Breaking News

ಮರೆಯಲಾಗದ ಮಾಣಿಕ್ಯ ಯು.ಸು.ಗೌ.

Advt_Headding_Middle

 

ಸರಿ ಸುಮಾರು ೨೦೦೯ನೇ ಇಸವಿಯ ಮಧ್ಯಭಾಗ ಐವರ್ನಾಡು ಪ್ರೌಢಶಾಲೆಯಲ್ಲಿ ಹೊಸದಾಗಿ ಪಿ.ಯು.ಸಿ ತರಗತಿಗಳನ್ನು ಪ್ರಾರಂಭಿಸಿ ಆಗಿನ್ನು ವರುಷದ ಹರೆಯವೂ ಕಳೆದಿಲ್ಲ ಎಂದು ಕಾಣಿಸುತ್ತದೆ. ಗ್ರಾಮದಲ್ಲೊಂದು ಕಾಲೇಜಿನ ಪ್ರಾರಂಭದಿಂದಾಗಿ ಇಡೀ ಗ್ರಾಮದ ಶಿಕ್ಷಣಾಸಕ್ತರಿಗೆ ಹೊಸ ಹುಮ್ಮಸ್ಸು ತುಂಬಿದ ಕಾಲವದು.

ಆಗ ನಾನು ಅದೇ ಹೈಸ್ಕೂಲ್‌ನ ಒಂಭತ್ತನೆ ತರಗತಿಯ ವಿದ್ಯಾರ್ಥಿಯಾಗಿದ್ದೆ. ಆಗ ಅಲ್ಲಿದ್ದುದು ಹೈಸ್ಕೂಲ್‌ಗೆ ಸೇರಿದ ಒಂದೇ ಕಟ್ಟಡ. ಆ ಕಟ್ಟಡದ ನೆಲ ಮಹಡಿಯಲ್ಲಿ ನಮ್ಮ ಹೈಸ್ಕೂಲ್ ತರಗತಿಗಳು ನಡೆಯುತ್ತಿದ್ದರೆ ಮೇಲ್ಗಡೆ ತಗಡಿನ ಮೇಲ್ಚಾವಣಿ ಹಾಸಿದ ಎರಡು ಸಣ್ಣ ಕೊಠಡಿಗಳನ್ನು ನಿರ್ಮಿಸಿ ಪಿ.ಯು.ಸಿ ಗೆ ಮೀಸಲಿರಿಸಲಾಗಿತ್ತು. ಇದು ಕೇವಲ ವಿಧ್ಯಾರ್ಥಿಗಳಿಗೆ ಮಾತ್ರವಲ್ಲದೆ ಶಿಕ್ಷಕರಿಗೂ ಕೂಡ ಹೊಸತನದ ಅನುಭವ . ಅಂದು ಕಾಲೇಜಿಗೆ ಸೇರಿದ ಬಹುತೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮದೇ ಹೈಸ್ಕೂಲಿನಲ್ಲಿ ತೇರ್ಗಡೆ ಹೊಂದಿದ ಹಿರಿಯ ವಿಧ್ಯಾರ್ಥಿಗಳಾಗಿದ್ದರೂ ಸಹ ಭೋದನೆಗೆ ನೇಮಕಗೊಂಡ ಬಹುತೇಕ ಉಪನ್ಯಾಸಕ ವರ್ಗ ನಮ್ಮ ಹೆಚ್ಚಿನ ಶಿಕ್ಷಕರಿಗೂ ಹೊಸಮುಖಗಳೇ, ಆದರೆ ಅವರೆಲ್ಲರೂ ಆಗ ಸ್ಥಳಾವಕಾಶದ ಕೊರತೆಯಿಂದಾಗಿ ಒಟ್ಟಿಗೆ ಒಂದೇ ಕೊಠಡಿಯಲ್ಲಿ ಕೂರಬೇಕಿತ್ತು. ಇದು ಅಂದು ಅವರೆಲ್ಲರಿಗೆ ಬಹಳ ತ್ರಾಸದಾಯಕವಾಗಿ ಕಂಡಿದ್ದನ್ನು ನಾನು ಬಹಳ ಬಾರಿ ಗಮನಿಸಿದ್ದೇನೆ. ನನಗೆ ನೆನಪಿರುವಂತೆ ಆಗ ಕಾಲೇಜಿನ ಪ್ರಥಮ ಪ್ರಾಂಶುಪಾಲರಾಗಿ ಮೈಸೂರು ಮೂಲದ ಶಿವಣ್ಣ ಎಂಬವರು ಅಧಿಕಾರವಹಿಸಿಕೊಂಡಿದ್ದರು. ಅಲ್ಲಿನ ಉಪನ್ಯಾಸಕ ವೃಂದದಲ್ಲಿ ನನಗೆ ಆಗ ಒಂದು ಸ್ವಲ್ಪ ಪರಿಚಿತರಂತೆ ಕಂಡದ್ದು ಯು.