ಲಾಕ್ ಡೌನ್ ದಿನಗಳು…ಹವ್ಯಾ‌ಸಗಳನ್ನು ಪ್ರೇರೆಪಿ‌ಸಿದ ದಿನಗಳು

Advt_Headding_Middle
Advt_Headding_Middle

 

✍️ *ಸೌಮ್ಯ ಸಿ.ಡಿ.*

ಪ್ರಸ್ತುತ ಆಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಎಲ್ಲರೂ ಅವರವರ ಕೆಲಸದಲ್ಲಿ, ಅವರನ್ನು ಅವರೇ ಮರೆತಿದ್ದ ಸಮಯದಲ್ಲಿ ಈ ಲಾಕ್ ಡೌನ್ ಎಲ್ಲರಿಗೂ ವಿಶ್ರಾಂತಿಯನ್ನು ನೀಡಿತು.

ಮನುಷ್ಯ ತನ್ನ ದುರಾಸೆಗಾಗಿ ಅದೆಷ್ಟೋ ಪ್ರಾಣಿ ಪಕ್ಷಿಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಬಂಧಿಸಿಟ್ಟು ಅವುಗಳ ಸ್ವಾತಂತ್ರ್ಯವನ್ನು ಹೇಗೆ ಕಸಿದುಕೊಂಡಿರುವನೋ ಹಾಗೆಯೇ ಈ ಲಾಕ್ ಡೌನ್ ಸ್ವತಂತ್ರವಾಗಿ, ಸ್ವಚ್ಚಂದವಾಗಿ ಓಡಾಡುತ್ತಿದ್ದ ಮನುಷ್ಯರನ್ನು ಬಂಧಿಸಿದೆ ಎಂದರೆ ತಪ್ಪಾಗಲಾರದು.

ಲಾಕ್ ಡೌನ್ ದಿನಗಳ ನನ್ನ ಅನುಭವವನ್ನು ಈ ಮೂಲಕ ತಮ್ಮ ಮುಂದೆ ತೆರೆದಿಡಲು ಇಚ್ಚಿಸುತ್ತೇನೆ.

ಮೊದಲು ಮನೆಯಿಂದ ಕಾಲೇಜು ಎಂದು ಹೊರಗೆ ಹೋಗುತ್ತಿದ್ದ ನನಗೆ ಮನೆಯಲ್ಲಿಯೇ ಬಂಧಿಸಿಟ್ಟ ಅನುಭವವಾಯಿತು. ಕೇವಲ ಕಾಲೇಜಿನ ಪಠ್ಯ ವಿಷಯದ ಬಗ್ಗೆ ಗಮನ ಕೊಡುತ್ತಿದ್ದ ನನಗೆ ಈ ಲಾಕ್ ಡೌನ್ ರಜೆಯಿಂದಾಗಿ ಹಲವಾರು ರೀತಿಯ ಪುಸ್ತಕಗಳನ್ನು ಓದುವ ಸುಂದರ ಅವಕಾಶವು ಒದಗಿತು. ಅಂತೆಯೇ ಸಂಗೀತ ಕೇಳುವ ಹವ್ಯಾಸ ಇದ್ದ ನನಗೆ ಹೊಸ ಹೊಸ ಹಾಡುಗಳನ್ನು ಕೇಳುವ ಸದಾವಕಾಶ ದೊರೆಯಿತು.

ಮನೆಯಲ್ಲಿಯೇ ತೋಟದ ಕೆಲಸವನ್ನು ಮಾಡುತ್ತಾ, ಸ್ವಚ್ಚಂದ, ಶುದ್ಧವಾದ,ತಂಪಾದ ಗಾಳಿ,ಬೆಳಕು, ನೀರನ್ನು ಸೇವಿಸುತ್ತಾ, ಪ್ರಕೃತಿಯ ಸೊಬಗನ್ನು ಸವಿಯಲು, ಪ್ರಕೃತಿಯೊಂದಿಗೆ ಬೆರೆಯಲು ಇದು ಒಳ್ಳೆಯ ಅವಕಾಶ ಕಲ್ಪಿಸಿದೆ. ನಾನು ಬಾಲ್ಯದಲ್ಲಿ ಆಟವಾಡುತ್ತಿದ್ದ ಅದೆಷ್ಟೋ ಸ್ಥಳವನ್ನು ಮತ್ತೆ ನೋಡಿ ಬಾಲ್ಯದ ನೆನಪುಗಳ ಪುಟವನ್ನು ತೆರೆದಿಡಲು ಒಳ್ಳೆಯ ಅವಕಾಶ ಸಿಕ್ಕಿತು. ಈಗ ಎಲ್ಲರೂ ಮೊಬೈಲ್ ನಲ್ಲಿ ಇರುವ ಆಟವನ್ನು ಆಡುತ್ತಾ ಸಮಯ ಕಳೆದರೆ ನಾನು ನನ್ನ ತಮ್ಮ-ತಂಗಿಯ ಜೊತೆಗೆ ಸೇರಿಕೊಂಡು ಬಾಲ್ಯದಲ್ಲಿ ಆಟವಾಡುತ್ತಿದ್ದ, ಒಳಾಂಗಣ ಕ್ರೀಡೆಗಳು ಎಂದು ಪ್ರಸಿದ್ಧಿಯಾಗಿರುವ ಲೂಡೋ ,ಕ್ಯಾರಂ, ಮುಂತಾದ ಆಟವನ್ನು ಆಡುತ್ತಿದ್ದೆವು.
ಎಂದೂ ಮರೆಯಲಾಗದ ಆ ಸುಂದರವಾದ ಬಾಲ್ಯಕ್ಷಣವನ್ನು ಮತ್ತೆ ನೆನಪಿಸಿತು ಈ ಲಾಕ್ ಡೌನ್.

