🖊️ಪ್ರಕೃತಿಯ ಆಕ್ರಮಣ🖋️ ಕೀರ್ತನ್ ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ

Advt_Headding_Middle
Advt_Headding_Middle

ಆಕ್ರಮಣವಾಗಿದೆ… ಪಾಠ ಕಲಿಯೊಣ… ದುರಾಸೆಯನ್ನು ದೂರ ಮಾಡೋಣ…

“ವ್ಯಕ್ತಿಯ ಜೀವನದಲ್ಲಿ ಆಸೆ ಎಂಬುದು ಹೆಚ್ಚಾಗಿ ದುರಾಸೆ ಪ್ರಾರಂಭವಾದಾಗ ಅದು ಆತನ ಅಂತ್ಯಕ್ಕೆ ಕಾರಣವಾಗುತ್ತದೆ” ಎಂಬುದು ಹಿರಿಯರ ಮಾತು ಮತ್ತು ಅದು ವಾಸ್ತವವೂ ಹೌದು. ವ್ಯಕ್ತಿಯ ಜೀವನದಲ್ಲಿ ಆಸೆ ಇರಬೇಕು ಆದರೆ ದುರಾಸೆ ಇರಬಾರದು.

ಸ್ನೇಹಿತರೇ, ನಮ್ಮ ಆಧುನಿಕ ಸಮಾಜದಲ್ಲಿ ನಾವು ಅತ್ಯಂತ ಸ್ವಾರ್ಥಿಗಳಾಗಿದ್ದೇವೆ. ಪ್ರಾಕೃತಿಕ ಸಂಪನ್ಮೂಲಗಳನ್ನು ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯ ಮಡಿಲಿನಿಂದ ಕಸಿದುಕೊಂಡಿದ್ದೇವೆ. ಮಾನವನ ಈ ರೀತಿಯ ದುರಾಸೆಯ ಪರಿಣಾಮವನ್ನು ಒಂದು ಕಥೆಯ ಮೂಲಕ ನಿರೂಪಿಸಲು ನಾನು ಪ್ರಯತ್ನಿಸುತ್ತಿದ್ದೇನೆ..

ರಾಮ ರಾಜ್ಯವೆಂಬ ಪುರ. ಆ ರಾಜ್ಯದಲ್ಲಿನ ಅರಸ ಪುರಂದರ, ಉತ್ತಮ ಆಡಳಿತಗಾರನಾಗಿದ್ದು, ಅವನ ಮರಣದ ನಂತರ ಆತನ ಮಗ ಸಿಂಹವರ್ಧನ ಅಧಿಕಾರ ಸ್ವೀಕರಿಸಿದ.
ರಾಜ್ಯ ವಿಸ್ತರಣೆ ಒಂದೇ ತನ್ನ ಜೀವನದ ಕೆಲಸ, ಅದುವೇ ರಾಜನ ಮುಖ್ಯ ಕರ್ತವ್ಯ ಎಂದು ಆತ ಭಾವಿಸಿದ್ದನು. ಅವನು ಅಧಿಕಾರಕ್ಕೆ ಬರುವಾಗ ಆತನಿಗೆ 40 ವರ್ಷ. ನಂತರದ 5 ವರ್ಷಗಳಲ್ಲಿ ತನ್ನ ಅಕ್ಕ-ಪಕ್ಕದ ರಾಜ್ಯವನ್ನು ವಶಪಡಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ್ದನು.

