Breaking News

ಒಂದು ವ್ಯಥೆಯ ಕಥೆ…

Advt_Headding_Middle
Advt_Headding_Middle

 

✍️ *ಸಾಹುಕಾರ್ ಅಚ್ಚು*

ದಿನಾ ತೆಗೆದುಕೊಳ್ಳುವ ಬಿಪಿಯ ಮಾತ್ರೆ ನುಂಗಿ ಮಲಗಿದ ಮನುಷ್ಯನಿಗೆ ಸ್ವಲ್ಪ ಸ್ವಲ್ಪ ಕಾಣಿಸಿಕೊಳ್ಳುತ್ತಿದ್ದ ಎದೆನೋವು ಇಂದು ಸ್ವಲ್ಪ ಜಾಸ್ತಿ .
ಇಲ್ಲೀ ತನಕ ಇಷ್ಟೊಂದು ನೋವು ಕಾಣಿಸಿಕೊಂಡಿದ್ದೆ ಇಲ್ಲ. ಚಡಪಡಿಕೆ ಕಂಡು ನೆರೆ ಕರೆ ಜನ ಬಂದು ಸೇರಿದರು. ಕೆಲವರ ಅನಿಸಿಕೆ

“ಅದು ಗ್ಯಾಸ್ಟ್ರಬಲ್ ಇರಬಹುದು. ಅದು ಇದ್ರೆ ಎಲ್ಲೆಲ್ಲ ನೋವು ಕಾಣಿಸಿಕೊಳ್ತದೆ ಎಂದು ಹೇಳಲಾಗುವುದಿಲ್ಲ”

ಮತ್ತೆ ಕೆಲವರದ್ದು

“ಎಡಗಡೆ ನೋಯುತ್ತಿದೆಯಾ, ಹಾರ್ಟಿದ್ದೇನಾದರೂ ಸಮಸ್ಯೆ ಇರಬಹುದೇ? ಸಾಧ್ಯತೆ ಕಮ್ಮಿ ಆದರೂ ಒಮ್ಮೆ ಟೆಸ್ಟ್ ಮಾಡಿಸುವುದು ಒಳ್ಳೆಯದು”.

“ಈಗ ರಾತ್ರಿಯಲ್ವ ನೋವು ಸ್ವಲ್ಪ ಹೊತ್ತು ಮಾಮೂಲಿನಂತೆ ಇರ್ತದೆ ಈಗ ಮಲಗಿ ಏನಾದ್ರೂ ಬೆಳಗ್ಗೆದ್ದು ಒಮ್ಮೆ ಮಂಗಳೂರು ತನಕ ಹೋಗಿ ಬರಬೇಕು”

ಆಸ್ಪತ್ರೆ ಎಂದರೆ ಬಹುದೂರ ಇದ್ದ ಮನುಷ್ಯ ಆ ದಿನ ಗಟ್ಟಿ ನಿರ್ಧಾರ ತಗೊಂಡರು.
ಬೆಳಗ್ಗೆದ್ದು ಯಾರಿಗೋ ಕರೆ ಮಾಡಿ ಎರಡು ಸಾವಿರ ಹೊಂದಿಸಿಕೊಂಡ ಮನುಷ್ಯ ಮಗನನ್ನು ಕರೆದು
“ಇವತ್ತು ನೀನು ವ್ಯಾಪಾರಕ್ಕೆ ಹೋಗಬೇಡ. ಒಮ್ಮೆ ನನ್ನ ಜತೆ ಮಂಗಳೂರು ತನಕ ಬಾ. ಈ ಎದೆನೋವಿನ ಕಥೆ ಏನೆಂದು ತಿಳಿಯಬೇಕು”
ಎಂದರು.
ಇಲ್ಲೀ ತನಕ ಆಸ್ಪತ್ರೆಗೆ ಹೋಗಿ ಬರುವ ಎಂದು ಕರೆದಾಗೆಲ್ಲ ಏನಾದರೂ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಮನುಷ್ಯ ಇವತ್ತು ದಿಢೀರ್ ಅಂತ ಹೊರಟಿದ್ದು ಕಂಡು ಮಗನಿಗೆ ಆಶ್ಚರ್ಯದ ಜತೆಗೆ ಖುಷಿಯೂ ಆಯಿತು.

