ಪತ್ತನಾಜೆ

Advt_Headding_Middle
Advt_Headding_Middle
Advt_Headding_Middle

ಭರತೇಶ ಅಲಸಂಡೆಮಜಲು

ತುಳುವನಾಡು ಭೌಗೋಳಿಕವಾಗಿ ವೈವಿಧ್ಯಭೂಯಿಷ್ಟವಾದದ್ದು. ನೀಳ ಗಿರಿಶಿಖರ ಶ್ರೇಣಿ, ತೋಳುಬಾಚಿ ನಿಂತ ನೀಲಸಮುದ್ರ. ಒಂದು ಕಡೆ ಸಸ್ಯ ಶ್ಯಾಮಲೆ ಮಗದೊಂದು ಕಡೆಯಿಂದ ಸಲಿಲಿಧಾರೆ ಪದವು ಮಲೆಗಳನ್ನು ಸೀಳುತ್ತಾ ಸಾಗಿ ಸಣ್ಣ ಸಣ್ಣ ಸಾರು, ಸುದೆಗಳಿಂದ ಬಳಿತ ಕಡಲು. ಇವುಗಳ ನಡುವೆ ಭೌಗೋಳಿಕವಾಗಿ ಬಂಧನವಾಗಿ ಚಿನ್ನದ ಕೊಪ್ಪರಿಗೆಯಂತಿರುವ ಊರು ತುಳುವರ ನಾಡು. 

ಇವುಗಳಿಂದೆಲ್ಲ ಪ್ರಕೃತಿಯು ಇಲ್ಲಿ ಪ್ರಯೋಗಾಲಯವಾಗಿದೆ. ಪೊನ್ನಿ ತಿಂಗಳಿನಲ್ಲಿ ಭೂಮಿ ಎಂಬ ಹೆಣ್ಣು ಋತುಮತಿಯಾಗುವ ಕೆಡ್ಡಸದ ಆಚರಣೆ, ಪರಿಸರದ ವಿಶೇಷ ವಿಲಕ್ಷಣಗಳಿಂದ ಆಳುಪ ರಾಜ ಕುಂದವರ್ಮನ ಆಹ್ವಾನದಂತೆ ಕದಿರೆಯಲ್ಲಿ ನೆಲೆಸಿದ ನಾಥಪಂಥದ ಅವದೂತರೂ, ಕೊಕ್ಕಡ ಕೋರಿಗೆ ನಾಲ್ಕು ಕನೆ ಸೊಪ್ಪು ತಂದು ಹರಕೆ ಹಾಕುವ ಬೈದ್ಯನಾಥನೆಂಬ ಮದ್ದಿನ ದೇವಸ್ಥಾನ (Healing Temple). ಪರಿಸರ, ಕಾಡು, ಹವಾಮಾನ, ಬೆಳಕು-ಮಬ್ಬು, ಮಧ್ಯಂತರ ಜಗತ್ತು, ಮತ್ತು ತಮ್ಮ ಅವಗಣನೆಗೆ ಬಾರದವುಗಳನ್ನು ಸೃಷ್ಟಿಸಿಕೊಂಡು, ಕಲ್ಪಿಸಿಕೊಂಡು, ತಾತ್ಕಾಲಿಕ ಜಗತ್ತಾಗಿಸಿ( temporal realm) ಅವುಗಳನ್ನು ವಿಶೇಷತ್ವಕ್ಕೆ ಏರಿಸಿ ಪಗ್ಗುವಿನ ಬಿಸು, ಬೇಸ ತಿಂಗಳ ಪತ್ತನಾಜೆಗಳು ಆಚರಣೆಗಳು ಆಗಿವೆ.
ಪತ್ತನಾಜೆ ಎಂಬುದು ತುಳುನಾಡಿನಲ್ಲಿ ನಡೆಯುವ ಮಂಗಿಲೊ, ಆಟ-ಅಯೊನೊ, ಕೋಲ-ಜಾತ್ರೆ ಎಂಬ ಕಾರ್ಯಕ್ರಮಗಳಿಗೆ ಆಡಂಬರದ ವಿರಾಮ ಹೇಳುವ ದಿನ. ಇದು ತುಳುವರೆ ಸ್ವತಃ ಅವರಿಗಾಗಿಯೇ, ಅವರಿಂದಲೆ ಮಾಡಿಸಿಕೊಂಡ ಪ್ರಕೃತಿಯಿಂದ ಕಲಿತ ಕಾಲ ಜ್ಞಾನವನ್ನು ಸಮೀಕರಿಸಿ ವಿಧಿಸಿಕೊಂಡ ಗಡುವಿನ ದಿನ. ಇದು ತುಳು ಕಾಲ ನಿರ್ಣಾಯದಂತೆ ಸೌರಮಾನದ ಎರಡನೇ ತಿಂಗಳಾಗಿರುವ ಬೇಷದ(ಹತ್ತನೆಯ ದಿನ) ಬರುತ್ತದೆ. 
