ಡಾ. ದಾಮ್ಲೆಯವರು ಇಂದಿನ ಶೈಕ್ಷಣಿಕ ರಂಗದ ಅಸಾಮಾನ್ಯ ವ್ಯಕ್ತಿ
ಸ್ನೇಹ ಯಾನ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಶಂಸೆ
ಇವತ್ತಿನ ಶೈಕ್ಷಣಿಕ ಸಂದರ್ಭದಲ್ಲಿ ಒಂದು ಶಾಲೆ ಹೇಗಿರಬೇಕು ಎನ್ನುವುದಕ್ಕೆ ಸ್ನೇಹ ಶಾಲೆ ಅತ್ಯುತ್ತಮ ಮಾದರಿ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಹೇಳಿದ್ದಾರೆ.
ಸುಳ್ಯದ ಸ್ನೇಹ ಶಿಕ್ಷಣ ಆವರಣದಲ್ಲಿ ಇಂದು ನಡೆದ ಸ್ನೇಹ ಶಾಲೆ ಬೆಳ್ಳಿಹಬ್ಬ ಮತ್ತು ಡಾ. ಚಂದ್ರಶೇಖರ ದಾಮ್ಲೆ ಅಭಿನಂದನಾ ಕಾರ್ಯಕ್ರಮದ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂದಿನ ಶಾಲೆಗಳು ಅಂಕಾಲಯಗಳಾಗುತ್ತಿದೆ. ಯಾವ ಭಾಷೆಯನ್ನೂ ಸರಿಯಾಗಿ ಕಲಿಯದೆ ಭಾಷಾ ದರಿದ್ರರಾಗುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸ್ನೇಹ ಶಾಲೆ ವಿಭಿನ್ನವಾಗಿ ನಿಲ್ಲುತ್ತದೆ. ಹೊಸ ಶಿಕ್ಷಕರಿಗೆ ಇದೊಂದು ದರ್ಶನ ಕೇಂದ್ರವಾಗಿದೆ ಎಂದ ಸುರೇಶ್ ಕುಮಾರ್, ಡಾ. ದಾಮ್ಲೆಯವರು ಇವತ್ತಿನ ಶಿಕ್ಷಣ ರಂಗದ ಒಬ್ಬ ಅಸಾಮಾನ್ಯ ವ್ಯಕ್ತಿ. ಛಲ ಬಿಡದ ತ್ರಿವಿಕ್ರಮ. ಇಂತಹ ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ಪುಣ್ಯದ ಕಾರ್ಯ ಎಂದರು.