ಲಾಕ್ ಡೌನ್ ದಿನಗಳು…ಮನೆಯಲ್ಲಿಯೇ ಇದ್ದರೂ ಇಡೀ ಜಗತ್ತಿನ ಕಡೆ ನೋಡುವಂತಾಯಿತು

Advt_Headding_Middle
Advt_Headding_Middle

✍️ ಆಕಾಂಕ್ಷಾ ಕಜೆಗದ್ದೆ

ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದ ಆ ದಿನಗಳು….
ತುಂಬಾ ಬ್ಯುಸಿಯಾಗಿದ್ದೆವು. ಇದ್ದಕ್ಕಿದ್ದಂತೆ ಬಂದ ಆತಂಕದ ಸುದ್ದಿ…. ‘ಎಲ್ಲೋ… ಕೊರೊನ ಅನ್ನುವ ಹೊಸ ರೋಗ ಬಂದಿದೆ… ನಾವೆಲ್ಲ ಜಾಗ್ರತೆಯಿಂದ ಇರಬೇಕು’ ಹೀಗೆ ಶಿಕ್ಷಕರು ಹಾಗೂ ಮನೆಯವರು ಹೇಳಿದರು. ಈ ರೋಗದ ಬಗ್ಗೆ ಏನೂ ಗೊತ್ತಿಲ್ಲದ ನಾನು ನಮ್ಮ ದಿನಚರಿ ಎಂದಿನಂತೆ ಅಂತ ಭಾವಿಸಿದ್ದೆ.

ಆದರೆ ಒಂದು ದಿನ ಇದ್ದ ಲಾಕ್ಡೌನ್ ಮುಂದುವರಿದಂತೆ ಪರೀಕ್ಷೆ ಇದೆಯೋ ಇಲ್ಲವೋ ಅನ್ನುವ ಕುತೂಹಲ…. ಗಾಬರಿ..! ಆಮೇಲೆ ಪರೀಕ್ಷೆ ಇದೆ… ಇಲ್ಲ… ಅನ್ನುವ ಗೊಂದಲ!!? ಕೊನೆಗೂ ಪರೀಕ್ಷೆ ಇಲ್ಲವೇ ಇಲ್ಲ ಅನ್ನುವ ನಿರ್ಧಾರ!!!

ಕೋರೋನಾ ರೋಗದಿಂದ ಪರೀಕ್ಷೆ ಇಲ್ಲದೆ ರಜೆ ಸಿಕ್ಕಿದೆ ಹಾಗೂ ಆ ರೋಗ ನಮಗೆ ಬಾರದೇ ಇರಬೇಕಾದರೆ ಮನೆಯಲ್ಲಿಯೇ ಇರಬೇಕು ಅನ್ನುವುದರ ಬಗ್ಗೆ ನಮಗೆ ಒಂದಷ್ಟು ಅರಿವಾಗಿತ್ತು. ಮೊದಲ ಒಂದು ವಾರ ಹಾಗೆ-ಹೀಗೆ ಅಂತ ಕಳೆಯಿತು. ಆದರೆ ರಜೆ ಇರುವುದು ಖಾತ್ರಿ ಆದ ತಕ್ಷಣ ನನ್ನೆದುರಿಗೆ ಬಂದೇಬಿಟ್ಟಿತು ಅಮ್ಮನ ಶಿಸ್ತುಬದ್ಧವಾದ ‘ವೇಳಾಪಟ್ಟಿ’.
ಜೊತೆಯಲ್ಲಿ ನಮ್ಮ ನೃತ್ಯ ಗುರುಗಳಾದ ಪುತ್ತೂರಿನ ಮುಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ವಾನ್ ದೀಪಕ್ ಕುಮಾರ್ ರವರ ದೈನಂದಿನ ನೃತ್ಯ ಕಲಿಕೆಯ ಮಾರ್ಗದರ್ಶನ ಸೂಚಿ ಹಾಗೂ ನಮ್ಮ ದೈನಂದಿನ ಅಭ್ಯಾಸದ ರಿಪೋರ್ಟ್ ಮಾಡಬೇಕೆನ್ನುವ ಸಲಹೆ. ಅದರ ಬೆನ್ನಲ್ಲೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೋಜಿಸಿರುವ “ಸಂಕಲ್ಪ” ಪ್ರಾಜೆಕ್ಟ್ ವಿವರ.