ಬೆಳಗ್ಗೆದ್ದು ಏಳೂವರೆ ಬಸ್ಸ್ ಹತ್ತಿದ್ದಾಯಿತು. ಹತ್ತಿರದಲ್ಲೇ ಕೂತಿದ್ದ ಮಗನಿಗೆ ರಸ್ತೆಯುದ್ದಕ್ಕೂ ಕಾಣುವ ಒಂದೊಂದನ್ನೂ ತೋರಿಸಿ ಅಪ್ಪ ಅದರ ಇತಿಹಾಸ ಹೇಳುತ್ತಿದ್ದರು.

ಹನ್ನೊಂದು ಘಂಟೆಗೆ ಮಂಗಳೂರು ಕೆಎಂಸಿ ಆಸ್ಪತ್ರೆ ತಲುಪಿದರು ಅಪ್ಪ ಮಗ.
ಅಪ್ಪ ಯಾವತ್ತೋ ಒಮ್ಮೆ ಬಂದ ಚೀಟಿ ಹಿಡ್ಕೊಂಡು ಡಾಕ್ಟರರನ್ನು ಹುಡುಕುತ್ತಿದ್ದಾರೆ.
ಆದರೆ ಆ ಡಾಕ್ಟರ್ ಅಲ್ಲಿಂದ ಹೋಗಿ ಕಾಲ ಆಗಿರಬೇಕು.
“ಇಲ್ಲಿ ಹಾರ್ಟ್ ಸರ್ಜನ್ ಹೊಸಬರು. ಹಳೆಯ ಜನ ಇಲ್ಲ”
ಎಂದ ರಿಸೆಪ್ಷನಿನ ಮಾತು ಕೇಳಿದಾಗ ಮಗ ಯಾರಿಗೋ ಕಾಲ್ ಮಾಡಿ
ಮಂಗಳೂರಿನಲ್ಲಿ ಒಳ್ಳೆಯ ಹೃದಯ ತಜ್ಞರು ಯಾರಿದ್ದಾರೆ ಎಂದು ವಿಚಾರಿಸಿದ.
ಇಂಡಿಯಾನದಲ್ಲಿ ಹೃದಯ ಸಂಬಂಧೀ ಖಾಯಿಲೆಯಾದರೆ ಒಳ್ಳೆಯ ಡಾಕ್ಟರ್ ಇದ್ದಾರೆ. ಏನಕ್ಕೂ ನೀವೊಮ್ಮೆ ಅಲ್ಲಿ ಹೋಗಿ ಎದೆ ನೋವು ಹೃದಯದ ತೊಂದರೆಯಿಂದಲೇ ಬಂದಿರುವುದಾ ಎಂದು ಪರೀಕ್ಷಿಸಿ ಎಂಬ ಉತ್ತರ ಬಂತು ಮಗನಿಗೆ.
ಅಪ್ಪನಿಗೆ ಇದನ್ನು ಹೇಳಿದಾಗ
“ಅಲ್ಲೆಲ್ಲ ಭಯಂಕರ ದುಡ್ಡು ಬೇಕು ಮಗ, ನಾವಿಲ್ಲೇ ಹುಡುಕೋಣ ಬೇರೆ ಯಾರಾದರೂ ಡಾಕ್ಟರ್ ಇರಬಹುದು”
ಎಂದ ಅಪ್ಪ.

ಮಗನಿಗೂ ಅಪ್ಪನಿಗೂ ಜನರೇಷನ್ನಿನ ಅಂತರ.
ದುಡ್ಡಿನ ವಿಷಯದಲ್ಲೂ ಅದು ಇತ್ತು.
” ದುಡ್ಡಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಅಪ್ಪ, ಏನಾದ್ರೂ ಒಮ್ಮೆ ಎಲ್ಲ ಚೆಕಪ್ ಮಾಡಿ ಹೋಗುವ ಹೇಗೂ ಬಂದಿದ್ದೇವಲ್ಲ? ”
ಅಂದ ಮಗ.

ಅಪ್ಪ ಅರೆಮನಸ್ಸಿನಿಂದ ಇಂಡಿಯಾನಾಕೆ ಬಂದರು.
ಇಂಡಿಯಾನಾ ಎಂದರೆ ಇಂಡಿಯಾನಾ. ಅದೇನು ಆಸ್ಪತ್ರೆಯಾ? ರೋಗಿಗಳಿಗೆ ಚಿಕಿತ್ಸೆ ಕೊಡುವ ಆಸ್ಪತ್ರೆ
ಇಷ್ಟೊಂದು ವೈಭವ.