ಒಂದು ದಿನ ಅವನ ರಾಜ್ಯಕ್ಕೆ ಒಬ್ಬರು ಮಹಾನ್ ಸಂತರ ಆಗಮನವಾಯಿತು. ರಾಜನ ಬಗ್ಗೆ ಆ ಸಂತರಿಗೆ ಮೊದಲೇ ತಿಳಿದಿತ್ತು.
ಆದರೂ ರಾಜನಿಗೆ ಬುದ್ಧಿ ಕಲಿಸಬೇಕು, ರಾಮ ರಾಜ್ಯವೆಂಬ ಹೆಸರು ಹೊಂದಿರುವ ರಾಜ್ಯದಲ್ಲಿ‌ ರಾವಣನಂತೆ ರಾಜ ಇರುವುದು ಸರಿಯಲ್ಲ. ಆತನನ್ನು ರಾಮನಂತಹ ವ್ಯಕ್ತಿಯನ್ನಾಗಿ ಪರಿವರ್ತಿಸಬೇಕು. ಆದರೆ ಆತನನ್ನು ಶಕ್ತಿಯಿಂದ ರಾಮನಾಗಿ ಮಾಡಲು ಸಾಧ್ಯವಿಲ್ಲ, ಆದರೆ ಯುಕ್ತಿಯಿಂದ ಮಾಡಬಲ್ಲೆ ಎಂಬ ಉದ್ದೇಶದಿಂದ ಆ ಸನ್ಯಾಸಿ ಇವನ ಅರಮನೆಗೆ ಬರುವನು.

ರಾಜನು ಸಂತನನ್ನು ತುಂಬಾ ಆದರದಿಂದ ಸ್ವಾಗತಿಸಿ ಅವರನ್ನು ಉಪಚರಿಸಿದನು. ಸನ್ಯಾಸಿ ಅವನ ಅತಿಥಿ ಸತ್ಕಾರ ಸ್ವೀಕರಿಸಿದ ಬಳಿಕ ರಾಜನ ಬಳಿ ಕೇಳಿದನು, “ಅಯ್ಯಾ ರಾಜ, ನಿನ್ನ ಸತ್ಕಾರ ಸ್ವೀಕರಿಸಿದ್ದು ನನಗೆ ತೃಪ್ತಿ ತಂದಿದೆ. ಆದರೆ ನನಗೆ ನೀನು ಒಬ್ಬ ಸಮರ್ಥ ನಾಯಕ ಎಂಬ ಅರಿವು ಇದ್ದ ಕಾರಣ ನಾನು ನಿನ್ನ ಬಳಿ ಒಂದು ಸಹಾಯ ಯಾಚಿಸುತ್ತೇನೆ. ನನ್ನ ಬಳಿ ನನ್ನ ತಾಯಿ ಕೊಟ್ಟ ಒಂದು ಸೂಜಿಯಿದೆ. ಆ ಸೂಜಿಯನ್ನು ನಾನು ತುಂಬಾ ಜಾಗ್ರತೆ ವಹಿಸಿ ತೆಗೆದಿಟ್ಟು ಇಷ್ಟು ವರ್ಷಗಳ ಕಾಲ ಜೋಪಾನ ಮಾಡಿಕೊಂಡಿದ್ದೇನೆ. ಆದರೆ ಇನ್ನು 40 ವರ್ಷಗಳ ಕಾಲ ನಾನು ತಪಸ್ಸಿಗೆ ಹೋಗಲು ಇರುವ ಕಾರಣ ನಾನು ಈ ಸೂಜಿಯನ್ನು ನಿನ್ನ ಬಳಿ ಕೊಟ್ಟು ಹೋಗುತ್ತೇನೆ, ನೀನು ಅದನ್ನು ನಾನು ತಪಸ್ಸು ಮುಗಿಸಿ ಬಂದು ಕೇಳಿದಾಗ ಕೊಡಬೇಕು” ಎಂದು ಕೇಳಿಕೊಳ್ಳುತ್ತಾನೆ.

