ಇದು ಸಿಂಪತಿಯ ಕಥೆಯಲ್ಲ, ಸಿಂಪಲ್ ಪತಿಯ ಆದರ್ಶದ ಕಥೆ

Advt_Headding_Middle
Advt_Headding_Middle

 

ಆತ್ಮ ಸ್ಥೈರ್ಯದಿಂದ ಸವಾಲು ಮೆಟ್ಟಿನಿಂತವರ ಜೀವನ ಪಾಠ!

✍️ ದುರ್ಗಾಕುಮಾರ್ ನಾಯರ್‌ಕೆರೆ

ಸರಿ ಸುಮಾರು ಇಪ್ಪತ್ತು ವರ್ಷದ ಹಿಂದೆ ತಂದೆಯ ಮರಣ, ಹತ್ತು ತಿಂಗಳ ಹಿಂದೆಯಷ್ಟೇ ತಾಯಿಯ ಸಾವು, ಒಂದು ವಾರದ ಹಿಂದೆ ಪತ್ನಿಯ ಅಗಲಿಕೆ, ಬೆಳೆದು ನಿಲ್ಲುತ್ತಿರುವ ಇಬ್ಬರು ಹೆಣ್ಣುಮಕ್ಕಳು, ಭವಿಷ್ಯ ಕಟ್ಟುವ ನಿರೀಕ್ಷೆ…
ಇಷ್ಟು ಮಾತ್ರದ ಸವಾಲುಗಳನ್ನು ಎದುರಿಸುತ್ತಾ ಧೃತಿಗೆಡದೇ ಆತ್ಮ ಸ್ಥೈರ್ಯದಿಂದ ಬದುಕುತ್ತಿರುವ ವ್ಯಕ್ತಿಯೊಬ್ಬರು ನಮ್ಮ ಮಧ್ಯೆ ಇದ್ದಾರೆ. ಅಕ್ಷರಶಃ ಇವರ ಜೀವನವೇ ಒಂದು ಪಾಠ!

ಇವರು ಬಿಜು ಮ್ಯಾಥ್ಯೂ. ಬೆಳ್ಳಾರೆಯ ದರ್ಖಾಸ್ತು ನಿವಾಸಿಯಾಗಿರುವ ಕೃಷಿಕ. ಇವರ ತಂದೆ ಮ್ಯಾಥ್ಯೂ ಅವರು ಸುಮಾರು ಅರ್ಧ ಶತಮಾನದ ಹಿಂದೆ ಕೇರಳದ ಪತ್ತನಂತಿಟ್ಟದಿಂದ ಇಲ್ಲಿಗೆ ಬಂದವರು. ಪ್ರತಿಷ್ಠಿತ ಇಟಾಲಿಯನ್ ಕಂಪೆನಿಯಲ್ಲಿ ಫಾರ್‌ಮೆನ್ ಆಗಿದ್ದ ಮ್ಯಾಥ್ಯೂ ಅವರು ಜೋಗ್‌ಫಾಲ್ಸ್‌ನಂತಹ ಅನೇಕ ನಿರ್ಮಾಣ ಕಾರ್ಯಗಳಲ್ಲಿ ಭಾಗಿಯಾದವರು. ಆದರೆ ಒಂದು ಹಂತದಲ್ಲಿ ಎಲ್ಲವನ್ನೂ ಕಳೆದುಕೊಂಡು ದಿಕ್ಕೆಟ್ಟಿದ್ದರು. ಕೆಎಫ್‌ಡಿಸಿಯ ಸಣ್ಣ ನೌಕರಿಯೊಂದಿಗೆ ದರ್ಖಾಸ್ತಿಗೆ ಬಂದು
ನೆಲೆ ನಿಂತರು. ಶೂನ್ಯದೊಂದಿಗೆ ಬದುಕು ಆರಂಭಿಸಿದರು.

ದರ್ಖಾಸ್ತಿನಲ್ಲಿ ಸಣ್ಣ ಹೋಟೇಲೊಂದನ್ನು ಶುರುವಿಟ್ಟುಕೊಂಡರು. ಇವರಿಗೆ ಬೆನ್ನೆಲುಬಾಗಿ ನಿಂತವರು ಪತ್ನಿ ಸಾರಮ್ಮ.

ಈ ದಂಪತಿಗೆ ಇಬ್ಬರು ಮಕ್ಕಳು. ಹಿರಿಯವರು ಬಿಜು ಮ್ಯಾಥ್ಯೂ, ಕಿರಿಯಾಕೆ ಬೀನಾ ಮ್ಯಾಥ್ಯೂ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಮನೆ ಮಕ್ಕಳಿಗೆ ಅದರ ಅನುಭವ ಬಾರದಂತೆ ಬೆಳೆಸಿದರು. ಸುಳ್ಯ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪದವಿ ಓದಿದ ಬಿಜು ಅವರು ತಂದೆಯೊಂದಿಗೆ ಕೃಷಿ ಕಾಯಕ ಮುಂದುವರಿಸಿದರು.

