Breaking News

ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಸುಳ್ಯದ ಇನ್ನಷ್ಟು ದಾದಿಯರು

Advt_Headding_Middle
Advt_Headding_Middle

ಸುಳ್ಯದ ಹಲವು ದಾದಿಯರು ಮಂಗಳೂರು ಹಾಗೂ ಬೆಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್ ಆಗಿ ಸೇವೆ ನಿರ್ವಹಿಸುತ್ತಿರುವ ಮಾಹಿತಿಯನ್ನು ಕಳೆದ ಕೆಲವು ವಾರಗಳಿಂದ ಸುದ್ದಿ ನೀಡುತ್ತಿದ್ದು, ಇನ್ನಷ್ಟು ಮಾಹಿತಿಗಳು ಲಭ್ಯವಾಗಿದೆ.

ಕೃತಿ

ಹರಿಹರ ಪಲ್ಲತ್ತಡ್ಕದ ವಾಡ್ಯಪ್ಪನ ಮನೆ ಕೃಷ್ಣ ಗೌಡ ಮತ್ತು ಶ್ರೀಮತಿ ಕುಸುಮಾವತಿ ದಂಪತಿಗಳ ಪುತ್ರಿ ಕೃತಿ ವಿ.ಕೆ ಯವರು ಮಂಗಳೂರು ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳುಬೈಲು ಸ.ಹಿ.ಪ್ರಾ.ಶಾಲೆಯಲ್ಲಿ ಒಂದನೆ ತರಗತಿಯಿಂದ ಐದನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಆರನೆ ತರಗತಿ ಮತ್ತು ಏಳನೆ ತರಗತಿಯನ್ನು ಅರಂತೋಡು ಸ.ಹಿ.ಪ್ರಾ.ಶಾಲೆಯಲ್ಲಿ ಮುಗಿಸಿದ್ದು, ಪ್ರೌಢ ಮತ್ತು ಪಿ.ಯು.ಸಿ ಶಿಕ್ಷಣವನ್ನು ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ,ನರ್ಸಿಂಗ್ ತರಬೇತಿಯನ್ನು ಸರ್ಕಾರಿ ವೆನ್ ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಪಡೆದರು. ಬಳಿಕ ಆರು ತಿಂಗಳ ಹಿಂದೆ ಅಲ್ಲೇ ಒಂದು ವರ್ಷದ ಬಾಂಡ್ ಶುಶ್ರೂಷಕಿಯಾಗಿ ಸೇರಿದ್ದು ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೋವಿಡ್ ರೋಗಿಗಳನ್ನು ನೋಡಿಕೊಳ್ಳುತ್ತಿದ್ದಾರೆ.

“ಕೋವಿಡ್ ರೋಗಿಗಳನ್ನು ನೋಡಿಕೊಳ್ಳಲು ಗುತ್ತಿಗೆ ಆಧಾರದಲ್ಲಿ ಆರು ತಿಂಗಳ ಅವಧಿಗೆ ಸೇರಿಕೊಂಡಿದ್ದೇನೆ.
ನನಗೆ ನರ್ಸಿಂಗ್ ಕೆಲಸದಲ್ಲಿ ಆಸಕ್ತಿ ಮತ್ತು ಇಷ್ಟ. ನನ್ನ ಆಸಕ್ತಿಯಿಂದಲೇ ನಾನು ಬಂದದ್ದು. ಇಂತ ಸಮಯದಲ್ಲಿ ಕೊರೊನಾ ರೋಗಿಯನ್ನು ನೋಡಿಕೊಳ್ಳುವುದು ನಿಜಕ್ಕೂ ಹೆಮ್ಮೆಯ ವಿಷಯ. ನನಗೆ ಭಯ ಏನೂ ಇಲ್ಲ. ರೋಗಿಯ ಸೇವೆ ಮಾಡುವುದರಿಂದ ದೇವರು ಯಾವತ್ತೂ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಇದೆ” ಎನ್ನುತ್ತಾರೆ ಕೃತಿ.

ದೀಪ್ತಿ ಲೋಕನಾಥ್

ಗುತ್ತಿಗಾರು ಗ್ರಾಮದ ದೇವಸ್ಯ ಶೀನಪ್ಪ ಹಾಗೂ ಲೀಲಾವತಿ ದಂಪತಿಯ ಪುತ್ರಿ ಶ್ರೀಮತಿ ದೀಪ್ತಿ ಲೋಕನಾಥ್ ಕಳೆದ 1೦ ವರ್ಷಗಳಿಂದ ಬೆಂಗಳೂರಿನ ಎದೆರೋಗಿಗಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಮಡಿಕೇರಿಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಗುತ್ತಿಗಾರು ಸರಕಾರಿ ಪ್ರೌಢಶಾಲೆಯಲ್ಲಿ 1೦ನೇ ತರಗತಿಯವರೆಗೆ ಓದಿದರು. ಅಲ್ಲೇ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಮಾಡಿದ ಬಳಿಕ ಪುತ್ತೂರಿನ ಕಜೆ ತಿಮ್ಮಣ್ಣ ಭಟ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್‌ನಲ್ಲಿ ನರ್ಸಿಂಗ್ ಶಿಕ್ಷಣ ಪೂರೈಸಿದರು.
ದೀಪ್ತಿಯವರ ಪತಿ ವಿಟ್ಲದ ಲೋಕನಾಥ್ ಫಿಟ್‌ನೆಸ್ ಟ್ರೈನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.


