ಪ್ಲಾಸ್ಟಿಕ್ ವಿರುದ್ಧ ಜನ ಜಾಗೃತಿ ಕಾಲದ ಅನಿವಾರ್ಯತೆ : ಮೋನಾ ರೋತ್
ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ್ದ ಮಡಪ್ಪಾಡಿ ಗ್ರಾಮದಲ್ಲಿ ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾಡುವ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.
ಒಂದು ಕೆ.ಜಿ. ಪ್ಲಾಸ್ಟಿಕ್ ನ್ನು ಗ್ರಾಮಸ್ಥರು ತಂದು ಗ್ರಾ.ಪಂ. ಗೆ ನೀಡಿದರೆ 5 ಕೆ.ಜಿ. ಅಕ್ಕಿ ನೀಡುವ ಯೋಜನೆಯನ್ನು ಇಲ್ಲಿ ಈ ಮೂಲಕ ಜಾರಿಗೊಳಿಸಲಾಗಿದೆ.
ಪ್ರತೀ ತಿಂಗಳು ಗ್ರಾಮ ಪಂಚಾಯತ್ ನಲ್ಲಿ ಒಂದು ದಿನ ಈ ಕಾರ್ಯಕ್ರಮ ಮಾಡಿ, ಪ್ಲಾಸ್ಟಿಕ್ ಪಡೆದು ಅಕ್ಕಿ ವಿತರಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ದ.ಕ.ಜಿಲ್ಲಾ ಪಂಚಾಯತ್, ತಾ.ಪಂ. ಸುಳ್ಯ, ಗ್ರಾ.ಪಂ. ಮಡಪ್ಪಾಡಿ ಇವುಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು ಇಂದು ನಡೆದ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಇಂದಾಜೆ ವಹಿಸಿದ್ದರು.
ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ಮೋನಾ ರೋತ್ ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಬಳಿಕ ಪ್ಲಾಸ್ಟಿಕ್ ತಂದ ಆಶಾ ಕಾರ್ಯಕರ್ತೆ ಉಮಾವತಿಯವರಿಗೆ ಅಕ್ಕಿ ವಿತರಿಸಿದರು.
ಪ್ಲಾಸ್ಟಿಕ್ ವಿರುದ್ಧ ಜನಜಾಗೃತಿ ಕಾಲದ ಅನಿವಾರ್ಯತೆಯಾಗಿದೆ ಎಂದು ಮೋನಾ ರೋತ್ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಗ್ರಾ.ಪಂ. ಆಡಳಿತಾಧಿಕಾರಿ ಸುರೇಶ್, ಗ್ರಾ.ಪಂ. ಪಿ.ಡಿ.ಒ. ಧನಪತಿ ಭಾಗವಹಿಸಿದ್ದರು. ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ಪದ್ಮನಾಭ ಮುಂಡೋಕಜೆ ವೇದಿಕೆಯಲ್ಲಿದ್ದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಗಂಗಾಧರ್ ಕಲ್ಲಪಳ್ಳಿ ಸ್ವಾಗತಿಸಿದರು. ಲೋಕೇಶ್ ಪೆರ್ಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಪುಷ್ಪರಾಜ್ ಬಿ.ಎನ್, ಭಾಸ್ಕರ್ ರೈ ಕಟ್ಟ, ತಾಲೂಕು ಸಮಿತಿಯ ದುರ್ಗಾಕುಮಾರ್ ನಾಯರ್ ಕೆರೆ, ಶಿವಪ್ರಸಾದ್ ಕೇರ್ಪಳ, ದಯಾನಂದ ಕೊರತ್ತೋಡಿ, ಮುರಳೀಧರ ಅಡ್ಡನಪಾರೆ, ಗಿರೀಶ್ ಅಡ್ಪಂಗಾಯ, ಹಸೈನಾರ್ ಜಯನಗರ, ಮಧುಕೃಷ್ಣ ಮೊದಲಾದವರಿದ್ದರು.