ಆಗ ರಾಜನಿಗೆ ವಿಚಿತ್ರವೆನಿಸುತ್ತದೆ,
ರಾಜ ಅದಕ್ಕೆ ಹೇಳುತ್ತಾನೆ “ಮುನಿಗಳೇ, ಇನ್ನು 40 ವರ್ಷದ ಬಳಿಕ ನಮ್ಮ ಇಬ್ಬರಲ್ಲಿ ಯಾರಾದರೂ ಒಬ್ಬರು ಸತ್ತು ಹೋದರೆ ಆಗ ಏನು ಮಾಡುವುದು?”.
ಅದಕ್ಕೆ ಸಂತ ಹೇಳುತ್ತಾನೆ, “ನೀನು ಸತ್ತರೂ ನಾನು ಬರುವವರೆಗೆ ಸೂಜಿ ಹಿಡಿದುಕೊಂಡು ಕಾಯಬೇಕು” ಎಂದನು .
ಅದಕ್ಕೆ ರಾಜ, “ಸ್ವಾಮಿ ಸತ್ತ ಮೇಲೆ ಒಂದು ಗುಲಗಂಜಿಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇನ್ನು ನಾನು ಸೂಜಿಯನ್ನು ಹೇಗೆ ಹಿಡಿದುಕೊಂಡು ನಿಮಗಾಗಿ ಕಾಯಲು ಸಾಧ್ಯ?!” ಎಂದನು.
ಅದಕ್ಕೆ ಸಂತ ಹೇಳಿದ “ಹಾಗಿದ್ದರೆ, ನೀನು ಯಾವ ಪುರುಷಾರ್ಥಕ್ಕೆ ಇಂದಿನ ದಿನ ನಿನ್ನ ನೆರೆ-ಹೊರೆಯ ರಾಜರನ್ನು ಸೋಲಿಸಿ, ಅವರನ್ನು ಹಿಂಸಿಸುತ್ತಿದ್ದೀಯಾ? ವ್ಯಕ್ತಿಗೆ ಆಸೆ ಇರಬೇಕು, ಆದರೆ ದುರಾಸೆ ಎಂಬುದು ಸರಿಯಲ್ಲ” ಎಂದು ಸಂತ ಮನವರಿಕೆ ಮಾಡಿಕೊಟ್ಟನು .
ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ .
ಅದೇ ಕೊನೆ, ರಾಜ ಅಂದಿನಿಂದ ತನ್ನ ರಾಜ್ಯವನ್ನು ರಾಮನ ರಾಜ್ಯದಂತೆ ಆಳ್ವಿಕೆ ನಡೆಸಿದ. ಪಕ್ಕದ ರಾಜರ ಜೊತೆ ಸ್ನೇಹ ಸಂಬಂಧ ಬೆಳೆಸಿಕೊಂಡನು.

ಇದು ಒಂದು ಕೇವಲ ಕಾಲ್ಪನಿಕ ಕಥೆ. ಆದರೆ ನಾವು ನಮ್ಮ ನಿಜ ಜೀವನದಲ್ಲಿ ಈ ಕಥೆಯಲ್ಲಿ ಬರುವ ಅರಸನಂತೆಯೆ… ಇಲ್ಲಿ ಅರಸ ಸಂತನ ಪ್ರಭಾವದಿಂದ‌ ಸಂಪೂರ್ಣವಾಗಿ ಬದಲಾದನು. ಆದರೆ ನಾವು ನಮ್ಮ ಜೀವನದಲ್ಲಿ ಬದಲಾಗಿದ್ದೇವೆಯೇ? ಇದು ನಮಗೆ ನಾವೇ ಮಾಡಿಕೊಳ್ಳಬೇಕಾದ ಪ್ರಶ್ನೆ .
ಇಂದು ಪ್ರಕೃತಿಯ ಆಕ್ರಮಣವಾಗಿದೆ. ಮಾನವ ಪ್ರಕೃತಿಯ ಮೇಲೆ ಮಾಡಿದ ಆಕ್ರಮಣವನ್ನು ಎದುರಿಸಲು ಪ್ರಕೃತಿ ತನ್ನ ಸೈನ್ಯವನ್ನು ಕಳುಹಿಸಿಕೊಟ್ಟಿದೆ. ಆ ಸೈನ್ಯದ ನಾಯಕತ್ವವನ್ನು ಜಲ,ಮಾರುತ, ಕೊರೋನಾ ಎಂಬ ನಾಯಕರು ವಹಿಸಿದ್ದಾರೆ.