ಸರ್ವವೂ ಸಾಂಗವಾಗಿಯೇ ಸಾಗುತ್ತಿತ್ತು. ಆಗ ಬಂದೆರಗಿದ್ದು ಮೊದಲ ಆಘಾತ. ಅದು 2001ನೇ ಇಸವಿ. ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದ ಮ್ಯಾಥ್ಯೂ ಅವರು ಇಹಲೋಕ ತ್ಯಜಿಸಿದರು.

 

ಬಳಿಕ ಮನೆಯ ಅಷ್ಟೂ ಜವಾಬ್ದಾರಿ ಬಿಜು ಅವರ ಹೆಗಲಿಗೇರಿತು. ತಂಗಿ ಬೀನಾ ಅವರನ್ನು ಕಡಬ ಸಮೀಪದ ಕೋಡಿಂಬಾಳದ ಕೃಷಿ ಕುಟುಂಬಕ್ಕೆ ಮದುವೆ ಮಾಡಿ ಕೊಡಲಾಯಿತು. ಬಿಜು ಅವರೂ ಕಡಬದ ರೀನಾ ಅವರನ್ನು ಮದುವೆಯಾದರು. ಬಳಿಕ ರೀನಾ ದರ್ಖಾಸ್ತು ಅಂಗನವಾಡಿ ಕಾರ್ಯಕರ್ತೆಯಾಗಿ ನೇಮಕಗೊಂಡರು.

ಹಾಗೆ ಸಂಸಾರ ಸಾಗುತ್ತಿದ್ದಾಗ ಇದ್ದಕ್ಕಿದ್ದಂತೆ ತಾಯಿ ಸಾರಮ್ಮರಿಗೆ ಅಸೌಖ್ಯ ಬಾಧಿಸಿತು. ಪಾರ್ಶ್ವವಾಯು ಪೀಡಿತರಾದ ಅವರು ಎದ್ದು ಓಡಾಡಲಾಗದ ಸ್ಥಿತಿಗೆ ಬಂದು ತಲುಪಿದರು. ಅವರ ಆರೈಕೆಯ ಹೊಣೆ ಮಗ, ಸೊಸೆಯ ಪಾಲಿಗೆ ಬಂತು. ಶ್ರದ್ಧೆಯಿಂದ ಅದನ್ನು ನಿರ್ವಹಿಸುತ್ತಿದ್ದರು ಕೂಡಾ.

ಆದರೆ ಕಷ್ಟಗಳ ಸರಣಿ ಮುಂದುವರಿಯಿತು. ಸಾರಮ್ಮರಿಗೆ ಅಸೌಖ್ಯ ಬಾಧಿಸಿದ ನಾಲ್ಕೇ ವರ್ಷಗಳಲ್ಲಿ ಪತ್ನಿ ರೀನಾ ಕಿಡ್ನಿ ಕಾಯಿಲೆಗೊಳಗಾದರು. ಇಂತಹದ್ದೊಂದು ಸನ್ನಿವೇಶದ ಚಿತ್ರಣವನ್ನು ಕಲ್ಪಿಸಿಕೊಂಡರೆ ಸಾಕು, ಅಂತಹ ಸಂದರ್ಭದ ಅನುಭವ ಮನನವಾದೀತು.

ಅಸೌಖ್ಯದ ಮಧ್ಯೆಯೂ ರೀನಾ ಅಂಗನವಾಡಿ ಕರ್ತವ್ಯಕ್ಕೆ ಹೋಗುತ್ತಿದ್ದರು. ಒಂದೆಡೆ ಮಲಗಿದ ತಾಯಿ, ಮತ್ತೊಂದೆಡೆ ಪತ್ನಿಯ ಅಸೌಖ್ಯ, ಇಬ್ಬರು ಹೆಣ್ಣುಮಕ್ಕಳ ವಿದ್ಯಾಭ್ಯಾಸ . ಈ ಎಲ್ಲದರ ಜವಾಬ್ದಾರಿಯೂ ಬಿಜು ಅವರ ಮೇಲೆ ಬಿತ್ತು. ಕಿಡ್ನಿ ಖಾಯಿಲೆಗೊಳಗಾದ ರೀನಾ ಅವರಿಗೆ ಭರ್ಜರಿ ಸರ್ಜರಿಗಳಾಯಿತು. ಆ ಬಳಿಕ ನಿರಂತರ ಡಯಾಲಿಸೀಸ್ ಮುಂದುವರಿಯಿತು. ನೋವು ನುಂಗಿ ನಗಲೇಬೇಕಾಯಿತು.

