ಕಲ್ಲಾಜೆಯ ಕಾನನದಲ್ಲಿ ಕಣ್ಮನ ಸೆಳೆಯುವ ‘ಉರುಂಬಿ’

Advt_Headding_Middle
Advt_Headding_Middle

 

✍️ ಭೂಮಿ ಪಡ್ರೆ, ನಡುಗಲ್ಲು

ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು 8 ಕಿ.ಮೀ ದೂರ ಸುಳ್ಯ ಮಾರ್ಗದಲ್ಲಿ ಸಾಗಿದರೆ ಸಿಗುವ ಊರು ನಡುಗಲ್ಲು. ನಡುಗಲ್ಲು ಶಾಲೆಯ ವಿರುದ್ಧ ದಿಕ್ಕಿನಲ್ಲಿ ಹಾದು ಹೋಗಿರುವ ರಸ್ತೆ ಕಲ್ಲಾಜೆ ಎಂಬ ಪ್ರದೇಶಕ್ಕೆ ಸೇರುತ್ತದೆ. ಮಳೆಗಾಲ ಶುರುವಾಯಿತೆಂದರೇ, ಇಲ್ಲಿರುವ ಜಲಪಾತವೊಂದು ಮೈದುಂಬಿ ಹರಿಯುತ್ತದೆ. ಅದುವೇ ಉರುಂಬಿ ಜಲಪಾತ.

ಸುಮಾರು 30 ಅಡಿ ಎತ್ತರದಿಂದ ಧುಮ್ಮುಕ್ಕುವ ಉರುಂಬಿ ಜಲಪಾತವನ್ನು ನೋಡುವುದೇ ಒಂದು ಸೋಜಿಗ. ನೀರು ಬಿದ್ದಲ್ಲಿಂದ ಮುಂದೆ ಚಲಿಸುವುದಂತೂ ಬೆಳ್ನೊರೆಗಳ ಮೆರವಣಿಗೆ ಹೊರಟಂತೆ ಭಾಸವಾಗುತ್ತದೆ‌. ಎತ್ತರದ ಗುಡ್ಡದ ಮೇಲಿನಿಂದ ಆಳವಾದ ಪ್ರಪಾತಕ್ಕೆ ಶುಭ್ರವಾದ ನೀರು ರಭಸವಾಗಿ ಭೋರ್ಗರೆದು ನಿರ್ಮಾಣಗೊಂಡ ಈ ಜಲಪಾತಾವೂ ನಯನಮನೋಹರವಾಗಿದೆ. ಹಳ್ಳಿಯ ಸೊಗಡಿನ-ಪ್ರಾಕೃತಿಕ ಜಲಪಾತವೂ ಪರವೂರಿನ ಪರಿಸರ ಪ್ರೇಮಿಗಳನ್ನೂ ಕೈಬೀಸಿ ಕರೆಯ್ಯುತ್ತಿದೆ.

ಇನ್ನು ಉರುಂಬಿ ಜಲಪಾತವನ್ನು ನೋಡಲು ತೆರಳುವ ಮಾರ್ಗವೇ ಒಂದು ವಿಶಿಷ್ಟ ಅನುಭವ ನೀಡುತ್ತದೆ. ಮುಖ್ಯರಸ್ತೆಯಿಂದ 100 ಮೀ.ದೂರ ಡಾಂಬಾರು ರಸ್ತೆ, ಆಮೇಲೆ ಸುಮಾರು 1.5 ಕಿ.ಮೀ ದೂರ ಮಣ್ಣಿನ ರಸ್ತೆಯಲ್ಲಿ ಕ್ರಮಿಸಿ ವಾಹನ ನಿಲ್ಲಿಸಿದರೆ ಅಲ್ಲಿಗೆ ನೀರಿನ ಝುಳು ಝುಳು ನಿನಾದ ಕೇಳಿಸುತ್ತದೆ. ಬಳಿಕ ನೀರು ಬೀಳುವ ಸದ್ದಿನ ಜಾಡು ಹಿಡಿದು 250 ಮೀ. ಅಡಿಕೆ ತೋಟದ ಮಧ್ಯೆ ಕಾಲ್ನಡಿಗೆಯಲ್ಲಿ ಸಾಗಿದರೆ ಉರುಂಬಿ ಜಲಪಾತ ಎದುರಾಗುತ್ತದೆ. ಜಲಪಾತವೂ ದಟ್ಟ ಕಾನನದ ಮಧ್ಯೆ ಹರಿಯುತ್ತಿದ್ದು, ಸುತ್ತಲೂ ಸಮೃದ್ಧವಾಗಿ ಬಾನೆತ್ತರಕ್ಕೆ ಬೆಳೆದ ಮರಗಳು, ಎಲೆ ಬಳ್ಳಿ, ಪಕ್ಷಿ ಸಂಕುಲ ಮುಂತಾದವೂ ಇಲ್ಲಿಯ ಪರಿಸರದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.