ಈ ಆಚರಣೆಯು ಪ್ರಕೃತಿ ಮತ್ತು ಸಂಸ್ಕೃತಿಯನ್ನು ಸಮ್ಮಿಲನಗೊಳಿಸುತ್ತದೆ. ಪ್ರಕೃತಿಯ ಬದಲಾವಣೆಗೆ ಸ್ಪಂದಿಸುವ ತುಳುವ ವಿಧಿ ಮತ್ತು ನಿಷೇಧಗಳನ್ನು ಅಳವಡಿಸಿ ಪ್ರಕೃತಿಯೊಂದಿಗೆ ತನ್ನ ಸಂಸ್ಕಾರವನ್ನು ಬೆಳೆಸಿಕೊಂಡಿದ್ದಾನೆ. ಇಲ್ಲಿ ಮುಖ್ಯವಾಗಿ ಮನರಂಜನೆ ಹಾಗೂ ಧಾರ್ಮಿಕವಾಗಿ ನೂರಾರು ಜನ ಒಂದು ಕಡೆ ಸೇರುವ ಕೋಲ, ಜಾತ್ರೆ, ಕಂಬ್ಲ, ಆಟಗಳಿಗೆ ಸಂಪೂರ್ಣ ನಿಷೇಧದ ಪರದೆ ಬೀಳುತ್ತದೆ. ಉಳಿದಂತೆ ತಂಬಿಲ, ತಾಳಮದ್ದಳೆ, ದೇವರ ನಿತ್ಯ ಪೂಜೆಗಳು ನಡೆಯುತ್ತವೆ. ತುಳುವರು ಒಂದು ಕಡೆ ಸೇರಿ ಕೃಷಿ ಕೆಲಸ, ಕೃಷಿ ಚಟುವಟಿಕೆಗಳನ್ನು ಮರೆತು ಮೋಜು, ಮಸ್ತಿ, ಕೋಲ ಅಯನೊವೆಂದು ಕಳೆಯುವ ಕಾಲವನ್ನು ಮರೆಯುತ್ತಾರೆ ಎಂದು ಹಿರಿತಲೆಗಳು ಹಾಕಿಕೊಟ್ಟ ಪಥ್ಯ ಎಂದರು ತಪ್ಪಗಲಾರದು. 
ತುಳುವರ ಹೊಸ ವರುಷ ಬಿಸು ಪರ್ಬೊ, ಸೌರಮಾನದ ಮೊದಲ ತಿಂಗಳಾದ ಪಗ್ಗುವಿನ ಮೊದಲ ದಿನ, ಪಗ್ಗು ತಿಂಗಳ ಹದಿನೆಂಟನೆಯ ದಿನ(ಪಗ್ಗು ಪದಿನೆನ್ಮ) ಎಲ್ಲವೂ ಕೃಷಿ ಚಟುವಟಿಕೆಗಳಿಗೆ ಬುನಾದಿ ಹಾಕುವ ದಿನಗಳು ಆಗಿರುತ್ತದೆ. ಬೇಷ ತಿಂಗಳಾಗುವಾಗ ಒಂದಷ್ಟು ಮಳೆ ಬಂದು ಹದವಾದ ಭೂಮಿ ಕೃಷಿಗೆ ಸಿದ್ದವಾಗಿರುತ್ತದೆ. ಈ ಆಚರಣೆಯ ಕೊಂಡಿಗಳು ಒಂದನೊಂದು ಆವರಿಸಿ ಆರಾಧನೆ, ನಂಬಿಕೆಯ ನೆಲೆಯನ್ನು ನಿರೂಪಿಸಿದೆ.
ಶಬ್ದ ಅರ್ಥ
*ಪತ್ತನಾಜೆಯು ಎರಡು ಶಬ‍್ಧಗಳಿಂದಾಗಿದೆ. ಪತ್ತ್+ನ್+ಅ(ಆ)ಜೆ ಇದರಲ್ಲಿ ಷಷ್ಟಿ ವಿಭಕ್ತಿ ಪ್ರತ್ಯಯವಿದ್ದು ಉತ್ತರ ಮತ್ತು ಪೂರ್ವಗಳು ಸಂಬಂಧವನ್ನು, ನಂಟನ್ನು ಬೆಸೆಯುತ್ತದೆ. ಪತ್ತ್ ಅಂದರೆ ಸಂಖ್ಯೆ ಹತ್ತು ಇದು ಬೇಷ ತಿಂಗೊಲ ಪತ್ತ್ ಪತ್ತುನಾನಿ(ಬೇಷ ತಿಂಗಳ ಹತ್ತನೆಯ ದಿನ) ಅಜೆ ಅಂದರೆ ಹೆಜ್ಜೆ ಎಂದು ಹೇಳಬಹುದು.
*ಪತ್ತನಾಜೆ – ಬೇಷ ಪತ್ತುತ್(ಪತ್ತು ಅಂದರೆ ಹಿಡಿಯುತ್ತದು) ಪತ್ತ್‌ನೆತ ದಿನೊ.
