HomePage_Banner
HomePage_Banner
HomePage_Banner
HomePage_Banner

ಮರೆಯಾದ ಒಂದು ಘನ ವ್ಯಕ್ತಿತ್ವ-ಯು.ಸು.ಗೌ. – ನುಡಿ ನಮನ

” Education is power”. ಇದು ಶಾಲೆ ಮಾವನ ಸ್ಕೂಟರ್‌ನಲ್ಲಿ ಅವರು ಹಾಕಿಸಿದ ವಾಕ್ಯ. ಈ ನುಡಿಯನ್ನು ಅರಿತು, ಅಳವಡಿಸಿಕೊಂಡು ಬದುಕಿದವರು ನಮ್ಮ ಮಾವ. ಅವರು ಸಾಹಿತ್ಯಾಸಕ್ತರಿಗೆ ಯು.ಸು.ಗೌ.ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೀತಿಯ ಸುಬ್ರಾಯ ಮಾಷ್ಟ್ರು. ನಮ್ಮ ಪ್ರೀತಿಯ ಶಾಲೆಮಾವ.
ಒಂದು ಘನ ಮತ್ತು ಪರಿಪೂರ್ಣ ವ್ಯಕ್ತಿತ್ವವನ್ನು ಅತ್ಯಂತ ಹತ್ತಿರದಿಂದ ನೋಡಿದವಳು ನಾನು.
ಮಾವ ಎಂದರೆ ಪುಸ್ತಕ. ಮಾವ ಎಂದರೆ ಸುಳ್ಯದ ಮನೆಯ ರೀಡಿಂಗ್ ರೂಮ್‌ನಲ್ಲಿ ಮಕ್ಕಳಿಗೆ ಪಾಠ ಹೇಳಿ ಕೊಡುವ ಶಿಕ್ಷಕ. ಮಾವ ಎಂದರೆ ತೂಕದ ಮಾತು. ಮಾವ ಎಂದರೆ ಅಪರೂಪಕ್ಕೊಮ್ಮೆ ನಕ್ಕು ನಗಿಸುವ ಹಾಸ್ಯದ ನುಡಿಗಳು. ಮಾವ ಎಂದರೆ ನಮ್ಮ ಕುಟುಂಬದ ಒಂದು ಸುವ್ಯವಸ್ಥೆ ಮತ್ತು ಶಕ್ತಿ.
ಆಚಾರ ವಿಚಾರ, ನಮ್ಮ ಸಂಸ್ಕೃತಿ, ದೈವ ಭಕ್ತಿ, ಕನ್ನಡ – ಇಂಗ್ಲೀಷ್ ಸಾಹಿತ್ಯ, ಕಲೆ, ಯಕ್ಷಗಾನ, ಬರವಣಿಗೆ, ವಿಜ್ಞಾನ, ಕೃಷಿ ಹೀಗೆ ಸಕಲ ವಿಚಾರಗಳ ಬಗ್ಗೆ ಅತ್ಯಂತ ತಾಳ್ಮೆಯಿಂದ, ನಿಖರವಾಗಿ ಮಾತನಾಡುವ, ವಿವರಿಸುವ ಸಾಮರ್ಥ್ಯ ಅವರಿಗೆ ಸಿದ್ಧಿಸಿತ್ತು.
