ಇಂದು ಅಮ್ಮಂದಿರ ದಿನಾಚರಣೆ

Advt_Headding_Middle
Advt_Headding_Middle

 

ಅಮ್ಮಾ ಎಂದರೆ ಏನೋ ಹರುಷವೂ…

✍️ ಕಥೆ : ಪವಿತ್ರ ಎ.

ಅಯ್ಯೋ ಎಷ್ಟು ಜನ… ಏನು ಈ ಸಲ ಇಷ್ಟೂ ಜನಜಂಗುಳಿ ಇದೆಯಲ್ಲಾ… ಯಾಕಾದ್ರೂ ಬಂದ್ವಿ ಈ ಜಾತ್ರೆಗೆ … ಪಾಪ ಅಮ್ಮಾ ಹೇಳಿದ್ಳು ಬೇಡ ಹೋಗೋದು ಇವತ್ತು ಮಗಳೇ… ನಾಳೆ ಹೋಗೋಣ. ಜನ ಎಲ್ಲಾ ಕಡಿಮೆ ಇರ್ತಾರೆ… ಛೇ… ನಾನು‌ ಅಮ್ಮನ ಮಾತು ಕೇಳ್ಬೇಕಿತ್ತು…..ಆದ್ರೂ ಮನಸ್ಸು ತಡೆಯುತ್ತಾ, ವರುಷಕ್ಕೊಮ್ಮೆ ಬರೋ ಜಾತ್ರೆ ಅಲ್ವಾ??? ಸ್ನೇಹಿತೆಯರು ಬೇರೆ ಪೋನು‌ ಮಾಡಿ ತುಂಬಾ ಒತ್ತಾಯ ಮಾಡಿಬಿಟ್ರು.. ಹಾಗೆ ಅಮ್ಮನ್ನು ಒತ್ತಾಯದಿಂದ ಹೊರಡಿಸಿ ಬಂದೇಬಿಟ್ಟೆ… ಹಾಗಂತ ಇಲ್ಲಿ ಬಂದು ನೋಡಿದ್ರೆ ಕಾಲು ಇಡೋದಿಕ್ಕೂ ಜಾಗ ಇಲ್ಲ… ಇರಲಿ ಅಂತಾ ಒಂದು ಕೈಯ್ಯಲ್ಲಿ ವ್ಯಾನಿಟಿ ಬ್ಯಾಗು , ಇನ್ನೊಂದು ಕೈಯ್ಯಲ್ಲಿ ಮೊಬೈಲು ಹಿಡ್ಕೊಂಡು ಸ್ನೇಹಿತೆಯರಿಗೆ ಕಾಲ್ ಕೊಟ್ಟೆ…

” ಅಯ್ಯೋ ಈ ಅಮ್ಮಾ ಎಲ್ಲಿ?ಓ ಅಷ್ಟೂ ದೂರದಲ್ಲಿದ್ದಾಳೆ… ಬೇಗ ಬಾ ಅಮ್ಮಾ… ಎಷ್ಟು ನಿಧಾನ ಬರ್ತಿಯಾ ?? ಅಲ್ಲಿ ಫ್ರೆಂಡ್ಸ್ ಕಾಯ್ತಾ ಇದ್ದಾರೆ … ಬೇಗ ಬಾ… ”
ಅಂತಾ ಅಮ್ಮನನ್ನು ಜೋರಾಗಿ ಕರೆದಳು ಅವನಿ. ಪಾಪ ವಯಸ್ಸಾಗಿದೆ ಆ ಜೀವಕ್ಕೆ. ಹೇಗಾದ್ರೂ ಬೇಗ ಬರ್ತಾಳೆ. ಸುಕ್ಕುಗಟ್ಟಿದ ಕಾಲುಗಳನ್ನು ಮುಂದಕ್ಕೆ ಎಳ್ಕೊಂಡು ಮಗಳಿಗೆ ನಿರಾಸೆ ಬೇಡ ಎಂದು ಆ ಜನರ ನಡುವೆ ಮೆಲ್ಲನೆ ಬಂದಳು….

