6 ರಿಂದ 9 ನೇ ತರಗತಿ ಮಕ್ಕಳಿಗೆ ವಿದ್ಯಾಗಮವೂ ಪ್ರಾರಂಭ
ಶಿಕ್ಷಣ ಇಲಾಖೆಯಿಂದ ಸೂಚನೆ ಹಾಗೂ ಮಾರ್ಗಸೂಚಿ ಬಿಡುಗಡೆ
ಕೊರೋನಾ ಹಿನ್ನಲೆಯಲ್ಲಿ ಮುಚ್ಚಿದ ಶಾಲಾ ಕಾಲೇಜುಗಳ ಪೈಕಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಗಳನ್ನು ಜನವರಿ ೧ ರಿಂದ ಆರಂಭಿಸಲು ಸರಕಾರ ನಿರ್ಧರಿಸಿದೆ. ೬ ರಿಂದ ೯ ನೇ ತರಗತಿವರೆಗಿನ ತರಗತಿಗಳಿಗೆ ವಿದ್ಯಾಗಮ ಕೂಡಾ ಜನವರಿ ೧ ರಿಂದ ಆರಂಭಗೊಳ್ಳಲಿದೆ. ಈ ಕುರಿತಂತೆ ಸರಕಾರ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಕೂಡಾ ಹೊರಡಿಸಿದೆ.
ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಯವರು ನೀಡಿದ ಶಿಫಾರಸ್ಸುಗಳ ಪ್ರಕಾರ ತರಗತಿಗಳು ಆರಂಭಗೊಳ್ಳಲಿವೆ. ಶಾಲಾ ಪ್ರಾರಂಭದ ವೇಳಾಪಟ್ಟಿಯನ್ನು ಕೂಡಾ ನೀಡಲಾಗಿದೆ. ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿ ಶಾಲಾ ಪ್ರಾರಂಭವಾಗುವ ದಿನದ ೭೨ ಗಂಟೆಗಳ ಅಂತರದಲ್ಲಿ ಕೊರೋನಾ ಪರೀಕ್ಷೆ ಮಾಡಿಸಬೇಕು. ಶಾಲೆಗೆ ಹಾಜರಾಗಲು ಬಯಸದೇ ಇರುವ ವಿದ್ಯಾರ್ಥಿಗಳಿಗೆ ಈಗ ಅನುಸರಿಸುತ್ತಿರುವ ಪರ್ಯಾಯ ವಿಧಾನವನ್ನು ಮುಂದುವರಿಸಿಕೊಂಡು ಹೋಗಬಹುದು. ಪ್ರತೀ ಶಾಲೆಯ ಮಕ್ಕಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷಿಸಬೇಕು. ಮಾಸ್ಕ್ ಹಾಗೂ ಭೌತಿಕ ಅಂತರ ಕಡ್ಡಾಯ. ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರನ್ನು ತರಬೇಕು ಮೊದಲಾದ ಹಲವು ಸೂಚನೆಗಳನ್ನು ನೀಡಲಾಗಿದೆ.
ರಾಜ್ಯದಲ್ಲಿ ಸರಕಾರಿ, ಅನುದಾನ, ಅನುದಾನರಹಿತ ಶಾಲೆಗಳ ೬ ರಿಂದ ೯ ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳು ತೆರೆಯದಿರುವುದರಿಂದ ವಿದ್ಯಾಗಮ ಕಾರ್ಯಕ್ರಮಗಳು ಜನವರಿ ೧ ರಿಂದ ಪ್ರಾರಂಭಗೊಳ್ಳಲಿದೆ. ವಿದ್ಯಾಗಮ ತರಗತಿಗಳಿಗೂ ಕೂಡಾ ಆರೋಗ್ಯ ಇಲಾಖೆಯ ತಾಂತ್ರಿಕ ಸಲಹಾ ಸಮಿತಿಗಳು ನೀಡಿರುವ ಶಿಫಾರಸ್ಸುಗಳು ಮತ್ತು ಸರಕಾರದ ಸೂಚನೆಗಳು ಅನ್ವಯವಾಗುತ್ತದೆ. ಸರಕಾರದ ಸೂಚನೆಗಳ ಸುತ್ತೋಲೆಯನ್ನು ಇಲ್ಲಿ ನೀಡಲಾಗಿದೆ.