ತುಳುನಾಡಿನ ವಿಶೇಷ :ಇಂದಿನಿಂದ ಆಟಿ  ತಿಂಗಳು

Advt_Headding_Middle
Advt_Headding_Middle

 

✍️ ರವೀಶ ಕೇವಳ

ನಮ್ಮ ತುಳುನಾಡಿನ ದಕ್ಷಿಣ ಕನ್ನಡ ಜಿಲ್ಲೆಯು ಸಾಮಾನ್ಯವಾಗಿ ತುಳು ಸಂಸ್ಕೃತಿಯನ್ನು ಮತ್ತು ಆಚರಣೆಗಳ ಕಟ್ಟುಪಾಡುಗಳನ್ನುಆಚರಿಸುವ ಜಿಲ್ಲೆಗೆ ಪಾತ್ರವಾಗಿರುತ್ತದೆ. ಪ್ರದೇಶವಾರು, ಹಳ್ಳಿ – ಪ್ರದೇಶಗಳಲ್ಲಿ ಸ್ವಲ್ಪ ಬದಲಾವಣೆ ಬಿಟ್ಟರೆ ಆಚರಣೆಯ ಮೂಲ ಸತ್ವ ಒಂದೇ ರೀತಿಯಾಗಿದೆ . ಹಾಗಾಗಿ ಇಲ್ಲಿನ ಎಲ್ಲಾ ರೀತಿ ರಿವಾಜು ಕಟ್ಟು ಕಟ್ಟಳೆಗಳ ಸಂಪ್ರದಾಯವನ್ನು ಆಚರಣೆಯಲ್ಲಿ ಕಾಣಬಹುದು . ಇಂತಹ ಆಚರಣೆಯಲ್ಲಿ ತುಳುನಾಡಿನ ತುಳು ಪಂಚಾಂಗದ ರೀತಿ ತುಳುವರಿಗೆ ಪಗ್ಗು ತಿಂಗಳಲ್ಲಿ ವರ್ಷ ಪ್ರಾರಂಭವಾದರೆ ಸುಗ್ಗಿ ತಿಂಗಳು ವರ್ಷದ ಕೊನೆಯ ತಿಂಗಳು ಅನ್ನುವುದು ವಾಡಿಕೆ. ಆದರೆ ಇತ್ತೀಚೆಗೆ ಹೊರಗಿನ ಆಚರಣೆಯ ಪ್ರಭಾವದಿಂದ ಸಾಮಾನ್ಯವಾಗಿ ಈ ತುಳು ತಿಂಗಳು ಹೆಚ್ಚಿನವರಿಗೆ ತಿಳಿದಿಲ್ಲ.

ತುಳುವರಿಗೆ ಪ್ರತಿಯೊಂದು ತಿಂಗಳು ವಿಶೇಷವೇ ಆಗಿದೆ. ತುಳುನಾಡಿನ ಮೊದಲ ಹಬ್ಬ ಶುರುವಾಗುವುದು ಆಟಿ ಅಮವಾಸ್ಯೆಯ ದಿನ. ಆವತ್ತು ಬೆಳಿಗ್ಗೆ ಹಾಲೆಯ ಮರದ ಕಷಾಯ ಕುಡಿಯುವುದು ವಿಶೇಷ . ಅದರ ನಂತರ ಬರುವ ಸಾರ್ವತ್ರಿಕ ಹಬ್ಬ ನಾಗರ ಪಂಚಮಿ ಕೂಡಾ ಇದೇ ಆಟಿ ತಿಂಗಳಲ್ಲಿಯೇ ಬರುವುದು. ಹಾಗಾಗಿ ಆಟಿ ತಿಂಗಳು ತುಳುನಾಡಲ್ಲಿ ಹೊಸ ಕಳೆಯನ್ನು ಕೊಡುತ್ತದೆ ಅನ್ನುವುದರಲ್ಲಿ ಅನುಮಾನವಿಲ್ಲ.
ಆಟಿ ತಿಂಗಳ ಒಂದು ವಿಶೇಷತೆಯೆಂದರೆ ಆಟಿಕಲೆಂಜ ಇರಲೇಬೇಕು.

