ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ವಿಷ್ಣುನಗರದಲ್ಲಿರುವ ಪುರಾತನ ಕಾಲದಿಂದ ಆರಾಧಿಸಿಕೊಂಡು ಬರುತ್ತಿರುವ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಸಮಾಲೋಚನಾ ಸಭೆಯು ಮಾ. 9 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು. ಮುಂದಿನ ಒಂದು ವರ್ಷದ ಅವಧಿಯಲ್ಲಿ ದೈವಸ್ಥಾನದ ಆಲಯ ನಿರ್ಮಾಣ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಪ್ರಕಾರ ಜೀರ್ಣೋದ್ಧಾರ ಸಮಿತಿಯನ್ನು ಮಾ.11 ರಂದು ನಡೆಯಲಿರುವ ಸಭೆಯಲ್ಲಿ ರಚಿಸುವ ಬಗ್ಗೆ ಪ್ರಸ್ತಾಪಿಸಲಾಯಿತು.
ದೈವಸ್ಥಾನದ ನಿರ್ಮಾಣದ ನೀಲ ನಕಾಶೆ ಹಾಗೂ ಅಂದಾಜು ಖರ್ಚು ವೆಚ್ಚದ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ವಾಸ್ತು ಶಿಲ್ಪಿ ಪ್ರಸನ್ನ ಮುಳಿಯಾಲ ರವರು ಸಭೆಗೆ ತಿಳಿಸಿದರು. ದೈವಸ್ಥಾನದ ಆಡಳಿತ ಮೊಕ್ತೇಸರ ಯಂ.ಜಿ. ಸತ್ಯನಾರಾಯಣ ಮಾಯಿಪಡ್ಕ ರವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪದ್ಯಾಣ ನಾರಾಯಣ ಭಟ್, ವಿಶ್ವೇಶ್ವರ ಉಪಾಧ್ಯಾಯ , ಶ್ರೀಶ ಕುಮಾರ್ ಎಂ.ಎಸ್, ಹರ್ಷಕುಮಾರ್ ಎಂ.ಎಸ್, ಪ್ರಕಾಶ್ ಎಂ.ಎಸ್ ಉಪಸ್ಥಿತರಿದ್ದರು. ಪದ್ಮನಾಭ ಬೊಳ್ಳೂರು ಸ್ವಾಗತಿಸಿದರು. ವಿನಯ ಸಂಕೇಶ ವಂದಿಸಿದರು. ಗ್ರಾಮದ ಭಕ್ತಾದಿಗಳು ಪಾಲ್ಗೊಂಡಿದ್ದರು.