*ಪತ್ತನಾಜೆ – ಪತ್ತ, ಪತ್ತ್ ಎಂದರೆ ಹಿಡಿದುಕೊಳ್ಳುವುದು, ಹಿಡಿದಿಟ್ಟಿರುವುದು. ಆಜೆ ನೀರಿಗೆ ಸಂಬಂಧ ಪಟ್ಟಂತಹ ಜಲವಾಚಕ ಶಬ್ಧವಾಗಿದೆ ಇದು ಸ್ಥಳನಾಮ ಘಟಕವಾಗಿ ತುಳುನಾಡಿನಲ್ಲಿ ಅಲ್ಲಲ್ಲಿ ಬಳಕೆಯಾಗಿದೆ. ನೀರನ್ನು ಭೂಮಿ ತುಂಬಿರುವ, ನೀರನ್ನು ಹಿಡಿದಿರುವ ಎಂಬ ಅರ್ಥ ಕಲ್ಪಿಸಬಹುದು. ಕಾಲ, ಸಮಯ, ಜಾಗ, ಹವಾಮಾನದ ಗುಣಗಳನ್ನು ಇಲ್ಲಿ  ಗಣನೆಗೆ ತೆಗೆದುಕೊಳ್ಳಬೇಕು. ಈ ಎರಡು ಶಬ್ದಗಳನ್ನು ಅದಲು ಬದಲು ಮಾಡಿದಾಗ ಆಜೆ ಪತ್ತ್ ಆಗಬಹುದು. ಇದು ನೀರನ್ನು ಹಿಡಿದಿಡು ಎಂಬ ಅರ್ಥವನ್ನು ಕೊಡಬಹುದು.  ಸ್ಥಳನಾಮದ ನೆಲೆಯಲ್ಲಿ ಸಂವಾದಿಯಾಗಿ  ಸಂಪಾಜೆ(ಸಂಪು ಆಯಿನ ಅಜೆ), ಅಜಕಲ, ಅಜ್ಜಾವರ ಸುಳ್ಯದ ಪಯಸ್ವಿನಿ ನದಿಯ ದಡದಲ್ಲಿರುವ ಊರು, ಈ ಊರನ್ನು ಪಯಸ್ವಿನಿ ನದಿ ಸುತ್ತುವರಿದು ಹರಿಯುತ್ತದೆ.*ಅಜಕ್ಕಲ, ಅಜಮಾರ ಈ ಸಬ‍್ಧಗಳ ಪದಾದಿಯಲ್ಲಿ “ಅಜ” ಕ್ರಿಯಾಪದಗಳಾಗಿವೆ. ಬೋಂಟೆಯಲ್ಲಿ ಹಿಡಿದ ಪ್ರಾಣಿಗಳನ್ನು ತುಂಡು, ತುಂಡು ಮಾಡಿಕೊಂಡು ಪಾಲು ಮಾಡಿಕೊಳ್ಳುವ ಜಾಗಕ್ಕೆ ಅಜಕ್ಕಲ ಎಂದು ಕರೆಯುತ್ತಾರೆ. ಇಲ್ಲಿ ಅಜ ಎಂದರೆ ತುಂಡು ಮಾಡು, ಬೇರ್ಪಡಿಸು, ಗಡಿ ಹಾಕು, ಗಡು ಮಾಡು ಎಂಬ ಪದಾರ್ಥ ಬರುತ್ತದೆ. ಅದೇ ರೀತಿ ಅಜಮಾರೊ ಮಾಂಸವನ್ನು ತುಂಡು ಮಾಡುವ ಮರ ಎಂದು ಆಗುತ್ತದೆ. ಇದನ್ನು ಆಚರಣೆಯ ನೆಲೆಯಲ್ಲಿ ಪ್ರತಿನಿಧಿಕರಿಸುವುದಾದರೆ ಪತ್ತನಾಜೆ ಎಲ್ಲ ಮುಂದೆ ಬರುವ ಕಾರ್ಯಗಳಿಗೆ ಗಡುವಾಗಿದೆ, ಪತ್ತನಾಜೆಯ ದಿನದವರೆಗೆ ಆಡಿದ ಆಟ(ಯಕ್ಷಗಾನ), ಕುಣಿತ, ಆರಾಧನಾ ನಲಿಕೆಗಳು, ದೇವರ ದರ್ಶನ ಬಲಿ ಗಳು ಮುಂದಿನ ದಿನಗಳಲ್ಲಿ ಇಲ್ಲವೆಂದು ಕಡಕ್ಕಾಗಿ ಸಂದೇಶದೊಂದಿಗೆ ಸೀಮಾ ರೇಖೆಯಂತೆ ಗಡಿ, ಗಡು ಹಾಕಿ ಬಿಡುತ್ತದೆ. ಮರುದಿನದಿಂದ ಯಾವುದೆ ವಿಶೇಷ ಕಾರ್ಯಗಳು ನಡೆಯದುದರಿಂದ ಈ ದಿನ ಅಜಕಲ ಮಾಡಿದಂತೆ ಕೊಂಡಿಯನ್ನು ತುಂಡು ಮಾಡುತ್ತದೆ.

*ಪತ್ತ‍ನಾಜೆ – ಪತ್ತ್  ಎಂದರೆ ಹತ್ತು, ಆಜೆ ಎಂದರೆ ಹೆಜ್ಜೆ ಎಂದಾಗಿದೆ.  ಹತ್ತು ಜನ ಸೇರಿ ನಡೆಸುವಂತಹ ಕ್ರಮವಾಗಿದೆ. ಸಂಖ್ಯಾ ಜಾನಪದದ(Number Folklore) ನೆಲೆಯಲ್ಲಿ ನೋಡುವುದಾದೆ ನಾಲ್ ಬಜ್ಜೆಯಿ ಕೊರ್ಲೆ(ನಾಲ್ಕು ಅಡಿಕೆ ಕೊಡಿ), ರಡ್ಡ್ ಉನ್ಪು ಬಳಸ್‌ಲೆ(ಎರಡು ಅಗುಳು ಊಟ ಹಾಕಿ) ಅಂದರೆ ಬರೀ ನಾಲ್ಕು ಅಡಿಕೆ ಕೊಡಿ ಅಥವಾ ಎರಡು ಅಗುಳು ಕೊಡಿ ಎಂದು ಅಲ್ಲ ಜನಪದೀಯರ ನೆಲೆಯಲ್ಲಿ ಸ್ವಲ್ಪ ಸಾಕು ಎನ್ನುವ ರೀತಿ ಅಗಿರುತ್ತದೆ. ಅದೆ ರೀತಿ ಹತ್ತು ಮನೆಯವರು, ಹತ್ತು ಜನ ಇದ್ದುಕೊಂಡು ಮಾಡುವ ಸಂಬಿಲ, ಕಾರ್ಯ ಎಂದರೂ ತಪ್ಪಗಾದು.