ಆದರೆ ಬಿಜು ಅವರು ಇವರ ಜವಾಬ್ದಾರಿ ನೋಡುತ್ತಾ ಮನೆಯಲ್ಲೇ ಕುಳಿತುಕೊಳ್ಳುವಂತಿರಲಿಲ್ಲ. ಆರ್ಥಿಕವಾಗಿ ಅಷ್ಟೇನೂ ದುರ್ಬಲರಲ್ಲದಿದ್ದರೂ, ಇರುವ ಐದು ಎಕ್ರೆಯಲ್ಲಿರುವ ರಬ್ಬರ್ ತೋಟದಲ್ಲಿ ರೀಪ್ಲಾಂಟೇಶನ್ ಮಾಡಿರುವುದರಿಂದ ಅದರ ಆದಾಯ ಬರಲು ಇನ್ನಷ್ಟು ಸಮಯವಿತ್ತು. ಮತ್ತೊಂದೆಡೆ ಕೇವಲ ಇವರಿಬ್ಬರ ಆಸ್ಪತ್ರೆ ಖರ್ಚಿಗೆಂದೇ ತಿಂಗಳಿಗೆ ಬರೋಬ್ಬರಿ 33 ಸಾವಿರ ರೂಪಾಯಿ ಹಣ ಬೇಕಾಗಿತ್ತು. ಹಾಗಾಗಿ ಅವರಿಗೆ ಹೊರಗಿನ ದುಡಿತ ಅನಿವಾರ್ಯವೇ ಆಗಿತ್ತು. ಈ ಮಧ್ಯೆ ಹಾಸಿಗೆಯಲ್ಲಿದ್ದ ತಾಯಿಯ ಸೇವೆಯನ್ನು ನಿಷ್ಠೆಯಿಂದ ಮಾಡುತ್ತಿದ್ದರು. ಹೀಗಾಗಿ ಹಬ್ಬ, ಸಂಭ್ರಮ, ಆಚರಣೆ, ಮದುವೆ, ಕಾರ್ಯಕ್ರಮಗಳ ಭಾಗವಹಿಸುವಿಕೆಯನ್ನು ತ್ಯಾಗ ಮಾಡಲೇಬೇಕಾಗಿತ್ತು.
ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಬಿಜು ಅವರ ತಾಯಿ ಸಾರಮ್ಮ ಹತ್ತು ತಿಂಗಳ ಹಿಂದೆ ಸಾವನ್ನಪ್ಪಿದರು. ಹಾಗೆ ಪ್ರೀತಿಪಾತ್ರವಾದ ಮತ್ತೊಂದು ಜೀವವೂ ಬಿಜು ಅವರನ್ನು ಬಿಟ್ಟಗಲಿತು.

ಬಿಜು ಮಾತ್ರವಲ್ಲ ಒಂದರ್ಥದಲ್ಲಿ ಊರವರಿಗೇ ಸಾರಮ್ಮ ಅಮ್ಮನಂತಿದ್ದರು. ಮನೆಗೆ ಬಂದ ಯಾರಿಗೇ ಆದರೂ, ತುತ್ತು ನೀಡದೇ ಕಳುಹಿಸಿಕೊಟ್ಟವರಲ್ಲ ಅವರು. ಅಂತಹ ವ್ಯಕ್ತಿತ್ವದ ಸಾರಮ್ಮರ ಅಗಲಿಕೆ ಊರಿಗೇ ಬಹಳ ದೊಡ್ಡ ನಷ್ಟವಾಯಿತು.

ಇಂತಹ ಕಠಿಣ ಪರಿಸ್ಥಿತಿಯಿದ್ದರೂ, ಬಿಜು ಅವರ ಕುಟುಂಬವನ್ನು ಧೃತಿಗೆಡದಂತೆ ಕಾಪಾಡಿದ್ದು, ಅವರ ಅದ್ಭುತ ಜೀವನ ಪ್ರೀತಿ, ಬದುಕನ್ನು ಅನುಭವಿಸುತ್ತಿದ್ದ ರೀತಿ. ಜೊತೆಗೆ ಅವರ ತಾಳ್ಮೆ, ಶ್ರದ್ಧೆ ಹಾಗೂ ಸಂಯಮ ಎಂಬ ಜೀವನ ಮೌಲ್ಯಗಳು.