ಅವನಿ ಅಂತೂ ಎಷ್ಟೋ ವರುಷಗಳ ಬಳಿಕ ಸ್ನೇಹಿತೆಯರನ್ನು ಕಾಣುವ ತವಕದಲ್ಲಿದ್ದಳು. ಅಮ್ಮನ ಬಗೆಗಿನ ಕಾಳಜಿ ಆ ಸಮಯಕ್ಕೆ ಮಾಯವಾಗಿತ್ತು. ಸ್ವಲ್ಪ ಮುಂದಕ್ಕೆ ನಡೆದಾಗ ” ಮಗಳೇ ನಂಗೆ ಆಗೋಲ್ಲ ಮುಂದೆ ನಡೆಯೋದಕ್ಕೆ. ನಾನು ಇಲ್ಲಿಯೇ ಇರುತ್ತೇನೆ..ನೀನು ಹೋಗಿ ಬಾ” ಎಂದು ಅಲ್ಲೇ ರಸ್ತೆಯ ಬಳಿಯಿದ್ದ ಮರದ ಕೆಳಗೆ ಕುಳಿತುಕೊಂಡಳು ಆ ತಾಯಿ.” ಸರಿ ನೀನಿಲ್ಲಿಯೇ ಇರು ಎಲ್ಲೂ ಹೋಗಬೇಡ…. ನಾ ಬೇಗ ಬರುತ್ತೇನೆ “ಎಂದು ಲಗುಬಗೆಯಿಂದ ಸ್ನೇಹಿತರ ಭೇಟಿ ಮಾಡೋದಕ್ಕೆ ಹೊರಟೇಬಿಟ್ಟಳು ಅವನಿ.

” ಹಾಯ್ ಎಷ್ಟು ದಿನ ಆಗಿತ್ತು ಕಣ್ರೆ ನಿಮ್ಮನ್ನೆಲ್ಲಾ ನೋಡಿ ” ಎಂದು ಗೆಳತಿಯರನ್ನು ಭೇಟಿ ಮಾಡಿದ ತುಂಬು ಖುಷಿಯಲ್ಲಿದ್ದ ಅವನಿ ಜಾತ್ರೆಯ ನಡುವಿನಲ್ಲೆಲ್ಲೋ ಬಿಟ್ಟು ಬಂದ ಅಮ್ಮನನ್ನು ಮರೆತೇ ಬಿಟ್ಟಳು.

ಇತ್ತ ಬಾಲ್ಯದ ಗೆಳತಿಯರನ್ನು ಮಾತನಾಡಿಸಲು ಹೋಗಿದ್ದ ಮಗಳು ಇಷ್ಟು ಹೊತ್ತಾದರೂ ಮರಳಿ ಬಂದಿಲ್ಲವಲ್ಲ ಎಂದುಕೊಳ್ಳುತ್ತಾ ಎಲ್ಲಿ ಮಗಳನ್ನು ಹುಡುಕುವುದು ಎಂಬ ತುಸು ಭಯದಿಂದ ತಾನು ರಸ್ತೆಯ ಆ ಬದಿಗೆ ಹೋಗೋಣ ಎಂದುಕೊಂಡು ರಸ್ತೆ ದಾಟಲು ಮುಂದಾದಳು ತಾಯಿ.

ಗೆಳತಿಯರ ಜೊತೆ ಐಸ್ ಕ್ರೀಂ ಮೆಲ್ಲುತ್ತಾ ಹರಟುತ್ತಿದ್ದ ಅವನಿಯ ಕಿವಿಗೆ ಅಲ್ಲಿ ಯಾವುದೋ ಅಜ್ಜಿ ಕಾರಿಗೆ ಡಿಕ್ಕಿ‌ಹೊಡೆದು ಮೃತ ಪಟ್ಟಿದ್ದಾರೆ ಎಂಬ ಸುದ್ದಿ ಬಿದ್ದಿದ್ದೆ ತಡ .. “ಅಯ್ಯೋ ಬರ್ತೀನಿ ಕಣ್ರೆ ಅಮ್ಮನ್ನ ಅಲ್ಲೆ ಬಿಟ್ಟು ಬಂದಿದ್ದೀನಿ ” ಎಂದು ತುಸು ಅವಸರದಿಂದ ಹೊರಟು ಬಂದಳು.

