ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ: ನಾಗೇಶ್ ಕಾಲೂರು
ಭಾಷೆ ಸಂಸ್ಕೃತಿಯ ಮಾತೃವಾಗಿದ್ದು, ಭಾಷೆ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಸಾಹಿತಿ ನಾಗೇಶ್ ಕಾಲೂರು ಅವರ ಕರೆ ನೀಡಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ಶನಿವಾರ ನಡೆದ ‘ಅರೆಭಾಷೆ ನಿಘಂಟು’ ಎರಡು ದಿನದ ತರಬೇತಿ ಕಾರ್ಯಗಾರಕ್ಕೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತೀಯ ಭಾಷೆಗಳೆಲ್ಲವೂ ಸಹ ಸೋದರ ಭಾಷೆಗಳಾಗಿದ್ದು, ಹಲವು ಭಾಷೆಗಳಂತೆ ಅರೆಭಾಷೆಯೂ ಸಹ ತನ್ನದೇ ಆದ ಸ್ಥಾನವಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯವನ್ನು ಮತ್ತಷ್ಟು ಔನ್ನತ್ಯಕ್ಕೆ ಕೊಂಡೊಯ್ಯಬೇಕು ಎಂದರು.
ಗಾಳಿ, ನೀರು, ಬೆಳಕು ಎಲ್ಲಾರಿಗೂ ಎಷ್ಟು ಅವಶ್ಯವೋ, ಅದರಂತೆ ಭಾಷೆ ಮತ್ತು ಸಂಸ್ಕøತಿ ಪ್ರತಿಯೊಬ್ಬರದ್ದಾಗಿದೆ. ಆದ್ದರಿಂದ ಅರೆಭಾಷೆ ಉಳಿಸಿ ಬೆಳಸಿಕೊಂಡು ಹೋಗುವುದು ಅತ್ಯಗತ್ಯ ಎಂದು ನಾಗೇಶ್ ಕಾಲೂರು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಕೃತಿ ಮತ್ತು ಭಾಷೆ ಒಂದು ನಾಣ್ಯದ ಎರಡು ಮುಖವಿದ್ದಂತೆ. ಭಾಷೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದ್ದು ಉಚ್ಚರಣೆಯಲ್ಲಿ ವ್ಯತ್ಯಾಸವಿದ್ದರೂ ಸಹ ಸಂಸ್ಕೃತಿಯನ್ನು ಬಿಂಬಿಸುವಂತಿರಬೇಕು ಎಂದು ನಾಗೇಶ್ ಕಾಲೂರು ಅವರು ಸಲಹೆ ಮಾಡಿದರು.
ಅರೆಭಾಷೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶಿಷ್ಟವಾಗಿದ್ದು, ಅರೆಭಾಷೆಯಲ್ಲಿನ ಶಬ್ದ ಸಂಗ್ರಹಣೆ ಮಾಡುವಂತಾಗಬೇಕು. ಅರೆಭಾಷೆಯಲ್ಲಿ ಅಲ್ಪಪ್ರಾಣ ಬಳಸಲಾಗುತ್ತದೆ, ಮಹಾಪ್ರಾಣ ಇರುವುದಿಲ್ಲ ಎಂದು ಅವರು ತಿಳಿಸಿದರು.
ಹಳೇ ಬೇರು ಹೊಸ ಚಿಗುರು ಇದ್ದರೆ ಮಾತ್ರ ಭಾಷೆ ಬೆಳೆವಣಿಗೆಗೆ ಸಹಕಾರಿಯಾಗಲಿದೆ ಈ ನಿಟ್ಟಿನಲ್ಲಿ ಪ್ರಾಶಿಕ್ಷಣಾರ್ಥಿಗಳು ಮಾಹಿತಿ ಪಡೆದು ಉತ್ತಮ ನಿಘಂಟು ದಾಖಲೀಕರಣ ಮಾಡಬೇಕು ಎಂದು ನಾಗೇಶ್ ಕಾಲೂರು ಅವರು ಸಲಹೆ ಮಾಡಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣ ಕಜೆಗದ್ದೆ ಅವರು ಮಾತನಾಡಿ ಅರೆಭಾಷೆ ಅಕಾಡೆಮಿ ವತಿಯಿಂದ ನಿಘಂಟು ಹೊರ ತರಲಾಗುತ್ತಿದ್ದು, ಅರೆಭಾಷೆಯನ್ನು ಮುಂದಿನ ತಲೆಮಾರಿಗೆ ತಲುಪಿಸುವಲ್ಲಿ ಶ್ರಮಿಸಬೇಕಿದೆ ಎಂದರು.
