ಕಳೆದ ನಲವತ್ತಕ್ಕೂ ಹೆಚ್ಚು ವರ್ಷಗಳಿಂದ ಸುಮಾರು ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ಮನೆಗಳನ್ನು ನಿರ್ಮಿಸಿಕೊಂಡು ವಾಸಿಸಿಕೊಂಡು ಬರುತ್ತಿರುವ ಸುಳ್ಯ ಜಯನಗರ ಮಿಲಿಟರಿ ಗ್ರೌಂಡ್ ಪರಿಸರಕ್ಕೆ ಜ.೨೧ರಂದು ಮಂಗಳೂರು ಸರ್ವೆ ಇಲಾಖೆಯಿಂದ ಡಿ ಡಿ ಎಲ್ ಆರ್ ನಿರಂಜನ್ ಹಾಗೂ ಪುತ್ತೂರು ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರಿಂದ ಜಾಗದ ಕುರಿತು ವರದಿ ಸಂಗ್ರಹಿಸಿರುತ್ತಾರೆ.
ಈ ಸಂದರ್ಭದಲ್ಲಿ ಸುಳ್ಯ ಸರ್ವೆ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು. ಸ್ಥಳೀಯ ನಿವಾಸಿಗಳೊಂದಿಗೆ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ಕಳೆದ ನಲವತ್ತು ವರ್ಷಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ಬಂದಿರುವ ಹಿನ್ನೆಲೆಯನ್ನು ಪಡೆದುಕೊಂಡರು. ಜಯನಗರ ಶಾಲಾ ಬಳಿಯಿಂದ ಕೊಡಿಯಾಲಬೈಲು ರಸ್ತೆ, ತೋಟಗಾರಿಕಾ ಇಲಾಖೆ, ಸಿಆರ್ಸಿ ಕಾಲೋನಿ, ಜಯನಗರ ಹಿಂದೂ ರುದ್ರಭೂಮಿ, ಮುಂತಾದ ಕಡೆಗಳಿಗೆ ಭೇಟಿ ನೀಡಿ ಅಧಿಕಾರಿಗಳು ತಮ್ಮೊಂದಿಗೆ ತಂದಿದ್ದ ನಕ್ಷೆಯನ್ನು ಮತ್ತು ಆಯಾ ಸ್ಥಳಗಳನ್ನು ಗುರುತಿಸಿ ಇರುವಿಕೆಯನ್ನು ಖಚಿತಪಡಿಸಿಕೊಂಡರು.
ಅಧಿಕಾರಿಗಳು ಬರುವ ವಿಷಯ ಮೊದಲೇ ತಿಳಿದಿದ್ದ ಸ್ಥಳೀಯರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ತಮ್ಮ ತಮ್ಮ ನಿವೇಶನಗಳ ಬಗ್ಗೆ ಮತ್ತು ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರು. ಇಲ್ಲಿಯ ನಿವಾಸಿಗಳ ಬಹುಮುಖ್ಯ ಬೇಡಿಕೆಯಲ್ಲಿ ಒಂದಾಗಿರುವ ತಮ್ಮ ಅಡಿಸ್ಥಳದ ದಾಖಲೆಗಳು ತಮ್ಮದಾಗಿಸುವ ನಿಟ್ಟಿನಲ್ಲಿ ಹಲವು ಬಾರಿ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಮನವಿಯನ್ನು ನೀಡಿ ಸರಕಾರದ ಗಮನಕ್ಕೆ ತರಲು ಪ್ರಯತ್ನಿಸಿದ ಘಟನೆಗಳು ನಡೆದಿದ್ದವು. ಇದಕ್ಕಾಗಿ ಹಲವು ಬಾರಿ ಸುಳ್ಯ ಸರ್ವೆ ಇಲಾಖೆಯಿಂದ ಸರ್ವೆ ಕಾರ್ಯಗಳು ನಡೆದಿದ್ದವು. ಸುಳ್ಯ ಗ್ರಾಮಲೆಕ್ಕಾಧಿಕಾರಿ ತಿಪ್ಪೇಶ್ ರವರು ಸಂಬಂಧಪಟ್ಟ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ ಮಿಲಿಟರಿ ಜಾಗದ ಕುರಿತು ಮಾಹಿತಿ ನೀಡಿದರು. ನಂತರ ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಯವರ ಸೂಚನೆಯಂತೆ ಸ್ಥಳ ಪರಿಶೀಲನೆಗೆ ಬಂದಿದ್ದು ಇಲ್ಲಿಯ ವಾಸ್ತವ ಸಂಗತಿಗಳ ವರದಿಯನ್ನು ಅವರಿಗೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎಡಿಎಲ್ಆರ್ ವೆಂಕಟೇಶ್, ತಾಲೂಕು ಸರ್ವೆಯರ್ ಜಗದೀಶ್, ಸುಳ್ಯ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಸರ್ವೆ ಇಲಾಖೆ ಸುಪರ್ವೈಸರ್ ಸಿಂಗಾರ ಶೆಟ್ಟಿ, ಸ್ಥಳೀಯ ನ ಪಂ ಸದಸ್ಯೆ ಶಿಲ್ಪ ಸುದೇವ್, ಹಕ್ಕುಪತ್ರ ಹೋರಾಟ ಸಮಿತಿಯ ಮುಖಂಡ ಜಗನ್ನಾಥ್, ರಾಧಾಕೃಷ್ಣ ನಾಯಕ್, ಮಹಾಲಿಂಗ ಪಾಠಾಳಿ, ಸ್ಥಳೀಯ ಬಿಜೆಪಿ ವಾರ್ಡ್ ಸಮಿತಿ ಅಧ್ಯಕ್ಷ ಸುರೇಂದ್ರ ಕಾಮತ್, ಸ್ಥಳೀಯರಾದ ಉಸ್ಮಾನ್ ಜಯನಗರ, ಸಂಶುದ್ದೀನ್ ಜಯನಗರ, ಮೊದಲಾದವರು ಉಪಸ್ಥಿತರಿದ್ದರು.