ಗುತ್ತಿಗಾರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ

Advt_Headding_Middle
Advt_Headding_Middle

ಪಾರದರ್ಶಕ ಆಡಳಿತ ನೀಡುವಲ್ಲಿ ಪಂಚಾಯತ್ ಯಶಸ್ವಿ : ಕೋಟ

ಕಟ್ಟ ಕಡೆಯ ವ್ಯಕ್ತಿಗೂ ತನ್ನ ಗ್ರಾಮದ ಆಡಳಿತ ನಡೆಸಲು ಅವಕಾಶವಿದೆ. ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರೆಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಆ ಗ್ರಾಮ ಅಭಿವೃದ್ಧಿಯತ್ತ ಸಾಗುತ್ತದೆ. ಭ್ರಷ್ಟಚಾರ ಮುಕ್ತವಾಗಬೇಕಾದರೆ ಅದು ಗ್ರಾಮ ಪಂಚಾಯತ್ ಮಟ್ಟದಿಂದಲೇ ಮೊದಲು ಆರಂಭವಾಗಬೇಕು. ಗುತ್ತಿಗಾರು ಗ್ರಾಮ ಪಂಚಾಯತ್ ಇಂದು ಭ್ರಷ್ಟಚಾರ ಮುಕ್ತ ಎಂಬ ಬೋರ್ಡ್ ಹಾಕಲು ಸೈ ಎನಿಸಿದೆ. ಆ ಮೂಲಕ ಗುತ್ತಿಗಾರು ಗ್ರಾಮ ಪಂಚಾಯತ್ ಪಾರದರ್ಶಕ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದೆ ಎಂದು ಮುಜರಾಯಿ ಸಚಿವ ಮತ್ತು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.


ಅವರು ಜೂ.೨೦ರಂದು ಗುತ್ತಿಗಾರು ಗ್ರಾಮ ಪಂಚಾಯತ್ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಗ್ರಾಮ ವಿಕಾಸದ ರೂ. ೧ ಕೋಟಿ ಅನುದಾನ ಯೋಜನೆಯ ಗರಡಿ ಮನೆ ಮತ್ತು ಸ್ಮಾರಕ ಸಭಾಭವನ ಉದ್ಘಾಟಿಸಿ ಮಾತನಾಡಿದರು.
ಗ್ರಾಮಸಭೆಯಲ್ಲಿ ನಿರ್ಣಯವಾದ ಯಾವುದೇ ವಿಷಯಗಳನ್ನು ಉಚ್ಚನ್ಯಾಯಾಲಯದಲ್ಲಿಯೂ ಬದಲಾಯಿಸಲು ಸಾಧ್ಯವಿಲ್ಲ. ಅಷ್ಟೊಂದು ಮಹತ್ವ ಪಂಚಾಯತ್ ಗ್ರಾಮಸಭೆಗಳಿಗಿದೆ. ಗ್ರಾಮಸಭೆಗಳು ಪಾರದರ್ಶಕವಾಗಿ ನಡೆಯಬೇಕು. ಫಲಾನುಭವಿ ಆಯ್ಕೆ ವಿಚಾರದಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ಉದಾಹರಣೆ ಸಮೇತ ವಿವರಿಸಿ ಕಳವಳ ವ್ಯಕ್ತಪಡಿಸಿದ ಅವರು ಗುತ್ತಿಗಾರು ಪಂಚಾಯತ್ ರಾಜಕೀಯ ಬಿಟ್ಟು ಅರ್ಹ ಫಲಾನುಭವಿಗಳನ್ನು ಅಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.
ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಸಕ ಎಸ್.ಅಂಗಾರರವರು ಟೀಕೆ ಮತ್ತು ವಿರೋಧಗಳನ್ನು ಸವಲಾಗಿ ಸ್ವೀಕರಿಸಿ ಕೆಲಸವನ್ನು ಮಾಡಿ ಯಶಸ್ವಿಯಾಗಬೇಕು. ಪಂಚಾಯತ್ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಸದಸ್ಯರಲ್ಲಿ ಸರಿಯಾದ ಮಾಹಿತಿಗಳಿರಬೇಕು. ಯಾರಿಗೂ ಅನ್ಯಾಯವಾಗಬಾರದು. ನಿಜವಾದ ಅರ್ಹತೆಯನ್ನು ನೋಡಿಕೊಂಡು ಫಲಾನುಭವಿಗಳ ಆಯ್ಕೆ ನಡೆಯಬೇಕು. ಎಂದ ಅವರು ಯಾವುದೇ ಕಾಮಗಾರಿ ಸುಸೂತ್ರವಾಗಿ ನಡೆಯಬೇಕಾದರೆ ಆ ಊರಿನವರ ಸಹಕಾರ ಬೇಕು. ನಾವು ಅನುದಾನಗಳನ್ನು ನೀಡಿದರೂ ಅಪಪ್ರಚಾರಗಳನ್ನು ನಡೆಯುತ್ತಿರುತ್ತದೆ. ಸರಕಾರ ಇಚ್ಚಾಶಕ್ತಿ ಇಟ್ಟುಕೊಂಡು ಅಭಿವೃದ್ಧಿ ನಡೆಸುತ್ತಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ಮಾತನಾಡಿ ಪಂಚಾಯತ್ ಸದಸ್ಯರ ಸಹಕಾರದಿಂದ ಗ್ರಾಮ ಅಭಿವೃದ್ಧಿ ಮಾಡಲು ಸಾಧ್ಯವಾಯಿತು. ಶಾಸಕರ ಉಸ್ತುವರಿ ಸಚಿವರ ಮುತುವರ್ಜಿಯಿಂದ ಅನುದಾನ ನಮ್ಮ ಗ್ರಾಮಕ್ಕೆ ಬಿಡುಗಡೆಯಾಗಿದೆ ಎಂದು ಹೇಳಿದರು.
ಗುತ್ತಿಗಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಾ.ಪಂ.ಸದಸ್ಯೆ ಯಶೋಧ ಬಾಳೆಗುಡ್ಡೆ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ವಳಲಂಬೆ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮುಳಿಯ ಕೇಶವ ಭಟ್, ಗುತ್ತಿಗಾರು ಗ್ರಾ.ಪಂ. ಉಪಾಧ್ಯಕ್ಷೆ ಸವಿತಾ ಕುಳ್ಳಂಪಾಡಿ, ಗುತ್ತಿಗಾರು ಸೊಸೈಟಿ ನಿರ್ದೇಶಕ ಜಯಪ್ರಕಾಶ್ ಮೊಗ್ರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್ ಎಂ.ಆರ್. ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಭಾರತ ಚೀನಾ ಗಡಿಯಲ್ಲಿ ವೀರ ಮರಣವಪ್ಪಿದ ೨೦ ಜನ ಭಾರತದ ಯೋಧರಿಗೆ ಮೌನಪ್ರಾರ್ಥನೆ ನಡೆಸಲಾಯಿತು. ಮಾಸ್ಕ್ ಧರಿಸಿ ಅಂತರ ಕಾಪಾಡಿಕೊಂಡು ಕಾರ್ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.