ಪೊಲೀಸ್ ಬಸ್ ಹಾಗೂ ಬೈಕ್ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ನ.30ರಂದು ರಾತ್ರಿ ಸಂಭವಿಸಿದೆ.
ಜಾಲ್ಸೂರು ಗ್ರಾಮದ ಕದಿಕಡ್ಕ ಅಶೋಕ ಅವರ ಪುತ್ರ ಅನೀಶ್ ಹಾಗೂ ಅವರ ಸಂಬಂಧಿ ಗುತ್ತಿಗಾರು ಗ್ರಾಮದ ಮಾವಿನಕಟ್ಟೆ ನಿವಾಸಿ ಆನಂದ ಅವರ ಪುತ್ರ ಅಭಿನಂದನ್ ಅವರು ಸುಳ್ಯದಿಂದ ಜಾಲ್ಸೂರು ಕಡೆಗೆ ಬೈಕ್ ನಲ್ಲಿ ಬರುತ್ತಿದ್ದರು. ಪೋಲೀಸ್ ಬಸ್ ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿತ್ತು. ಅಡ್ಕಾರಿನಲ್ಲಿ ಅಂಜನಾದ್ರಿ ಬೆಟ್ಟಕ್ಕೆ ತಿರುಗುವಲ್ಲಿ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿತು.
ಪರಿಣಾಮವಾಗಿ ಬೈಕ್ ಹಿಂಬದಿ ಸವಾರ ಅನೀಶ್ ಅವರು ರಸ್ತೆಗೆ ಎಸೆಯಲ್ಪಟ್ಟು, ಕೈ-ಕಾಲು ಹಾಗೂ ತಲೆಗೆ ಗಾಯಗೊಂಡರು. ಬೈಕ್ ಚಲಾಯಿಸುತ್ತಿದ್ದ ಅಭಿನಂದನ್ ಅವರ ಮೊಣಕಾಲು ಹಾಗೂ ಕೈ ಬೆರಳಿಗೆ ಗಾಯಗೊಂಡರು. ತಕ್ಷಣ ಅವರನ್ನು ಸ್ಥಳೀಯರು ಸೇರಿ ರಿಕ್ಷಾದಲ್ಲಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ, ಬಳಿಕ ಕೆವಿಜಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು. ಇದೀಗ ಇಬ್ಬರೂ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ. ಘಟನೆಯನ್ನು ರಾಜಿಯಲ್ಲಿ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿದುಬಂದಿದೆ.