ಅರಂಬೂರಿನ ಭಾರದ್ವಾಜಾಶ್ರಮದಲ್ಲಿ ವೇದಾಧ್ಯಯನಕ್ಕೆ ಬಂದಿದ್ದ ಯುವಕನೊಬ್ಬ ಸಹಪಾಠಿಗಳೊಂದಿಗೆ ಸ್ನಾನಕ್ಕೆಂದು ನದಿಗೆ ಹೋಗಿದ್ದಾಗ ಕಾಲು ಜಾರಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಪುತ್ತೂರಿನ ಕೌಡಿಚ್ಚಾರು ಬಳಿಯ ದರ್ಬೆತಡ್ಕ ನಿವಾಸಿ ಮಾವಿನಡಿ ಮನೆ ಗೋಪಾಲಕೃಷ್ಣ ಭಟ್ ಎಂಬವರ ಪುತ್ರ ಉದನೇಶ್ವರ ಭಟ್ (18) ಪಿಯು ವಿದ್ಯಾಭ್ಯಾಸ ಪೂರೈಸಿ ಅರಂಬೂರಿನಲ್ಲಿರುವ ಭಾರದ್ವಾಜಾಶ್ರಮಕ್ಕೆ ವೇದಾಧ್ಯಯನಕ್ಕಾಗಿ ಸೇರಿದ್ದರು.
ಮಾ.7 ರಂದು ಸಂಜೆ 5 ಗಂಟೆ ವೇಳೆಗೆ ವೇದಾಧ್ಯಯನ ತರಗತಿಯ ಏಳು ಮಂದಿ ವಿದ್ಯಾರ್ಥಿಗಳು ಪಕ್ಕದ ಪಯಸ್ವಿನಿ ನದಿಗೆ ಸ್ನಾನಕ್ಕೆ ತೆರಳಿದ್ದರು. ಅಲ್ಲಿ ನೀರಲ್ಲಿ ಆಟವಾಡುತ್ತಿದ್ದಾಗ ಉದನೇಶ್ವರ ನೀರಲ್ಲಿ ಮುಳುಗಿದನೆನ್ನಲಾಗಿದೆ. ಆದರೆ ಇದು ಜತೆಗಿದ್ದ ಹುಡುಗರಾರಿಗೂ ತಿಳಿದಿರಲಿಲ್ಲ. 5.30ರ ಬಳಿಕ 6 ಮಂದಿ ಹುಡುಗರು ನದಿಯಿಂದ ಹಿಂತಿರುಗಿದರು. ಉದನೇಶ್ವರ ಕಾಣದಿದ್ದುದರಿಂದ ಆತ ಆಶ್ರಮಕ್ಕೆ ಹಿಂತಿರುಗಿರಬೇಕೆಂದು ಜತೆಗಿದ್ದವರು ಭಾವಿಸಿದ್ದರು. ಆದರೆ ಆತನ ಪಾದರಕ್ಷೆಗಳು ನದಿಗೆ ಇಳಿಯುವ ಸ್ಥಳದಲ್ಲಿ ಕಂಡು ಬಂದುದರಿಂದ ವಿದ್ಯಾರ್ಥಿಗಳು ಅನುಮಾನಗೊಂಡರು. ಅವರು ಆಶ್ರಮಕ್ಕೆ ಬಂದು ನೋಡಿದಾಗ ಉದನೇಶ್ವರ ಬಾರದಿರುವುದು ತಿಳಿದು ಆಶ್ರಮದ ಹಿರಿಯರಿಗೆ ವಿಷಯ ತಿಳಿಸಿದರು.
ಎಲ್ಲರೂ ಸೇರಿ ನದಿಯಲ್ಲಿ ಹುಡುಕಾಡಿದರೂ ಯುವಕ ಪತ್ತೆಯಾಗಲಿಲ್ಲ. ಊರವರು ಕೂಡಾ ಹುಡುಕಾಟಕ್ಕೆ ಸೇರಿದರು. ಕತ್ತಲಾದ ಬಳಿಕ ಆತ ಸ್ನಾನ ಮಾಡುತ್ತಿದ್ದ ನೀರಿನ ಗುಂಡಿಯಲ್ಲಿ ಮೃತದೇಹ ಪತ್ತೆಯಾಯಿತು.