ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಮತ್ತು ವಿದ್ಯುತ್ ಬಳಕೆದಾರರ ವತಿಯಿಂದ ಮಾಡಾವು 110 ಕೆ.ವಿ. ವಿದ್ಯುತ್ ಉಪಕೇಂದ್ರ ಕಾಮಗಾರಿಯ ಪುನಶ್ಚೇತನಗೊಳ್ಳುವಲ್ಲಿ ಶ್ರಮವಹಿಸಿದ ಬಿ. ಜಯಪ್ರಸಾದ ಜೋಶಿ ಬೆಳ್ಳಾರೆಯವರಿಗೆ ಗೌರವ ಸಮರ್ಪಣೆ ಫೆ. 27ರಂದು ಸಂಜೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಕಿಸಾನ್ ಸಂಘ ಸುಳ್ಯ ತಾಲೂಕು ಇದರ ಅಧ್ಯಕ್ಷ ಎನ್.ಜಿ. ಪ್ರಭಾಕರ ರೈ ವಹಿಸಿದ್ದರು. ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ. ಸದಾಶಿವ, ಸುಳ್ಯ ತಾಲೂಕು ಮಹಿಳೆಯರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಶ್ರೀಮತಿ ರಾಜೀವಿ ಆರ್. ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಾಳಿಲ ಗ್ರಾ.ಪಂ. ಮಾಜಿ ಸದಸ್ಯ ಯು. ರಾಧಾಕೃಷ್ಣ ರಾವ್ ಉಡುವೆಕೋಡಿ ಅಭಿನಂದನಾ ಮಾತುಗಳನ್ನಾಡಿದರು. ಭಾರತೀಯ ಕಿಸಾನ್ ಸಂಘದ ಬಾಳಿಲ ವಲಯಾಧ್ಯಕ್ಷ ಗೋಪಾಲಕೃಷ್ಣ ಭಟ್ ನೆಟ್ಟಾರು ಸನ್ಮಾನ ಪತ್ರ ವಾಚಿಸಿದರು. ಕು. ಸುಪ್ರಿಯಾ ಭಟ್ ಪ್ರಾರ್ಥಿಸಿದರು. ಸುಳ್ಯ ಸುದ್ದಿ ಬಿಡುಗಡೆ ವಾರಪತ್ರಿಕೆಯ ವರದಿಗಾರ ಈಶ್ವರ ವಾರಣಾಶಿ ಸ್ವಾಗತಿಸಿದರು. ನಿಂತಿಕಲ್ಲು ವಿದ್ಯುತ್ ಉಪಕೇಂದ್ರ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ. ರಾಮಚಂದ್ರ ಭಟ್ ದೇವಸ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನ ಸಮಿತಿ ಕಾರ್ಯದರ್ಶಿ ಸಾಯಿಶೇಖರ ಕರಿಕ್ಕಳ ವಂದಿಸಿದರು. ಶ್ರೀಮತಿ ಸುಧಾ ಜಯಪ್ರಸಾದ್ ಸನ್ಮಾನ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.