” ಇಂತಹ ಸ್ಥಿತಿ ಎದುರಾದ ಮೇಲೆ ನಾವು ಮನೆಯಲ್ಲಿ ಪ್ರಾರ್ಥಿಸುತ್ತಿದ್ದ ವೇಳೆ, ಹೇಳುತ್ತಿದ್ದುದಿಷ್ಟೇ : – ಜಗತ್ತಿನ ಅತ್ಯಂತ ಸಂತೋಷದ ವ್ಯಕ್ತಿಯೆಂದರೆ ನಾವೇ. ಈಗ ನಮಗೆ ಸಿಗುತ್ತಿರುವುದು ಬದುಕಿನಲ್ಲಿ ಬೋನಸ್ ದಿನಗಳು. ಅಂತಹ ಬೋನಸ್ ದಿನಗಳಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವೆ”

ಅಂತಹ ಸಂತೋಷದ ದಿನಗಳಿಗೆ ಮತ್ತೆ ವಿಘ್ನ ಎದುರಾದದ್ದು ಪತ್ನಿ ರೀನಾ ಅವರ ಅಗಲಿಕೆಯ ಮೂಲಕ. ಡಯಾಲಿಸಿಸ್ ಗೆಂದು ಹೋಗಿದ್ದ ವೇಳೆ ತೀವ್ರ ಅನಾರೋಗ್ಯಕ್ಕೀಡಾದ ಅವರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಅಲ್ಲಿ ರೀನಾ ಬದುಕಿಗೆ ವಿದಾಯ ಹೇಳಿದರು. ಬಿಜು ಬದುಕಿನ ಮತ್ತೊಂದು ಅವಿನಾಭಾವ ಕೊಂಡಿಯೊಂದು ಕಳಚಿತು. 11 ವರ್ಷ ಸಾವಿನೊಂದಿಗೆ ಸೆಣಸಿದ ಜೀವವೊಂದು ಮರೆಯಾಯಿತು. ಅಂಗನವಾಡಿಯಲ್ಲಿ ನೂರಾರು ಮಕ್ಕಳನ್ನು ಪ್ರೀತಿಯಿಂದ ಆರೈಕೆ ಮಾಡಿದ ತಾಯಿ ಹೃದಯವು ತಮ್ಮ ಮಕ್ಕಳ ಬೆಳವಣಿಗೆಯನ್ನು ನೋಡಲಾರದೆ ಮರೆಯಾಗಿ ಹೋಯಿತು.

” ಬೆಳಿಗ್ಗೆ ನಾನೇ ಬೈಕ್‌ನಲ್ಲಿ ಡಯಾಲಿಸಿಸ್‌ಗೆ ಬಿಟ್ಟು ಬಂದಿದ್ದೆ. ಟಾಟಾ ಮಾಡಿ ಹೋಗಿದ್ದಳು. ಅಲ್ಲಿಂದ ಅಸ್ವಸ್ಥಗೊಂಡಾಗ ಮಂಗಳೂರಿಗೆ ಕೊಂಡೊಯ್ಯಬೇಕಾಯಿತು. ಹೋಗುವಾಗ ಚಹಾ ಬೇಕೆಂದು ಕೇಳಿದ್ದಳು. ರಾತ್ರಿ ನನಗೆ ಏನೇನೋ ಆಗುತ್ತಿದೆ ಎಂದು ಹೇಳಿದ್ದಳು. ಆ ಮಾತೇ ಕೊನೆ. ಮತ್ತೆ ಮಾತನಾಡಲಿಲ್ಲ ” ಎನ್ನುತ್ತಾ ಬಿಜು ಕೂಡಾ ಮಾತು ನಿಲ್ಲಿಸಿ, ಕಣ್ಣೀರಾದರು.

”ಮೊದಲಿನಿಂದಲೂ ಅಷ್ಟೆ. ನಮ್ಮ ಕುಟುಂಬವೆಂದರೆ ತಂದೆ, ತಾಯಿ, ಮಕ್ಕಳು ಎಂಬ ಅಂತರವಿರಲಿಲ್ಲ. ನಾವೆಲ್ಲಾ ಫ್ರೆಂಡ್ಸ್ ಗಳಂತಿದ್ದೆವು. ಹಾಗಾಗಿಯೇ ಇದ್ದಷ್ಟು ಕಾಲ ಬದುಕನ್ನು ಎಂಜಾಯ್ ಮಾಡುವುದು ನಮಗೆ ಸಾಧ್ಯವಾಯಿತು. ನಮಗೆ ಅಂತಲ್ಲ ಇದು ಎಲ್ಲರಿಗೂ ಸಾಧ್ಯವಾಗುವಂತಹದ್ದು. ದೇವರೆಡೆಗೆ ಅಂಧವಲ್ಲದ ನಿರ್ಮಲ ಭಕ್ತಿಯನ್ನು ಇಟ್ಟುಕೊಂಡರೆ ಮತ್ತು ಆತ್ಮವಿಶ್ವಾಸವನ್ನು ವೃದ್ಧಿಸಿಕೊಂಡರೆ ಇದು ಸಾಧ್ಯ. ನಾವು ಹಣದ ಹಿಂದೆ ಹೋಗುವ ಬದಲು ಸಂಬಂಧದ ಹಿಂದೆ ಹೋಗಬೇಕು. ನಾಳೆ ನಾವು ಎದ್ದರೆ ಮಾತ್ರ ನಮಗೆ ಹಣ, ಆಸ್ತಿ ಎಲ್ಲವೂ. ಕುಟುಂಬದಲ್ಲಿ ನೆಮ್ಮದಿ ಕಂಡರೆ ಮಾತ್ರ ನಮಗೆ ಸಮಾಜದಲ್ಲೂ ನೆಮ್ಮದಿ ಕಾಣಲು ಸಾಧ್ಯ.” ಎನ್ನುವ ಅವರ ಮಾತುಗಳಲ್ಲಿ ಬದುಕಿನ ಫಿಲಾಸಫಿ ಎದ್ದು ಕಂಡಿತು.