ನಮ್ಮ ಮನೆಯ ಹತ್ತಿರದಲ್ಲೇ ಇರುವ ಅಜ್ಜಿ ಮನೆಗೆ ಹೋಗಿ ಅಜ್ಜಿ ಜೊತೆ ಹರಟೆ ಹೊಡೆಯುತ್ತಾ, ನಾನು ಅಲ್ಲಿ ಆಟ ಆಡಿದ ಸ್ಥಳವನ್ನು ನೋಡುತ್ತಾ,ಆ ಸವಿನೆನಪುಗಳನ್ನು ತಮ್ಮ-ತಂಗಿಯರೊಂದಿಗೆ ಹಂಚಿಕೊಳ್ಳಲು ಉತ್ತಮ ಅವಕಾಶ ದೊರೆಯಿತು.

ಈ ಲಾಕ್ ಡೌನ್ ಸಮಯದಲ್ಲಿಯೇ ನನ್ನ ಹುಟ್ಟಿದ ಹಬ್ಬವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಿದೆನು. ತಿಂಡಿ ತಿನಿಸು ಮಾಡುವುದರಲ್ಲಿ ಆಸಕ್ತಿ ಇದ್ದ ನನಗೆ ಮನೆಯಲ್ಲಿಯೇ ಆರೋಗ್ಯಕರ ಕೇಕ್ ತಯಾರಿಸುವ ಸದಾವಕಾಶ ದೊರೆಯಿತು. ಹೀಗೆ ಹಲವು ರೀತಿಯ ಹೊಸ ಹೊಸ ತಿಂಡಿ ತಿನಿಸುಗಳನ್ನು ಮಾಡಿ ಕಲಿಯಲು ಒಳ್ಳೆಯ ಸಮಯ ಸಿಕ್ಕಿತು.

ನನ್ನಲ್ಲಿರುವ ಹಲವಾರು ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಲು ಒಳ್ಳೆಯ ಸಮಯಾವಕಾಶವು ಸಿಕ್ಕಿತು. ನನಗೆ ಕಾಗದದಲ್ಲಿ ಕರಕುಶಲ ವಸ್ತುಗಳನ್ನು ತಯಾರಿಸುವುದರಲ್ಲಿ ಆಸಕ್ತಿ ಇದ್ದ ಕಾರಣ ಹಲವಾರು ಹೂಗಳನ್ನು ತಯಾರಿಸಿದ್ದೇನೆ,ಮತ್ತು ಪತ್ರಿಕೆಯಲ್ಲಿ ಬರುತ್ತಿದ್ದ ಕೆಲವು ಪ್ರಮುಖ ವಿಷಯಗಳ ಬಗ್ಗೆ ಅಂದರೆ ಸಾಹಿತ್ಯ, ಕೃಷಿ, ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸಿದ್ದೇನೆ. ಅಂತೆಯೇ ಕವನ ಬರೆಯುವ ಹವ್ಯಾಸ ಇದ್ದ ನನಗೆ ಕೆಲವು ಕವನಗಳನ್ನು ರಚಿಸಲು ಸಮಯ ಸಿಕ್ಕಿತು. ಇನ್ನು ಉಳಿದ ಸಮಯದಲ್ಲಿ ಟಿವಿಯಲ್ಲಿ ಬರುವಂತಹ ನೃತ್ಯವನ್ನು ನೋಡುತ್ತಾ ಸಮಯ ಕಳೆದೆ.

ನಮ್ಮ ರೋವರ್ಸ್ ಮತ್ತು ರೇಂಜರ್ಸ್ ಇದರ ಕೆಲವು ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ, ಕೊರೊನಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಾ ಸಮಯವನ್ನು ಕಳೆದೆ.
ಲಾಕ್ ಡೌನ್ ದಿನಗಳ ಬಗ್ಗೆ ಗೆಳತಿಗೆ ಕರೆ ಮಾಡಿ ನನ್ನ ಎಲ್ಲಾ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೆ. ನಮ್ಮ ನಿಜವಾದ ಆಪ್ತರು ಯಾರೆಂದು ಈ ಲಾಕ್ ಡೌನ್ ದಿನಗಳಲ್ಲಿ ತಿಳಿಯಿತು. ಒಟ್ಟಾಗಿ ಹೇಳುವುದಾದರೆ ಈ ಲಾಕ್ ಡೌನ್ ದಿನಗಳು ನಮ್ಮಲ್ಲಿರುವ ಹವ್ಯಾಸಕ್ಕೆ ಉತ್ತೇಜನ ನೀಡಿ ಸಮಯದ ಪ್ರಾಮುಖ್ಯತೆಯನ್ನು ತಿಳಿಸಿತು.

✍🏻 *ಸೌಮ್ಯ ಸಿ.ಡಿ.*
ಕೆ.ಎಸ್.ಎಸ್.ಕಾಲೇಜು ಸುಬ್ರಹ್ಮಣ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.