ಜಲಪಾತದ ಅಣತಿ ದೂರದಲ್ಲಿ ದೈವಗಳಿಗೆ ಸಂಬಂಧಿಸಿದ ಕಲ್ಲು ಇದೆ. ಇಲ್ಲಿ ತೊಟ್ಟಿಲಾಕರದ ರಚನೆಯ ಕಲ್ಲು ಕೂಡ ಇದ್ದು ದೈವಿಕತೆಯ ಅಂಶವೂ ಕಂಡುಬರುವುದರಿಂದ ಪ್ರವಾಸಿಗರು ಎಚ್ಚರಿಕೆ ವಹಿಸಬೇಕಾಗುತ್ತದೆ. ಜಲಪಾತದ ಬಳಿ ತೀವ್ರ ಮಳೆ ಬೀಳುವುದರಿಂದ ಕಲ್ಲುಗಳೂ ಜಾರುತ್ತವೆ‌. ಜೊತೆಗೆ ಅರಣ್ಯ ಭಾಗವಾದುದರಿಂದ ಜಿಗಣೆಗಳ ಕಾಟವೂ ಇದೆ.

ದೈನಂದಿನ ಬದುಕಿನ ಒತ್ತಡದಿಂದ ಬೇಸತ್ತ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಲು ಹಚ್ಚಹಸಿರಾಗಿರುವ ರಮ್ಯ ಪರಿಸರದ ತಾಣಗಳಿಗೆ ಭೇಟಿ ನೀಡುವುದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ‌. ಪ್ರಾಕೃತಿಕ ಸೌಂದರ್ಯದ ಖಣಿಯಂತಿರುವ ಈ ಜಲಪಾತವೂ ಪ್ರವಾಸಿಗರ ಮೈಮನವನ್ನು ಅರಳಿಸುವುದಂತೂ ಖಚಿತ.

* “ಇತ್ತೀಚಿಗೆ ಜಲಪಾತ ನೋಡಲು ಬರುವವರ ಸಂಖ್ಯೆ ಅಧಿಕವಾಗಿದೆ. ಜಲಪಾತದ ಪಕ್ಕ ದೈವಗಳ ಕಲ್ಲು ಇರುವುದರಿಂದ ಪ್ರವಾಸಿಗರು ಸ್ಥಳವನ್ನು ಗಲೀಜು ಮಾಡಬಾರದು‌. ಸೂತಕದವರು ಇಲ್ಲಿಗೆ ಬರುವುದು ನಿಷಿದ್ಧ.”
-ಶಿವಪ್ರಸಾದ್ ಹಲ್ಗುಜಿ, ಸ್ಥಳೀಯರು.

* “ಜಲಪಾತವೂ ತುಂಬಾ ಸುಂದರವಾಗಿದೆ. ವಾರಂತ್ಯಗಳಲ್ಲಿ ಕುಟುಂಬ ಸಮೇತವಾಗಿ ಭೇಟಿ ನೀಡಲು ಇದು ಸೂಕ್ತ ಜಾಗ. ಇಲ್ಲಿ ಮನಸ್ಸು ಉಲ್ಲಾಸದಾಯಕವಾಗುವುದು ಖಂಡಿತ.”
– ದಯಾನಂದ ಹುದೇರಿ, ಪ್ರವಾಸಿಗ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.