ಕೊರೋನಾ ಕಾಲದಲ್ಲಿ ಜೀವದ ಹಂಗು ತೊರೆದು ದಾದಿಯರ ಕರ್ತವ್ಯ

Advt_Headding_Middle
Advt_Headding_Middle

 

ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಸುಳ್ಯದ ಮೂವರು

ಮಂಗಳೂರಿನಲ್ಲಿ ಕೊರೋನಾ ವಾರಿಯರ್ಸ್ ಗಳಾಗಿದ್ದಾರೆ ಈ ಯುವತಿಯರು!

✍️ ದುರ್ಗಾಕುಮಾರ್ ನಾಯರ್ ಕೆರೆ

ಕೊರೋನಾ ಎಂಬ ಪದ ಕೇಳಿದಾಕ್ಷಣವೇ ಜನ ಬೆಚ್ಚಿ ಬೀಳುವ ಸಂದರ್ಭವಿದು. ಕೊರೋನಾ ಸೋಂಕಿತರ ಬಗ್ಗೆಯಂತೂ ಸಮಾಜದಲ್ಲಿ ಭಯವೇ ಮನೆ ಮಾಡಿದೆ. ಎಲ್ಲೆಡೆ ಸಾಮಾಜಿಕ ಅಂತರದ್ದೇ ಮಾತು, ಕೃತಿ . ಹೀಗಿರುವಾಗ ಕೊರೋನಾ ಸೋಂಕಿತರ ಹತ್ತಿರವಿದ್ದು ಅವರ ಆರೈಕೆ ಮಾಡುವುದೆಂದರೆ ಅದು ಸುಲಭದ ಮಾತೇನಲ್ಲ.

ಆದರೆ ಇಂತಹ ಕಠಿಣ ಕಾಯಕವನ್ನು, ಅಕ್ಷರಶಃ ಸೇವೆಯನ್ನು ಜೀವದ ಹಂಗು ತೊರೆದು ನಿರ್ವಹಿಸುತ್ತಿರುವವರು ದಾದಿಯರು, ಆರೋಗ್ಯ ಕಾರ್ಯಕರ್ತೆಯರು. ಮಂಗಳೂರಿನಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಆರೈಕೆ ಮಾಡುತ್ತಿರುವ ಸ್ಟಾಫ್ ನರ್ಸ್‌ಗಳ ಪೈಕಿ ಮೂವರು ಸುಳ್ಯದವರಿದ್ದಾರೆ.

ಜಗತ್ತೇ ಕೊರೋನಾ ಕುರಿತು ಬೆಚ್ಚಿ ಬಿದ್ದಿರುವಾಗ ನಮ್ಮೂರಿನ ಮೂವರು ಯುವತಿಯರು ಈ ರೋಗಿಗಳ ಪರಿಚರಣೆಯಲ್ಲಿ ತೊಡಗಿದ್ದಾರೆಂದರೆ ಅವರ ಕಠಿಣ ಕಾಯಕ ಮತ್ತು ಮನೋ ಧೈರ್ಯಕ್ಕೆ ಸಲಾಂ ಸಲ್ಲಿಸಲೇಬೇಕು.

ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಸರಕಾರ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿತ್ತು. ಈ ಹಿನ್ನಲೆಯಲ್ಲಿ ಅಲ್ಲಿ ಕೋವಿಡ್ ಸೋಂಕಿತರಿಗೆ ಮತ್ತು ಶಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸ್ತುತ ಈ ಆಸ್ಪತ್ರೆಯ ಈ ವಿಭಾಗದಲ್ಲಿ ಮೂವರು ಸುಳ್ಯದವರು ಸ್ಟಾಫ್ ನರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪೆರಾಜೆಯ ಅಕ್ಷತಾ, ಮಡಪ್ಪಾಡಿಯ ಮಲ್ಲಿಕಾ ಹಾಗೂ ಬಾಳುಗೋಡಿನ ಮಧುಶ್ರೀ ಈ ಸೇವಾದೌತ್ಯ ನಿರ್ವಹಿಸುತ್ತಿರುವ ಯುವತಿಯರು.

ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಣೆ ಎಂದರೆ ಸರಳ ಸಂಗತಿಯೇನಲ್ಲ. ಈಗಾಗಲೇ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತ ವರದಿಗಳನ್ನು ನೀವು ಗಮನಿಸಿರುತ್ತೀರಿ. ಆಸ್ಪತ್ರೆಗೆ ಹೋಗುವ ಮುಂಚೆ ಹಾಗೂ ನಂತರ ಕಠಿಣ ಸುರಕ್ಷಾ ನಿರ್ಬಂಧಗಳಿವೆ. ಆಸ್ಪತ್ರೆಗೆ ಪ್ರವೇಶ ಮಾಡುವಾಗಲಂತೂ ಪಿಪಿಇ (ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್‌ಮೆಂಟ್) ಕಿಟ್ ಧರಿಸಬೇಕು. ಕ್ಯಾಪ್, ಕಣ್ಣಿಗೆ ಗೋಗಲ್ಸ್, ಕಾಲಿಗೆ ಶೂ ಕವರ್, ಕೈಗಳಿಗೆ ಗ್ಲೌಸ್, ಮುಖಕ್ಕೆ ಮಾಸ್ಕ್, ಗೌನ್, ಓವರ್‌ಕೋಟ್, ಎಫ್ರಾನ್ ಇಷ್ಟು ವ್ಯವಸ್ಥೆಗಳಿರುವ ಪಿಪಿಇ ಕಿಟ್ ಧರಿಸಬೇಕಾಗುತ್ತದೆ. ಇದರಿಂದ ದೇಹದ ಮೇಲೆ ಆಗುವ ಪರಿಣಾಮ ಊಹಿಸಲೂ ಅಸಾಧ್ಯ. ಆಹಾರ ಬಿಡಿ, ಕುಡಿಯುವ ನೀರು ಕೂಡ ಸೇವಿಸುವ ಹಾಗಿಲ್ಲ. ಉಸಿರಾಡಲೂ ಕಷ್ಟ. ಕೋವಿಡ್ ನಿಯಮದನ್ವಯ ರೋಗಿಗಳಿರುವ ವಾರ್ಡ್‌ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆಯನ್ನೂ ಬಳಸುವಂತಿಲ್ಲ.
ಇಂತಹ ಪರಿಸ್ಥಿತಿಯಲ್ಲಿ ದಿನದಲ್ಲಿ ಆರು ಗಂಟೆ ಡ್ಯೂಟಿ ಮಾಡಬೇಕು, ರೋಗಿಗಳ ಆರೈಕೆ ಮಾಡಬೇಕು ಮತ್ತು ನಿಗಾ ವಹಿಸಬೇಕು. ಡ್ಯೂಟಿಯ ನಂತರ ತಮ್ಮ ಕೊಠಡಿ ಸೇರಬೇಕು.
ಇಂತಹ ಸವಾಲಿನ ಸೇವೆಯನ್ನು ಈ ದಾದಿಯರು ಕಳೆದ ಕೆಲವು ಸಮಯದಿಂದ ಮಾಡುತ್ತಿದ್ದಾರೆ.

ಅಕ್ಷತಾ ಪೆರುಮುಂಡ

ಅಕ್ಷತಾ ಪೆರುಮುಂಡರವರು ಪೆರಾಜೆಯ ಪೆರುಮುಂಡ ದಿ.ಅಣ್ಣಪ್ಪ ಮತ್ತು ದಿ. ರುಕ್ಮಿಣಿಯವರ ಪುತ್ರಿ. ನಾಲ್ವರು ಮಕ್ಕಳ ಪೈಕಿ ಮೂರನೆಯವರು. ಪೆರಾಜೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ನಂತರ ಸುಳ್ಯ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಓದಿದರು. ಬಳಿಕ ಸವಣೂರು ವಿದ್ಯಾರಶ್ಮಿ ನರ್ಸಿಂಗ್ ಕಾಲೇಜಿನಲ್ಲಿ ನರ್ಸಿಂಗ್ ಶಿಕ್ಷಣ ಪಡೆದ ಬಳಿಕ ಮಂಗಳೂರಿನ ಯೇನಪೋಯ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸಿದರು. ಬಳಿಕ ಕೆಎಂಸಿ ಮೂಲಕ ವೆನ್‌ಲಾಕ್ ಆಸ್ಪತ್ರಗೆ ನಿಯುಕ್ತಿಗೊಂಡು 2 ವರ್ಷದಿಂದ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

“ಆರಂಭದಲ್ಲಿ ಭಯವಿತ್ತು. ಕಿಟ್ ಧರಿಸಿ ಹೇಗೆ ಕೆಲಸ ಮಾಡುವುದು ಎಂಬ ಗೊಂದಲವೂ ಇತ್ತು. ಆದರೆ ಈಗ ಆ ಭಯ, ಗೊಂದಲಗಳು ಹೋಗಿದೆ” ಎನ್ನುತ್ತಾರೆ ಅಕ್ಷತಾ ಪೆರುಮುಂಡ.