ಅಲ್ಲಿಂದ ಶುರುವಾಯಿತು ನನ್ನ ಕ್ರಮಬದ್ಧವಾದ ಮನೆಯ ಕಲಿಕೆ.
ವೇಳಾಪಟ್ಟಿ ಪ್ರಕಾರ ಸಂಗೀತ-ನೃತ್ಯ ಕಲಿಕೆಯ ಮಧ್ಯೆ ಒಂದಷ್ಟು ಅಮ್ಮನ ಪಾಠ- ಕನ್ನಡ,ಇಂಗ್ಲಿಷ್ ವ್ಯಾಕರಣ ಬರಹ ಇತ್ಯಾದಿ.
ಇವೆಲ್ಲದರ ಮಧ್ಯೆ ನಾನು ‘ಕನಕದಾಸ ಮಕ್ಕಳ ಭಜನಾ ಮಂಡಳಿ’ಯ ಅಧ್ಯಕ್ಷೆ ಹಾಗೂ ಒಬ್ಬ ‘ಗೈಡ್’ ವಿದ್ಯಾರ್ಥಿನಿಯಾಗಿದ್ದು ದರಿಂದ ಸಮಾಜದ ಬಗೆಗಿನ ಕಳಕಳಿಯ ಚಿಂತನೆಯ ಬಗ್ಗೆ ನನಗೆ ನನ್ನ ಹೆತ್ತವರು ಒಂದಿಷ್ಟು ಅರಿವು ಮೂಡಿಸಿದರು. ಆ ಪ್ರಕಾರ ಪೋಷಕರ ಸಹಾಯದಿಂದ ಮಹಾಮಾರಿ ಕೋರೋನ ರೋಗದ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ನಮ್ಮ ಮನೆಯ ಅಕ್ಕಪಕ್ಕದವರಿಗೆ ಕೈ ತೊಳೆಯುವ ಸರಿಯಾದ ಕ್ರಮ, ಸ್ವಚ್ಛತೆಯಿಂದ ಇರುವ ಬಗ್ಗೆ ಹಾಗೂ ಮಾಸ್ಕ್ ಧರಿಸುವ ಉದ್ದೇಶದ ಬಗ್ಗೆ ತಿಳಿಸಿ ಮಾಸ್ಕ್ ಹಂಚಿದೆ. ಹಾಗೂ ಪೋಷಕರ ನೆರವಿನಿಂದ ಒಂದಷ್ಟು ಮಾಸ್ಕ್ ಗಳನ್ನು ಸಿದ್ಧಪಡಿಸಿ ನಮ್ಮ ಭಜನಾ ಮಂಡಳಿ ವತಿಯಿಂದ ಗ್ರಾಮಪಂಚಾಯತ್ ಮುಖಾಂತರ ನಮ್ಮ ಊರಿನ ಜನರಿಗೆ ವಿತರಿಸಲು ನೀಡಿದೆವು. ಹಾಗೂ “ಮಾಸ್ಕ್ ಬ್ಯಾಂಕ್’ ಗೆ ನೀಡಲು 20 ಮಾಸ್ಕ್ ಗಳನ್ನು ತಯಾರಿಸಿ ಸಂಗ್ರಹಿಸಿ ಇಟ್ಟಿರುತ್ತೇನೆ
ಸ್ಕೌಟ್ಸ್ ಮತ್ತು ಗೈಡ್ಸ್ “ಸಂಕಲ್ಪ” ಕಾರ್ಯಕ್ರಮದ ಅಂಗವಾಗಿ ಸುತ್ತಮುತ್ತಲಿನ ಪ್ರಾಣಿ ಪಕ್ಷಿ ಸಂಕುಲಕ್ಕೆ ನೀರು / ಆಹಾರ ನೀಡುವುದು, ಬಟ್ಟೆ ಚೀಲ ತಯಾರಿಸುವುದು, ಡ್ರಾಯಿಂಗ್ ಮೂಲಕ ಮಾಸ್ಕ್ ಧರಿಸಲು ಜಾಗೃತಿ ಮೂಡಿಸುವುದು, ನನ್ನ ಪೋಷಕರು ಮನೆಯಂಗಳದಲ್ಲಿ ಬೆಳೆದ ತರಕಾರಿಗಳಿಗೆ ನೀರು ಹಾಕುವುದರ ಜೊತೆಗೆ ಸಸ್ಯಗಳ ಬೆಳವಣಿಗೆಯನ್ನು ಗಮನಿಸುವುದು ಹೀಗೆ ಹತ್ತಾರು ಚಟುವಟಿಕೆಗಳಲ್ಲಿ ದಿನಪೂರ್ತಿ ಕಳೆಯುತ್ತಿದ್ದೇನೆ.
ಎಲ್ಲಕ್ಕಿಂತ ಹೆಚ್ಚಾಗಿ ನಾನು ಸಂತೋಷ ಕಂಡದ್ದು………
ಬೆಂಕಿ ಉಪಯೋಗಿಸದೆ ಮಾಡಿದ ಆಹಾರವನ್ನು ಮನೆಯವರೊಂದಿಗೆ ಹಣತೆ ದೀಪದ ಬೆಳಕಲ್ಲಿ ಹಂಚಿ ತಿಂದದ್ದು, ಬೆಡ್ ಶೀಟ್ ನಲ್ಲಿ ಟೆಂಟ್ ತಯಾರಿಸಿದ್ದು, ಹಣತೆ ಬೆಳಕಲ್ಲಿ ಅಣ್ಣಂದಿರ ಜೊತೆ “ಚೆನ್ನೆಮಣೆ” ಆಟ ಆಡಿದ್ದು, ಹಾಗೂ ಅಮ್ಮನ ಬಾಲ್ಯದಲ್ಲಿ ಆಡುತ್ತಿದ್ದ ಹೊಸ ಆಟದ ಪರಿಚಯ… ಮಣ್ಣಿನೊಳಗೆ ಸಿಗುವ ಸಣ್ಣ ಆಮೆ ತರಹದ ಜೀವಿಯನ್ನು ಹುಡುಕಿ ಅಂಗೈಯಲ್ಲಿಟ್ಟು “ತಿರುಗು ಮಾಲಿಂಗಾ…. ತಿರುಗು” ಅಂತ ಹೇಳುವಾಗ ಅದು ಅಂಗೈಯಲ್ಲಿ ಸುತ್ತ ತಿರುಗುತ್ತಿದ್ದ ಆಟ ಆಡಿದ್ದು ತುಂಬಾ ಕುತೂಹಲವಾಗಿತ್ತು.
ಮತ್ತೆ ನಾನೇ ತಯಾರಿಸಿದ ದಾಸವಾಳದ ಜ್ಯೂಸನ್ನು ಮನೆಮಂದಿಯೆಲ್ಲ ಕುಡಿದು ರುಚಿಕರವಾಗಿದೆ ಅಂದಾಗ ನಾನಂತೂ ಬಲೂನಿನಂತೆ ಉಬ್ಬಿದ್ದೆ. ಪ್ರತಿದಿನ ಸಂಜೆ ಭಜನಾ ಅಭ್ಯಾಸ ದಲ್ಲಿ ತೊಡಗುತ್ತಿದ್ದೆ.

