ನೇ ಮನೆ ಲಯನ್ಸ್ ಕ್ಲಬ್ ನೇತೃತ್ವದಲ್ಲಿ ಉಬರಡ್ಕದಲ್ಲಿ ನಿರ್ಮಾಣಗೊಳ್ಳಲಿದೆ. ೪ನೇ ಮನೆ ಬೆಳ್ಳಾರೆಯಲ್ಲಿ ನಿರ್ಮಾಣಗೊಳ್ಳಲಿದೆ. ಸುಳ್ಯ ತಾಲೂಕನ್ನು ಗುಡಿಸಲು ಮುಕ್ತ ತಾಲೂಕಿನ ಗುರಿ ಹೊಂದಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಅಜ್ಜಾವರ ಗ್ರಾ.ಪಂ. ಅಧ್ಯಕ್ಷೆ ಬೀನಾ ಕರುಣಾಕರ ಶುಭ ಹಾರೈಸಿದರು. ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿ ಮತ್ತಡಿ, ಎ.ಬಿ. ಅಶ್ರಫ್ ಸಅದಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಬೆಳಕು ಮನೆಯ ದಾನಿಗಳಾದ ಗೋಪಾಲಕೃಷ್ಣ ಕರೋಡಿ, ರಹೀಂ ಬೀಜದಕಟ್ಟೆ, ತಾಜುದ್ದಿನ್ ಜನಪ್ರಿಯ, ಅಬ್ದುಲ್ ಖಾದರ್, ಪದ್ಮನಾಭ ಪಾತಿಕಲ್ಲು ಮೊದಲಾದರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಸಾದ್ ಕಾಟೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಮಾಜಸೇವಕ ವಿನೋದ್ ಲಸ್ರಾದೋ, ಪತ್ರಕರ್ತ ಲೋಕೇಶ್ ಗುಡ್ಡೆಮನೆ ಸಹಕರಿಸಿದರು.

ಗೌರವಾರ್ಪಣೆ:
ಸಮಾರಂಭದಲ್ಲಿ ಶಾಸಕ ಎಸ್.ಅಂಗಾರ, ತಹಶೀಲ್ದಾರ್ ಕುಂಞಿ ಅಹ್ಮದ್, ಬೆಳಕು ಯೋಜನೆಯ ಸದಸ್ಯರಾದ ಲೋಕೇಶ್ ಗುಡ್ಡೆಮನೆ, ವಿನೋದ್ ಲಸ್ರಾದೋ, ಶರೀಫ್ ಜಟ್ಟಿಪಳ್ಳ ಹಾಗೂ ಇಲ್ಯಾಸ್ ಅವರಿಗೆ ಎಸ್‌ಎಸ್‌ಎಫ್, ಎಸ್‌ವೈಎಸ್ ವತಿಯಿಂದ ಗೌರವಾರ್ಪಣೆ ನಡೆಯಿತು. ಶ್ರಮದಾನದಲ್ಲಿ ಪಾಲ್ಗೊಂಡ ಎಸ್‌ಕೆಎಸ್‌ಎಫ್ ವಿಖಾಯ, ಯುವ ಬ್ರಿಗೇಡ್ ಹಾಗೂ ಎಸ್‌ಎಸ್‌ಎಫ್‌ನ ಎಸ್‌ವೈಎಸ್ ತಂಡವನ್ನು ಹಾಗೂ ದಾನಿಗಳನ್ನು ಗುರುತಿಸಲಾಯಿತು.

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ನಿಧಿ
ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕ ಎಸ್.ಅಂಗಾರ ಹಾಗೂ ತಹಶೀಲ್ದಾರ್ ಕುಂಞಿ ಅಹ್ಮದ್ ಅವರಿಗೆ, ಎಸ್‌ಎಸ್‌ಎಫ್ ಎಸ್‌ವೈಎಸ್ ಸಂಘಟನೆಯವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ರಕ್ತನಿಧಿ ತೆರೆಯುವಂತೆ ಮನವಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಇಲ್ಲಿಗೆ ಈಗಾಗಲೇ ರಕ್ತನಿಧಿ ಮಂಜೂರುಗೊಂಡಿದ್ದು, ಶೀಘ್ರದಲ್ಲಿಯೇ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದರು.

ಬೆಳಕು ಕಾರ್ಯಕ್ರಮದಡಿ 2ನೇ ಮನೆ
ಸುಳ್ಯದಲ್ಲಿ ಅತಿವೃಷ್ಠಿ ಸಂಭವಿಸಿ ಹಲವು ಕಟುಂಬಗಳು ನಿರ್ಗತಿಕವಾದಾಗ ಸುಳ್ಯ ತಹಶೀಲ್ದಾರ್ ಕುಂಞಿಅಹಮ್ಮದ್ ಅವರಲ್ಲಿ ಇಂತಹ ನಿರ್ಗತಿಕ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಮಾನವೀಯ ಯೋಚನೆ ಬಂದಿತ್ತು. ಇದಕ್ಕೆ ಸಮಾನ ಮನಸ್ಕರು ಬೆಂಬಲ ನೀಡಿ ದಾನಿಗಳ ಮುಖಾಂತರ ಯೋಜನೆಯನ್ನು ಅನುಷ್ಠಾನಕ್ಕೆ ಬರುವಂತೆ ಸಹಕರಿಸಿದ್ದರು. ಮೊದಲನೇ ಮನೆಯನ್ನು ಕೆಲವು ದಿನಗಳ ಹಿಂದೆ ಅಜ್ಜಾವರದ ಅಡ್ಪಂಗಾಯದ ರಾಮಣ್ಣ ನಾಯ್ಕರಿಗೆ ನಿರ್ಮಿಸಿಕೊಡಲಾಗಿತ್ತು. ಇದೀಗ ಮಹಮ್ಮದ್ ಕುಂಞಿ ಅವರಿಗೆ ಈ ಸಹಾಯ ಹಸ್ತ ದೊರೆತಿದೆ.

ಎ.ಬಿ.ಮಹಮ್ಮದ್ – ಖತೀಜಾ ದಂಪತಿಗಳಿಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು. ಆರಂಭದಲ್ಲಿ ಗೂನಡ್ಕದಲ್ಲಿದ್ದ ಇವರು ಬಳಿಕ ಅಡೂರಿನಲ್ಲಿ ವಾಸ್ತವ್ಯದಲ್ಲಿದ್ದರು. ಮೂವರು ಹೆಣ್ಣುಮಕ್ಕಳ ಮದುವೆಗಾಗಿ ಮನೆಯನ್ನೇ ಮಾರಬೇಕಾಯಿತು. ಹಾಗೇ ನಿರ್ಗತಿಕವಾಗಿದ್ದ ಕುಟುಂಬ ಮಗನ ಹೆಂಡತಿಯ ಮನೆಯಲ್ಲಿ ಬಂದು ಆಶ್ರಯ ಪಡೆಯಿತು. ಇದೀಗ ಅದೇ ಮನೆಯವರ ಜಾಗದಲ್ಲಿ ಬೆಳಕು -೨ ಮನೆ ನಿರ್ಮಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.