ಆಸ್ಪತ್ರೆಗೆ ದಾಖಲು;
ಮುಳ್ಯ ಅಟ್ಲೂರಿನಲ್ಲಿ ನಿನ್ನೆ ನಡೆದ ಘಟನೆಯೊಂದರಲ್ಲಿ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯ ವಿಶ್ವನಾಥ ಮುಳ್ಯಮಠರಿಗೆ ಕತ್ತಿಯೇಟಾದ ಘಟನೆ ವರದಿಯಾಗಿದೆ. ನಿನ್ನೆ ರಾತ್ರಿ ಮುಳ್ಯ ಅಟ್ಲೂರಿನಲ್ಲಿ ಯಕ್ಷಗಾನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದ ವಿಶ್ವನಾಥ ಮುಳ್ಯಮಠರವರು ಶಾಲೆಯ ಆವರಣದ ಹೊರಗೆ ಭಜನಾ ಮಂದಿರದ ಸಮೀಪ ತನ್ನ ಜೊತೆಗಾರರೊಂದಿಗೆ ನಿಂತಿದ್ದರೆಂದೂ ಅಲ್ಲಿಗೆ ತನ್ನ ಸಹೋದರ ರಾಘವರ ಜೊತೆ ಬಂದ ಮುಳ್ಯ ಮಠದ ಯೋಗೀಶ ವಿಶ್ವನಾಥರ ಜೊತೆ ಮಾತಿಗಿಳಿದನೆಂದೂ ಇದು ವಿಕೋಪಕ್ಕೆ ಹೋಗಿ ವಿಶ್ವನಾಥರ ಜೊತೆಗಾರರಿಗೂ ಯೋಗೀಶನಿಗೂ ತಳ್ಳಾಟ ನಡೆಯಿತೆಂದು ತಿಳಿದುಬಂದಿದೆ. ಈ ತಳ್ಳಾಟವನ್ನು ಅಲ್ಲಿದ್ದ ಕೆಲವರು ಬಿಡಿಸಿದರು.
ಕೆಲವು ಹೊತ್ತಿನಲ್ಲಿ ಮತ್ತೆ ಅದೇ ಸ್ಥಳಕ್ಕೆ ಕತ್ತಿ ಹಿಡಿದುಕೊಂಡು ಬಂದ ಯೋಗೀಶ ವಿಶ್ವನಾಥರಿಗೆ ಬೀಸಿದರೆಂದು ಈ ವೇಳೆ ಶಿವ ಎಂಬವರು ಯೋಗೀಶನ ಕೈ ಹಿಡಿದರೆಂದೂ ಕತ್ತಿ ವಿಶ್ವನಾಥರ ತುಟಿಗೆ ತಾಗಿ ಗಾಯವಾಯಿತೆನ್ನಲಾಗಿದೆ. ತಕ್ಷಣ ವಿಶ್ವನಾಥರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಸ್ಥಳಕ್ಕೆ ಪೊಲೀಸರು ಆಗಮಿಸಿದರು. ಈ ವೇಳೆ ಯೋಗೀಶ ಹಾಗೂ ರಾಘವರು ಪರಾರಿಯಾದರೆಂದು ತಿಳಿದು ಬಂದಿದೆ.