ಸು.ಗೌ ಅವರು. ಶ್ರೀಯುತರುಅದಾಗಲೇ ಸಾಹಿತಿಯಾಗಿ ಬಹಳಷ್ಟು ಹೆಸರುಮಾಡಿದ್ದರು. ನಾನು ಯು.ಸು.ಗೌ ಅವರನ್ನು ಅದುವರೆಗೆ ಎಂದಿಗೂ ಮುಖತಃ ಕಂಡಿಲ್ಲವಾದರೂ ಅವರ ಹಲವಾರು ಚುಟುಕು ಕವನಗಳನ್ನು , ಅರೆಭಾಷೆ ಲೇಖನಗಳನ್ನು ಓದಿಕೊಂಡಿದ್ದೆ.
ಬಾಲ್ಯದಿಂದಲೇ ನನ್ನೊಳಗೆ ಸುಪ್ತವಾಗಿ ಅಡಗಿದ್ದ ಸಾಹಿತ್ಯಾಭಿರುಚಿ ಮನೋಸ್ಥಿತಿ, ಕತೆ, ಕವನ ಬರೆಯುವ ಗೀಳು , ನನ್ನ ಬರಹಗಳನ್ನು ಯಾರಾದರೂ ಸೂಕ್ತ ವ್ಯಕಿಗೆ ತೋರಿಸಿ ಮಾರ್ಗದರ್ಶನ ಪಡೆಯಬೇಕೆಂಬ ಹುಚ್ಚು ಆಸೆಗೆ ಈಗ ಯು.ಸು.ಗೌ ರನ್ನು ಕಂಡ ಮೇಲಂತು ಮತ್ತಷ್ಟು ರೆಕ್ಕೆ, ಪುಕ್ಕ ಬಂದಿತ್ತು. ಹೇಗಾದರೂ ಸರಿಯೆ ನಾನು ಬರೆದಿರುವ ಹತ್ತಾರು ಕವನಗಳನ್ನು ಯು.ಸು.ಗೌ ರಿಗೆ ತೋರಿಸಿ ಮಾರ್ಗದರ್ಶನ ಪಡೆಯಬೇಕೆಂಬ ನನ್ನಲ್ಲಿ ಮೂಡಿತ್ತು. ಆದರೂ ಒಂಭತ್ತನೇ ತರಗತಿಯಲ್ಲಿ ಓದುತ್ತಿರುವ ನಾನು ಪಿ.ಯು ಉಪನ್ಯಾಸಕರೊಬ್ಬರಲ್ಲಿ ಮಾತನಾಡುವುದು ಹೇಗೆ ? ಮಾತನಾಡ ಬಹುದಾದರೂ ನಾನು ಹೇಳಬೇಕಿರುವ ಈ ವಿಚಾರವನ್ನು ಹೇಳುವುದು ಹೇಗೆ? ನಾನು ಹೇಳಿದ ಕೂಡಲೆ ಅವರು ನನ್ನ ಬರಹಗಳನ್ನು ತಿದ್ದಿ ಸರಿಪಡಿಸಿ ಕೊಡಬಹುದೆ? ಅಷ್ಟೊಂದು ತಾಳ್ಮೆ ಅವರಿಗಿರಬಹುದೆ? ಅವರೆಲ್ಲ ದೊಡ್ಡ ಸಾಹಿತಿಗಳು ನನ್ನ ಈ ಅಪಕ್ವ ಬರಹದ ಬಗ್ಗೆ ಏನೆಂದು ಕೊಂಡಾರು? ಎಂಬೆಲ್ಲ ಹುಡುಗುತನದ ಯೋಚನೆಗಳು ನನ್ನ ಮನದ ತುಂಬೆಲ್ಲ ತುಂಬಿತ್ತು.