ಮಲ್ಲಿಕಾ

ಮಲ್ಲಿಕಾ ಅವರು ಮಡಪ್ಪಾಡಿಯ ಬೊಮ್ಮೆಟ್ಟಿ ವೀರಪ್ಪ ಗೌಡ ಮತ್ತು ರಾಜೇಶ್ವರಿ ದಂಪತಿಯ ಪುತ್ರಿ. ಈ ದಂಪತಿಯ ಮೂರು ಜನ ಮಕ್ಕಳಲ್ಲಿ ಕಿರಿಯಾಕೆ. ಮಡಪ್ಪಾಡಿ ಮತ್ತು ಎಲಿಮಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ಬಳಿಕ ಇವರು ಕೂಡಾ ಸವಣೂರು ವಿದ್ಯಾರಶ್ಮಿಯಲ್ಲಿ ನರ್ಸಿಂಗ್ ಓದಿ ಯೇನಪೋಯದಲ್ಲಿ ಸೇವೆ ಸಲ್ಲಿಸಿ ಕೆ.ಎಂ.ಸಿ ಮೂಲಕ ವೆನ್‌ಲಾಕ್‌ಗೆ ನಿಯುಕ್ತಿಗೊಂಡು ಅಲ್ಲಿ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

“ಮನೆಯವರು ನಮ್ಮ ಸೇವೆಗೆ ಸಪೋರ್ಟ್ ಮಾಡುತ್ತಿದ್ದಾರೆ. ಆದುದರಿಂದಲೇ ಇಂತಹ ಸಂದರ್ಭದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗಿದೆ” ಎನ್ನುತ್ತಾರೆ ಮಲ್ಲಿಕಾ.

ಮಧುಶ್ರೀ ಬಾಳುಗೋಡು

ಮಧುಶ್ರೀಯವರು ಬಾಳುಗೋಡು ಗ್ರಾಮದ ಕೊತ್ನಡ್ಕ ಕುಳ್ಯಾಡಿಗದ್ದೆ ರಾಮದೇವ ಮತ್ತು ಪಾರ್ವತಿ ದಂಪತಿಯ ಪುತ್ರಿ. ಇಬ್ಬರು ಮಕ್ಕಳ ಪೈಕಿ ಕಿರಿಯಾಕೆ. ಬಾಳುಗೋಡಿನಲ್ಲಿ ಪ್ರಾಥಮಿಕ ಶಿಕ್ಷಣ, ಹರಿಹರಪಲ್ಲತ್ತಡ್ಕದಲ್ಲಿ ಪ್ರೌಢ ಹಾಗೂ ಪಿಯು ಶಿಕ್ಷಣ ಪಡೆದ ಬಳಿಕ ಮಂಗಳೂರಿನ ವೆನ್‌ಲಾಕ್‌ನಲ್ಲಿ ನರ್ಸಿಂಗ್ ಶಿಕ್ಷಣ ಪಡೆದರು. ಬಳಿಕ ಕೆಎಂಸಿ ಮೂಲಕ ವೆನ್‌ಲಾಕ್ ಆಸ್ಪತ್ರೆಗೆ ನೇಮಕಗೊಂಡು ಮೂರು ವರ್ಷಗಳಿಂದ ಅಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

” ಇಂತಹ ಸೇವೆಗೆ ನಾವು ಸಿದ್ಧರಾಗಿದ್ದೇವೆ. ಬೇರೆಯವರ ಸುರಕ್ಷತೆಯನ್ನೂ ಗಮನಿಸಿಯೇ ನಾವೂ ಕೆಲಸ ಮಾಡುತ್ತಿದ್ದೇವೆ” ಎನ್ನುತ್ತಾರೆ ಮಧುಶ್ರೀ.

ಮಂಗಳೂರಿನ ಕೋವಿಡ್ ಆಸ್ಪತ್ರೆಯಲ್ಲಿ ಆಯುಷ್ ವಿಭಾಗ ಮತ್ತು ಐಸಿಯು ವಿಭಾಗಗಳಿವೆ.
ಅಕ್ಷತಾ ಮತ್ತು ಮಧುಶ್ರೀ ಐಸಿಯು ವಿಭಾಗದಲ್ಲಿ ನಿರ್ವಹಿಸುತ್ತಿದ್ದರೆ, ಮಲ್ಲಿಕಾ ಎರಡೂ ವಿಭಾಗದಲ್ಲಿ ಡ್ಯೂಟಿ ಮಾಡುತ್ತಿದ್ದಾರೆ. ಪಿಪಿಇ ಕಿಟ್ ಧರಿಸಿ ನಿರಂತರ ಆರು ಗಂಟೆ ಕೆಲಸ ಮಾಡುವುದು ಯಾತನೆಯ ಮತ್ತು ತ್ರಾಸದಾಯಕ ಕೆಲಸವಾದುದರಿಂದ ದಾದಿಯರು ನಾಲ್ಕು ಗಂಟೆಯಂತೆ ಪರಸ್ಪರ ಶಿಪ್ಟ್ ಮಾಡಿಕೊಳ್ಳುತ್ತಿದ್ದಾರೆ.