ಬಿಜು ಹಾಗೂ ಅವರ ಕುಟುಂಬ ಊರಲ್ಲಿಯೂ ಹಾಗೆ. ಊರವರೆಲ್ಲರೂ ಪ್ರೀತಿಸುತ್ತಿದ್ದ ಕುಟುಂಬವಾಗಿತ್ತು ಅದು. ಬಿಜು ಅವರ ಸುಖ ಕಷ್ಟಗಳಲ್ಲಿ ಅವರ ದೊಡ್ಡ ಸಂಖ್ಯೆಯ ಮಿತ್ರರೂ, ಸಹಭಾಗಿಗಳಾಗುತ್ತಿದ್ದರು.

ಮನುಷ್ಯರಷ್ಟೇ ಪ್ರಾಣಿ ಪಕ್ಷಿಗಳನ್ನೂ ಈ ಕುಟುಂಬ ಪ್ರೀತಿಸುತ್ತಿತ್ತು. ಒಂದು ಕಾಲದಲ್ಲಿ ಆಡು ಸಾಕಾಣಿಕೆಯೂ ಇವರ ಹವ್ಯಾಸವಾಗಿತ್ತು. ರೀನಾ ಅವರಿಗಂತೂ ಪೆಟ್ಸ್ ಗಳೆಂದರೆ ಪಂಚಪ್ರಾಣ. ಬಿಜು ಅವರು ತಮ್ಮ ಜಾಗದಲ್ಲಿ ಮಾತ್ರವಲ್ಲ ದರ್ಖಾಸಿನ ಪರಿಸರದಲ್ಲೂ ಅನೇಕ ಗಿಡಗಳನ್ನು ನೆಟ್ಟು ಬೆಳೆಸಿದ್ದರು.

” ಊರವರ ಪ್ರೀತಿ, ವಿಶ್ವಾಸವನ್ನು ಯಾವತ್ತೂ ಮರೆಯಲಾರೆ. ನನ್ನ ಕಣ್ಣೀರನ್ನು ಒರೆಸುವ ಕಾರ್ಯವನ್ನು ಊರವರು ಮಾಡಿದ್ದಾರೆ. ಇಂತಹ ಸವಾಲಿನ ಬದುಕಿನ ಹಂತಗಳಲ್ಲಿ ಸುಳ್ಯ ಚರ್ಚ್‌ನಲ್ಲಿ ಧರ್ಮಗುರುಗಳಾಗಿದ್ದ ರೆ.ಫಾ. ವಿನ್ಸೆಂಟ್ ಡಿಸೋಜಾ, ಸುಳ್ಯದ ಎಂ.ಬಿ.ಸದಾಶಿವ ಸರ್ ಹಾಗೂ ಹರಿಣಿ ಮೇಡಂ ಅವರನ್ನು ಯಾವತ್ತೂ ಮರೆಯಲಾರೆ ” ಎನ್ನುತ್ತಾರೆ ಬಿಜು.

ಹಾಗಂತ ಬಿಜು ಅವರು ಎಂತಹಾ ಕಷ್ಟದ ಸಂದರ್ಭದಲ್ಲೂ ಸರಕಾರದ ಕಾಸಿಗಾಗಿ ಕೈಯೊಡ್ಡಿದವರಲ್ಲ. ಅನೇಕ ಗೆಳೆಯರು ಈ ಕುರಿತು ಅವರಲ್ಲಿ ಹೇಳಿದರೂ ನಯವಾಗಿ ನಿರಾಕರಿಸುತ್ತಿದ್ದರು. ಬಿಜು ಅವರು ಅಪ್ಪ, ಅಮ್ಮ, ಪತ್ನಿಯ ಚಿಕಿತ್ಸೆಗೆಂದೇ ವ್ಯಯಿಸಿದ ಮೊತ್ತ ಹತ್ತತ್ತಿರ ಒಂದು ಕೋಟಿಯಷ್ಟಾದೀತು. ಇವಿಷ್ಟು ಪಡೆದದ್ದು ಅವರು ಶ್ರಮದ ದುಡಿಮೆಯಿಂದಲೇ.