ಅದ್ಹೇಗೋ ಒಂದು ದಿನ ನಮ್ಮೆಲ್ಲ ಶಿಕ್ಷಕರು ಶಾಲೆಯಲ್ಲಿ ಯಾವುದೋ ಸಭೆಯ ಆಯೋಜನೆಯ ತರಾತುರಿಯಲ್ಲಿರುವಾಗ ಯು.ಸು.ಗೌ. ಒಬ್ಬರೇ ಉಪನ್ಯಾಸಕರ ಕೊಠಡಿಯಲ್ಲಿ ಕುಳಿತು ಯಾವುದೋ ಪುಸ್ತಕವನ್ನು ಆಳವಾಗಿ ಓದುತ್ತಿರುವುದನ್ನು ಗಮನಿಸಿದ ನಾನು ಇದೇ ತಕ್ಕ ಸಂದರ್ಭ ಎಂದು ನನ್ನ ಬ್ಯಾಗಿನ ಮೂಲೆಯಲ್ಲಿ ಬಹಳದಿನಗಳಿಂದ ಯು.ಸು.ಗೌ ಗಾಗಿ ಕಾಯುತಿದ್ದ ನನ್ನ ಸ್ವರಚಿತ ಕವನ ಪುಸ್ತಕವನ್ನು ತೆಗೆದುಕೊಂಡು ನೇರವಾಗಿ ಬಂದು ಯು.ಸು.ಗೌ ಎದುರುನಿಂತೆ, ನನ್ನನ್ನು ಗಮನಿಸಿದ ಯು.ಸು.ಗೌ ” ಏನಪ್ಪ ಏನು ಬೇಕು? ” ಎಂದರು. ನಾನು ನನ್ನ ಕೈಯಲ್ಲಿದ್ದ ಸ್ವರಚಿತ ಕವನ ಪುಸ್ತಕವನ್ನು ಅವರ ಮುಂದಿಟ್ಟು “ಸರ್, ನಾನು ಕೆಲವೊಂದು ಪದ್ಯ ಬರ್ದಿದ್ದೇನೆ, ಅದ್ರಲ್ಲಿ ಕೆಲವನ್ನು ಇನ್ನೂ ಪೂರ್ತಿ ಮಾಡಿಲ್ಲ, ಕೆಲವಕ್ಕೆ ಶೀರ್ಷಿಕೆ ಕೊಟ್ಟಿಲ್ಲ, ನೀವು ಅವೆಲ್ಲವನ್ನು ನೋಡಿ ಏನೆಲ್ಲ ಸರಿ ತಪ್ಪು ಉಂಟು ಹೇಳ್ಬಹುದಾ? ಸರ್ ” ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟೆ. ಆಯ್ತು ಎಂದವರೆ ಪುಸ್ತಕವನ್ನು ಒಮ್ಮೆ ಕೈಗೆತ್ತಿಕೊಂಡು ಎಲ್ಲಾ ಪುಟವನ್ನು ತಿರುವಿನೋಡಿ, ” ನೀನು ಒಂದು ಕೆಲ್ಸಮಾಡು ನನ್ಗೆ ಈಗ ಕ್ಲಾಸ್ ಉಂಟು, ಈ ಪುಸ್ತಕ ಇಲ್ಲೇ ಇಟ್ಟು ಹೋಗು ನಾನು ಕ್ಲಾಸ್ ಮುಗ್ಸಿ ಬಂದು ಇದನ್ನು ನೋಡಿ ಆಮೇಲೆ ಹೇಳ್ತೇನೆ ” ಅಂದ್ರು. ನಾನು ಆಯ್ತು ಎಂದು ಪುಸ್ತಕವನ್ನು ಅಲ್ಲೇ ಬಿಟ್ಟು ಅಲ್ಲಿಂದ ನೇರವಾಗಿ ಸಭೆ ನಡೆಯುತ್ತಿದ್ದಲ್ಲಿಗೆ ಹೋಗಿ ಗೆಳೆಯರೊಂದಿಗೆ ಕುಳಿತುಬಿಟ್ಟೆ. ಆದರೂ ನನ್ನ ಮನಸ್ಸು ನನ್ನ ಪುಸ್ತಕದ ಮೇಲೆಯೇ ಇತ್ತು. ಸರ್ ಅದನ್ನು