ಖಾಸಗಿ ಚಿಂತನೆಗಳ ಮೂಲಕ ಸಮಾಜ ಬಲಾಢ್ಯ : ಆಳ್ವ
ಸೋಂಕಿನ ಕಾರಣ ಕೈ ತಪ್ಪಿದ ಸಾಂಸ್ಕೃತಿಕ ವೈಭವ ಮರಳುವುದು ಹೇಗೆ? :ಕಳವಳ
ಸುಳ್ಯದ ಸಾಂಸ್ಕೃತಿಕ ಕಲಾಕೇಂದ್ರ ರಂಗಮನೆಯಲ್ಲಿ 20 ನೇ ರಂಗವರ್ಷದ ಪ್ರಯುಕ್ತ 8 ದಿನಗಳ ಬಹುಭಾಷಾ ನಾಟಕೋತ್ಸವ ಆರಂಭಗೊಂಡಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಈ ನಾಟಕೋತ್ಸವವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು.
ಎಲ್ಲವನ್ನೂ ಸರಕಾರಗಳಿಂದ ನಿರೀಕ್ಷಿಸುವುದು ಸಾಧ್ಯವಿಲ್ಲ. ಖಾಸಗಿ ಚಿಂತನೆಗಳ ಮೂಲಕ ಸಮಾಜವನ್ನು ಕಟ್ಟಿದರೆ ಸಮಾಜ ಬಲಾಢ್ಯವಾಗುತ್ತದೆ. ಅಂತಹ ಖಾಸಗಿ ಚಿಂತನೆಗಳ ಮೂಲಕ ಸಾಂಸ್ಕೃತಿಕ ವಾತಾವರಣ ಬೆಳೆಸುವವರನ್ನು ಸಮಾಜ ಬೆಂಬಲಿಸಬೇಕು. ಜೀವನ್ ರಾಂ ಸಾಂಸ್ಕೃತಿಕ ಚಿಂತನೆಯ ಮೂಲಕ ಸಮಾಜವನ್ನು ಕಟ್ಟುತ್ತಿದ್ದಾರೆ ಎಂದು ಡಾ. ಆಳ್ವ ಹೇಳಿದರು.
ಒಂದು ಸಾಮಾನ್ಯ ಸೋಂಕಿನ ಭಯದಿಂದ ಎಲ್ಲ ವ್ಯವಸ್ಥೆಗಳೂ ಹಳಿ ತಪ್ಪಿದೆ. ಸಾಂಸ್ಕೃತಿಕ ವೈಭವವಂತೂ ಕೈ ತಪ್ಪಿದೆ. ಇಂತಹ ಸ್ಥಿತಿಯಲ್ಲಿ ಈ ವೈಭವವನ್ನು ಹೇಗೆ ಮರಳಿ ಕಟ್ಟುವುದು ಹೇಗೆ ಎಂದು ಡಾ. ಆಳ್ವ ಕಳವಳ ವ್ಯಕ್ತಪಡಿಸಿದರು.
ಈ ಸೋಂಕಿನಿಂದ ವ್ಯವಸ್ಥೆ ಸೃಷ್ಟಿಸಿದ ಅನಾವಶ್ಯಕ ಭಯದಿಂದಾಗಿ ಬದುಕು ಹಾವು ಏಣಿಯ ಆಟದಂತಾಗಿದೆ. ಶಿಕ್ಷಣ ವ್ಯವಸ್ಥೆಯಂತೂ ಅವ್ಯವಸ್ಥಿತವಾಗಿದೆ. ಇವುಗಳ ಪರಿಣಾಮದ ನಷ್ಟದ ಕುರಿತು ಅರ್ಥ ಮಾಡಿಕೊಳ್ಳಬೇಕು. ಸೋಂಕಿನ ಹೆಸರಲ್ಲಿ ಸೃಜನಶೀಲ ಕಾರ್ಯಗಳು ಯಾವತ್ತೂ ನಿಲ್ಲಬಾರದು ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಜಾಕೆ ಮಾಧವ ಗೌಡ ವಹಿಸಿದ್ದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಂ.ಕೆ. ಮಠ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸುಜನಾ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮನುಜ ನೇಹಿಗನ ರಂಗ ಗೀತೆಯ ಮೂಲಕ ಆರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ರಂಗಮನೆಯ ನಿರ್ದೇಶಕ ಜೀವನ್ರಾಂ ಸುಳ್ಯ ಸ್ವಾಗತಿಸಿ, ಪ್ರಸ್ತಾವನೆಗೈದರು. ಹತ್ತೊಂಬತ್ತು ವರ್ಷಗಳಲ್ಲಿ ರಂಗಮನೆಯನ್ನು ಇಲ್ಲಿನ ಜನ ತಮ್ಮದೇ ಮನೆಯ ರೀತಿಯಲ್ಲಿ ಸ್ವೀಕರಿಸಿ ಸಾಂಸ್ಕೃತಿಕವಾಗಿ ಬೆಳೆಸಿದ್ದಾರೆ ಎಂದು ಅವರು ನೆನಪು ಮಾಡಿಕೊಂಡರು.
ಡಾ.ಸುಂದರ್ ಕೇನಾಜೆ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಜೀವನ್ರಾಂ ಸುಳ್ಯ ನಿರ್ದೆಶನದ ಧಾಂ ಧೂಂ ಸುಂಟರಗಾಳಿ ನಾಟಕ ಪ್ರದರ್ಶನಗೊಂಡಿತು.