ಕೊರೊನಾ ಪ್ಯಾಕೇಜ್ : ಕೇಂದ್ರ, ರಾಜ್ಯ ಸರಕಾರಗಳಿಗೆ ಶಾಸಕರ ಅಭಿನಂದನೆ

Advt_Headding_Middle
Advt_Headding_Middle

 

20  ಲಕ್ಷ ಕೋಟಿ ರೂ. ನೆರವಿನ ಕುರಿತು ಕೆಲವೇ ದಿನಗಳಲ್ಲಿ ಪೂರ್ಣ ಮಾಹಿತಿ: ಅಂಗಾರ

ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ 34  ಸಾವಿರ ಕಿಟ್ ವಿತರಣೆ : ಕಂಜಿಪಿಲಿ


ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದ ವತಿಯಿಂದ ಘೋಷಿಸಿರುವ 2೦ ಲಕ್ಷ ಕೋಟಿ ರೂ.ಗಳು ಜನರಿಗೆ ಯಾವ ರೀತಿ ಸಿಗಲಿದೆ ಎಂಬುದು ವಿತ್ತ ಸಚಿವರು ವಿವರಣೆ ನೀಡುವುದು ಪೂರ್ಣಗೊಂಡ ಕೂಡಲೇ ಗೊತ್ತಾಗಲಿದೆ” ಎಂದು ಶಾಸಕ ಅಂಗಾರ ತಿಳಿಸಿದರು.
ಕೊರೊನನಾ ಸಂದರ್ಭದ ಲಾಕ್‌ಡೌನ್‌ನ ವೇಳೆ ಜನರು ಸಂಕಷ್ಟಕ್ಕೊಳಗಾಗದಂತೆ ಕ್ರಮ ಕೈಗೊಂಡ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಕೃತಜ್ಞತೆ ಸಲ್ಲಿಸಲು ಇಂದು ಸುಳ್ಯ ನಿರೀಕ್ಷಣಾ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.


“ಪ್ರಧಾನಿಯವರು ಕೃಷಿ ಸಮ್ಮಾನ್ ಖಾತೆಗೆ 2೦೦೦ ರೂ. ಹಾಗೂ ಜನ್‌ಧನ್ ಖಾತಗೆ ರೂ. 5೦೦ ಜಮೆ ಮಾಡಿದ್ದಾರೆ. ಉಜ್ವಲ್ ಯೋಜನೆಯವರಿಗೆ ಉಚಿತವಾಗಿ ಗ್ಯಾಸ್ ನೀಡಿದ್ದಾರೆ. ಈಗ 2೦ ಲಕ್ಷ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ರಾಜ್ಯ ಸರಕಾರ ಎರಡು ತಿಂಗಳ ಪಡಿತರ ನೀಡಿದೆ. ವೃದ್ದರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಕೊಡುವ ವೇತನ ಎರಡು ತಿಂಗಳ ಮೊತ್ತವನ್ನು ಮೊದಲೇ ನೀಡಿದ್ದಾರೆ” ಎಂದು ಶಾಸಕರು ಹೇಳಿದರು.
ಕೇಂದ್ರದ 2೦ ಲಕ್ಷ ಕೋಟಿ ಸಣ್ಣ ಉದ್ದಿಮೆದಾರರಿಗೆ ಸಾಲ ಕೊಡಲು, ಆದ್ಯತಾ ವಲಯಗಳ ಚೇತರಿಕೆಗೆ ಸಹಾಯ ಮಾಡಲು ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲೂ ಜನರಿಗೆ ನೇರವಾಗಿ ಕೊಡುವುದಿಲ್ಲ. ಸಾಲ ಕೊಟ್ಟರೆ ಬಡ್ಡಿ ಸಹಿತ ಅದನ್ನು ವಾಪಾಸ್ ಕೊಡಬೇಕಾಗುತ್ತದೆ. ಆದ್ದರಿಂದ ಸಹಾಯಧನ ಆಗುವುದಿಲ್ಲವಲ್ಲವೇ?” ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಅಲ್ಲ ಅಲ್ಲ. ೨೦ ಲಕ್ಷ ಕೋಟಿಯಲ್ಲಿ ಪ್ರತೀ ವರ್ಗದವರಿಗೂ ನೆರವು ದೊರೆಯುತ್ತವೆ ವಿತ್ತ ಸಚಿವರು ಅದರ ಪೂರ್ಣ ವಿವರ ನೀಡಿದಾಗ ಜನರಿಗೆ ಗೊತ್ತಾಗುತ್ತದೆ” ಎಂದು ಶಾಸಕರು ಹೇಳಿದರು. “ಈಗ ರಾಜ್ಯ ಸರಕಾರದ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಕ್ಷೌರಿಕರಿಗೆ, ಅಗಸರಿಗೆ ಮತ್ತು ಚಮ್ಮಾರರಿಗೆ, ರಿಕ್ಷಾ-ಟ್ಯಾಕ್ಸಿ ಚಾಲಕರಿಗೆ, ಕಾರ್ಮಿಕರಿಗೆ ತಲಾ 5 ಸಾವಿರ ನೀಡುವುದಾಗಿ ಘೋಷಿಸಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂ. ಘೋಷಿಸಿದ್ದಾರೆ” ಎಂದು ಶಾಸಕರು ವಿವರ ನೀಡಿದರು.


“ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೆ ಸಹಾಯಧನ ದೊರೆಯದೆನ್ನುವ ಮಾಹಿತಿಯ ಬಗ್ಗೆ ಪತ್ರಕರ್ತರು ಕೇಳಿದಾಗ, ” ರಿಕ್ಷಾದವರು ನನ್ನ ಗಮನಕ್ಕೆ ತಂದಿದ್ದಾರೆ. ನಿಬಂಧನೆಗಳಲ್ಲಿ ಕೆಲವು ಲೋಪದೋಷಗಳಾಗಿವೆ. ಆ ಬಗ್ಗೆ ಸಚಿವರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ. ಅದನ್ನು ಸರಕಾರ ಸರಿಪಡಿಸಲಾಗುತ್ತದೆ” ಎಂದು ಶಾಸಕ ಅಂಗಾರ ತಿಳಿಸಿದರು.
“ವಿದ್ಯುತ್ ಬಿಲ್ ಹೆಚ್ಚು ಬಂದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ” ಎಂದು ಹೇಳಿದ ಶಾಸಕರು “ಸುಳ್ಯದ 11೦ ಕೆ.ವಿ. ವಿದ್ಯುತ್ ವಿತರಣಾ ಕಾಮಗಾರಿಯ ವಿದ್ಯುತ್ ಲೈನ್‌ಗೆ ಅರಣ್ಯ ಭೂಮಿ ಮಂಜೂರಾತಿಯ ವಿಚಾರ ಮುಖ್ಯಮಂತ್ರಿಗಳಲ್ಲಿ ಫೆಂಡಿಂಗ್ ಇದೆ. ಈ ಕೊರೊನಾ ಗಲಾಟೆ ಮುಗಿದ ಕೂಡಲೇ ಆ ಬಗ್ಗೆ ಮತ್ತೊಮ್ಮೆ ನೆನಪಿಸಿ ಅರಣ್ಯ ಭೂಮಿ ಮಂಜೂರಾಗುವಂತೆ ಮಾಡುತ್ತೇವೆ” ಎಂದರು.

ಗಾಂಧಿನಗರದಿಂದ ಆಲೆಟ್ಟಿ ಸೇತುವೆವರೆಗಿನ ರಸ್ತೆಯ ಕಾಂಕ್ರಿಟೀಕರಣಕ್ಕೆ ೨೦ ಲಕ್ಷ ರೂ. ಇರಿಸಲಾಗಿದೆ. ಕೆ.ಆರ್.ಡಿ.ಎಲ್.ನವರು ಈ ವಾರವೇ ಕಾಮಗಾರಿ ಆರಂಭಗೊಳ್ಳಲಿದೆ. ಪೈಚಾರಿನಿಂದ ಸೋಣಂಗೇರಿವರೆಗೆ ೪.೫ ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿ ಟೆಂಡರ್ ಆಗಿದೆ” ಎಂದು ಶಾಸಕರು ಹೇಳಿದರು.
೩೪ ಸಾವಿರ ಕಿಟ್ ವಿತರಣೆ : ಕಂಜಿಪಿಲಿ
“ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ನೇತೃತ್ವದಲ್ಲಿ ಸೇವಾ ಭಾರತಿಯ ಮೂಲಕ ೩೪ ಸಾವಿರ ಕಿಟ್‌ಗಳನ್ನು ವಿತರಿಸಲಾಗಿದೆ. ಈ ಕಾರ್ಯಕ್ಕೆ ಅನೇಕ ದಾನಿಗಳು ನಮಗೆ ಸಹಕಾರ ನೀಡಿದ್ದಾರೆ. ಅವರಿಗೆಲ್ಲ ನಾವು ಕೃತಜ್ಞತೆ ಸಲ್ಲಿಸುತ್ತೇವೆ” ಎಂದು ಜಿ.ಪಂ. ಸದಸ್ಯ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ಹರೀಶ್ ಕಂಜಿಪಿಲಿಯವರು ಹೇಳಿದರು. ಜಿಲ್ಲಾ ಜಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ವೆಂಕಟ್ ದಂಬೆಕೋಡಿ, ವಿನಯ ಕಂದಡ್ಕ, ಸುಭೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.