ಅವನಿ ಬಂದು‌ ನೋಡುತ್ತಾಳೆ .” ಅಮ್ಮಾ ಇಲ್ಲಾ..ಎಲ್ಲಿ‌ ಅಮ್ಮ‌ ಎಲ್ಲಿ‌ “ಎಂದು ಗಾಬರಿಯಿಂದ ಅಲ್ಲೆಲ್ಲಾ ಹುಡುಕುತ್ತಾಳೆ. ಎಲ್ಲೂ ತಾಯಿ ಕಾಣಿಸ್ತಾ ಇಲ್ಲ..ಎಂದು‌ ಅಲ್ಲೆ ಇದ್ದ ಕೆಲವರನ್ನು ವಿಚಾರಿಸ್ತಾಳೆ. ಯಾರನ್ನು ಕೇಳಿದರೂ ಇಲ್ಲ ಅಂತಾ ಹೇಳುವವರೇ. ಈ ಅಮ್ಮ ಎಲ್ಲಿಗೆ ಹೋದ್ಲು ಅಂತಾ ಅಲ್ಲೇ ಕುಸಿದು ಕುಳಿತಳು. ಪಾಪ ಅವಳು ಕೂಡ ಸಣ್ಣ ವಯಸ್ಸಿನ ಹುಡುಗಿ. ಒಂದೇ ಒಂದು ಸಣ್ಣ ಬೇಜವಾಬ್ದಾರಿ ಅಮ್ಮನನ್ನು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡಿತೋ ಏನೋ ಅಂದುಕೊಂಡು….

ಆ ಕ್ಷಣ ಒಮ್ಮೆಲೇ ಬೆಚ್ಚಿಬಿದ್ದಳು…ಅಲ್ಲೆಲ್ಲೋ ಯಾರೋ ಕಾರಿಗೆ ಅಡ್ಡ ಬಂದು ಕುಸಿದು ಬಿದ್ದಿದ್ದಾರೆ ಎಂದು ಕೇಳಿದ್ದು ನೆನಪಾಗಿ..ಥಟ್ಟನೆ ನಡೆದಳು.. ಬಂದವಳೇ ಜನರೆಲ್ಲಾ ಗುಂಪು‌ಕಟ್ಟಿಕೊಂಡಿದ್ದ ಜನರ ನಡುವೆಯಿಂದ ಮೆಲ್ಲನೆ ಮುಂದಕ್ಕೆ ಅಡಿಯಿಟ್ಟಳು.. ಇಂದೆನೋ ಅವಳ ಎದೆ ಬಾರೀ ವೇಗದಿಂದ ಹೊಡೆದುಕೊಳ್ಳಲಾರಂಭಿಸಿತು..

ಮನಸ್ಸು ಒಂದೆ ಸಮನೆ ದೇವರೆ ನನ್ನ ಅಮ್ಮ ಆಗಿರದಿದ್ದರೆ ಸಾಕು ಎಂಬಂತೆ ಪ್ರಾರ್ಥಿಸುತ್ತಲೇ…. ಆಕೆ ಮೆಲ್ಲನೆ ಅಲ್ಲಿ ಬಿದ್ದಿದ್ದ ದೇಹದ ಮುಖದ ಮೇಲಿನ ಬಟ್ಟೆ ಸರಿಸಿದಳು… ಅವಳ ಪ್ರಾರ್ಥನೆ ದೇವರಿಗೆ ತಲುಪಿತೋ ಏನೋ ಅದ್ಯಾವುದೋ ಅನಾಥ ಶವವಾಗಿತ್ತು.