“ನನ್ನ ತಂದೆ ತಾಯಿ ಕಷ್ಟಪಟ್ಟಿದ್ದಾರೆ. ಆ ಪುಣ್ಯ ನನಗೆ ಸಿಕ್ಕಿದೆ. ನಾನೂ ಕಷ್ಟ ಪಟ್ಟೆ . ಹಾಗಾಗಿ, ಹಣದ ವಿಚಾರದಲ್ಲಿ ದೇವರು ನನಗೆ ಶಕ್ತಿ ನೀಡಿದ್ದಾನೆ” ಎನ್ನುತ್ತಾರೆ ಅವರು. ಅವರಿಗೆ ಸಿಂಪತಿ ಪಡೆದುಕೊಳ್ಳುವುದು ಬೇಕಿಲ್ಲ. ಇದೆಲ್ಲಾ ತನ್ನ ಕರ್ತವ್ಯವೆಂದೇ ಮಾಡುತ್ತಾರೆ.

ಬಿಜು – ರೀನಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅಜ್ಜಿಯ ಸಂಕಟ, ಅಮ್ಮನ ನೋವು, ಅಪ್ಪನ ಶ್ರಮ.. ಇವನ್ನೆಲ್ಲಾ ನೋಡುತ್ತಾ ಬೆಳೆದವರು. ಹಿರಿಯಾಕೆ ಅಂಜು ಸಾರಮ್ಮ ಮ್ಯಾಥ್ಯೂ ಮಂಗಳೂರಿನ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ಪದವಿ ಮುಗಿಸಿ, ಪಿಜಿ ಶಿಕ್ಷಣದ ನಿರೀಕ್ಷೆಯಲ್ಲಿದ್ದಾರೆ. ಕಿರಿಯಾಕೆ ಪ್ರಿಯಾ ಮೇರಿ ಮ್ಯಾಥ್ಯೂ ಸುಳ್ಯ ಸೈಂಟ್ ಜೋಸೆಫ್ ಶಾಲೆಯಲ್ಲಿ 9ನೇ ತರಗತಿ ಮುಗಿಸಿದ್ದಾಳೆ.

“ತಾಯಿ ನೋವಿನ ಬದುಕನ್ನು ಎದುರಿಸಿದವರು. ನಮ್ಮನ್ನೆಲ್ಲಾ ತಿದ್ದುತ್ತಿದ್ದವರು. ನಮ್ಮೆಲ್ಲರ ಇಂತಹ ಬದುಕಿಗೆ ಅಪ್ಪನೂ ತುಂಬಾ ಶ್ರಮ ಪಟ್ಟಿದ್ದಾರೆ. ಅವರನ್ನು ನೋಡನೋಡುತ್ತಾ ಬೆಳೆದ ನಮಗೆ ಬದುಕಿನಲ್ಲಿ ಎಲ್ಲವನ್ನೂ ಎದುರಿಸುವ ಶಕ್ತಿ ಬಂದಿದೆ ” ಎನ್ನುತ್ತಾರೆ ಅಂಜು ಸಾರಮ್ಮ ಮ್ಯಾಥ್ಯೂ.

” ಇಷ್ಟರವರೆಗೆ ಈ ಮಕ್ಕಳಿಗೆ ಅಪ್ಪನಾಗಿದ್ದೆ. ಇನ್ನು ಅಮ್ಮನೂ ಆಗಬೇಕಾಗಿದೆ ” ಎಂದು ಬಿಜು ಹೇಳುವಾಗ ಯಾರ ಮನಸ್ಸೂ ಆರ್ದ್ರಗೊಳ್ಳದೇ ಇರದು. ಬಿಜು ಮಾತಿನಂತೆ ಮಕ್ಕಳು ಬೆಂಕಿಯಲ್ಲಿ ಅರಳಿದ ಹೂಗಳು!

ನಿಜ, ಬದುಕಿನಲ್ಲಿ ಅನುಭವಿಸಲು ಎಲ್ಲಾ ಸೌಲಭ್ಯಗಳಿದ್ದೂ, ಅಕಾಲದಲ್ಲಿಯೇ ಬದುಕು ಮುಗಿಸುತ್ತಿರುವ ಅನೇಕ ಮಂದಿಗೆ ಬಿಜು ಅವರ ಜೀವನ ಕಥೆ ಅತ್ಯುತ್ತಮ ಪಾಠ. ಬದುಕಿನಲ್ಲಿ ಸೋಲು ಕಂಡಾಗ , ಬೇಸತ್ತಾಗ ಮನ ಶಾಸ್ತ್ರಜ್ಞರ ಬಳಿ ಹೋಗುವವರು ಬಿಜು ಅವರ ಮುಂದೆ ಅರ್ಧ ಗಂಟೆ ಕುಳಿತೆದ್ದು ಬಂದರೆ ಸಾಕು. ಅಂತಹ ಧೀಶಕ್ತಿಯನ್ನು ಬಿಜು ಬೆಳೆಸಿಕೊಂಡಿದ್ದಾರೆ.

