ಸರಕಾರಿ ಆಸ್ಪತ್ರೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸುತ್ತಿದ್ದು, ಜ.27 ರಂದು ಸುಳ್ಯ ಶಾಸಕರ ಕಚೇರಿಯ (ತಾಲೂಕು ಕಚೇರಿ) ಮುಂಭಾಗ ಸಾಮೂಹಿಕ ಧರಣಿ ನಡೆಯಲಿದೆ ಎಂದು ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಮುಂದಾಳತ್ವ ವಹಿಸಿರುವ ಕೆ.ಪಿ.ಜಾನಿ ಹೇಳಿದರು.
ಜ.23 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಖಾಸಗಿ ಆಸ್ಪತ್ರೆ ನಿಯಂತ್ರಿಸಿ, ಸರಕಾರಿ ಆಸ್ಪತ್ರೆ ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹೋರಾಟಗಳು ನಡೆಯುತ್ತಿದೆ. ಆ ನಿಟ್ಟಿನಲ್ಲಿ ಸುಳ್ಯದಲ್ಲಿಯೂ ನಡೆಸಲಿದ್ದೇವೆ. ಸುಳ್ಯದ ತಾಲೂಕು ಆಸ್ಪತ್ರೆ ಮೇಲ್ದರ್ಜೆಗೆರಿದೆ. ಆದರೆ ಸರಕಾರದ ನಿಯಮದಂತೆ ಇಲ್ಲಿ ಎಲ್ಲ ಪ್ರಯೋಜನಗಳು ರೋಗಿಗಳಿಗೆ ಸಿಗುವಂತಾಗಬೇಕು ಎಂಬ ಒಕ್ಕೊರಲ ಬೇಡಿಕೆ ನಮ್ಮದು. ಸುಳ್ಯದಲ್ಲಿ ಈಗ ಉನ್ನತ ಮಟ್ಟದ ವೈದ್ಯಾಧಿಕಾರಿಗಳು ಇದ್ದಾರೆ. ಆದರೆ ತಜ್ಞ ವೈದ್ಯರು ಬೇಕು. ಹೃದಯ ರೋಗ, ಕಿಡ್ನಿ ಮೊದಲಾದ ಖಾಯಿಲೆಗೆ ಸುಳ್ಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗಬೇಕು. ಈಗ ಮಂಗಳೂರಿಗೆ ಕರೆದೊಯ್ಯುವ ವ್ಯವಸ್ಥೆ ಆಗುತ್ತಿದೆ. ಇದರಿಂದ ಬಡವರಿಗೆ ತುಂಬಾ ಸಮಸ್ಯೆಯಾಗುತ್ತದೆ ಎಂದು ಹೇಳಿದರು.
ತಾಲೂಕಿನಲ್ಲಿ 40 ಹಾಸಿಗೆಗಳ ಮೂರು ಸಮುದಾಯ ಆಸ್ಪತ್ರೆ ಇರಬೇಕು. ನಮ್ಮಲ್ಲಿ ಈ ರೀತಿಯ ಒಂದು ಕೇಂದ್ರವೂ ಇಲ್ಲ. 10 ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕಾದಲ್ಲಿ 6 ಕೇಂದ್ರಗಳಿವೆ. ಇಲ್ಲಿ ವೈದ್ಯರ, ಸಿಬ್ಬಂದಿಗಳ ಕೊರತೆ ಇದೆ. ಜನತೆಗೆ ಸಿಗಬೇಕಾದ ಆರೋಗ್ಯ ಸೇವೆ ಮರಿಚಿಕೆಯಾಗಿದೆ.
ತಾಲೂಕು ಆಸ್ಪತ್ರೆಯಲ್ಲಿ ಆಧುನಿಕ ಯಂತ್ರಗಳು ಇದ್ದರೂ ಅದಕ್ಕೆ ಬೇಕಾದ ತಜ್ಞರು ಇಲ್ಲ ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕಾರಿ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಇರಬೇಕೆನ್ನುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗುತ್ತದೆ.
ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು, ಕ್ಯಾನ್ಸರ್ ಆಸ್ಪತ್ರೆ, ಹೃದಯ ಆಸ್ಪತ್ರೆ ಸ್ಥಾಪಿಸಬೇಕು. ವೆನ್ ಲಾಕ್ ಅನ್ನು ಪೂರ್ಣ ಪ್ರಮಾಣದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಜನಾಂದೋಲನ ರೂಪಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ ಎಲ್ಲ ಶಾಸಕರ ಕಚೇರಿಯ ಮುಂಭಾಗ ಸಾಮೂಹಿಕ ಧರಣಿ ನಡೆಸಲು ನಿರ್ಧರಿಸಿರುವುದಾಗಿ ಜಾನಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಶೀದ್ ಜಟ್ಟಿಪಳ್ಳ, ರಫೀಕ್ ಪಡು, ಅಬ್ದುಲ್ ಖಾದರ್ ಮೊಟ್ಟೆಂಗಾರ್, ಶಾರಿಕ್ ಡಿ.ಎಂ., ಲಿಸ್ಸಿ ಮೊನಾಲಿಸ, ವಿಮಲ ಪ್ರಸಾದ್, ನಾಗರಾಜ್ ಜಯನಗರ, ಬಿಜು ಅಗಸ್ಟಿನ್, ಪ್ರಸಾದ್ ಇದ್ದರು.