ಪತ್ತನಾಜೆಯಲ್ಲಿ ಪತ್ತ ಪದವು ವಿಶೇಷವಾಗಿ ಬಳಕೆಯಾಗಿದೆ. ಪತ್ತುನ ಅಂದರೆ ಹಿಡಿಯುವುದು, ಪತ್ತಂಗೆಲ್ ಅಂದರೆ ಅಂಟಿಕೊಳ್ಳುವುದು. ಮಗದೊಂದು ಕೋನದಿಂದ ಪತ್ತನಾಜೆ ಪದವನ್ನು ವಿಶ್ಲೇಷಿಸಿದಾಗ ಪೂರ್ವ ಪದವು ಹಿಡಿಯು ಎಂಬ ಅರ್ಥ ಕೊಟ್ಟರೆ ಉತ್ತರಪದ ಬೇರ್ಪಡಿಸು ಎಂಬ ಅರ್ಥದಿಂದ ಕೂಡಿದೆ. ಪತ್ತುನಲ(ಹಿಡಿಯು) ಮತ್ತು  ಅಜಪುನಲ(ಬೇರ್ಪಡಿಸು) ಎಂಬ ವೀರೊಧಾಭಾಸದ ಪದ ವಿನ್ಯಾಸ ನೋಡಬಹುದು. ಪತ್ತ್‌ನೆನ್ ಬುಡುಪಾಪುನಾ, ಬೂತ ಪತ್ತುನೆನ್ ಬೂಡುಪಾಪುನ(ಹಿಡಿದ ಬೂತವನ್ನು ಬಿಡಿಸುವುದು) ಎಂಬ ಮಾತು, ಬೈಗುಳ ಪದ ತುಳು ಭಾಷೆಯಲ್ಲಿದೆ.
*ಪತ್ತನಾಜೆ ಅದೇಶ ಸಂಧಿಯ ನೆಲೆಯಲ್ಲಿ ನೋಡುವುದಾದರೆ ಪದಿನಾಜಿಯು ಅಗಬಹುದೇನೊ ಎಂಬ ಊಹೆ ಮಾಡಬಹುದು. ಇದು ಕನ್ನಡ ಸಂಧಿ ಎಂಬ ಗೊಂದಲ ಸಹಜವಾದುದು. ಇಲ್ಲಿ ಸಂಧಿಯಾಗುವಾಗ ಸ್ವರದ ಮುಂದೆ ‘ತ’ ಬಂದಾಗ, ಅದೇ ವರ್ಗದ ಮೂರನೇ ವ್ಯಂಜನ ಅಂದರೆ ‘ದ’ ಆದೇಶವಾಗಿ ಬರುತ್ತವೆ. ತುಳುವರಿಗೆ ಪದಿನಾಜಿ ವಿಶೇಷವಾದ ಸಂಖ್ಯೆ, ಕುಲೆಗಳಿಗೆ ಬಡಿಸುವುದು ಎಂಬ ನೆಲೆಯಲ್ಲಿ ಪತ್ತನಾಜೆಯನ್ನು ಗುರು ಹಿರಿಯರನ್ನು ನೆನೆಸುವ ದಿನ ಎಂದು ಗ್ರಹಿಸಬಹುದು ಅದರೆ ಇಲ್ಲಿ ಪತ್ತ ಹದಿನಾರು ಎಂಬ ದಿನ ಅಗಲಿ, ಸಂಖ್ಯೆಯ ಉಲ್ಲೇಖ ಬೇಷ ತಿಂಗಳಲ್ಲಿ ಸಿಗದಕಾರಣ ಈ ಗ್ರಹಿಕೆ ಎಷ್ಟು ಸಮಂಜಸ ಎಂಬುವುದು ನಿಮ್ಮ ಗ್ರಹಿಕೆಗೆ ಬಿಟ್ಟ ವಿಚಾರ.  