ನಿಜವಾಗಿಯೂ ನಾವು ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ಹೇಗೆಲ್ಲಾ ಶೋಷಣೆ ಮಾಡಿದ್ದೇವೆ ಎಂದು ಆಲೋಚಿಸಿ ಬಂಧುಗಳೇ…
ಇಂದು ಪ್ರಕೃತಿ ತನಗಾದ ಶೋಷಣೆಗೆ ಸೇಡು ತೀರಿಸಿಕೊಳ್ಳಲು ಮತ್ತು ತನ್ನ ಮೇಲೆ ಆಗುತ್ತಿರುವ ಆಕ್ರಮಣವನ್ನು ಎದುರಿಸಲು ಸಿದ್ದವಾಗಿದೆ. ಮೊದಲು ಪ್ರಳಯ ಎಂಬ ಮಹಾ ಸೈನ್ಯವನ್ನು ಕಳುಹಿಸಿಕೊಟ್ಟಿದೆ . ಇಡೀ ಪ್ರಪಂಚದಲ್ಲಿ ಈ ಪ್ರಳಯ ತನ್ನ ಪ್ರಭಾವವನ್ನು ಬೀರಿದರು ಜನರು ಬುದ್ಧಿ ಕಲಿಯಲಿಲ್ಲ. ಜನರ ಶೋಷಣಾಕಾರ್ಯ ಮುಂದುವರೆಯಿತು.
ನಮ್ಮ ಪುರಾತನ ಇತಿಹಾಸದಿಂದಲೂ ನಾವು ಸೂರ್ಯ ಚಂದ್ರರನ್ನು ದೇವತೆಗಳೆಂದು ಪರಿಗಣಿಸಿದ್ದೇವೆ. ಹಾಗಿದ್ದರೆ ನಾವು ಚಂದ್ರ ದೇವನ ಆಸ್ಥಾನವಾದ ಚಂದ್ರಲೋಕದ ಮೇಲೆ ನಮ್ಮ ಆಧುನಿಕ ಸಮಾಜ ಮಾಡಿದ ತಂತ್ರಜ್ಞಾನದ ಅನ್ವೇಷಣೆಯ ಪ್ರಯೋಗ ಮಾಡಿದ್ದೇವೆ.
ಇದು ಒಂದು ರೀತಿಯಲ್ಲಿ ದೈತ್ಯರು ವರ ಬಲ ಪಡೆದು ಸ್ವರ್ಗಕ್ಕೆ ದಾಳಿ ಮಾಡಿದಂತೆಯೇ ಆಗಲಿಲ್ಲವೆ? ಈ ವಿಷಯದಿಂದ ಪ್ರಕೃತಿ ಇನ್ನಷ್ಟು ಕೋಪಗೊಂಡಿರಬಹುದು…
ಇಷ್ಟೇ ಸಾಲದು ಎಂಬಂತೆ, ಕ್ರೂರಿಗಳಾದ ನಾವು ನಮ್ಮಂತೆ ಜೀವಿಸಲು ಅಧಿಕಾರವಿರುವ ಸಾಧು ಪ್ರಾಣಿ – ಪಕ್ಷಿಗಳನ್ನು ಭಕ್ಷಿಸಲು ಮುಂದಾಗಿದ್ದೇವೆ. ವಿವಿಧ ದೇಶಗಳು ತಮ್ಮ ಶಕ್ತಿಯನ್ನು ಹೆಚ್ಚಿಸಲು ವಿವಿಧ ರೀತಿಯ ಅಣ್ವಸ್ತ್ರಗಳ ಪ್ರಯೋಗಗಳನ್ನೂ ನಡೆಸಿವೆ. ಆದರೆ ಸೃಷ್ಟಿಯ ಮಾಯೆ ಸಕಲ ಸಾಧು ಜೀವ ರಾಶಿಗಳನ್ನು ರಕ್ಷಿಸಲು ಪ್ರಕೃತಿ ಕೋರೊನ‌ ಎಂಬ ದೈತ್ಯ ಅಸುರನನ್ನು ಕಳುಹಿಸಿಕೊಟ್ಟಿದೆ . ಕಣ್ಣಿಗೆ ಕಾಣದ ಈ ಸೈನ್ಯ ಅಗೋಚರವಾಗಿ ತನ್ನ ಸೇಡು ತೀರಿಸಿಕೊಳ್ಳುತ್ತಿದೆ. ಇದನ್ನು ಎದುರಿಸಲು ಮನುಕುಲದ ತಂತ್ರಜ್ಞಾನ ವಿಫಲವಾಗಿದೆ ಮತ್ತು ನಿರಂತರ ಯುದ್ಧ ಮಾಡುತ್ತಿದೆ, ಆದರೆ ಜಯ ಕಾಣುತ್ತಿಲ್ಲ.

