ಮೂರು ದಿನಗಳ ಕಾಲ ದಿನಸಿ ಮತ್ತು ತರಕಾರಿ ಅಂಗಡಿಗಳಿಗೆ ನಿಷೇಧ ಹೇರಿ ವಿಧಿಸಲ್ಪಟ್ಟ ಕರ್ಫ್ಯೂ ಮಾ.31 ಮಂಗಳವಾರ ಸಡಿಲಿಕೆಗೊಂಡು ದಿನಸಿ, ತರಕಾರಿ ಮತ್ತಿತರ ಅವಶ್ಯಕ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟ ಪರಿಣಾಮವಾಗಿ ಸುಳ್ಯದ ಮುಖ್ಯ ರಸ್ತೆ ಮತ್ತು ಎಲ್ಲಾ ಅಂಗಡಿಗಳಲ್ಲಿ ಗ್ರಾಹಕರು ಕಿಕ್ಕಿರಿದು ಸೇರಿ ನೂಕುನುಗ್ಗಲು ಮತ್ತು ವಾಹನಗಳಿಂದ ರಸ್ತೆ ಗಿಜಿಗುಟ್ಟಿದ ಹಾಗೂ ಬೆಳಗ್ಗಿನಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಕಾದರೂ ದಿನಸಿ ಸಾಮಾಗ್ರಿ ಸಿಗದ ಗ್ರಾಹಕರು ಆಕ್ರೋಶಿತರಾಗಿ ಆಡಳಿತವನ್ನು ಟೀಕಿಸಿ ಶಪಿಸಿಕೊಂಡ ಘಟನೆ ಸುಳ್ಯ ನಗರದಲ್ಲಿ ಕಂಡುಬಂತು. ಬಂಟ್ವಾಳ ಮತ್ತು ಪುತ್ತೂರಿನಲ್ಲಿ 2 ಕೊರೊನಾ ಪಾಸಿಟೀವ್ ಪ್ರಕರಣ ಕಂಡುಬಂದ ಹಿನ್ನಲೆಯಲ್ಲಿ ಮಾ.28, 29, 30 ಹಾಲು, ಪತ್ರಿಕೆ, ಮೆಡಿಕಲ್ ಸ್ಟೋರ್ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುವ ಆದೇಶವನ್ನು ಮಾ.27ರಂದು ಸಂಜೆ ದ.ಕ. ಜಿಲ್ಲಾಡಳಿತ ಆದೇಶಿತ್ತು. ಪರಿಣಾಮವಾಗಿ ಮೂರು ದಿನ ಯಾವ ದಿನಸಿ ಅಂಗಡಿ, ತರಕಾರಿ ಅಂಗಡಿಗಳು ತೆರೆದಿರಲಿಲ್ಲ. ಮಾ.31ರಂದು ಮಂಗಳವಾರ ಬೆಳಿಗ್ಗೆ 6ರಿಂದ ಅಪರಾಹ್ನ 3ರವರೆಗೆ ದಿನಸಿಯೂ ಸೇರಿದಂತೆ ಅವಶ್ಯಕ ಸಾಮಾಗ್ರಿಗಳ ಖರೀದಿಗೆ ಜಿಲ್ಲಾಡಳೀತ ಅವಕಾಶ ನೀಡಿತ್ತು. ಪರಿಣಾಮವಾಗಿ ಮಾ.31ರಂದು ಮಂಗಳವಾರ ಬೆಳಿಗ್ಗೆ ಸುಳ್ಯ ನಗರದ ದಿನಸಿ ಅಂಗಡಿಗಳೆದೆರು, ತರಕಾರಿ ಅಂಗಡಿಗಳ ಎದುರು, ದಿನಸಿ ಸ್ಟೋರ್ಗಳ ಎದುರು ಜನ ಸರತಿಯ ಸಾಲಿನಲ್ಲಿ ನಿಲ್ಲತೊಡಗಿದರು. ಬಿಸಿಲು ಏರಿದಂತೆ ಸಾಮಾಜಿಕ ಅಂತರ ದೂರವಾಗಿ ಗ್ರಾಹಕರು ಬೇಗ ಸಾಮಾಗ್ರಿ ಪಡೆಯುವ ಆತುರದಲ್ಲಿ ಮುಗಿ ಬೀಳತೊಡಗಿದರು. ಕೆಲವು ದಿನಸ ಅಂಗಡಿಗಳಂತೂ ದಿನವಿಡೀ ಕೊಟ್ಟರು ತೀರದಷ್ಟು ಜನಸಂಖ್ಯೆ ಕಂಡುಬಂತು.