      ಮೇಲಿನ ಚರ್ಚೆಗಳಿಂದ ತಿಳಿದುಬರುವುದೇನೆಂದರೆ ‘ಅಜ’ ಬೇರೆ ಬೇರೆ ಮಾಡುವ, ಗಡು, ಗಡಿ, ಬೇರ್ಪಡಿಸುವ ಅರ್ಥವನ್ನು ಸ್ಪಷ್ಟವಾಗಿ ನೀಡುತ್ತದೆ. ಮಗದೊಂದು ದೃಷ್ಟಿಯಲ್ಲಿ ಭೂಮಿಯಲ್ಲಿ ನೀರು ಹಿಡಿದಿಟ್ಟು ತನ್ನ ಕೊಳಗ ತುಂಬಿಸುವ ಕಾಲಕ್ಕೆ ಸಿದ್ಧವಾಯಿತು ಎಂಬ ಅರ್ಥವನ್ನು ಅಜೆ ಪತ್ತುನ ಎಂಬ ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು. ಆಚರಣೆಯ ನೆಲೆಯಿಂದಲೂ ನೋಡುವುದಾದರೆ ಈ ದಿನದ ನಂತರದ ದಿನಗಳಲ್ಲಿ ಮುಖ್ಯವಾಗಿ ಕುಣಿತ, ನರ್ತನಗಳು ಇರುವುದಿಲ್ಲ. ಅದರೆ ಮದುವೆ, ಪೂಜೆ, ಇತರ ಸಾಂಸ್ಕೃತಿಕ ಕ್ರಮಗಳು ನಡೆಯುತ್ತದೆ. ಧಾರ್ಮಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಏರುಪೇರುಗಳನ್ನು ಸಮಾನವಾಗಿ ಶಮನಗೊಳಿಸುವುದಕ್ಕೆ ತಯಾರು ಮಾಡುತ್ತದೆ. ಕೆಲವು ತಿಂಗಳುಗಳ ಕಾಲ ದೇವರಿಗೆ, ದೈವಗಳಿಗೆ, ಅದನ್ನು ಅನುಸರಿಸುವರಿಗೆ, ಪಾಲಿಸುವವರಿಗೆ, ಚಾಕರಿಯವರಿಗೆ ವಿಶ್ರಾಂತಿ ಸಿಗುತ್ತದೆ. ಈ ದಿನಗಳಲ್ಲಿ ಪ್ರಕೃತಿಯೊಂದಿಗೆ ಬೆರೆತು ಪ್ರಕೃತಿಯ ಚಾಕರಿ ಮಾಡಿಕೊಂಡು ಬದುಕಲು ಮಾನಸಿಕವಾಗಿ ತಯಾರು ಮಾಡುತ್ತದೆ. ನೈಜತೆ, ಭ್ರಮೆ, ಆಧ್ಯಾತ್ಮವೆಂಬ ನಂಬಿಕೆಗಳನ್ನು ಬೆರಸಿಕೊಂಡು ಭ್ರಾಮಕ ಲೋಕ ನಿರ್ಮಾಣವಾಗುತ್ತದೆ. ಸಮಯ, ದಿನ, ಕಾಲ, ಹವಾಮಾನ, ವ್ಯಕ್ತಿ, ಸಂದರ್ಭ ಮತ್ತು ಸ್ಥಳಗಳನ್ನು ಒಂದಾಗಿಸಿಕೊಂಡು ಸೀಮಾರೇಖೆಗಳನ್ನು ಸಾಂಸ್ಕೃತಿಕವಾಗಿ ನೊಡುವ ಪತ್ತನಾಜೆ ಬೇಷ ಪತ್ತುನ ಪತ್ತೆನಾನಿ(ಬೇಷ ತಿಂಗಳು ಹಿಡಿದು ಹತ್ತನೆಯ ದಿನ) ಬರುತ್ತದೆ ಅದರೆ ಸಾಂಸ್ಕೃತಿಕ ಶಬ್ಧವಾದ ಇದನ್ನು ಹತ್ತನಾವಧಿ ಎಂದು ಕನ್ನಡಕ್ಕೆ ತರ್ಜುವೆ ಮಾಡುವುದು ಸರಿಯಾದ ಕ್ರಮವಲ್ಲ.
ಕ್ರಮಚಾರಣೆ
ಪತ್ತನಾಜೆಯಂದು ತರವಾಡು ಮನೆಯಲ್ಲಿ ಕುಟುಂಬವರೆಲ್ಲ ಸೇರಿ “ಬೂತೊಗು ಕರಿಪುನ” ಎಂಬ ಬೂತ  ತಂಬಿಲ ನಡೆಸುತ್ತಾರೆ ಇದು ಹೆಚ್ಚಾಗಿ ಹಗಲು  ಹೊತ್ತಿನಲ್ಲಿ ನಡೆಯುತ್ತದೆ. “ಕರಿದ್ ಪೊಯಿನಕುಲೆಗ್ ಕರಿಪುನಾ” (ಕಳೆದು ಹೋದವರಿಗೆ ಬಡಿಸುವುದು) ಎಂಬ ಕ್ರಮ ಸಂಜೆ ಏರು ಹೊತ್ತಿನಲ್ಲಿ ನಡೆಸುತ್ತಾರೆ, ಕುಟುಂಬದಲ್ಲಿ ಯಾರಾದರೂ ತೀರಿ ಹೋಗಿ ಕುಲೆಗಳು ಅದವರನ್ನು ಪದಿನಾಜಿ (ಹದಿನಾರು) ಸೇರಿಸುವುದು, ಅವರನ್ನು ಸೇರಿಸಿಕೊಳ್ಳುವ ಕ್ರಮ ಮಾಡುತ್ತಾರೆ. ಗುಳಿಗ ಕಟ್ಟೆ, ಬೈರವ ಕಟ್ಟೆಗಳಲ್ಲಿ ಪತ್ತನಾಜೆ ಬಡಿಸುವ “ಪತ್ತನಾಜೆ ಕರಿಪುನ” ಎಂದು ತಂಬಿಲ ಕಟ್ಟುತ್ತಾರೆ. ಗುಳಿಗ ದೈವ ಜನರಿಗೆ ಬರುವ ರೋಗಳಿಂದ ಕಾಪಾಡುತ್ತಾನೆ. ಬೈರವ ದೈವ ಜಾನುವಾರುಗಳಿಗೆ ಬರುವ ತೊಂದರೆಯನ್ನು ನಿವಾರಿಸುತ್ತಾನೆ ಎನ್ನುವ ನಂಬಿಕೆ ತುಳುವರಲ್ಲಿದೆ.  ಜೊತೆಗೆ ವನದಲ್ಲಿ ಬಡಿಸುವುದು, ಜಾಗೆತೆಗ್ ಬಳಸುನ (ಜಾಗೆಯ ಶಕ್ತಿಗೆ ಬಡಿಸುವುದು) ಎಂಬ ಕ್ರಮಗಳನ್ನು ಮಾಡುತ್ತಾರೆ.