ಇವುಗಳ ಮಧ್ಯೆ
ಡಾಕ್ಟರ್ ಖುಷ್ವಂತ್ ಮಾಮ ತೆರೆದ “ಅರೆಭಾಷೆ ಪಧ್ಯದಂಗಡಿ”ಗೆ ಕೂಡ ಭೇಟಿ ನೀಡಿದ್ದೇನೆ. ಹಾಗೂ ಶಂಕರ ಚಾನೆಲ್ ನವರು ನಡೆಸುವ
ಸ್ಟೇ ಹೋಮ್ ರಿಯಾಲಿಟಿ ಶೋ – ಭಕ್ತಿಗಾನ ಸೂಪರ್ ಸಿಂಗರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ
ಜೊತೆಯಲ್ಲಿ ಟಿವಿಯಲ್ಲಿ ಬರುವ ಮಕ್ಕಳ ಕಾರ್ಯಕ್ರಮ ವೀಕ್ಷಣೆ, ಕರ್ನಾಟಕ ಶಿಕ್ಷಣ ಇಲಾಖೆ ಆರಂಭಿಸಿರುವ “ಮಕ್ಕಳ ವಾಣಿ- ನಲಿಯೋಣ ಕಲಿಯೋಣ” ಯುಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುವಂತಹ ಕತೆ, ಹಾಡು, ಚಿತ್ರಕಲೆ, ಸಂಗೀತ, ಕಿರುನಾಟಕ, ಕ್ರಾಫ್ಟ್ , ಒಗಟು, ಗಾದೆ ,ಮ್ಯಾಜಿಕ್, ಪದಬಂಧ ವಿಜ್ಞಾನ ವಿಶೇಷ ಕಾರ್ಯಕ್ರಮಗಳನ್ನು ತಪ್ಪದೇ ವೀಕ್ಷಿಸುತ್ತೇನೆ.
ಇದೀಗ ನಮ್ಮನ್ನೆಲ್ಲ ರಕ್ಷಿಸುತ್ತಿರುವ “ಕೊರೋನ ವಾರಿಯರ್ಸ್” ರವರನ್ನು ಅಭಿನಂದಿಸಿ ಗೌರವಿಸುವುದಕ್ಕೋಸ್ಕರ ಸ್ವತಃ ನಾನು ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿ ಗ್ರೀಟಿಂಗ್ ಕಾರ್ಡುಗಳನ್ನು ಸಿದ್ಧಪಡಿಸುತ್ತಿದ್ದೇನೆ.