ವಿದ್ಯಾವಂತ ಕೃಷಿಕನೊಬ್ಬ ಸುಮಾರು ಎರಡು ದಶಕ ಕಾಲ ತನ್ನ ಬಯಕೆ, ಇಂಗಿತಗಳನ್ನೆಲ್ಲಾ ತ್ಯಾಗ ಮಾಡುತ್ತಾ, ಸವಾಲುಗಳನ್ನು ಹಿಮ್ಮೆಟ್ಟಿಸುತ್ತಾ ಆತ್ಮಸ್ಥೈರ್ಯದಿಂದ ನಡೆಸುತ್ತಿರುವ ಬದುಕು ಅತ್ಯುತ್ತಮ ಜೀವನ ಪಾಠವೇ ಸರಿ.

ಎಂ.ಬಿ.ಸದಾಶಿವ ಅವರ ಫೇಸ್ ಬುಕ್ ಪೋಸ್ಟ್ ವೈರಲ್

ಸುಳ್ಯದ ಸಾಮಾಜಿಕ ಧುರೀಣ ಎಂ.ಬಿ.ಸದಾಶಿವ ಅವರ ಕುಟುಂಬವು ಇತ್ತೀಚಿನ ದಿನಗಳಲ್ಲಿ ಈ ಕುಟುಂಬದೊಂದಿಗೆ ಅತ್ಯಂತ ನಿಕಟವಾಗಿತ್ತು. ಅನೇಕ ಬಾರಿ ಅವರ ಮನೆಗೆ ತೆರಳಿ ಧೈರ್ಯ ತುಂಬಿದ್ದರು. ರೀನಾ ಅವರ ಮರಣದ ಬಳಿಕ ಎಂ.ಬಿ.ಸದಾಶಿವ ಅವರು ಬರೆದ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

“ಆತ್ಮಹತ್ಯೆ ಮಾಡಿಕೊಂಡ ಚಿತ್ರನಟ ಸುಶಾಂತ್ ನ ಸಾವನ್ನು ವೈಭವೀಕರಿಸುವ ಎಲ್ಲರೂ ದೇಶವೆಂದರೆ, ದೇಶವಾಸಿಗಳೆಂದರೆ ಕ್ರಿಕೆಟ್, ಸಿನೆಮಾ, ರಾಜಕಾರಣಿಗಳಷ್ಠೇ ಅಲ್ಲ, ಬಿಜುವಿನಂತಹ ನೂರು ಕೋಟಿ ಜನರಿದ್ದಾರೆ ಎಂದು ತಿಳಿಯಬೇಕು” ಎಂದು ಬರೆಯುತ್ತಾರೆ ಎಂ.ಬಿ.ಸದಾಶಿವ.

“ಬಿಜು ಅವರ ತಾಳ್ಮೆ, ರೀನಾ ಅವರ ವಿಲ್‌ ಪವರ್, ಮಕ್ಕಳ ಸಪೋರ್ಟ್ ಮತ್ತು ಅವರ ಜವಾಬ್ದಾರಿ ನಡವಳಿಕೆ ನೋಡಿದ ನಾನು, ಈ ಸಂಸಾರ ನಮ್ಮ ಸಮಾಜಕ್ಕೆ ಮಾದರಿ ಎಂದು ಯಾವಾಗಲೂ ಅಂದುಕೊಳ್ಳುತ್ತಿದ್ದೆ. ಬಿಜು ಮತ್ತು ಮಕ್ಕಳು ನಿಜಕ್ಕೂ ಗ್ರೇಟ್ ” ಎನ್ನುತ್ತಾರೆ ಹರಿಣಿ ಸದಾಶಿವ.