ಕೋಲ ನೇಮಗಳಿಗೆ ತೆರೆ
ತುಳುನಾಡಿನಲ್ಲಿ ನಡೆಯುವ ದೈವಾರಾಧನೆಯ ಭಾಗವಾದ ನೇಮ,ಕೋಲ, ಮೆಟ್ಟಿ, ಬಂಡಿಗಳಿಗೆ ಪತ್ತನಾಜೆಯು ಒಂದು ಅಡೆಪ್ಪು ತಡೆಯಾಗಿದೆ. ಕುಟುಂಬದ ದೈವ, ಗ್ರಾಮ ದೈವಗಳ ಪರ್ವಗಳನ್ನು ಈ ದಿನಕ್ಕಿಂತ ಮೊದಲು ಮುಗಿಸಬೇಕು ಎಂಬ ಕಟ್ಟುನಿಟ್ಟಿನ ಅಘೋಷಿತ ನಿಯಮಗಳನ್ನು ತುಳುವರು ಹಾಕಿಕೊಂಡಿರುತ್ತಾರೆ. ತುಳುನಾಡಿನ ಯಾರದೋ ಮನೆಗಳಲ್ಲಿ ಪತ್ತನಾಜೆಯು ನಂತರದ ದಿನಗಳಲ್ಲಿ ಭೂತ ಆರಾಧನೆಯ ನಡೆಯುವುದಿಲ್ಲ ಅದೇ ರೀತಿ ಭೂತ ಕಟ್ಟುವವರು ನೇಮ ನಡೆಸಿಕೊಡಲು ಒಪ್ಪಿಕೊಳ್ಳುವುದು ಇಲ್ಲ. ಪತ್ತನಾಜೆಯ ನಂತರ ಭೂತಗಳು ಘಟ್ಟ ಹತ್ತುತ್ತವೆ ಎಂಬ ಮಾತಿದೆ.
ದೇವಸ್ಥಾನಗಲ್ಲಿ ಪತ್ತನಾಜೆ
ಮೇಷ ತಿಂಗಳ ಹತ್ತನೆಯ ದಿನ ಪತ್ತನಾಜೆಯಂದು ದೇವರು ಗರ್ಭ ಗುಡಿಯ ಒಳಗೆ ಹೋಗುವುದು ಇದು ದೇವರು ವಿಶ್ರಾಂತದಲ್ಲಿರುತ್ತಾರೆ ಮತ್ತೆ ದೇವರು ಹೊರಗೆ ಬರುವುದು ದೀಪಾವಳಿಯ ಸಮಯಕ್ಕೆ ಎಂಬ ನಂಬಿಕೆಯಿದೆ. ದೇವಿಗೆ, ದೇವರಿಗೆ ಇಷ್ಟವಾದ ಆಭರಣಗಳು, ಗೆಜ್ಜೆ, ವಿಶ್ವ ಕನ್ನೆಡಿ ಅಲಂಕಾರ,  ಎಲ್ಲ  ಆ ದೇವಸ್ಥಾನದ ಖಜಾನೆ ಸೇರುತ್ತದೆ.  ಅಲ್ಲಿ ವಸಂತ ಪೂಜೆ ನಡೆದು ಬಳಿಕ ದೇವರು ಗರ್ಭಗುಡಿಯೊಳಗೆ ಸೇರುತ್ತಾರೆ. ದೈವಗಳು ಕೂಡ ಗುಡಿಯೊಳಗೆ ಸೇರಿಕೊಳ್ಳುತ್ತದೆ.

ಗೆಜ್ಜೆ ಬಿಚ್ಚುವುದು:
ತುಳುನಾಡಿನಾದ್ಯಂತ ಜೊತೆಗೆ ಮಲೆನಾಡಿನಲ್ಲೂ ಆರಾಧನಾ ನೆಲೆಯು ನಡೆಯುವ ಹಾಗೂ ದೇವಸ್ಥಾನಗಳಲ್ಲಿ ನಡೆಸಿಕೊಂಡು ಬರುತ್ತಿರುವ ನೂರಾರು ಯಕ್ಷಗಾನ ಮೇಳಗಳು ತಮ್ಮ ತಿರುಗಾಟದ ಆಟಗಳನ್ನು ನಿಲ್ಲಿಸುತ್ತವೆ. ಇದಕ್ಕೆ ಗೆಜ್ಜೆ ಬಿಚ್ಚುವುದು ಎಂದು ಕರೆಯುತ್ತಾರೆ. ತಿರುಗಾಟ ಮುಗಿಸುವ ಕಡೆಯ ದಿನ ಆಟ ಆಡಿ ಗೆಜ್ಜೆ ಕಳಚಿ ಪೂಜೆ ಸಲ್ಲಿಸಿ ತಿರುಗಾಟದ ಮುಕ್ತಾಯ ಮಾಡುತ್ತಾರೆ. ಮತ್ತೆ ಮುಂದೆ ಬರುವ ದೀಪಾವಳಿಯ ಸಂದರ್ಭದಲ್ಲಿ ದೇವಸ್ಥಾನಗಳ ಮೇಳಗಳ ಕಲಾವಿದರು ದೇವರ ಎದುರು ನಾಟ್ಯ ಪ್ರದರ್ಶನ ಮಾಡಿ ಆಟದ ಸೇವೆಯನ್ನು ಆರಂಭಿಸುತ್ತಾರೆ. ಪತ್ತನಾಜೆ ಬತ್ತುಂಡು ಜತ್ತಿ ಆಟೊ ಉಂತ್‍ಂಡ್ (ಪತ್ತನಾಜೆ ಬಂದಿತು ತಿರುಗಾಟಕ್ಕೆ ಹೊರಟ ಮೇಳ ನಿಂತಿತು) ಎಂಬ ಮಾತು ಯಕ್ಷಗಾನ ಬಗೆಗೆ ಚಾಲ್ತಿಯಲ್ಲಿದೆ.ಮಳೆಗಾಲಕ್ಕೆ ನಾಂದಿ
“ಪತ್ತನಾಜೆತಾನಿ ಪತ್ತ್ ಪನಿ ಬರ್ಸೊ ಬರೊಡು” ಪತ್ತನಾಜೆ ಹತ್ತು ಹನಿ ಮಳೆ ಬರಬೇಕು ಎಂಬ ನಂಬಿಕೆ ಇದೆ. ಪತ್ತನಾಜೆಯ ಮೊದಲು ಬಿಸುವಿನ ಸಮಯವಾಗುವಂತೆ ಅಲ್ಲಲ್ಲಿ ಜಾತ್ರೆ ಕೋಲ ನಡೆಯುತ್ತವೆ. ಅ ಊರಿನವರ ನಂಬಿಕೆಯ ಕಟ್ಟಿನಂತೆ ತಮ್ಮ ಗ್ರಾಮ, ಸೀಮೆ ಜಾತ್ರೆ, ಕೋಲದಂದು ನಾಲ್ಕು ಹನಿ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ತಂಪುಗಾಳಿ, ಸಿಡಿಲು, ಮಿಂಚುಗಳ ಮಳೆ ಬರುತ್ತದೆ. ಇದು ಒಂದು ದೃಢವಾದ ನಂಬಿಕೆ ಮೇಲೆ ನಿಂತಿದೆ.