ಹಾಗಾದರೆ ಅಮ್ಮ ಎಲ್ಲಿ ಹೋದಳು‌???? ಮತ್ತೆ ಹುಡುಕಾಟ ಶುರು ಹಚ್ಚಿಕೊಂಡಳು. ಹುಡುಕುತ್ತಾ ಹುಡುಕುತ್ತಾ ಮುಂದೆ ಸಾಗಿದ ಅವಳಿಗೆ ತಾನು ಮೊದಲೇ ಅಮ್ಮನನ್ನು ಬಿಟ್ಟು ಹೋಗಿದ್ದ ಸ್ಥಳಕ್ಕೆ ತಲುಪಿದ್ದು ಗೊತ್ತೆ ಆಗಲಿಲ್ಲ…

” ಅವನಿ….ಅವನಿ.. ಏಳಮ್ಮಾ ಬೇಗ…ಶಾಲೆ ಇದೆಯಲ್ಲಾ…ಇನೇನು ಆಟೋ ಬಂದು ಬಿಡುತ್ತೆ…..ಹಾ……..
ಅಮ್ಮನದೇ ಸ್ವರ… ತನ್ನ ಕಣ್ಣೀರನ್ನು ಒರೆಸುತ್ತಾ …….
ಎಲ್ಲಿ ಅಮ್ಮ ….ಎಂದೂ ನೋಡುತ್ತಾಳೆ ……ಅಮ್ಮಾ ತನ್ನ ಎದುರಿಗೆ ನಿಂತು ತನ್ನನ್ನ ಕರೆಯುತ್ತಿದ್ದಾಳೆ……ಕೈಯ್ಯಲ್ಲಿ ಸಣ್ಣ ಕೋಲು ಬೇರೆ ಇದೆ… ಗೋಡೆ ಮೇಲಿನ ಗಡಿಯಾರದ ಕಡೆಗೆ ದೃಷ್ಟಿ ಹಾಯಿಸಿದರೆ..ಗಂಟೆ ಏಳು‌ ಎಂದು ಸಾರಿ ಸಾರಿ ಹೇಳುತ್ತಿತ್ತು….. “ಅಯ್ಯೋ ದೇವರೇ ನಾನು ಕಂಡಿದ್ದು ಕನಸಾ….?…..?….” ಎಂದು ಅವಸರವಸರವಾಗಿ ಎದ್ದು ಮತ್ತೆ ” ಅಮ್ಮಾ…ಅಮ್ಮಾ…… ” ಎಂದು ….ನೋಡಿದ್ರೆ ನನ್ನ ಅಮ್ಮಾ ಹಾಯಾಗಿ ಅಡುಗೆ ಮನೆಯಲ್ಲಿ……ಛೇ ಅಂದುಕೊಳ್ಳುತ್ತಾ…
ಅಮ್ಮನನ್ನು ಜೋರಾಗಿ ತಬ್ಬಿಕೊಂಡಳು…”. ಐ ಯಾಮ್ ರಿಯಲಿ‌ ಸಾರಿ ಮಾ…..’ ಎಂದಳು….

ಆದರೆ ಅಮ್ಮನಿಗೆ ಯಾವುದರ ಪರಿವೇ ಇಲ್ಲದೆ ಆಕೆಯ ಲೋಕದಲ್ಲಿ ತನ್ನವರಿಗೋಸ್ಕರ ಕೆಲಸದಲ್ಲಿ ನಿರತಳು…
…ಯಾಕಂದ್ರೆ ಅವಳು‌ ” ಅಮ್ಮ” ಅಲ್ವೇ…??????????….. ಅಮ್ಮಾ ಎಂದರೆ ಏನೋ ಹರುಷವು…ನನ್ನ ಪಾಲಿಗೆ ಅವಳೇ ದೈವವೂ……ಎಂದು ಹಾಡು ಗುಣುಗುತ್ತಾ ಹೊರಟೇ ಬಿಟ್ಟಳು ತನ್ನ ದೈನಂದಿನ ಚಟುವಟಿಕೆಗಳ ಕಡೆಗೆ ಅವನಿ…..

✍️ *ಪವಿತ್ರ ಎ.*
ಪದವೀಧರ ಶಿಕ್ಷಕಿ
ಬಿಳಿನೆಲೆ, ಕೈಕಂಬ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.