ಓದಬಹುದೇ? ಸರಿ ತಪ್ಪು ತಿದ್ದ ಬಹುದೇ ಎಂಬೆಲ್ಲ ಅನುಮಾನ ಸದಾ ಮೂಡುತಿತ್ತು. ಸಭೆ ಮುಕ್ತಾಯವಾಗಿ ಹೈಸ್ಕೂಲಿನವರನ್ನು ಬಿಡುವಾಗ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ತರಗತಿಗಳನ್ನು ಮುಗಿಸಿ ಮನೆಯದಾರಿ ಹಿಡಿದಿದ್ದರು. ಯು.ಸು.ಗೌ ಸರ್ ಕೂಡ ಹೊರಟುಹೋಗಿದ್ದರು. ನಾನು ನೇರವಾಗಿ ಅವರು ಕುಳಿತುಕೊಳ್ಳುವ ಟೇಬಲ್ ಬಳಿ ಹೋಗಿ ನೋಡಿದಾಗ ನನ್ನ ಕವನ ಪುಸ್ತಕ ಅಲ್ಲಿಯೇ ಟೇಬಲ್ ಮೇಲೆ ಇತ್ತು ಆದರೆ ಈ ಬಾರಿ ಮಡಚಿಟ್ಟ ಸ್ಥಿತಿಯಲ್ಲಿತು. ಅದನ್ನು ತೆಗೆದುಕೊಂಡು ನೇರವಾಗಿ ಬ್ಯಾಗಿನಲ್ಲಿ ತುರುಕಿಕೊಂಡು ಮನೆಯದಾರಿ ಹಿಡಿದೆ. ಮನೆಗೆ ಬಂದು ಬ್ಯಾಗಿನಿಂದ ಆ ಪುಸ್ತಕವನ್ನು ತೆಗೆದು ನೋಡಿದಾಗ ಅದರಲ್ಲಿ ಕೆಲವು ಕಡೆ ಕೆಂಪು ಶಾಹಿಯಿಂದ ತಿದ್ದಿದ್ದರು, ಕೆಲವು ಕಡೆ ಪ್ರಾಸಗಳನ್ನು ಮರು ಜೋಡಿಸಿದ್ದರು ಅದಕ್ಕಿಂತಲೂ ಹೆಚ್ಚಾಗಿ ನನ್ನ ಒಂದು ಕವನಕ್ಕೆ ಅವರು “ವಾಸ್ತವ” ಎಂಬ ತಮ್ಮದೇ ಆದ ಶೀರ್ಷಿಕೆಯನ್ನು ನೀಡಿದ್ದರು ! ನನಗೆ ಇಷ್ಟು ಸಾಕಿತ್ತು, ನನ್ನ ನಿರೀಕ್ಷೆಯೂ ಕೂಡ ಇದೇ ಆಗಿತ್ತು. ಮರುದಿನದ ಭೇಟಿಯಲ್ಲಿ ಅವರು ನನ್ನ ಕವನಗಳ ಬಗ್ಗೆ ಅದರಲ್ಲಾಗಬೇಕಿರುವ ಅಮೂಲಾಗ್ರ ಬದಲಾವಣೆಗಳ ಬಗ್ಗೆ ಮಾರ್ಗದರ್ಶನ ನೀಡಿದರು. ಅದಾದ ಕೆಲವೇ ದಿನಗಳಲ್ಲಿ ಬೆಳ್ಳಾರೆ ಪದವಿಪೂರ್ವ ಕಾಲೇಜಿನಲ್ಲಿ ಅವರು ತಮ್ಮ ನೇತೃತ್ವದಲ್ಲಿ ಆಯೋಜಿಸಿದ್ದ “ಯುವ ಕವಿಗೋಷ್ಟಿ” ಯಲ್ಲಿ ಭಾಗವಹಿಸಲು ಅವಕಾಶ ನೀಡಿದರು. ನಾನು ಆ ಕವಿಗೋಷ್ಟಿಯಲ್ಲಿ ಭಾಗವಹಿಸಿ ಅವರೇ ಶೀರ್ಷಿಕೆ ನೀಡಿದ “ವಾಸ್ತವ” ಎಂಬ ಕವನವನ್ನು ವಾಚಿಸಿದ್ದು ನನಗೆ ಇಂದಿಗೂ ನೆನಪಿದೆ.
