ಕ್ಯಾನ್ಸರ್ ಪೀಡಿತೆಗೆ ಕೂದಲು ದಾನ ಮಾಡಿ ಮಾನವೀಯತೆ ಮೆರೆದ ಸುಳ್ಯದ ಯುವತಿ

Advt_Headding_Middle
Advt_Headding_Middle

 

ಕಾಯಿಲೆಯಿಂದ ನೊಂದವರ ಮುಖದಲ್ಲಿ ಮಂದಹಾಸ ಮೂಡಿಸಿದ ರೇಷ್ಮಾ

ಸುಳ್ಯದ ಹೆಣ್ಣು ಮಗಳೊಬ್ಬಳು ಕ್ಯಾನ್ಸರ್ ಪೀಡಿತ ಹುಡುಗಿಗೆ ನೀಡಲು ತನ್ನ ಕೂದಲು ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅನೇಕ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರಿಗೆ ಅವರ ಕೂದಲೆಂದರೆ ಅಚ್ಚುಮೆಚ್ಚು. ಕೆಲವರು ತಮ್ಮ ಕೂದಲನ್ನು ಬ್ಯೂಟಿ ಪಾರ್ಲರ್ ಗಳಲ್ಲಿ ಕತ್ತರಿಸಿ ಎಸೆದು ವ್ಯರ್ಥಮಾಡಿದರೆ ಮತ್ತೆ ಕೆಲವರು ತಮ್ಮ ಕೂದಲು ದಾನ ಮಾಡಿ ಸಮಸ್ಯೆಯಲ್ಲಿರುವ ಮಹಿಳೆಯರ ಅಥವಾ ಮಕ್ಕಳ ಮುಖದಲ್ಲಿ ಮಂದಹಾಸ ತರುತ್ತಾರೆ.

ಈಗ ಮಂಗಳೂರಿನ ಶಕ್ತಿನಗರ ನಿವಾಸಿಯಾಗಿರುವ ರೇಷ್ಮಾ ರಾಮದಾಸ್ ಅವರು ಕ್ಯಾನ್ಸರ್ ಪೀಡಿತ ಹುಡುಗಿ ಅಥವಾ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿಸಲು ತನ್ನ ಸುಂದರವಾದ ಕೂದಲನ್ನು ದಾನ ಮಾಡಿದ್ದಾರೆ.

”ಎರಡು ವರ್ಷಗಳ ಹಿಂದೆ, ನನ್ನ ಸ್ನೇಹಿತೆ ತನ್ನ ಕೂದಲನ್ನು ದಾನ ಮಾಡಿದ್ದಳು, ಆಕೆಯನ್ನು ನೋಡಿ ಪ್ರೇರಣೆಗೊಂಡು ನಾನು ಕೂಡ ಕೂದಲು ದಾನ ಮಾಡಿದ್ದೇನೆ. ಕೂದಲನ್ನು ಹೇಗೆ ದಾನ ಮಾಡಬಹುದು ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ನನಗೆ ತಿಳಿದಿರಲಿಲ್ಲ. ನನ್ನ ಕೂದಲು ಉದ್ದ ಇರುವುದರಿಂದ ದಾನ ಮಾಡಲು ಬಯಸುತ್ತಿದ್ದೆ. ನನ್ನ ಪತಿ ರಾಮದಾಸ್ ಅವರು ಹೇರ್ ಬ್ಯಾಂಕ್ ಅನ್ನು ಶಿಫಾರಸು ಮಾಡಿದರು, ಇದು ನನ್ನ ಕೂದಲನ್ನು ದಾನ ಮಾಡಲು ಒಂದು ಸುವರ್ಣಾವಕಾಶವಾಗಿತ್ತು, ಇದಕ್ಕಾಗಿ ನಾನು ಸಂತೋಷದಿಂದ ಒಪ್ಪಿಕೊಂಡೆ. ಕ್ಯಾನ್ಸರ್ ರೋಗಿಗಳಿಗೆ ನಾವು ಏನನ್ನಾದರೂ ನೀಡಿದಾಗ ಅವರು ಹೇಗೆ ಸಂತೋಷ ಪಡುತ್ತಾರೆ ಎಂಬ ವೀಡಿಯೊಗಳನ್ನು ನಾನು ನೋಡಿದ್ದೆ. ಹೀಗಾಗಿ ನನ್ನ ಕೂದಲನ್ನು ತ್ರಿಶೂರ್‌ನಲ್ಲಿರುವ ಹೇರ್ ಬ್ಯಾಂಕ್‌ಗೆ ದಾನ ಮಾಡಲು ನಿರ್ಧರಿಸಿದೆ. ಈ ನಿರ್ಧಾರದಲ್ಲಿ ನನ್ನ ಪತಿ ನನ್ನನ್ನು ಬೆಂಬಲಿಸಿದರು. ಕ್ಯಾನ್ಸರ್ ರೋಗಿಯ ಮುಖದಲ್ಲಿ ಮಂದಹಾಸವನ್ನು ತರುವುದಕ್ಕಾಗಿ ನನ್ನ ಕೂದಲನ್ನು ದಾನ ಮಾಡಿರುವುದರಿಂದ ನಾನು ತುಂಬಾ ಖುಷಿಪಟ್ಟಿದ್ದೇನೆ ಎಂದು ರೇಷ್ಮಾ ಸುದ್ದಿಗೆ ತಿಳಿಸಿದ್ದಾರೆ.

ಆರ್ಥಿಕವಾಗಿ ಸಹಾಯ ಮಾಡುವುದು ಸಾಧ್ಯವಿರಲಿಲ್ಲ. ಆದರೂ ನನ್ನ ಕೈಯಿಂದ ಸಾಧ್ಯವಾದದ್ದನ್ನು ಮಾಡೋಣ ಎಂದು ಯೋಚಿಸಿ ಇದನ್ನು ಮಾಡಿದ್ದೇನೆ. ಪತಿ ಪೂರ್ಣ ಬೆಂಬಲವಾಗಿ ನಿಂತರು ಎನ್ನುತ್ತಾರೆ ರೇಶ್ಮಾ.

ರೇಷ್ಮಾ ತನ್ನ ಉದ್ದವಾದ ಕೇಶರಾಶಿಯ ಮುಕ್ಕಾಲು ಭಾಗವನ್ನು ಕತ್ತರಿಸಿ ನೀಡಿದ್ದಾರೆ. ಅವರ ಈ ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಕಾರಣವಾಗುತ್ತಿದೆ.

ರೇಷ್ಮಾ ಅವರು ಸುಳ್ಯದ ಕೇರ್ಪಳ ನಿವಾಸಿ ರಾಮ ಪಾಟಾಳಿಯವರ ಪುತ್ರಿ. ಪತಿ ರಾಮದಾಸ್ ಅವರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.