ಪರಿಣಾಮ :
ಭೂತಾರಾಧನೆಯ ಭೂತ ಕಟ್ಟುವ ಜನಾಂಗಗಳಾದ, ಅಜಲ, ಪರವ, ಪಂಬದ, ನಲಿಕೆಯವರಿಗೆ ಪತ್ತನಾಜೆಯವರೆಗೆ ಪಾತ್ರಿಗಳಾಗಿರುತ್ತರೆ. ನಂತರ ದಿನಗಳಲ್ಲಿ ಅವರ ಕೌಶಲ್ಯಕ್ಕೆ ತಕ್ಕಂತಹ ಅಥವಾ ಪರ್ಯಾಯ ಕೆಲಸಗಳನ್ನು ಅವರು ಆರಿಸಿಕೊಳ್ಳಬೇಕಾಗುತ್ತದೆ. ಅವರಂತೆ ಇಲ್ಲಿನ ಯಕ್ಷಗಾನ ಪಾತ್ರಧಾರಿಗಳು, ಜಾತ್ರೆಗಳಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಗಳೆಲ್ಲ ಉದ್ಯೋಗದ ಇತರ ಆಯ್ಕೆಗಳನ್ನು ನೋಡಿಕೊಳ್ಳಬೇಕು. ಹೀಗೆ ಪತ್ತನಾಜೆ ಸಾಮಾಜಿಕ ಕಟ್ಟಲೆ, ಧಾರ್ಮಿಕ ವಿಧಿಗಳ ಜೊತೆ ಜೊತೆಗೆ ತುಳುವರ ಆರ್ಥಿಕತೆ, ಉದ್ಯೋಗದ ಮೇಲು ಪರಿಣಾಮವನ್ನು ಉಂಟುಮಾಡುತ್ತದೆ. ಪರೋಕ್ಷವಾಗಿ ಅವಲಂಬಿತವಾಗಿರುವ ಪೆಂಡಾಲ್ ಹಾಕುವವರು, ಧ್ವನಿ, ಬೆಳಕು, ಚೆಂಡೆ-ವಾದ್ಯ  ಕೆಲಸಗಳ ಮೇಲೆ ಪರಿಣಾಮ ಬೀರುತ್ತದೆ.

ಪತ್ತನಾಜೆಯ ಬಗೆಗಿನ ಮಾತುಗಳು ಮತ್ತು ನಂಬಿಕೆಗಳು.

*`ತುಳುನಾಡಿನಲ್ಲಿ   ಎರ್ಮಾಳು ಜಪ್ಪು ಖಂಡೇವು ಅಡೆಪು’ ಎಂಬ ಗಾದೆಯಂತೆ ಅಕ್ಟೋಬರ್ ಅಥವಾ ನವಂಬರ್ ತಿಂಗಳಿನಲ್ಲಿ ಎರ್ಮಾಳಿನಲ್ಲಿ ನಡೆಯುವ ಜಾತ್ರಾ ಮಹೋತ್ಸವದ ಮೂಲಕ ಆ ಸೀಮೆಯ ಉತ್ಸವಗಳು ಆರಂಭಗೊಂಡು ಮೇ ತಿಂಗಳಿನ ಮೇಷ ಸಂಕ್ರಮಣದಂದು ಪಾವಂಜೆ ಸಮೀಪದ ಖಂಡೇವುನಲ್ಲಿ  ನಡೆಯುವ ಮೀನು ಹಿಡಿಯುವ ಖಂಡೇವು ಜಾತ್ರೆ ಮೂಲಕ ಸಂಪನ್ನಗೊಳ್ಳುತ್ತದೆ. ಒದರಂತೆ ಅಲಲ್ಲಿ ಆ ಸೀಮೆ ಅಥವಾ ಊರಿನ ಕಟ್ಟು ಕಟ್ಟಲೆಗಳ ಜನಪದ ಮಾತು ಗಾದೆಗಳಿವೆ. ಈ ಆಡು ಮಾತು ಪ್ರಾದೇಶಿಕವಾಗಿ ಚಾಲ್ತಿಯಲ್ಲಿದೆ.