ಅಪ್ಪ ಮಗನಿಗೆ ಹೇಳಿದರು
“ಇಲ್ಲಿ ಸಣ್ಣದೊಂದು ಚೆಕಪ್ಪಿಗೂ ನಮ್ಮಲ್ಲಿರುವ ದುಡ್ಡು ಸಾಲುವುದಿಲ್ಲ. ಬೇಡ ನಾವು ಬೇರೆ ಆಸ್ಪತ್ರೆಗೆ ಹೋಗುವ”
ಆದರೆ ಮಗ ತನ್ನ ಕಿಸೆಯಲ್ಲಿದ್ದ ಐದು ಸಾವಿರದ ಧೈರ್ಯದಲ್ಲಿ
” ಏನಾದರೂ ಆಗಲಿ, ಇವತ್ತು ಇಲ್ಲಿ ಟೆಸ್ಟ್ ಮಾಡಿಸಿಯೇ ಹೋಗುವುದು. ದುಡ್ಡು ಎಷ್ಟಾದರೂ ಆಗಲಿ” ಎಂದ.

ಆದರೂ ಪೂರ್ಣವಾಗಿ ಸಮ್ಮತಿಸದ ಅಪ್ಪನನ್ನು ಏನೆಲ್ಲ ಹೇಳಿ ಒಪ್ಪಿಸಿದ ಮಗ ಡಾಕ್ಟರರ ಟೋಕನ್ ತೆಗೆದು ಕೊಂಡು ಬಂದು ಅಪ್ಪನ ಕೈಗಿತ್ತ. ಒಂದಷ್ಟು ಹೊತ್ತು ಕಳೆದ ಮೇಲೆ ಅಪ್ಪನ ಚೆಕಪ್ ಎಲ್ಲ ಮಾಡಿ ಮುಗಿಸಿದ ಡಾಕ್ಟರ್
ಈ ಪೇಶಂಟ್ ಜತೆ ಬಂದವರು ಯಾರು? ಕರದುಕೊಂಡು ಬಾ ಎಂದು ನರ್ಸನ್ನು ಕಳುಹಿಸಿರಬೇಕು
ನರ್ಸ್ ಬಂದು ಮಗನನ್ನು ಕರೆದುಕೊಂಡು ಡಾಕ್ಟ್ರ ರೂಮಿಗೆ ಹೋದಳು.
“ಇವರ ಜತೆ ಬಂದಿದ್ದು ನೀನಾ? ಬೇರೆ ದೊಡ್ಡವರ್ಯಾರೂ ಬರಲಿಲ್ವ?”
ಎಂದಾಗ ಮಗ
“ಇವರ ದೊಡ್ಡ ಮಗ ಸರ್ ನಾನು” ಅಂದ
“ಸರಿ, ನಿನಗೊಂದು ವಿಚಾರ ಹೇಳುತ್ತೇನೆ, ನಿನ್ನ ತಂದೆಗೆ ಹಾರ್ಟಿನಲ್ಲಿ ಬ್ಲಾಕ್ ಇದೆ. ಎಂಜಿಯೋಗ್ರಾಮ್ ಮಾಡ್ಬೇಕು. ಸಣ್ಣ ಬ್ಲಾಕ್ ಗಳಿದ್ದರೆ ಹೋಗ್ತದೆ. ರಿಸೆಪ್ಷನಲ್ಲಿ ದುಡ್ಡು ಕಟ್ಟಿ ಅಡ್ಮಿಟ್ ಆಗಿ. ಇವತ್ತು ರೆಸ್ಟ್ ತಗೊಂಡು ನಾಳೆ ಬೆಳಗ್ಗೆ ಮಾಡುವ” ಎಂದರು ಡಾಕ್ಟರ್.

ಆತಂಕದಿಂದ ಇಲ್ಲೀ ತನಕ ಎಂಜಿಯೋಗ್ರಾಮ್ ಎಂದರೇನೆಂದೇ ಅರಿಯದ ಮಗ “ಅದೇನು ಅಪರೇಶನ್ನಾ ಡಾಕ್ಟರ್” ಅಂದ.
ಡಾಕ್ಟರ್ ” ಸಣ್ಣ ಅಪರೇಶನ್ನೇ.ಆದರೆ ಗಾಯ ಎಲ್ಲ ಮಾಡುವುದಿಲ್ಲ. ಹೃದಯದ ಬ್ಲಾಕ್ ತೆಗೆಯಲು ಮಾಡುವ ಪ್ರಕ್ರಿಯೆ. ಸಣ್ಣ ಸಣ್ಣ ಬ್ಲಾಕ್ ಇದ್ರೆ ಹೋಗ್ತದೆ”
ಎಂದರು.