ಯಾರನ್ನು ಕೂಡ ಲಘುವಾಗಿ ಪರಿಗಣಿಸುವ ವ್ಯಕ್ತಿತ್ವ ಅವರದಾಗಿರಲಿಲ್ಲ. ತಮಗೆ ತಿಳಿಯದ ಹೊಸ ವಿಚಾರಗಳನ್ನು ಯಾರಾದರೂ ಹೇಳುತ್ತಿದ್ದರೆ, ಹಿರಿಯರು ಕಿರಿಯರು ಎನ್ನುವ ಭೇಧವಿಲ್ಲದೆ ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದರು. ತುಳು ನಾಟಕ, ಯಕ್ಷಗಾನಗಳನ್ನು ನಡುರಾತ್ರಿಯವರೆಗೂ ಟಿ.ವಿಯಲ್ಲಿ ವೀಕ್ಷಿಸುತ್ತಿದ್ದರು. ವಿದ್ಯಾಭ್ಯಾಸ ಪಡೆಯುತ್ತಿದ್ದ ಆ ಐದು ವರ್ಷಗಳ ಅವಧಿಯಲ್ಲಿ ಅವರ ಮನೆಯಲ್ಲಿದ್ದಾಗ ನಾನು ಗಮನಿಸಿದ,ಅರಿತ ವಿಚಾರಗಳು ಹಲವಾರು. ಅವರು ಇದುವರೆಗೆ ತಮಾಷೆಗೂ ಕೂಡ ಒಂದೇ ಒಂದು ಕೆಟ್ಟ ಬೈಗುಳ, ಕೆಟ್ಟ ಶಬ್ದಗಳನ್ನು ಉಪಯೋಗಿಸಿದವರಲ್ಲ. ಪ್ರಾಮಾಣಿಕತೆ, ವ್ಯವಹಾರದಲ್ಲಿ ನಿಖರತೆ ಇದು ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಅವರಿಂದ ಹೇಳಿಸಿಕೊಂಡ ಪಾಠಗಳೆಂದರೆ ಇಂಗ್ಲೀಷ್ ಮತ್ತು ಗಣಿತ. ಅವರು ಇಂಗ್ಲೀಷ್ ಉಪನ್ಯಾಸಕರಾದರೂ ಮೂಲತಃ ಒಬ್ಬ ವಿಜ್ಞಾನದ ವಿದ್ಯಾರ್ಥಿ. ಸುಲಭ ವಿಧಾನಗಳ ಮೂಲಕ ಗಣಿತವನ್ನು ಬಹಳ ಚೆನ್ನಾಗಿ ಕಲಿಸುತ್ತಿದ್ದರು. ಪಿ.ಯು.ಸಿ., ಪದವಿ ತರಗತಿಯಲ್ಲಿ ಇದ್ದಾಗ, ನಾಳೆ ಪರೀಕ್ಷೆ ಇದೆ ಎನ್ನುವ ಕೊನೆ ಗಳಿಗೆಯಲ್ಲಿ ಇಂಗ್ಲೀಷ್ ವ್ಯಾಕರಣದ ಬಗ್ಗೆ ಹೇಳಿಸಿಕೊಳ್ಳುತ್ತಿದ್ದೆ. ಹಲವು ಉದಾಹರಣೆಗಳ ಮೂಲಕ ಇಂಗ್ಲೀಷ್ ಕಲಿಸುತ್ತಿದ್ದದು ಇನ್ನೂ ನೆನಪಿದೆ. (ಇಂಗ್ಲೀಷ್ ಮಾತ್ರ ಕೊನೆಯ ಕ್ಷಣದಲ್ಲಿ ಓದುವ ವಿಷಯ ನಾ? ಎನ್ನುತ್ತಾ ಸಾತ್ವಿಕ ಕೋಪದೊಂದಿಗೆ ಪಾಠವನ್ನು ಮುಗಿಸುತ್ತಿದ್ದರು. ಅವರ ಸಿಟ್ಟಿನಲ್ಲೂ ಒಂದು ಘನತೆಯಿತ್ತು!!). ಪ್ರಬಂಧ, ಭಾಷಣ. ಕಾರ್ಯಕ್ರಮಗಳ ನಿರೂಪಣೆ ಇವೆಲ್ಲವನ್ನೂ ನಮ್ಮಿಂದಲೇ ಬರೆಯಿಸಿ ನಂತರ ಅಗತ್ಯವಿದ್ದರೆ ಮಾರ್ಪಾಡಿಸುತ್ತಿದ್ದರು..
ಪದೇ ಪದೇ ಶಿಕ್ಷಣದ, ಉದ್ಯೋಗದ ಮಹತ್ವವನ್ನು ಹೇಳುತ್ತಲೇ ಇದ್ದರು. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಕೆಲವೊಮ್ಮೆ ಬಹಳ ಕಾಳಜಿಯಿಂದ ಮಾತನಾಡುತ್ತಿದ್ದರು. ನಾವೆಲ್ಲ ವಿದ್ಯಾಭ್ಯಾಸ ಪಡೆದು ಒಂದೊಂದು ಸರ್ಕಾರಿ ನೌಕರಿ ಪಡೆದಾಗ ಸ್ವಂತ ಮಕ್ಕಳು ಕೆಲಸ ಪಡೆದಷ್ಟೇ ಖುಷಿಪಡುತ್ತಿದ್ದರು.