ಆಟಿ ಎಂದ ಕೂಡಲೇ ತಕ್ಷಣ ತುಳುವರಿಗೆ ನೆನಪಾಗುವುದೇ ಕಲೆಂಜ ! …ಒಂದು ಕಾಲದಲ್ಲಿ ತುಳುನಾಡಿನ ಆಟಿ ತಿಂಗಳು ಅಂದರೆ ಹೊರಗೆ ಬಿಡದೇ ಸುರಿಯುವ ಜಡಿಮಳೆ. ಹಾಗಾಗಿ ಯಾವುದೇ ಕೆಲಸ ಕಾರ್ಯಗಳು ನಡೆಯದೇ ಒಂದು ರೀತಿಯ ತಟಸ್ಥ ಸರಳ ಜೀವನ . ಈ ರೀತಿಯ ತಟಸ್ಥತೆಯ ಜೀವನದಲ್ಲಿ ಉಲ್ಲಾಸ- ಉತ್ಸಾಹ ಬರಲು ಚೆನ್ನೆಮನೆಯಂತಹ ಒಳಾಂಗಣ ಆಟ ಆಡುತ್ತಿದ್ದರು. ಹೊರಗೆ ಯಾವುದೇ ಪದಾರ್ಥ ದೊರೆಯದಿರುವ ಕಾರಣ ಬೇಸಿಗೆಯಲ್ಲಿ ಕೂಡಿಟ್ಟು ಹಲಸಿನ ಕಾಯಿಯನ್ನು ಉಪ್ಪಲ್ಲಿ ಹಾಕಿ ಇಡುವ ಕ್ರಮ ಇತ್ತು ಅದಕ್ಕೆ ಉಪ್ಪಡಚ್ಚಿಲ್ ಹೇಳುತ್ತಿದ್ದರು . ಅದೇ ರೀತಿ ಹಲಸಿನ ಬೀಜ ಬೇಯಿಸಿ ಒಣಗಿಸಿ ಅದನ್ನು ಮಳೆಗಾಲಕ್ಕೆ ಸಂಗ್ರಹಣೆ ಮಾಡುತ್ತಿದ್ದರು. ಅದಕ್ಕೆ ಸಾಂತಾನಿ ಅಂತ ಹೇಳುತ್ತಿದ್ದರು. ಅದಲ್ಲದೆ ಹಲಸಿನ ಹಣ್ಣಿನ ಹಪ್ಪಳ ಇತ್ಯಾದಿ ಪದಾರ್ಥಗಳನ್ನು ಆಟಿ ತಿಂಗಳಿನಲ್ಲಿ ತಿನ್ನಲು ಉಪಯೋಗಿಸುತ್ತಿದ್ದರು .

ಆಟಿ ತಿಂಗಳು ಅಂತ ಹೇಳುವಾಗ ಆಟಿಕಲೆಂಜನನ್ನು ಮರೆಯುವುದು ಹೇಗೆ ?. ಮಳೆಗಾಲದಲ್ಲಿ ವಿಪರೀತ ಮಳೆ ಬಂದು ಕ್ರಿಮಿ ಕೀಟಗಳ ಸಂತತಿ ಜಾಸ್ತಿ ರೋಗ ರುಜಿನಗಳು ಬರುತ್ತಿತ್ತು. ಇಂತಹ ರೋಗ ರುಜಿನಗಳನ್ನು ದೂರ ಮಾಡಲು ದೇವರ ಪ್ರತಿನಿಧಿಯಾಗಿ ಆಟಿಕಳೆಂಜ ಊರಲ್ಲಿ ಸುತ್ತಿ ಊರಿಗೆ ಬಂದ ಮಾರಿಯನ್ನು ಓಡಿಸುವುದೇ ಆಟಿ ಕಳೆಂಜನ ಉದ್ದೇಶ. ಹಾಗಾಗಿ ಕಳೆಂಜನು ದೋಷ ನಿವಾರಣೆಗಾಗಿ ಮನೆ ಮನೆಗೆ ತಿರುಗುತ್ತಾ ದೋಷ ನಿವಾರಣೆ ಮಾಡುವ ಪದ್ದತಿ ಹಿಂದೆ ಇತ್ತು. ಕಳೆಂಜ ಪ್ರದರ್ಶನ ಸಂದರ್ಭದಲ್ಲಿ ಕೆಲವು ದೋಷ ನಿವಾರಣೆಗಾಗಿ ಪ್ರದರ್ಶಕರಿಂದ ನೀರು ಹೊಯ್ಯುವ ಪದ್ಧತಿ ಇದೆ. ಪ್ರದರ್ಶನದ ಸಂದರ್ಭದಲ್ಲಿ ಮನೆಯ ಯಜಮಾನ ಅಥವಾ ಹಿರಿಯರು ಕಳೆಂಜನಲ್ಲಿ ತಮ್ಮ ಕಷ್ಟಗಳನ್ನು ಅರಿಕೆ ಮಾಡಿಕೊಳ್ಳುತ್ತಾರೆ.

ಹೀಗೆ ಮನುಷ್ಯ, ಪ್ರಾಣಿ, ಪಕ್ಷಿಗಳ ರೋಗ ರುಜಿನಾದಿಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಹೋಗಲಾಡಿಸಿ ಜನಸಮುದಾಯ ಮತ್ತು ಸಾಕುಪ್ರಾಣಿಗಳ,ನಾಡಿನ ಫಸಲಿನ ಸಂರಕ್ಷಕನಾಗಿ ಆಟಿ ಕಳೆಂಜ ಕಾಣುತ್ತಾನೆ. ಊರಿಗೆ ಬಂದ ಮಾರಿಯನ್ನು ಓಡಿಸಿ ನೆಮ್ಮದಿಯ ಬದುಕನ್ನು ಜನಸಮುದಾಯಕ್ಕೆ ತರುವುದೇ ಕಲೆಂಜ ಕುಣಿತದ ಆಶಯವಾಗಿದೆ.