ಮಗ
” ದುಡ್ಡೆಷ್ಟಾಗಬಹುದು ಡಾಕ್ಟರ್?”
ಎಂದು ಮೆಲ್ಲ ಡಾಕ್ಟರ್ ಹತ್ತಿರ ಹೋಗಿ ತುಟಿಯಲ್ಲಿ ಬಲವಂತಕ್ಕೆ ಸಣ್ಣ ನಗು ಮೂಡಿಸಿ ಕೇಳಿದ.
ಡಾಕ್ಟರ್ ಯಾಕೋ ಉತ್ತರಿಸಲು ಇಷ್ಟ ಇಲ್ಲದವನಂತೆ “ಹದಿನೈದರಿಂದ ಇಪ್ಪತ್ತು..” ಎಂದ ಮುಖ ಊದಿಸಿಕೊಂಡು.

ಮಗ ಮನಸ್ಸಲ್ಲಿ ಮೂಡಿದ ಭಾವನೆಗಳ್ಯಾವುದನ್ನೂ ತೋರ್ಪಡಿಸದೇ ಅಪ್ಪನ ಬಳಿ ಬಂದು
” ಸ್ವಲ್ಪ ಹೊತ್ತು ಇಲ್ಲಿ ಕೂತ್ಕೊಳ್ಳಿ ಅಪ್ಪ, ಸಮಸ್ಯೆ ಏನೂ ಇಲ್ವಂತೆ. ಸ್ವಲ್ಪ ಹಾಸ್ಪಿಟಲ್ ರಿಸೆಪ್ಷನ್ ಹತ್ರ ಹೋಗಿ ಬರ್ತೇನೆ”
ಎಂದು ಹೇಳಿ ಹಾಸ್ಪಿಟಲ್ ರಿಸೆಪ್ಷನ್ ಸರತಿಸಾಲಲ್ಲಿ ನಿಂತುಕೊಂಡು
“ಕೈಯಲ್ಲಿರುವ ದುಡ್ಡು ಬರೇ ಐದು ಸಾವಿರ. ಹದಿನೈದು ಸಾವಿರ ಎಂದರೆ ಇನ್ನು ಹತ್ತು ಸಾವಿರ ಹೊಂದಿಸಬೇಕು. ಇಪ್ಪತ್ತಾದರೆ ಹದಿನೈದು ಹೊಂದಿಸಬೇಕು. ಏನು ಮಾಡುವುದು?” ಹೀಗೇ ಲೆಕ್ಕಾಚಾರ ಹಾಕುತ್ತಿದ್ದ.

ಹೇಗೂ ರಿಸೆಪ್ಷನಿನ ಹತ್ತಿರ ಬಂದಾಯ್ತು. ಅಲ್ಲಿ ಕುಳಿತುಕೊಂಡಿದ್ದ ಮಹಿಳೆ ಮಗನ ಬಳಿ ತಂದೆಯ ಹೆಸರು ಕೇಳಿ ಫೈಲ್ ತೆಗೆದು
“ನಿಮ್ಮ ಪೇಶಂಟ್ ಅಡ್ಮಿಟ್ ಆಗಬೇಕು. ಅದಕ್ಕೂ ಮೊದಲು ಇಲ್ಲಿ ಹದಿನೇಳು ಸಾವಿರ ಕಟ್ಟಬೇಕು. ದುಡ್ಡು ತಂದಿದ್ದೀರಾ?” ಎಂದು ಕೇಳಿದಳು.
ಮಗ ತಡವರಿಸಿ
” ದುಡ್ಡು ವ್ಯವಸ್ಥೆ ಮಾಡ್ತೇನೆ ಮೇಡಮ್. ಅವರನ್ನು ಈಗ ಅಡ್ಮಿಟ್ ಮಾಡಬಹುದಾ?” ಎಂದು ಕೇಳಿದಾಗ “ಸರಿ ನೀವು ಇದ್ದಷ್ಟು ಕಟ್ಟಿ ಅಡ್ಮಿಟ್ ಮಾಡಿ . ಸಂಜೆಯ ಒಳಗಾಗಿ ಉಳಿದ ಹಣದ ವ್ಯವಸ್ಥೆ ಮಾಡಿ” ಎಂದರು.
ಮಗ ಕೈಲಿದ್ದ ಐದು ಸಾವಿರ ಅಲ್ಲಿ ಪಾವತಿಸಿ ಬಂದು ತಂದೆಯನ್ನು ಕರೆದುಕೊಂಡು ಹೋಗಿ ಒಂದು ರೂಮಲ್ಲಿ ಮಲಗಿಸಿದ.
ಅಲ್ಲಿ ರೂಮೊಳಗೂ ಅಪ್ಪನದು ಒಂದೇ ಮಾತು.
“ಇಲ್ಲಿ ಮಲಗಿದರೆ ಡಿಸ್ಚಾರ್ಜ್ ಆಗುವಾಗ ದುಡ್ಡು ಎಲ್ಲಿಂದ ಹೊಂದಿಸುವುದು?”
“ನೀವು ಟೆನ್ಷನ್ ಮಾಡ್ಬೇಡಿ ಅಪ್ಪ, ಅಷ್ಟೆಲ್ಲ ದುಡ್ಡಾಗಲ್ಲ. ಸ್ವಲ್ಪ ದುಡ್ಡಾದ್ರೂ ಏನಾದ್ರೂ ವ್ಯವಸ್ಥೆ ಮಾಡುವ. ನಾನೀಗ ಹೋಗಿ ನಿಮಗೇನಾದರೂ ತಿನ್ನಲು ತೆಗೆದುಕೊಂಡು ಬರುತ್ತೇನೆ” ಎಂದು ಹೊರಟು ಹೋದ.