ಪ್ರಕೃತಿಯ ಸೈನ್ಯದ ಮುಂದೆ ಅಥವಾ ಪ್ರಕೃತಿಯ ಮುಂದೆ ಮಾನವನ ವೈಜ್ಞಾನಿಕ ತಂತ್ರಜ್ಞಾನ ನಶ್ವರ ಎಂಬುದನ್ನು ಪ್ರಕೃತಿ ತೋರಿಸಿಕೊಟ್ಟಿದೆ. ಇಂದಿನ ದಿನ ವ್ಯಕ್ತಿಯ ಆಸೆ ಎಷ್ಟೇ ಇದ್ದರೂ ಆಡಂಬರದ ಜೀವನ ನಡೆಸಲು ಸಾಧ್ಯವಾಗುತ್ತಿದೆಯೇ? ಅದ್ಧೂರಿಯಾಗಿ ನಡೆಯಬೇಕಾದ ಎಷ್ಟು ಕಾರ್ಯಕ್ರಮ ಇಂದು ನಡೆಯುತ್ತಿದೆ? ಇಂದು ಶ್ರೀಮಂತ ವರ್ಗದ ಜನರ ಮದುವೆಯೂ ಬಡ ಜನರ ಮನೆಯ ಮದುವೆಯೂ ಒಂದೇ ರೀತಿಯಲ್ಲಿ ನಡೆಯುತ್ತಿದೆ. ಕೋರೊನದಿಂದ ನಷ್ಟವಾಗಿದೆ ಎಂಬುದು ಎಷ್ಟು ಸತ್ಯವೋ, ಕೊರೋನವು ನಾವು ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಿದೆ ಎಂಬುದೂ ಅಷ್ಟೇ ಸತ್ಯ. ಆದ್ದರಿಂದ, ನಮ್ಮ ಪ್ರಕೃತಿಯ ಮೇಲಿನ ಆಕ್ರಮಣವನ್ನು ನಿಯಂತ್ರಿಸಲು ಹೋರಾಡೋಣ.

ಇಂದಿನ ದಿನ ನಿಜವಾಗಿ ದೇವರನ್ನು ನಾವು ಕಾಣಬೇಕಾದರೆ ಅದು ವೈದ್ಯರು, ಆಶಾ ಕಾರ್ಯಕರ್ತೆಯರು, ಸೈನಿಕರು, ಪೋಲಿಸರು, ಯಾರು ಕೊರೋನದ ವಿರುದ್ಧ ಹೋರಾಡುತ್ತಲೇ ಇದ್ದಾರೆಯೋ ಅವರ ರೂಪದಲ್ಲಿ ಕಾಣೋಣ .

ಕೀರ್ತನ್ ಶೆಟ್ಟಿ
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.