“ಕೋವಿಡ್ ೧೯ ಪ್ರಾಥಮಿಕ ಹಂತದಲ್ಲಿರುವ ಸಂದರ್ಭದಲ್ಲಿ ರಾಜೀವ್ ಗಾಂಧಿ ಎದೆರೋಗಿಗಳ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಭಯ ಆವರಿಸಿತ್ತು. ಅನುಭವವಿಲ್ಲದ ಪಿಪಿಇ ಕಿಟ್‌ನ್ನು ನಾಲ್ಕಾರು ಗಂಟೆಗಳ ಕಾಲ ಧರಿಸಬೇಕಾದಾಗ ಕಿರಿಕಿರಿಯಾಗಿತ್ತು. ಆದರೆ ಬಳಿಕ ಅಭ್ಯಾಸವಾಯಿತು. ಪ್ರಸ್ತುತ ಎಸ್‌ಎಆರ್‌ಐ ವಾರ್ಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ” ಎನ್ನುತ್ತಾರೆ ದೀಪ್ತಿ.

“ನನ್ನ ಪತಿ ಹಾಗೂ ಮೂರು ವರ್ಷದ ಮಗುವನ್ನು ಊರಿನಲ್ಲಿ ಬಿಟ್ಟು ಇಲ್ಲಿ ಒಬ್ಬಂಟಿಯಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೇಸರವಾಗುತ್ತಿದೆ. ಆದರೂ ಕರ್ತವ್ಯಕ್ಕೆ ಋಣಿಯಾಗಿರಬೇಕು ಎಂಬ ಯೋಚನೆಯೊಂದಿಗೆ ಕರ್ತವ್ಯ ಮಾಡುತ್ತಿದ್ದೇನೆ” ಎನ್ನುತ್ತಾರೆ ಅವರು.

ಸವಿತಾ ಸತೀಶ್
ಪುತ್ತೂರು ತಾಲೂಕಿನ ವೀರಮಂಗಲದ ಸುಳಿವೇಲು ಕೂಸಪ್ಪ ಗೌಡ ಹಾಗೂ ಶ್ರೀಮತಿ ಮೋಹಿನಿ ದಂಪತಿಯ ಪುತ್ರಿ ಶ್ರೀಮತಿ ಸವಿತಾ ಸತೀಶ್ ಕೂಡಾ 1೦ ವರ್ಷಗಳಿಂದ ಬೆಂಗಳೂರಿನ ರಾಜೀವ್‌ಗಾಂಧಿ ಎದೆರೋಗಿಗಳ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


“ಪ್ರಾರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿಯೇ ಮೊದಲ ಕೊರೋನಾ ರೋಗಿ ಆಸ್ಪತ್ರೆಗೆ ದಾಖಲಾದಾಗ ಭಯ ಆವರಿಸಿತ್ತು. ಈಗ ಕರ್ತವ್ಯದ ಭಾಗವಾಗಿದೆ. ಪತಿ ಹಾಗೂ ೨ ವರ್ಷದ ಮಗುವನ್ನು ಊರಿಗೆ ಕಳುಹಿಸಿ ಒಬ್ಬಂಟಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ” ಎನ್ನುತ್ತಾರೆ ಅವರು.

ರೂಪಾ
ಚೆಂಬು ಗ್ರಾಮದ ಪನೇಡ್ಕ ದಿ. ಲಕ್ಷ್ಮಣ ಮತ್ತು ತಾಯಮ್ಮ ದಂಪತಿಯ ಪುತ್ರಿ ರೂಪಾ ಅವರು ಮಂಗಳೂರಿನ ಕೆಎಂಸಿ ಅತ್ತಾವರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಆಸ್ಪತ್ರೆ ಕೂಡಾ ವೆನ್ಲಾಕ್ ಕೋವಿಡ್ ಆಸ್ಪತ್ರೆಯೊಂದಿಕೆ ಲಿಂಕ್ ಆಗಿದ್ದು, ಶಂಕಿತರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ.


ಪ್ರೌಢ ತರಗತಿಯವರೆಗೆ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದ ರೂಪಾ ಅವರು ಸಂಪಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪೂರೈಸಿ ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ನರ್ಸಿಂಗ್ ಶಿಕ್ಷಣ ಮಾಡಿದರು. ಆ ಬಳಿಕ ಕೆಎಂಸಿ ಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
“ಆರಂಭದಲ್ಲಿ ಕಿರಿಕಿರಿ ಎನಿಸಿದರೂ ಈಗ ಕರ್ತವ್ಯ ಖುಷಿ ಆಗುತ್ತಿದೆ” ಎನ್ನುತ್ತಾರೆ ರೂಪಾ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.