ಮುಂದೆ ಹತ್ತನೇ ತರಗತಿಯನ್ನು ತೇರ್ಗಡೆಹೊಂದಿದ ನಂತರ ನಾನು ವಿಜ್ಞಾನ ವಿಭಾಗವನ್ನು ಆಯ್ದುಕೊಂಡು ಬೆಳ್ಳಾರೆ ಪದವಿಪೂರ್ವ ಕಾಲೇಜಿಗೆ ಸೇರಿದೆ. ಈ ಹಿಂದೆ ನನ್ನ ಹೈಸ್ಕೂಲು ದಿನಗಳಲ್ಲಿ ಯು.ಸು.ಗೌ ರಿಂದ ದೊರೆಯುತಿದ್ದ ಮಾರ್ಗದರ್ಶನ ಈಗ ಇಲ್ಲಿ ದೊರಕುತ್ತಿರಲಿಲ್ಲ. ಆದರೂ ಪ್ರಥಮ ಪಿ.ಯು.ಸಿ ಯಲ್ಲಿರುವಾಗ ನಾನು ಬರೆದ ಕೆಲವು ಲೇಖನಗಳು ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಯಿತು. ನಾನು ದ್ವಿತೀಯ ಪಿ.ಯು.ಸಿಗೆ ತೇರ್ಗಡೆಹೊಂದಿದ ಕಾಲದಲ್ಲಿ ಚಮತ್ಕಾರವೋ ಎಂಬಂತೆ ಮತ್ತದೇ ಯು.ಸು.ಗೌ ಸರ್ ಪ್ರಾಂಶುಪಾಲರಾಗಿ ಪದೋನ್ನತಿಹೊಂದಿ ನಮ್ಮ ಬೆಳ್ಳಾರೆ ಕಾಲೇಜಿಗೆ ನಿಯುಕ್ತಿಗೊಂಡರು. ಮಾತ್ರವಲ್ಲ ಆಗ ಆಂಗ್ಲಭಾಷ ಉಪನ್ಯಾಸಕ ಸ್ಥಾನ ತೆರವಾಗಿದ್ದರಿಂದ ಆ ಹುದ್ದೆಯ ಹೆಚ್ಚುವರಿ ಹೊಣೆಯು ಕೂಡ ಯು.ಸು.ಗೌ ಹೆಗಲಮೇಲೇರಿತು. ಈಗ ಮೊಟ್ಟ ಮೊದಲಬಾರಿಗೆ ನಾನು ಪೂರ್ಣ ಪ್ರಮಾಣದಲ್ಲಿ ಯು.ಸು.ಗೌ ಅವರ ಶಿಷ್ಯನಾದೆ ! ಅವರ ಅದ್ಭುತ ಪ್ರವಚನ ಶೈಲಿ ಹಾಗೂ ವಿಶ್ಲೇಷನಾತ್ಮಕ ವಿವರಣೆಗಳು ಮನಸಿಗೆ ನಾಟುವಂತದ್ದು, ಆಂಗ್ಲ ಭಾಷಾ ತರಗತಿಯಾದರೂ ನಮ್ಮ ಅಂದಿನ ಪಠ್ಯ ಪುಸ್ತಕದಲ್ಲಿ ಪಿ. ಲಂಕೇಶರ “ಅವ್ವ” ಕವನದ ಇಂಗ್ಲೀಷ್‌ಗೆ ತುರ್ಜಮೆ ಮಾಡಿದ “ಮೈ ಮದರ್ ಬ್ಲ್ಯಾಕ್ ಅರ್ತ್ ” ಕವನ ಹಾಗೂ ಕುವೆಂಪು ರವರ “ಧ್ರುವತಾರೆ” ಕವನಗಳು ಬಂದಾಗ ಯು.ಸು.ಗೌ ಅವರ ಕವಿ ಹೃದಯ ಮತ್ತಷ್ಟು ಜಾಗ್ರತವಾಗುತಿತ್ತು, ಹೆಚ್ಚಿನ ವರ್ಣನಾತ್ಮಕ ವಿವರಣೆ ನಮಗೆ ಲಭ್ಯವಾಗುತಿತ್ತು.
