ಜಾಲ್ಸೂರು ಗ್ರಾಮದ ಮಹಾಬಲಡ್ಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೋನಿಗೆ ಹೋಗುವ ರಸ್ತೆ ಹಾಗೂ ಅಂಗನವಾಡಿ ಶಿಕ್ಷಕಿ ಮತ್ತು ಪೋಷಕರ ವಿವಾದ ಕುರಿತು ಸ್ಥಳೀಯ ನಿವಾಸಿಗಳು ಪರಿಶಿಷ್ಟ ಜಾತಿ ಹಾಗೂ ಪ.ಪಂಗಡ ಕಾಲೋನಿಗೆ ತೆರಳುವ ರಸ್ತೆ ಬಳಿ ಡಿ.3ರಂದು ಬೆಳಿಗ್ಗೆ ಮತದಾನ ಬಹಿಷ್ಕರಿಸಿ ಬ್ಯಾನರ್ ಅಳವಡಿಸಿದ್ದಾರೆ.
ಈ ಹಿಂದಿನ ಗ್ರಾ.ಪಂ. ಆಡಳಿತದ ಅವಧಿಯಲ್ಲಿ ಮಹಾಬಲಡ್ಕ ಪ.ಜಾತಿ ಕಾಲೋನಿಗೆ ತೆರಳುವ ರಸ್ತೆಯ ಕೊನೆಯ ಭಾಗದಲ್ಲಿ ಜಿಲ್ಲಾ ಪಂಚಾಯತ್ ಕರಾವಳಿ ಪ್ರಾಧಿಕಾರದ ಸಹಕಾರದಿಂದ ರೂ.೧೦ ಲಕ್ಷ ಅನುದಾನದಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲಾಗಿದ್ದು, ಈ ರಸ್ತೆಗೆ ಸ್ಥಳೀಯರಾದ ನಾರಾಯಣ ಹಾಗೂ ಕೇಪು ಅವರು ಅರ್ಧ ತಡೆಬೇಲಿ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಈ ರಸ್ತೆಯ ಮುಂದಿನ ಭಾಗದಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ಮನೆಗಳಿದ್ದು, ಈ ರಸ್ತೆಯಲ್ಲಿ ಹಾದು ಹೋಗುವ ಸುಮಾರು ಇಪ್ಪತ್ತಕ್ಕೂ ಅಧಿಕ ಮನೆಯವರಿಗೆ ತೆರಳಲು ಸರಿಯಾದ ರಸ್ತೆಯ ಸಂಪರ್ಕ ಇಲ್ಲದ ಕಾರಣ ಮೂಲಭೂತ ಸೌಕರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದ.ಕ.ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದರು.
ಈ ಕಾಲೋನಿಯಲ್ಲಿ ಹಾದು ಹೋಗುವ ಎಲ್ಲಾ ರಸ್ತೆಗಳು ಅವರವರ ಪಟ್ಟೆ ಜಾಗದಲ್ಲಿ ಹಾದು ಹೋಗುತ್ತದೆ. ಇದಕ್ಕೆ ಯಾವುದೇ ಗಡಿರೇಖೆ ಇರುವುದಿಲ್ಲ. ಆದ್ದರಿಂದ ಸ್ಥಳೀಯರು ಸೇರಿ ಈ ರಸ್ತೆಯ ಬಗ್ಗೆ ತನಿಖೆ ಕೈಗೊಳ್ಳಬೇಕೆಂದು ದ.ಕ. ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದು, ಜಿಲ್ಲಾಧಿಕಾರಿ ಕಛೇರಿಯಿಂದ ಈ ರಸ್ತೆಯ ತನಿಖೆ ನಡೆಸುವಂತೆ ಸ್ಥಳೀಯರಿಗೆ ಮರುಪತ್ರ ಬಂದಿದ್ದು, ಸಂಬಂಧಿಸಿದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ನಡೆಸಿಲ್ಲ ಎಂದು ಸ್ಥಳೀಯರು ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿ ಬ್ಯಾನರ್ ಅಳವಡಿಸಿದ್ದಾರೆ.