ಇನ್ನು ಮಳೆಗಾಲದ ಆಹಾರ ಪದ್ದತಿ ಇನ್ನೂ ವಿಶೇಷವಾಗಿದೆ. ಮಳೆಗಾಲದಲ್ಲಿ ಅಂದರೆ ತುಳುನಾಡಿನ ಆಟಿ ತಿಂಗಳಲ್ಲಿ ಮಾತ್ರ ಮಾಡುವ ತಿಂಡಿ ತಿನಿಸುಗಳು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವಂತದು. ಮೊದಲು ಹೇಳಿದ ಹಾಗೆ ಮಳೆಗಾಲದಲ್ಲಿ ಬರುವ ಸಾಮಾನ್ಯ ಕಾಯಿಲೆಗಳಾದ ಶೀತ ,ಕೆಮ್ಮ , ಜ್ವರ ಇತ್ಯಾದಿಗಳನ್ನು ನಿಯಂತ್ರಣದಲ್ಲಿ ಇಡಲು ಈ ಆಹಾರ ಪದ್ದತಿ ಸಹಕಾರಿಯಾಗಿದೆ. ಆಟಿ ಅಮವಾಸ್ಯೆಯಂದು ಮಾತ್ರ ಕುಡಿಯುವ ಹಾಲೆಮರದ ಕಷಾಯ, ಆದಿನ ಅದರಲ್ಲಿ ಎಲ್ಲಾ ರೋಗ ನಿವಾರಣೆ ಮಾಡುವ ಅಂಶಗಳು ಸೇರಿರುತ್ತದೆ ಅನ್ನುವ ನಂಬಿಕೆ ತುಳುವರದು ಆಗಿರುತ್ತದೆ.

ಆಟಿ ತಿಂಗಳಲ್ಲಿ ಮಾಡುವ ಇನ್ನೊಂದು ಪ್ರಮುಖ ತಿಂಡಿ ಪತ್ರೊಡ್ಡೆ. ಕೆಸುವಿನ ಎಲೆಯಿಂದ ಮಾಡಿದ ತಿಂಡಿ ಈಗೀಗ ಬೇರೆ ಬೇರೆ ಎಲೆಗಳನ್ನು ಉಪಯೋಗಿಸುತ್ತಾರೆ. ಆದರೆ ಕೆಸುವಿನ ಎಲೆಯಿಂದ ಮಾಡಿದ ಸ್ವಾಧ ಮತ್ತು ರುಚಿ ಬೇರೆ ಎಲೆಗಳಿಂದ ಬರುವುದಿಲ್ಲ. ಆಟಿ ತಿಂಗಳಲ್ಲಿ ಮಾಡುವ ಇನ್ನೊಂದು ಪಲ್ಯ ಅಥವಾ ಪದಾರ್ಥ ಕಣಿಲೆ . ಬಿದಿರಿನ ಮೊಳಕೆಯನ್ನು ಕಣಿಲೆ ಎನ್ನುತ್ತಾರೆ. ಅದನ್ನು ಮಳೆಗಾಲದಲ್ಲಿ ಮಾತ್ರ ಪದಾರ್ಥ ಮಾಡತಕ್ಕದ್ದು ಆಗಿರುತ್ತದೆ .

ಹೀಗೆ ತುಳುನಾಡಿನಲ್ಲಿ ಮಳೆಗಾಲ ಅನ್ನುವುದು ಒಂದು ರೀತಿಯ ಆಚರಣೆಯು ವಿಶೇಷತೆ ಅಂತಲೇ ಹೇಳಬಹುದು. ಅಂದಹಾಗೆ ದಿನಗಳು ಕಳೆದಂತೆ ಸಾಂಸ್ಕೃತಿಕ ಜೀವನಶೈಲಿ ಬದಲಾಗುತ್ತ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಆಟಿ ಕಳೆಂಜವನ್ನೂ ನೋಡುವುದು ಕಷ್ಟ.. ನನಗೆ ತಿಳಿದಂತೆ ನಾನು ಚಿಕ್ಕವನಾಗಿದ್ದಾಗ ನೋಡಿದ್ದು ನೆನಪು ಮಾತ್ರ. ಮುಖಕ್ಕೆ ಬಣ್ಣ ಹಚ್ಚಿ ಕೈಯಲ್ಲಿ ಒಂದು ದೊಡ್ಡದಾದ ಛತ್ರಿಯ ಆಕರಾದಂತಹ ವಸ್ತುವನ್ನು ಹಿಡಿದುಕೊಂಡು ಬರ್ತಾ ಇದ್ದ ನೆನಪು ಇದೆ ಅಷ್ಟೇ… ಇದನ್ನು ನೋಡಿದ ಚಿಕ್ಕ ಮಕ್ಕಳು ಹೆದರಿ ಒಳಗೆ ಓಡಿ ಕೋಣೆಯೊಳಗೆ ಅಡಗಿ ಕುಳಿತುಕೊಳ್ಳುತ್ತಿದ್ದರು. ಕಳಂಜದ ವೇಷಭೂಷಣ ನೋಡುಗರನ್ನು ಹೆದರಿಸು ವಂತೆ ಕಾಣುತ್ತಿತ್ತು …

✍️ ರವೀಶ ಕೇವಳ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.