ಅರೆಭಾಷೆ ನಿಘಂಟು ತರುವಲ್ಲಿ ಎಲ್ಲರ ಸಹಕಾರ ಅತ್ಯಗತ್ಯ. ಆ ನಿಟ್ಟಿನಲ್ಲಿ ನಿಘಂಟು ಕಾರ್ಯವು ಮಹತ್ತರ ದಾಖಲೀಕರಣ ಕೆಲಸವಾಗಿದೆ. ಶಿಭಿರಾರ್ಥಿಗಳು ನಿಘಂಟು ಪ್ರಕ್ರಿಯೆಯನ್ನು ಉತ್ತಮವಾಗಿ ಕೈಗೊಳ್ಳಬೇಕು ಎಂದರು.
ಅಕಾಡೆಮಿ ಸದಸ್ಯರಾದ ಡಾ.ವಿಶ್ವನಾಥ ಬದಿಕನಾ ಅವರು ಮಾತನಾಡಿ ಅರೆಭಾಷೆ ಮಾತನಾಡುವವರ ಜೊತೆ ಮಾತುಕತೆ ನಡೆಸಿ ಅರೆಭಾಷೆ ಪದಗಳನ್ನು ಸಂಗ್ರಹಿಸಿ ಅರೆಭಾಷೆ, ಕನ್ನಡ ಮತ್ತು ಇಂಗ್ಲಿಷ್ ನಿಘಂಟು ಹೊರ ತರಲಾಗುತ್ತಿದೆ. ಅರೆಭಾಷೆ ಮಾತನಾಡುವವರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಬೇಕು, ಶಿಬಿರಾರ್ಥಿಗಳು ಶ್ರದ್ದೆಯಿಂದ ತೋಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಮುಖ್ಯ ಅಥಿತಿಯಾಗಿ ಪಾಲ್ಗೊಂಡಿದ್ದ ಡಾ.ಕರುಣಾಕರ ನಿಡಿಂಜಿ ಅವರು ಮಾತನಾಡಿ ಅರೆಭಾಷೆಗೆ ಸಂಬಂಧಿಸಿದಂತೆ ಹಲವು ಪದಗಳ ಮಾಹಿತಿ ಸಂಗ್ರಹಿಸಬೇಕು. ಮಾಹಿತಿ ಸಂಗ್ರಹಿಸುವ ಸಂಧರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಭರತೇಶ್ ಅಲಸಂಡೆಮಜಲು, ಕಿರಣ್ ಕುಂಬಳಚೇರಿ ಮತ್ತು ಕ.ಅ.ಸಂ.ಮತ್ತು ಸಾಹಿತ್ಯ ಅಕಾಡೆಮಿಯ ಮಡಿಕೇರಿ ಇದರ ಕಛೇರಿಯ ಸಿಬ್ಬಂದಿಗಳು ಸೇರಿದಂತೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ಸಂಶೋಧನಾ ಸಹಾಯಕರು ಭಾಗವಹಿಸಿದ್ದರು.
ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು, ಅಕಾಡೆಮಿ ಸದಸ್ಯರಾದ ಪುರುಷೋತ್ತಮ ಕಿರ್ಲಾಯ ನಿರೂಪಿಸಿದರು, ಚೊಕ್ಕಾಡಿ ಪ್ರೇಮ ರಾಘವಯ್ಯ ಪ್ರಾರ್ಥಿಸಿದರು. ಜಯಪ್ರಕಾಶ್ ಮೋಂಟಡ್ಕ ವಂದಿಸಿದರು.