ನನಗಿನ್ನೂ ನೆನಪಿದೆ. ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ದೊರೆತ ಸಂಗತಿ ಫೋನ್‌ನಲ್ಲಿ ಹೇಳಿದಾಗ ಸುಮಾರು ಹತ್ತು ನಿಮಿಷಗಳ ಕಾಲ ನ್ಯಾಯಾಲಯದ ಮಹತ್ವವನ್ನು ವಿವರಿಸಿ, ಅದೊಂದು ದೇವಸ್ಥಾನ ಎಂದು ವ್ಯಾಖ್ಯಾನಿಸಿದ್ದರು. ದೇವಸ್ಥಾನಕ್ಕೆ ಹೋಗುವಾಗ ಇರುವ ಪರಿಶುದ್ಧತೆಯೇ ನೀನು ಮಾಡುವ ಕೆಲಸದಲ್ಲಿ ಇರಬೇಕು. ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆ ಕೊನೆಯವರೆಗೂ ಇರಲಿ ಎಂದು ಬೋದಿಸಿದ್ದರು.
ಶಾಲೆಮಾವನವರ ಸುಳ್ಯದ ಮನೆಯ ಎದುರಿನ ಬಾಗಿಲಿನಲ್ಲಿ ಬಹಳ ಅರ್ಥಗರ್ಭಿತವಾದ ಮರದ ನಾಲ್ಕು ಕೆತ್ತನೆಗಳಿವೆ. ದೇವರಿಗೆ ಕೈ ಮುಗಿಯುವ ಎರಡು ಕೈಗಳು, ಪುಸ್ತಕ, ನೇಗಿಲು ಮತ್ತು ಹಣ್ಣುಗಳು. ಅಪರೂಪದ ಅತಿಥಿಗಳು ಮನೆಗೆ ಬಂದಾಗ ಮಾವ ಅವುಗಳ ಅರ್ಥವನ್ನು ವಿವರಿಸುತ್ತಿದ್ದರು. ಭಕ್ತಿ, ಜ್ಞಾನ, ಕರ್ಮ ಮತ್ತು ಫಲ. ದೇವರಲ್ಲಿ ಭಕ್ತಿ ಇರಬೇಕು. ಜ್ಞಾನ ಸಂಪಾದಿಸಿ, ಪರಿಶ್ರಮದಿಂದ ಕೆಲಸ ಮಾಡಿದಾಗ ಫಲ ಸಿಕ್ಕೇ ಸಿಗುತ್ತದೆ ಎನ್ನುವ ಅರ್ಥವನ್ನು ಅವು ನೀಡುತ್ತವೆ.
ಒಳ್ಳೆಯವರು ದೇವರಿಗೂ ಅತ್ಯಂತ ಪ್ರಿಯರಾಗುತ್ತಾರೆ ಅಂತೆ. ಅದು ಮತ್ತೊಮ್ಮೆ ನಿಜವಾಗಿದೆ. ಔದ್ಯೋಗಿಕ ಬದುಕಿನಲ್ಲಿ ಸಾರ್ಥಕತೆ ಮೆರೆದು, ನಿವೃತ್ತಿಯ ಬದುಕನ್ನು ತಮ್ಮ ಇಷ್ಟದ ಸಾಹಿತ್ಯ ಮತ್ತು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಹಂತದಲ್ಲಿ ಇರುವಾಗಲೇ ಬಹಳ ಬೇಗ, ಬಹಳ ವೇಗವಾಗಿ ಭಗವಂತನ ಬಳಿಗೆ ಸಾಗಿದರು…
ಅವರಿನ್ನು ಇಲ್ಲ ಎನ್ನುವ ಕಟು ಸತ್ಯವೇ ಸುಳ್ಳು ಎನಿಸುತ್ತದೆ..ಶಾಲೆಮಾವ, ನಿಮ್ಮ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ನಿಮ್ಮ ಸ್ಪಟಿಕ ಸ್ವಚ್ಚತೆಯ, ಪರಿಶುದ್ಧತೆಯ ಆದರ್ಶ ಬದುಕು ನಮಗೆ ದಾರಿದೀಪ..

 

                    -ಶ್ರೀಮತಿ ಚೈತ್ರ ಶಿವಪ್ರಸಾದ್ ಪೆರುಮುಂಡ
                   ನ್ಯಾಯಾಂಗ ಇಲಾಖೆ – ರಾಮನಗರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.