“ಇದು ರಿಕವರಿ ಆಗುವ ರೋಗವಾದುದರಿಂದ ರೋಗಿಗಳು ಕೂಡ ಭಯ ಪಡುವಂತಹ ಸನ್ನಿವೇಶ ಈಗ ಇಲ್ಲ ಎನ್ನುತ್ತಾರೆ ಇವರು.
ತಮ್ಮ ಕರ್ತವ್ಯ ನಿರ್ವಹಣೆಯ ಬಳಿಕ ಇವರು ಡೆಟಾಯಿಲ್ ಬಳಸಿ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಬಟ್ಟೆಗಳನ್ನು ಹೈಪೋ ಕ್ಲೋರೈಟ್ ಸೊಲ್ಯುಷನ್‌ನಲ್ಲಿ ತೊಳೆದು ಹಾಕುತ್ತಾರೆ. ಬಳಿಕ ತಮ್ಮ ವಾಸ್ತವ್ಯಕ್ಕ ತೆರಳುತ್ತಾರೆ. ಅಕ್ಷತಾ ಹಾಗೂ ಮಲ್ಲಿಕಾ ಪಿಜಿಯಲ್ಲಿ ವಾಸ್ತವ್ಯವಿದ್ದರೆ ಮಧುಶ್ರೀ ಕೆಎಂಸಿಯ ಹಾಸ್ಟೆಲ್‌ನಲ್ಲಿ ವಾಸ್ತವ್ಯವಿದ್ದಾರೆ. ಇಲ್ಲೂ ಇವರೆಲ್ಲ ಸುರಕ್ಷ ಕ್ರಮಗಳನ್ನು ಅನುಸರಿಸುತ್ತಾರೆ.

ಮೊದಲಾದರೆ ತಿಂಗಳಿಗೊಮ್ಮೆಯೊ, ಎರಡು ಬಾರಿಯೋ ಮನೆಗೆ ಬರುವ ಇವರು ಈಗ ಮನೆಯ ಮುಖ ನೋಡದೆ ಮೂರು ತಿಂಗಳು ಕಳೆದಿದೆ. ಸುರಕ್ಷತೆಯ ದೃಷ್ಟಿಯಿಂದ ಸದ್ಯ ಬರುವ ಯೋಚನೆಯನ್ನೂ ಮಾಡಿಲ್ಲ ಎನ್ನುತ್ತಾರೆ ಇವರು.

ಆದೇನೇ ಇರಲಿ, ಕೊರೋನಾ ಎಂಬ ಮಹಾಮಾರಿಗೆ ಜಗತ್ತೆಂಬ ಜಗತ್ತೇ ತತ್ತರಿಸಿ ಕುಳಿತಿರುವಾಗ ನಮ್ಮೂರ ಹೆಣ್ಣು ಮಕ್ಕಳು ಅಂತಹ ರೋಗಿಗಳ ಆರೈಕೆಯಲ್ಲಿ ತೊಡಗಿದ್ದಾರೆ ಎಂದರೆ ಅದು ಹೆಮ್ಮೆಯ ಸಂಗತಿ ಹಾಗೂ ದಾಖಲಾರ್ಹ ಸಂಗತಿಯೂ ಹೌದು.
ಕೊರೋನಾ ವಾರಿಯರ್ಸ್‌ಗಳಾಗಿರುವ ನಮ್ಮೂರಿನ ಆಶಾಕಾರ್ಯಕರ್ತೆಯರನ್ನು ನಾವು ಗೌರವ ಹಾಗೂ ಆಭಿಮಾನದಿಂದ ಕಂಡಿದ್ದೇವೆ. ನಮ್ಮದೇ ಊರಿನ ಈ ಮೂವರಿಗೂ ಇಂತದೆ ಅಭಿಮಾನ ಸಲ್ಲಬೇಕು. ಸಲ್ಲಿಸಬೇಕಾದದು ಸಮಾಜದ ಜವಾಬ್ದಾರಿ. ಅವರು ಆರೈಸುತ್ತಿರಲಿ, ನಾವು ಹಾರೈಸುತ್ತಿರೋಣ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.