ಅಲ್ಪಸಂಖ್ಯಾತರ ಸಹಕಾರ ಸಂಘದ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣಾ ವಿಚಾರಕ್ಕೆ ಸಂಬಂಧಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎನ್.ಜಯಪ್ರಕಾಶ್ ರೈಯವರ ನಿರ್ದೇಶನದ ಹಾಗೂ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ.ಯವರ ಸೂಚನೆ ಮೇರೆಗೆ ನಾನು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿಯೇ ಉಪಾಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷದ ಸೂಚನೆ ಇಲ್ಲದೆ ಸಲ್ಲಿಸಿದ್ದಲ್ಲ ಎಂದು ಅಲ್ಪಸಂಖ್ಯಾತ ಸಹಕಾರಿ ಸಂಘದ ಉಪಾಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿ, ಚುನಾವಣೆಯಲ್ಲಿ ಪರಾಭವಗೊಂಡಿರುವ ಕಾಂಗ್ರೆಸ್ ನ ಶಾಫಿ ಕುತ್ತಮೊಟ್ಟೆ ಸುದ್ದಿಗೆ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಇಂದು ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬಳಿಕ ಬ್ಲಾಕ್ ಅಧ್ಯಕ್ಷರು ನೀಡಿರುವ ಹೇಳಿಕೆ ನನಗೆ ಬೇಸರ ತರಿಸಿದೆ. ಅಧ್ಯಕ್ಷ- ಉಪಾಧ್ಯಕ್ಷ ತೆ ವಿಚಾರ ಬಂದಾಗ ಆಕಾಂಕ್ಷಿಗಳ ಸಂಖ್ಯೆಯು ಬೆಳೆದಿತ್ತು. ಈ ಬಗ್ಗೆ ಬ್ಲಾಕ್ ಅಧ್ಯಕ್ಷರು ಮಾತುಕತೆಗಾಗಿ ನಗರಾಧ್ಯಕ್ಷರಿಗೆ ಈ ಕುರಿತು ಜವಾಬ್ದಾರಿ ನೀಡಿರುತ್ತಾರೆ. ಅದರಂತೆ ಎಲ್ಲ ಪ್ರಕ್ರಿಯೆ ನಡೆದು ಚುನಾವಣಾ ದಿನ ಕಾಂಗ್ರೆಸ್ ನಗರಾಧ್ಯಕ್ಷರು ಸೇರಿದಂತೆ ಮೂವರು ವೀಕ್ಷಕರು ಚುನಾವಣಾ ಸ್ಥಳದಲ್ಲಿ ಇದ್ದರು. ಇಷ್ಟೆಲ್ಲ ಆಗಿದ್ದರೂ ಈಗ ಬ್ಲಾಕ್ ಅಧ್ಯಕ್ಷರು ಅಭ್ಯರ್ಥಿಯ ಆಯ್ಕೆ ಪಕ್ಷದ ತೀರ್ಮಾನ ಆಗಿರಲಿಲ್ಲ ಎಂದು ಹೇಳುವುದು ಸರಿಯಲ್ಲ. ಮುಂದಿನ ಪಕ್ಷದ ಸಭೆಯಲ್ಲಿ ಈ ವಿಷಯದ ಬಗ್ಗೆ ನಾನು ಪ್ರಶ್ನಿಸುತ್ತೇನೆ. ಮತ್ತು ಎಲ್ಲ ವಿಷಯದ ಸತ್ಯಾಸತ್ಯತೆಯ ಬಗ್ಗೆ ನಗರ ಕಾಂಗ್ರೆಸ್ ಅಧ್ಯಕ್ಷರು ಪ್ರತಿಕ್ರಿಯಿಸಲಿ ಎಂದು ಶಾಫಿ ಕುತ್ತಮೊಟ್ಟೆಯವರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.