ಬೆಳಗ್ಗಿನ ಜಾವ 3.30 ಕ್ಕೆ ಆರಂಭಗೊಳ್ಳುತ್ತಿತ್ತು ದಿನಚರಿ

ಬಿಜು ಅವರ ದಿನಚರಿ ಸಾಧಾರಣವಾಗಿ ಬೆಳಗ್ಗಿನ ಜಾವ 3.30 ಕ್ಕೆ ಆರಂಭಗೊಳ್ಳುತ್ತಿತ್ತು. ಮೊದಲಿಗೆ ಬೆಳ್ಳಾರೆಯಲ್ಲಿ ಲೀಸಿಗೆ ಪಡೆದಿರುವ ರಬ್ಬರ್ ತೋಟಕ್ಕೆ ಹೋಗಿ, ತಾನೇ ಟ್ಯಾಪಿಂಗ್ ನಡೆಸುತ್ತಿದ್ದರು. 8 ಗಂಟೆಯ ವೇಳೆಗೆ ಮನೆಗೆ ಬಂದು, ತಾಯಿಯ ಆರೈಕೆ ಮಾಡುತ್ತಿದ್ದರು. ಅವರನ್ನು ಸ್ನಾನ ಮಾಡಿಸುವ , ಬಟ್ಟೆ ಬದಲಾಯಿಸುವ ಕಾರ್ಯ ಮಾಡುತ್ತಿದ್ದರು. ಬಳಿಕ ಪತ್ನಿಯೊಂದಿಗೆ ಸೇರಿ ಅಡುಗೆ ಸಿದ್ಧಪಡಿಸುತ್ತಿದ್ದರು. ಈ ಮಧ್ಯೆ ತಮ್ಮ ರಬ್ಬರ್ ತೋಟದ ಟ್ಯಾಪಿಂಗ್ ಕೂಡಾ ತಾನೇ ನಡೆಸುತ್ತಿದ್ದರು. ಬಳಿಕ ಹೊರಗೆ ಕೆಲಸ ಕಾರ್ಯಗಳಿಗಾಗಿ ಹೊರಟು, ಮಧ್ಯಾಹ್ನ ಸರಿಯಾಗಿ 12.30ಕ್ಕೆ ಮನೆಗೆ ಬಂದು, ಮತ್ತೆ ತಾಯಿಯ ಆರೈಕೆ. ಊಟ ಮಾಡಿಸುತ್ತಿದ್ದರು. ಸಂಜೆ ಮಗಳು ಶಾಲೆಯಿಂದ ಬರುವ ವೇಳೆಗೆ ಆಕೆಗೆ ತಿಂಡಿ ಸಿದ್ಧಪಡಿಸುತ್ತಿದ್ದರು. ಹೀಗೆ ರಾತ್ರಿ 11 ಗಂಟೆಯವರೆಗೆ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಆದರೆ ತಾಯಿಯ ಅಗಲಿಕೆಯ ಬಳಿಕ ಸ್ವಲ್ಪ ಮಟ್ಟಿಗೆ ರೊಟೀನ್ ಬದುಕು ತಾಳ ತಪ್ಪಿತು. ಮನೆಯಲ್ಲಿ ಅಮ್ಮನಿಲ್ಲದ ಕಾರಣ ಮಧ್ಯಾಹ್ನವೇ ಬರಬೇಕಾದ ಅನಿವಾರ್ಯತೆ ಇರಲಿಲ್ಲ. ಹೊರಗಡೆಯ ದುಡಿತ ಜಾಸ್ತಿಯಾಯಿತು. ಹೀಗಾಗಿ ಊಟಕ್ಕೆ ಬರುವಾಗ 3 ಗಂಟೆಯಾದದ್ದೂ ಇದೆ.

ಅನಾರೋಗ್ಯಕ್ಕೀಡಾದವರನ್ನು ಕಳೆದ 20 ವರ್ಷದಿಂದ ಆರೈಕೆ ಮಾಡುತ್ತಾ, ಆರೋಗ್ಯ ಮತ್ತು ಚಿಕಿತ್ಸೆಯ ಬಹುತೇಕ ಸಂಗತಿಗಳನ್ನು ಬಿಜು ಕಲಿತುಕೊಂಡಿದ್ದರು. ” ನೀವೊಬ್ಬ ಮಿನಿ ಡಾಕ್ಟರ್ ” ಎಂದು ವೈದ್ಯರುಗಳೇ ಕಿಚಾಯಿಸುತ್ತಿದ್ದರಂತೆ.

ಕೊರೋನಾ ಲಾಕ್ ಡೌನ್ ಗಂಭೀರತೆಯನ್ನು ಅರಿತಿದ್ದ ಬಿಜು, ಹೆಚ್ಚಿನ ಪ್ರಮಾಣದಲ್ಲಿ ಡಯಾಲಿಸಿಸ್ ಸಲಕರಣೆಯನ್ನು ಮನೆಯಲ್ಲಿ ತಂದಿರಿಸಿದ್ದರು. ಮತ್ತು ಸುಳ್ಯದ ಹಲವು ಕಡೆಗಳಿಗೆ ಇವರೇ ಇವನ್ನು ಪೂರೈಸಿದ್ದರು.

ನಾಟಿ ಮದ್ದಿನಲ್ಲಿ ವಿಶೇಷ ಆಸಕ್ತಿ ಹೊಂದಿದ ಬಿಜು ತಲೆ ನೋವಿಗೆ ಹಳ್ಳಿಮದ್ದನ್ನೂ ನೀಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.