ಆರೋಪಿಗಳನ್ನು ಬಂಧಿಸಿಲ್ಲ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯಿಂದ ಬೆಳ್ಳಾರೆ ಠಾಣೆ ಎದುರು ಪ್ರತಿಭಟನೆ
ಆರೋಪಿಗಳನ್ನು 3 ದಿನದ ಒಳಗೆ ಬಂಧಿಸದಿದ್ದರೆ ಉಗ್ರ ಪ್ರತಿಭಟನೆಗೆ ನಿರ್ಧಾರ
ಎಡಮಂಗಲ ಗ್ರಾಮದ ಕಜೆತ್ತಡ್ಕ ಎಂಬಲ್ಲಿ ದಲಿತ ಮಹಿಳೆಯ ಮನೆ ಧ್ವಂಸ ಮಾಡಿದ ಆರೋಪಿಗಳ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಆರೋಪಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಬೆಳ್ಳಾರೆ ಪೊಲೀಸ್ ಠಾಣೆಯ ಎದುರು ಪ್ರತಿಭಟನೆಯು ಮಾ.9 ರಂದು ನಡೆಯಿತು.
ಕಜೆತ್ತಡ್ಕ ಬಾಲಕಿ ಎಂಬವರು ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಮನೆಯನ್ನು ರವಿ ಶೆಟ್ಟಿ ಮತ್ತು ಪತ್ನಿ ವಿದ್ಯಾ ಹಾಗೂ ಇತರ ಇಬ್ಬರು ಮನೆ ಧ್ವಂಸಗೊಳಿಸಿದ್ದು ,ತನ್ನನ್ನು ಜಾತಿನಿಂದನೆ,ಅವಾಚ್ಯ ಶಬ್ಧಗಳಿಂದ ಬೈದು,ಕೈಯಿಂದ ಹಲ್ಲೆ ನಡೆಸಿದ್ದಾರಲ್ಲದೆ ಬಟ್ಟೆಯನ್ನು ಹರಿದು ಮಾನಭಂಗಕ್ಕೆ ಯತ್ನಿಸಿರುವುದಾಗಿ ಮತ್ತು ಕೊಲೆ ಬೆದರಿಕೆ ಒಡ್ಡಿರುವುದಾಗಿ ಬೆಳ್ಳಾರೆ ಠಾಣೆಯಲ್ಲಿ ಮಾ.4 ರಂದು ದೂರು ನೀಡಲಾಗಿತ್ತು.
ಆದರೆ ಆರೋಪಿಗಳನ್ನು ಪೊಲೀಸರು ಇಲ್ಲಿಯವರೆಗೆ ಬಂಧಿಸಿಲ್ಲ ಎಂದು ಆರೋಪಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆಯವರು ಪ್ರತಿಭಟನೆ ನಡೆಸಿದರು.
ಠಾಣೆಯ ಎದುರು ಪ್ರತಿಭಟನೆ ನಡೆಸಿ ಪೊಲೀಸ್ ಅಧಿಕಾರಿಯವರ ವಿರುದ್ಧ ಧಿಕ್ಕಾರ ಹಾಕಿದರು.
ದಲಿತ ಸೇವಾ ಸಮಿತಿ ಸ್ಥಾಪಕ ಜಿಲ್ಲಾಧ್ಯಕ್ಷ ಶೇಷಪ್ಪ ಬೆದ್ರಕಾಡು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ದಲಿತ ಮಹಿಳೆಗೆ ಅನ್ಯಾಯವಾಗಿದೆ ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ.ಕೇಸು ದಾಖಲಾಗಿ ಒಂದು ವಾರ ಆಗಿದೆ.
ಘಟನೆಯನ್ನು ಖಂಡಿಸುವ ಕೆಲಸ ಆಗಬೇಕು.ದಲಿತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ.
ಅನ್ಯಾಯ ಆದ ಮಹಿಳೆಗೆ ನಾವು ಅದೇ ಜಾಗದಲ್ಲಿ ಮನೆ ಕಟ್ಟಿ ಕೊಡುತ್ತೇವೆ ಎಂದು ಹೇಳಿದರು.
ಆರೋಪಿಗಳನ್ನು 3 ದಿನ ಗಳೊಳಗೆ ಬಂಧಿಸದಿದ್ದಲ್ಲಿ ಡಿವೈಎಸ್ ಪಿ ಕಚೇರಿಯ ಮುಂದೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ ಪಾಟಾಜೆ, ವಿಜಯ ಪಾಟಾಜೆ,ಉಪಾಧ್ಯಕ್ಷ ಮಂಜುನಾಥ ಶಾಂತಿಮೂಲೆ,ರಾಜೇಶ ನೆಟ್ಟಾರು,ಕರುಣಾಕರ,ಅಚ್ಚುತ ಮಲ್ಕಜೆ, ವಸಂತ ಕುದ್ಪಾಜೆ,ರಾಘವ ಕಡಬ, ಆನಂದ ನಿಡ್ಮಾರ್, ಅಣ್ಣಿ ಎಲ್ತಿಮಾರ್ , ದಿನೇಶ ಅಗಲ್ತಾಡಿ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ಬೆಳ್ಳಾರೆ ಅಂಬೇಡ್ಕರ್ ಭವನದ ಹತ್ತಿರದಿಂದ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಘೋಷಣೆ ಧಿಕ್ಕಾರ ಕೂಗಿಕೊಂಡು ಬಂದು ಠಾಣೆಯ ಗೇಟಿನ ಎದುರು ಪ್ರತಿಭಟನೆ ನಡೆಸಿದರು.
ಠಾಣೆಯ ಗೇಟನ್ನು ಹಾಕಲಾಗಿತ್ತು.ಪ್ರತಿಭಟನಾಕಾರರು ಗೇಟಿನ ಹೊರಗಡೆ ಪ್ರತಿಭಟನೆ ನಡೆಸಿದರು.
ಸುಳ್ಯ ಎಸ್.ಐ.ಹರೀಶ್ ಮತ್ತು ಸುಳ್ಯ ಬೆಳ್ಳಾರೆಯ ಪೊಲೀಸರು ಬಂದೋಬಸ್ತ್ ನಡೆಸಿದರು.