ಮನೆ ಮನೆಗೆ ತೆರಳಿ ಮೊಳಗುತ್ತಿದೆ ಮಂಡಳಿ ಸದಸ್ಯರಿಂದ ಭಜನಾ ಝೇಂಕಾರ
ಡಿ.29 ಮತ್ತು 30 ಬೆಳ್ಳಿ ಹಬ್ಬ ಆಚರಣೆ, ಏಕಾಹ ಭಜನೆ
ಮರ್ಕಂಜದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಇದೇ ಡಿ.29 ಮತ್ತು 30ರಂದು ಬೆಳ್ಳಿ ಹಬ್ಬ ಕಾರ್ಯಕ್ರಮ ಮತ್ತು ಏಕಾಹ ಭಜನೆ ಕಾರ್ಯಕ್ರಮ ನಡೆಯಲಿದ್ದು, ಮಂಡಳಿ ಸದಸ್ಯರಿಂದ ಈಗಾಗಲೇ ಮನೆ ಮನೆಗೆ ತೆರಳಿ ಭಜನಾ ಕಾರ್ಯಕ್ರಮ ನಗರ ಭಜನೆ ನಡೆಯುತ್ತಿದೆ.
1992ರಲ್ಲಿ ನಿರಂತರ ಭಜನಾ ಸೇವೆಯೊಂದಿಗೆ ಆರಂಭವಾದ ಭಜನಾ ತಂಡ 1995ರಲ್ಲಿ ಜೀರ್ಣೋದ್ಧಾರ ರದ ಬಳಿಕ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಎಂಬ ಹೆಸರಿನಿಂದ ಪ್ರತಿ ಶುಕ್ರವಾರ ರಾತ್ರಿ ಕಾಲಮಿತಿಯಲ್ಲಿ ಭಜನಾ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರತಿ ವರ್ಷ ಆಹ್ವಾನಿತ ತಂಡಗಳಿಂದ ಏಕಾಹ ಭಜನೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಗಳನ್ನು ದೇವಾಲಯದ ಸಮಿತಿಗಳೊಂದಿಗೆ ಸೇರಿಕೊಂಡು ನಡೆಸುತ್ತಿದ್ದಾರೆ ಅಲ್ಲದೇ ವಾರ್ಷಿಕ ಜಾತ್ರೋತ್ಸವ, ಶರನ್ನವರಾತ್ರಿ, ಸೋಣ ಶನಿವಾರ ಮುಂತಾದ ದೇವಾಲಯದ ವತಿಯಿಂದ ನಡೆಸಿಕೊಂಡು ಬರುವ ಕಾರ್ಯಕ್ರಗಳಲ್ಲಿ ಸಹಭಾಗಿತ್ವದಲ್ಲಿ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ.
ಏಕಾಹ ಭಜನೆಯ ಪ್ರಯುಕ್ತ ಕಳೆದ 24 ವರ್ಷಗಳಿಂದ ನಗರ ಭಜನೆ ಮೂಲಕ ಮನೆ ಮನೆ ತೆರಳಿ ಭಜನಾ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅಲ್ಲದೇ ಭಜನಾ ಮಂಡಳಿಯ ವತಿಯಿಂದ ದೇವಸ್ಥಾನಕ್ಕೆ ಜನರೇಟರ್, ಗ್ರೈಂಡರ್ ಮುಂತಾದ ಅವಶ್ಯಕ ಸಾಮಾಗ್ರಿಗಳನ್ನು ನೀಡಿದ್ದಾರೆ. 2005ರಲ್ಲಿ ವಿಜ್ರಂಭಣೆಯಿಂದ ದಶಮಾನೋತ್ಸ ನಡೆದಿದೆ.
ಈಗಾಗಲೇ ರಚನೆಗೊಂಡಿರುವ ಬೆಳ್ಳಿ ಹಬ್ಬ ಆಚರಣಾ ಸಮಿತಿ, ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಅನ್ನಪೂರ್ಣ ಸಮಿತಿ ಹಾಗೂ ಊರ ಪರವೂರ ಭಕ್ತಾಧಿಗಳ ಸಹಕಾರದಲ್ಲಿ ನಡೆಯುವ ಬೆಳ್ಳಿ ಹಬ್ಬ ಆಚರಣೆಯ ಪ್ರಯುಕ್ತ ಚಂಡಿಕಾಯಾಗ ಸೇರಿದಂತೆ ವಿವಿಧ ಕಾರ್ಯಕ್ರಮ ಗಳು ಡಿ.29ರಂದು ನಡೆಯಲಿದ್ದು, ಡಿ.30 ಸೂರ್ಯೋದಯ ದಿಂದ ಡಿ.31 ಸೂರ್ಯೋದಯ ದವರೆಗೆ ಏಕಾಹ ಭಜನೆ ನಡೆಯಲಿದೆ. ಒಟ್ಟಾಗಿ ಪಂಚಸ್ಥಾಪನೆಗಳ ಊರು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.