ಆಸ್ಪತ್ರೆಯ ಲಿಫ್ಟ್ ಇಳಿಯುವಾಗ ಮಗನ ತಲೆಯಲ್ಲಿ ಒಂದೇ ಚಿಂತೆ,
“ಇನ್ನುಳಿದ ದುಡ್ಡು ಎಲ್ಲಿಂದ ಹೊಂದಿಸಲಿ?”

ಏನಾದರಾಗಲಿ ಎಂದು ಗೆಳೆಯರಿಗೆಲ್ಲ ಫೋನಾಯಿಸಿದ್ದಾಯಿತು.
ಬಹುತೇಕರದು ಒಂದೇ ಉತ್ತರ.
“ಈಗಲೇ ಬೇಕೆಂದರೆ ಎಲ್ಲಿಂದ ಹೊಂದಿಸಲಿ?”

ಕೊನೆ ಕೊನೆಗೆ ಮಗನ ತಲೆಗೆ ಹೊಳೆದದ್ದು ಒಂದು ಐಡಿಯಾ
ಇಷ್ಟು ದಿನದಿಂದ ತಾನು ವ್ಯಾಪಾರ ಮಾಡುತ್ತಿದ್ದ ಜಾಗಕ್ಕೆ ಅಷ್ಟು ಕೊಡುತ್ತೇನೆ ಇಷ್ಟು ಕೊಡುತ್ತೇನೆ ಎಂದು ಆಮಿಷ ಒಡ್ಡುತ್ತಿದ್ದ ಮನುಷ್ಯನನ್ನು ಕಾಂಟಾಕ್ಟ್ ಮಾಡಿದರೆ ಹೇಗೆ? ಒಂದಿಪ್ಪತ್ತು ಸಾವಿರ ಸಿಕ್ಕಿದರೆ ಇದೊಂದು ಸಂಕಟದಿಂದ ಪಾರಾಗಬಹುದು.

ಫೋನ್ ತಗೊಂಡು ಕಾಲ್ ಮಾಡಿದ್ದೂ ಆಯಿತು
” ಹೋ. ಇಷ್ಟು ದಿನ ಡಿಮಾಂಡ್ ಮಾಡ್ತಿದ್ದೆ. ಈಗೇನು ದಿಡೀರ್ ಅಂತ ಕೊಡೋ ಮಾತಾಡ್ತಿಯಾ?ವ್ಯಾಪಾರ ಡಲ್ ಆಯ್ತಾ?”
“ಹಾಗೇನಲ್ಲ. ನಾನೊಂದು ಸಮಸ್ಯೆಯಲಿದೀನಿ.ತಂದೆ ಹಾಸ್ಪಿಟಲಲಿದ್ದಾರೆ. ಅರ್ಜಂಟ್ ದುಡ್ಡು ಬೇಕು. ಅವತ್ತು ನೀವು ಇಪ್ಪತ್ತೈದು ಕೊಡ್ತೀರಿ ಅಂದಿದ್ರಿ. ಇಪ್ಪತ್ತು ಸಾವಿರ ಸಾಕು ಜಾಸ್ತಿ ಬೇಡ. ಈಗಲೇ ನನ್ನ ಅಕೌಂಟು ನಂಬರ್ ಕಳಿಸ್ತೀನಿ. ದಯವಿಟ್ಟು ಹಾಕ್ಬಿಡಿ”
“ಹೋ. ಅಷ್ಟಕ್ಕೆಲ್ಲ ಬೇಡಪ್ಪ‌ ಹತ್ತು ಸಾವಿರ ಆ ಜಾಗ ಕೊಡಬಹುದು. ಈಗ ವ್ಯಾಪಾರವೂ ಅಷ್ಟು ಇಲ್ವಲ್ಲ”