ಗಾಂಧಿನಗರದಿಂದ ಶ್ರೀರಾಂಪೇಟೆ ನಡುವೆ ರಸ್ತೆ ಇಕ್ಕೆಲಗಳಲ್ಲಿ ವಾಹನ ನಿಂತಿದ್ದುದಲ್ಲದೆ ವಾಹನಳ ಸಂದಣಿ ಎಷ್ಟಿತ್ತೆಂದರೆ ದ್ವಿಚಕ್ರ ವಾಹನಗಳು ಕೂಡಾ ಶ್ರೀರಾಂ ಪೇಟೆಯಿಂದ ಗಾಂಧಿನಗರ ತಲುಪಲು 15-20 ನಿಮಿಷ ಬೇಕಾಯಿತು.
ಜನಸಂಖ್ಯೆ ಮತ್ತು ವಾಹನ ದಟ್ಟನೆಯನ್ನು ಕಡಿಮೆಗೊಳಿಸಲು ಪೋಲೀಸರು ಇನಿಲ್ಲದಂತೆ ಹರಸಾಹಸ ಪಡತೊಡಗಿದರು. ಮಧ್ಯಾಹ್ನ 3ರವರೆಗೆ ಮಾತ್ರ ವ್ಯಾಪಾರಕ್ಕೆ ಅನುಮತಿ ಇದ್ದುದರಿಂದ 2-30ಕ್ಕೆ ಪೋಲೀಸರು ತಮ್ಮ ಜೀಪು ಮತ್ತು ಪಟ್ರೋಲ್ ವಾಹನಗಳಲ್ಲಿ ಸೈರನ್ ಮಾಡುತ್ತಾ ಜನರನ್ನು ಮತ್ತು ವರ್ತಕರನ್ನು ಸಮಯವಾಯಿತೆಂದು ಎಚ್ಚರಿಸುವ ಕಾರ್ಯ ಆರಂಭಿಸಿದರು. 3 ಗಂಟೆಗೆ ಸರಿಯಾಗಿ ಅಂಗಡಿಗಳನ್ನು ಮುಚ್ಚುವಂತೆ ಮೈಕ್ ಅನೌನ್ಸ್ ಮಾಡಿಕೊಂಡು ಹೊರಟರು. ಆದರೆ ದಿನಸಿ ಅಂಗಡಿಗಳ ಎದುರು ಇದ್ದವರು ಇನ್ನೂ ಅನೇಕರು ದಿನಸಿ ಸಾಮಾಗ್ರಿ ಸಿಗದೇ ಬಾಕಿ ಉಳಿದಿದ್ದರು. ಪೋಲೀಸರ ಎಚ್ಚರಿಕೆಯಿಂದಾಗಿ ಮತ್ತು ಅವಧಿ ಮುಂದಿಟ್ಟುದ್ದರಿಂದಾಗಿ ವರ್ತಕರು ಅನಿವಾರ್ಯವಾಗಿ ಅಂಗಡಿಯ ಶೆಟರ್ ಎಳೆದರು. ಇದರಿಂದಾಗಿ ಬೆಳಗ್ಗಿನಿಂದ – ಮಧ್ಯಾಹ್ನದಿಂದ ಕಾದಿದ್ದ ಅನೇಕರು ಅವಶ್ಯಕ ಸಾಮಾಗ್ರಿ ಸಿಗದೇ ಹತಾಶೆಯಿಂದ ಸ್ಥಳಕ್ಕೆ ಭೇಟಿ ನೀಡಿದ ಸುದ್ದಿಯೊಂದಿಗೆ ಆಕ್ರೋಶದ ಅಭಿಪ್ರಾಯ, ಸಲಹೆಗಳನ್ನು ಹೇಳತೊಡಗಿದರು.