ಮುಂದೆ ನಾನು ಪದವಿ ತರಗತಿಯಲ್ಲಿದ್ದಾಗಲೂ ಹಲವಾರು ಕವಿಗೋಷ್ಟಿಗಳಲ್ಲಿ, ಸಮಾರಂಭಗಳಲ್ಲಿ ನನಗೆ ಯು.ಸು.ಗೌ ಅವರೊಂದಿಗೆ ಬೆರೆಯುವ , ಸಲಹೆಗಳನ್ನು ಸ್ವೀಕರಿಸುವ ಅವಕಾಶದೊರಕಿತ್ತು. ಶಿಕ್ಷಣದ ನಂತರ ಉದ್ಯೋಗವನ್ನರಸಿ ನಾನು ಸುಳ್ಯ ಜೂನಿಯರ್ ಕಾಲೇಜಿನ ಕದ ತಟ್ಟಿದಾಗಲೂ ಕಾಕತಾಳೀಯವೆಂಬಂತೆ ಶ್ರೀಯುತರ ಧರ್ಮ ಪತ್ನಿ ಪದ್ಮ ಮೇಡಂ ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿದಾಗ ತೆರವಾದ ಹುದ್ದೆ ನನಗೆ ಮೊದಲಬಾರಿಗೆ ಉಪನ್ಯಾಸಕ ಎಂದು ಕರೆಯಿಸಿಕೊಳ್ಳುವ ಅವಕಾಶ ನೀಡಿತು. ಅವರ ನಿವೃತಿಯ ನಿಮಿತ್ತ ಹಮ್ಮಿಕೊಂಡ ಔತಣಕೂಟಕ್ಕೆ ಒಬ್ಬ ಶಿಷ್ಯನಾಗಿ, ಒಂದು ಕಾಲೇಜಿನ ಉಪನ್ಯಾಸಕನಾಗಿ ಭಾಗವಹಿಸಲು ತುಂಬಾ ಹೆಮ್ಮೆಯನಿಸಿತು. ನಾ ಮೆಚ್ಚಿದ ಅದ್ಭುತ ಶಿಕ್ಷಕ ,ಮರೆಯಲಾಗದ ಮಾಣಿಕ್ಯ ಇಂದು ಅಗಣಿತ ತಾರಾಗಣಗಳ ನಡುವೆ ಧ್ರುವ ತಾರೆಯಾಗಿ ಶಾಶ್ವತವಾಗಿ ನಿಶ್ಚಲವಾಗಿ ಶೋಭಿಸಿತ್ತಿದ್ದಾರೆ .ಅವರು ಬರೆದಿರುವ “ಬೊನ್ಸಾಯಿ ಬದುಕು” ಎನ್ನುವ ಒಂದು ಚುಟುಕು ಕವನ ಇಂದಿಗೂ ನನಗೆ ಜೀವನದ ಸಾರವನ್ನು ನೆನಪಿಸುತ್ತಿದೆ.

ಪ್ರದೀಪ್ ಕೊಯಿಲ , ಐವರ್ನಾಡು
ಉಪನ್ಯಾಸಕರು , ರೋಟರಿ ಪಿ.ಯು.ಕಾಲೇಜು ಮಿತ್ತಡ್ಕ ಸುಳ್ಯ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.