“ದಯವಿಟ್ಟು ಹಾಗೆ ಹೇಳ್ಬೇಡಿ, ದುಡ್ಡಿನ ಅವಶ್ಯಕತೆ ಇದೆ. ನಿಮಗೆ ಆ ಜಾಗ ಬೇಡ ಅಂದ್ರೆ ಮತ್ತೆ ನಾನು ತಗೊಳ್ತೇನೆ”

” ಸರಿ, ಸರಿ ಹದಿನೈದು ಕೊಡ್ತೇನೆ. ಇನ್ನು ಚೌಕಾಶಿ ಮಾಡಿದ್ರೆ ಫೋನ್ ಕಟ್ಮಾಡ್ತೇನಷ್ಟೇ. ಆಗುವುದಾದ್ರೆ ಕೊಡು”

“ಸರಿ ಅಷ್ಟಾದ್ರೆ ಅಷ್ಟು. ಒಮ್ಮೆ ಕಳಿಸ್ಬಿಡಿ ಬೇಗ. ಬ್ಯಾಂಕ್ ಕ್ಲೋಸ್ ಆದ್ರೆ ಕಷ್ಟ ಮತ್ತೆ”

ಹೀಗೇ ಆ ಮಗ ತನ್ನ ಅಕೌಂಟ್ ನಂಬರ್ ಟೈಪಿಸಿ ಟೆಕ್ಸ್ಟ್ ಮೆಸೇಜ್ ಕಳಿಸಿದ.
ಸ್ವಲ್ಪ ಹೊತ್ತಲ್ಲಿ ದುಡ್ಡು ಬಂತು.
ಮಗ ಸಂಕಟದಿಂದ ಪಾರಾದ ಖುಷಿಯಲ್ಲಿ ರಿಸೆಪ್ಷನಲಿ ದುಡ್ಡು ಕಟ್ಟಿ ಅಪ್ಪನ ಬಳಿ ಹೋದ.
ಮಗ ಏನು ಇಷ್ಟೊತ್ತಾದರೂ ಬರಲಿಲ್ಲ ಎಂದು ಯೋಚಿಸಿ ಅಪ್ಪ ನಿದ್ದೆಗೆ ಜಾರಿರಬೇಕು. ಗೊರಕೆ ಸೌಂಡು ರೂಮಿಗೆ ಎಂಟ್ರಿಯಾಗುವಾಗಲೇ ಕೇಳಿಸುತ್ತಿತ್ತು. ಪಕ್ಕದಲ್ಲೆ ಇದ್ದ ಸಣ್ಣ ಬೆಡ್ ಒಂದರಲ್ಲಿ ಮಗನೂ ಮಲಗಿದ.

ಸ್ವಲ್ಪ ಹೊತ್ತು ಕಳೆದು ಬಂದ ಡಾಕ್ಟರ್ ಇಬ್ಬರನ್ನು ಎಬ್ಬಿಸಿ ಕುಶಲ ವಿಚಾರಿಸಿ ಹೊರಟು ಹೋದರು.‌ನರ್ಸ್ ಒಬ್ಬರು ಬಂದು ತಂದೆಯನ್ನು ಕರೆದುಕೊಂಡು ಹೋಗಿ ಅಗತ್ಯ ಚೆಕ್ ಅಪ್, ಶೇವಿಂಗ್ ಎಲ್ಲ ಮಾಡಿಸಿ ತಂದು ಮಲಗಿಸಿದರು.

