ನ್ಯಾಯಕ್ಕಾಗಿ ವಿ.ಹಿಂ.ಪ. ಮುಖಂಡ ಶರಣ್ ಪಂಪ್ ವೆಲ್ ಜತೆ ಸುಳ್ಯಕ್ಕೆ ಬಂದ ಆಸಿಯಾ
ಕೆಲ ತಿಂಗಳ ಹಿಂದೆ ಸುದ್ದಿ ಮಾಡಿದ್ದ ಕಟ್ಟೆಕ್ಕಾರ್ ಖಲೀಲ್ ಹಾಗೂ ಆಸಿಯಾ ಪ್ರಕರಣ ಮತ್ತೆ ಸುದ್ದಿಯಾಗಿದ್ದು ಇಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಜತೆ ನ್ಯಾಯಕ್ಕಾಗಿ ಪೋಲೀಸ್ ಠಾಣೆಗೆ ಹಾಜರಾಗಿದ್ದಾಳೆ. ಅಲ್ಲಿ ಸುದೀರ್ಘ ಚರ್ಚೆಯ ಬಳಿಕ ಗಂಡನ ಸಹೋದರನ ಮೇಲೆ ಪೋಲೀಸರಿಗೆ ದೂರು ನೀಡಿ ತೆರಳಿರುವುದಾಗಿ ತಿಳಿದು ಬಂದಿದೆ.
ಸುಳ್ಯದ ಇಬ್ರಾಹಿಂ ಖಲೀಲ್ ಗೆ ಕೇರಳದ ಶಾಂತಿಜೂಬಿ ಎಂಬ ಯುವತಿಯ ಪರಿಚಯವಾಗಿ ಬಳಿಕ ಅವರಿಬ್ಬರು ಮದುವೆಯಾಗಿದ್ದಾರೆಂದು ಹೇಳಲಾಗಿದ್ದು, ಈಗ ಖಲೀಲ್ ಆಕೆಯನ್ನು ದೂರ ಮಾಡಿದ್ದಾನೆಂದೂ ಈ ಹಿನ್ನಲೆಯಲ್ಲಿ ಖಲೀಲ್ ನನ್ನು ಮದುವೆಯಾದ ಬಳಿಕ ತನಗಿದ್ದ ಶಾಂತಿ ಎಂಬ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿದ್ದ ಆ ಮಹಿಳೆ ಸುಳ್ಯಕ್ಕೆ ಬಂದು ಪ್ರತಿಭಟನೆ ನಡೆಸಿದ್ದರು. ಈ ಘಟನೆ ಸುಮಾರು ಒಂದು ತಿಂಗಳು ಹಗ್ಗಜಗ್ಗಾಟದಲ್ಲಿ ಮುಂದುವರಿದು ಬಳಿಕ ನ್ಯಾಯಾಲಯದ ಮೆಟ್ಟಿಲೇರಿ ತಣ್ಣಗಾಗಿತ್ತು.
ನ.24 ರಂದು ಮಂಗಳೂರಿನಲ್ಲಿ ಆಸಿಯಾ (ಶಾಂತಿ) ಪತ್ರಿಕಾಗೋಷ್ಠಿ ನಡೆಸಿ ತಾನು ಖಲೀಲ್ ನನ್ನು ಮದುವೆಯಾಗಿರುವ ಹಾಗೂ ಆ ಬಳಿಕ ನಡೆದ ಘಟನೆಯನ್ನೆಲ್ಲ ವಿವರಿಸಿದರು. ಇದು ಮಾಧ್ಯಮಗಳ ಮೂಲಕ ಮತ್ತೆ ಜೀವ ಪಡೆಯಿತು.
ಇಂದು ವಿಶ್ವಹಿಂದೂ ಪರಿಷತ್ ನ ನಾಯಕ ಶರಣ್ ಪಂಪ್ ವೆಲ್ ಜತೆ ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಗೆ ಆಸಿಯಾ ಬಂದಿದ್ದರು. ದುರ್ಗಾವಾಹಿನಿ ಸಂಸ್ಥೆಯ ಪದಾಧಿಕಾರಿಗಳು ಜತೆಗಿದ್ದರು. ಸರ್ಕಲ್ ಇನ್ ಸ್ಪೆಕ್ಟರ್ ಕಚೇರಿಯಲ್ಲಿ ಇನ್ ಸ್ಪೆಕ್ಟರ್ ನವೀಚಂದ್ರ ಜೋಗಿಯವರಿದ್ದು ಮಾತುಕತೆ ನಡೆಯಿತು. ಇನ್ ಸ್ಪೆಕ್ಟರ್ ಈ ಹಿಂದೆ ಅವರು ಕೈ ಗೊಂಡ ಕ್ರಮಗಳು ಹಾಗೂ ಈಗ ನ್ಯಾಯಾಲಯದ ಮೆಟ್ಟೇರಿರುವ ಬಗ್ಗೆ ವಿವರಿಸಿದರು. ಆಕೆ ಖಲೀಲ್ ವಿರುದ್ದ ದೂರು ನೀಡುವುದಿಲ್ಲ. ನೀಡಿದರೆ ನಾವು ಸ್ವೀಕರಿಸುತ್ತೇವೆ ಎಂದು ಹೇಳಿದರೆಂದೂ, ನಾನು ಖಲೀಲ್ ಮೇಲೆ ದೂರು ನೀಡುವುದಿಲ್ಲ ಅವನ ಜತೆ ಬಾಳಲು ಅವಕಾಶ ಬೇಕು ಎಂದು ಆಕೆ ಹೇಳಿದಳೆಂದೂ ಈ ಕುರಿತು ಚರ್ಚೆ ನಡೆದು ಬಳಿಕ ಆಸಿಯಾ ತನಗೆ ತನ್ನ ಗಂಡ ಖಲೀಲ್ ಸಹೋದರ ಅವಾಚ್ಯವಾಗಿ ಬೈದಿರುವ ಬಗ್ಗೆ ಲಿಖಿತ ಹೇಳಿಕೆ ಪೋಲೀಸರಿಗೆ ನೀಡಿದರೆನ್ನಲಾಗಿದೆ. ಶರಣ್ ಪಂಪ್ ವೆಲ್ ಹಾಗೂ ಜತೆಗಿದ್ದವರು ಮಾತುಕತೆಯಲ್ಲಿ ಭಾಗಿಯಾದರು.
ಮಾತುಕತೆ ಬಳಿಕ ಸುದ್ಧಿ ಜತೆ ಮಾತನಾಡಿದ ಶರಣ್ ಪಂಪ್ ವೆಲ್ ರವರು “ಒರ್ವ ಹಿಂದೂ ಯುವತಿ ಪ್ರೀತಿಯ ಮೋಸದ ಬಲೆಗೆ ಬಿದ್ದು ಅನ್ಯಾಯಕ್ಕೆ ಒಳಗಾದ ವಿಚಾರ ತಿಳಿದು ಆಕೆಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸುಳ್ಯದ ಸರ್ಕಲ್ ಕಛೇರಿಯಲ್ಲಿ ಮಾತುಕತೆ ನಡೆಸಿದ್ದೇವೆ. ಲವ್ ಜಿಹಾದ್ ನ ಮೂಲಕ ಮೋಡಿ ಮಾಡಿ ನಂಬಿಸಿ ಮದುವೆಯಾಗಿ ಸುಮಾರು ಮೂರುವರೆ ವರ್ಷ ಒಟ್ಟಿಗಿದ್ದು ದೈಹಿಕ ಸಂಪರ್ಕ ಬೆಳೆಸಿ ಇದೀಗ ಗಂಡನ ಕುಟುಂಬದವರು ಮನೆಯಿಂದ ಹೊರಗೆ ಹಾಕಿ ದೌರ್ಜನ್ಯವೆಸಗಿರುವುದು ಖಂಡನೀಯ. ಆಕೆಯ ಗಂಡನ ಸಹೋದರ ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿ ಮಾನಸಿಕ ಹಿಂಸೆ ನೀಡಿರುವುದರ ಬಗ್ಗೆ ಪೋಲೀಸ್ ದೂರು ನೀಡಿದ್ದೇವೆ. ಈ ಬಗ್ಗೆ ಪೋಲೀಸ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡು ಶೋಷಣೆಗೆ ಒಳಗಾದ ಮಹಿಳೆಗೆ ನ್ಯಾಯ ಒದಗಿಸಿಕೊಡುವಂತೆ ಸಂಘಟನೆಯ ಮೂಲಕ ಒತ್ತಾಯಿಸುತ್ತಿದ್ದೇವೆ. ಮತ್ತೆ ಆಕೆ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಬರುವುದಾದರೆ ನಾವು ಆಕೆಯನ್ನು ನಮ್ಮ ಧರ್ಮದ ಆಧಾರದ ಮೇಲೆ ಸೇರಿಸಿಕೊಳ್ಳಲು ಬದ್ಧರಿದ್ದೇವೆ. ಮುಂದೆ ಸಮಾಜದಲ್ಲಿ ಇಂತಹ ಬಲೆಗೆ ಯಾವುದೇ ಹಿಂದೂ ಹುಡುಗಿಯರು ಬಲಿಯಾಗಿದಿರಲಿ ಎಂದು ಜಾಗೃತಿಯ ಸಂದೇಶ ನೀಡಲು ಬಯಸುತ್ತೇವೆ.
ಪ್ರತಿಕ್ರಿಯಿಸಿದ ಆಸಿಯಾ :
ನ್ಯಾಯಕ್ಕಾಗಿ ಮತ್ತೆ ಸುಳ್ಯಕ್ಕೆ ಬಂದಿದ್ದೇನೆ. ನನ್ನ ಗಂಡನಿಂದ ನನ್ನನ್ನು ಬೇರ್ಪಡಿಸಲು ಮೂಲ ಕಾರಣ ಆತನ ಸಹೋದರ ಅವನ ಮೇಲೆ ಈಗಾಗಲೇ ದೂರು ನೀಡಿದ್ದೇನೆ. ಹಿಂದೂ ಧರ್ಮ ಬಿಟ್ಟು ಪ್ರೀತಿಯ ಬಲೆಗೆ ಬಿದ್ದು ಇಸ್ಲಾಂ ಗೆ ಬಂದಿರುತ್ತೇನೆ. ಮತ್ತೆ ಹಿಂದೂ ಧರ್ಮಕ್ಕೆ ಬರುವುದಿಲ್ಲ. ನನ್ನಿಂದ ಎಲ್ಲಾ ರೀತಿಯಲ್ಲಿ ಲಾಭ ಪಡೆದು ಈಗ ನಡು ಬೀದಿಯಲ್ಲಿ ಕೈ ಬಿಟ್ಟಿದ್ದಾರೆ. ನನಗೆ ನನ್ನನ್ನು ಇಸ್ಲಾಂ ಧರ್ಮದ ಸಂಪ್ರದಾಯದಂತೆ ಮದುವೆಯಾದ ಗಂಡ ಖಲೀಲ್ ಬೇಕು. ನನ್ನ ಹಾಗೆ ಬೇರೊಂದು ಹೆಣ್ಣಿನ ಬಾಳು ಹೀಗಾಗಬಾರದು.