*ಪತ್ತನಾಜೆ ಬತ್ತ್Oಡ್  ಜತ್ತಿ ಆಟೊ ಉಂತ್Oಡ್ (ಪತ್ತನಾಜ್ ಬಂದಿತು (ತಿರುಗಾಟಕ್ಕೆ) ಹೊರಟ ಆಟ (ಯಕ್ಷಗಾನ ಮೇಳ) ನಿಂತಿತು
* ಪತ್ತನಾಜೆದಾನಿ ಪತ್ತ್ ಪನಿ ಬರ್ಸೊ ಬರೋಡು ಇಜ್ಜಂಡ್ ಊರುಗು ಗಂಡಾಂತರ ಉಂಡು’ ಎಂಬುದು ತುಳುವರ ನಂಬಿಕೆಯಾಗಿತ್ತು.
*ಮನೆಯಿಂದ ಯಾರಾದರೂ ಕೆಲಸದ ನಿಮಿತ್ತ ದೂರದ ಊರಿಗೆ ಹೋಗಿದ್ದರೆ ಅವರು ಪತ್ತನಾಜೆಯ ದಿನ ಮನೆಗೆ ಬರುತ್ತಾರೆ ಎಂಬ ಮಾತು ತುಳುವನಾಡಿನಲ್ಲಿ ಚಾಲ್ತಿಯಲ್ಲಿದೆ. ದೂರದುರಿಗೆ ಹೋಗುವವರನ್ನು ನೀನು ಯಾವಾಗ ಮತ್ತೆ ಬರುತ್ತೀಯಾ? ಎಂದು ಕೇಳಿದರೆ ಪತ್ತನಾಜೆಗೆ ಬರುತ್ತೇನೆ ಎನ್ನುವ ಪ್ರತ್ಯುತ್ತರ ಸಾಮಾನ್ಯವಾಗಿರುತಿತ್ತು.  
*ಪತ್ತನಾಜೆಯಂದು ದೇವರು ಮನೆಗೆ ಬಂದು ಮನೆಯ ಹಿರಿ ಮಗನನ್ನು ತೂಗುತ್ತಾರೆ ಅಂತೆ, ಅವರು ತೂಗುವಾಗ ಹೆಚ್ಚು ತೂಕ ಇರಲು ಅವನಿಗೆ ಹಲಸಿನ ಗುಜ್ಜೆಯ ಪದಾರ್ಥ ಮಾಡಿಕೊಡಬೇಕಂತೆ.
*ಪತ್ತನಾಜೆ ಬರುವ ಹೊತ್ತಿಗೆ ಜೇನು ನೋಣಗಳು ಜೇನು ತುಪ್ಪ ಖಾಲಿ ಮಾಡುತ್ತವೆ ಅದಕ್ಕಾಗಿ ಪತ್ತನಾಜೆ ಮೊದಲೆ ಜೇನು ತೆಗೆಯಬೇಕು.
*ಪತ್ತನಾಜೆಯ ನಂತರ ಯಕ್ಷಗಾನ ಆಟ ಆಡ ಇಲ್ಲ, ಆಡಲೇ ಬೇಕೆಂದಾದರೆ ಒಂದು ಕಾಲಿಗೆ ಗೆಜ್ಜೆ ಕಟ್ಟಬೇಕಂತೆ ಎಂಬ ಜನಪದೀಯ ನಂಬಿಕೆಯಿದೆ.

ಪತ್ತನಾಜೆ ಒಂದು ಪ್ರಕೃತಿಯನ್ನು ಆರಾಧಿಸುವ ಒಂದು ಬಗೆಯ ವಿಶೇಷ ದಿನ. ಪ್ರಕೃತಿಯೊಂದಿಗೆ ಲೀನವಾಗಿರುವ ದೈವ, ದೇವರು, ಗುರುಕಾರ್ಣವೆರುಗಳ ಅರಾಧನೆ  ಮಾಡಿಕೊಂಡು ಬರುತ್ತಿರುವುದು ಮೆಚ್ಚುವಂತಹುದು.  ದೇವರ ಬಲಿ, ಭೂತ ಕೋಲ, ತುಳುನಾಡಿನ ಜನಪದ ನಲಿಕೆ, ಯಕ್ಷಗಾನಗಳಿಗೆಲ್ಲ ವಿರಾಮ ನೀಡುವ ದಿನವಾಗಿದೆ. ಇದು ಬರಿ ದಿನದ ಗಡುವಾಗದೆ ಮಾನಸಿಕ, ದೈಹಿಕವಾಗಿ ತುಳುವ ವ್ಯಕ್ತಿಯೊಬ್ಬನನ್ನು ಋತುಮಾನಕ್ಕೆ ಅನುಸಾರವಾಗಿ ಮುಂದೆ ಬರುವ ಕೃಷಿಕೆಲಸಗಳಿಗೆ ಒಗ್ಗಿಸಿಕೊಳ್ಳುವ ವಿಶೇಷ ಆಚರಣೆ. ಈ ಮಳೆ, ನೆಲ, ಕಾಲದ ಆಚರಣೆಯನ್ನು ಉಳಿಸಿ ಬೆಳೆಸುವುದು ಈ ಭಾಗದ ಪ್ರತಿಯೊಬ್ಬನ ಕರ್ತವ್ಯವಾಗಿದೆ.

ಭರತೇಶ ಅಲಸಂಡೆಮಜಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.