ಅಷ್ಟು ಹೊತ್ತು ದುಡ್ಡಿನ ಬಗ್ಗೆ ಚಿಂತಿತನಾಗಿದ್ದ ಅಪ್ಪನಿಗೆ ತನ್ನನ್ನೇನು ಮಾಡುವರು ಎಂಬ ಭಯ ಶುರುವಾಗಿತ್ತು.

ಮರುದಿನ ಎಂಜಿಯೋಗ್ರಾಮ್ ಮುಗಿಯಿತು.
ಅಪ್ಪ ಇಷ್ಟೇನಾ ಎಂದು ನಿಟ್ಟುಸಿರು ಬಿಟ್ಟರು.

ಮಗ ಡಿಸ್ಚಾರ್ಜ್ ಬಗ್ಗೆ ಕೇಳಲು ಡಾಕ್ಟರ್ ಬಳಿ ಹೋದ.
” ನಿಮ್ಮ ತಂದೆಗೆ ಅಪರೇಷನ್ ಬೇಕಾಗಬಹುದು. ಎರಡು ಲಕ್ಷ ಖರ್ಚು ಇದೆ. ಅಪರೇಷನ್ ರಿಸಲ್ಟ್ ಬಗ್ಗೆ ಭರವಸೆ ಕೊಡಲಾಗುವುದಿಲ್ಲ.ಹೊಂದಿಸಿಕೊಂಡು ತಿಂಗಳ ಒಳಗೆ ಬನ್ನಿ” ಎಂದು ನಿರ್ಭಾವುಕನಾಗಿ
ಹೇಳಿಬಿಟ್ಟ ಡಾಕ್ಟರ್.

ಮಗನಿಗೆ ದಿಕ್ಕೇ ತೋಚಲಿಲ್ಲ.

“ಮನೆಯಲ್ಲಿ ಒಂದು ಹೊತ್ತಿನ‌ ಊಟಕ್ಕೆ ಕಷ್ಟ ಪಡುವ ಸಮಯ. ಎರಡು ಲಕ್ಷ ಅಂತೆ. ಇಪ್ಪತ್ತು ಸಾವಿರ ಹೊಂದಿಸಲು ಪಟ್ಟ ಕಷ್ಟ..ಆದರೂ ಅಪ್ಪನನ್ನು ಉಳಿಸಲೇಬೇಕು. ಏನಾದರೂ ಉಪಾಯ ಹೊಳೆಯಬಹುದು”
ಹೀಗೇ ತನ್ನನ್ನು ತಾನೇ ಸಮಾಧಾನ ಪಡಿಸುತ್ತಾ ರಿಸೆಪ್ಷನಿಗೆ ಬಂದ ಡಿಸ್ಚಾರ್ಜ್ ಶೀಟ್ ತೆಗೆದುಕೊಳ್ಳಲು.

ಅಲ್ಲಿ ನೋಡಿದರೆ ಮತ್ತೊಂದು ಶಾಕ್.
ಮೆಡಿಸಿನ್ ಇತರೆ ವೆಚ್ಚ ಎಂದು ನಾಲ್ಕು ಸಾವಿರ ಕಟ್ಟಬೇಕು. ಕೈಯಲ್ಲಿ ಉಳಿದಿರುವುದು ಬರೇ ಐನೂರು. ಅಪ್ಪನ ಬಳಿ ಇದ್ದರೆ ಒಂದು ಸಾವಿರ ಇರಬಹುದು. ಉಳಿದ ದುಡ್ಡಿಗೆ ಏನು ಮಾಡುವುದು?
ಹೀಗೇ ತಲೆಹುಣ್ಣಾಗುವಂತೆ ಯೋಚಿಸುತ್ತಾ ರಿಸೆಪ್ಷನೆದುರಿನ ಚಯರಲ್ಲಿ ಕುಳಿತಾಗ ಮನಸ್ಸಿಗೆ ಹೊಳೆದದ್ದು ಕೈಯಲ್ಲೇ ಹಿಡಕೊಂಡಿದ್ದ ಮೊಬೈಲ್ ಫೋನ್.

ಸಾಮ್ಸಂಗ್ ಟಚ್ ಸ್ಕ್ರೀನ್ . ಹಲವು ಕಾಲದ ಕನಸಿನ ನಂತರ ಒಂದು ತಿಂಗಳ ಹಿಂದೆ ನಾಲ್ಕೂವರೆ ಸಾವಿರ ಹೊಂದಿಸಿ ಕೊಂಡ ಫೋನ್. ಇಲ್ಲೇ ಎಲ್ಲೋ ಮೊಬೈಲಂಗಡಿಯಲ್ಲಿ ಹೋಗಿ ಸೆಕೆಂಡ್ ಹ್ಯಾಂಡ್ ಸೆಟ್ ಬೇಕೇ ಎಂದು ವಿಚಾರಿಸಿದರೆ ಹೇಗೆ?