ಶಾಲೆ, ಪಾಠ, ಓದು-ಬರಹದ ಮಧ್ಯೆ ಮುಳುಗಿದ್ದ ನನಗೆ “ಲಾಕ್ ಡೌನ್” ದಿನಗಳು ತಲೆ ಎತ್ತಿ ಇಡೀ ಜಗತ್ತಿನಲ್ಲಿ ನಡೆಯುತ್ತಿರುವ ವಿಚಾರಗಳ ಬಗ್ಗೆ ತಿಳಿಯುವಂತೆ ಮಾಡಿದೆ.
“ಲಾಕ್ ಡೌನ್” ದಿನಗಳನ್ನು ಫಲಪ್ರದವಾಗಿರಿಸಿದ ನನ್ನ ಹೆತ್ತವರು, ಸಂಗೀತ ನೃತ್ಯ ಗುರುಗಳು, ಭಾರತ್ ಸ್ಕೌಟ್ಸ್ ಗೈಡ್ಸ್ ಅಧಿಕಾರಿಗಳು, ನನಗೆ ಸಹಾಯ ಮಾಡಿದ ಅಣ್ಣ ಅಕ್ಕನವರು, ದೊಡ್ಡಪ್ಪ-ದೊಡ್ಡಮ್ಮ ನವರು ಹಾಗೂ ನನ್ನ ಎಲ್ಲಾ ಚಟುವಟಿಕೆಗಳನ್ನು ಜಗತ್ತಿಗೆ ತಿಳಿಸುವ ಸುದ್ದಿ ಮಾಧ್ಯಮದವರಿಗೆ ನಾನು ಭಕ್ತಿ ಗೌರವಗಳಿಂದ ನಮಿಸುತ್ತೇನೆ.

✍️ *ಆಕಾಂಕ್ಷಾ ಕಜೆಗದ್ದೆ*
ಆರನೇ ತರಗತಿ
ಶ್ರೀ ನರಿಯೂರು ರಾಮಣ್ಣಗೌಡ ಸರಕಾರಿ ಮಾದರಿ ಹಿರಿಯ ಪ್ರಾರ್ಥಮಿಕ ಶಾಲೆ ಕನಕಮಜಲು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.