ಮಗ ತಡಮಾಡಲಿಲ್ಲ. ಪಂಪ್ವೆಲ್ ಸುತ್ತಿ ಒಂದು ಅಂಗಡಿಯಲ್ಲಿ ಮೂರು ಸಾವಿರಕ್ಕೆ ಮಾರಿಬಿಟ್ಟ.

ಡಿಸ್ಚಾರ್ಜ್ ಆಯ್ತು. ಮನೆಗೆ ಹೊರಡುತ್ತಲೇ
“ಮನೆಗೆ ಫೋನ್ ಮಾಡಿದ್ದೀಯಲ್ಲ ಮಗನೇ”
ಅಂದರು ಅಪ್ಪ.
“ಹೌದು ಮಾಡಿದೆ”
“ದುಡ್ಡು ನಿನ್ನ ಕೈಲಿದ್ದದ್ದು ಸಾಕಾಗಿದೆಯಾ?”
ಎಂದರು
“ಹೂಂ, ಸಾಕಾಗಿದೆ”
ಅಂದ ಮಗ.

ಮನೆಗೆ ತಲುಪುತ್ತಲೇ ಮಗನ ಮೊಬೈಲ್ ಕಾಣೆಯಾಗಿತ್ತು.
ಹಾಗಂತ ನಾಟಕ ಆಡಿದ್ದ ಮಗ ಅದರ ಗೋಳಾಟ ಚೀರಾಟ ಎಲ್ಲ ಮುಗಿದು ತಿಂಗಳೊಳಗೆ ಎರಡು ಲಕ್ಷ ಹೊಂದಿಸುವ ಕಡೆ ಚಿತ್ತ ನೆತ್ತ.
ಅಪ್ಪ ಆಯುರ್ವೇದಿಕ್ , ನಾಟಿಮದ್ದು ಎಂದು ಒಂದಿಷ್ಟು ಅಲೆದರು.

ಆದರೆ ಎಲ್ಲ ಪ್ರಯತ್ನಗಳ ನಡುವೆ ಅಪ್ಪ ಎರಡೇ ವಾರಕ್ಕೆ ಹೊರಟು ಹೋದರು, ಮತ್ಯಾರಿಗೂ ತೊಂದರೆ ಕೊಡದೇ.

ಬಹುಷಃ ವ್ಯವಹಾರದಲ್ಲಿ ಸೋತು ಹೋದ ಸಾಹುಕಾರ ಅಪ್ಪ ಲೆಕ್ಕ ಪುಸ್ತಕಗಳಲ್ಲಿ ತನಗೆ ಸಿಗಬೇಕಿರುವ ಬಗ್ಗೆ ಬರೆದಿಟ್ಟ ಒಂದೇ ಒಂದು ಹಾಳೆಯ ಲೆಕ್ಕದ ದುಡ್ಡು ಬಂದಿದ್ದರೂ ಅಂದು ಬದುಕುಳಿಯುತ್ತಿದ್ದರೋ ಏನೋ?
ಮಗನಿಗೆ ಈಗಿರುವ ಸ್ವಲ್ಪ ಸೋಷಿಯಲ್ ಮೀಡಿಯಾದ ಹಿಡಿತ ಅಂದಿದ್ದರೆ ಇನ್ನೊಂದಷ್ಟು ಕಾಲ ಉಪ್ಪಾ ಅಂತ ಕರೆಯುವ ಭಾಗ್ಯ ಆ ಮಗನದಾಗುತ್ತಿತೋ ಯಾರಿಗ್ಗೊತ್ತು?

ಆ ಅಪ್ಪ ಈ ಜಗತ್ತು ಬಿಟ್ಟು ಹೋಗಿ ಇಂದಿಗೆ ಏಳು ವರ್ಷ (ರಮ್ಜಾನ್ 5)
ಪಾರತ್ರಿಕ ಮೋಕ್ಷಕ್ಕಾಗಿ ನಿಮ್ಮೆಲ್ಲರ ಪ್ರಾರ್ಥನೆ ಇರಲಿ ….

✍️ *ಸಾಹುಕಾರ್ ಅಚ್ಚು*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.