ಸುಳ್ಯದಲ್ಲಿ ರೈತ ಸಂಘದ ವತಿಯಿಂದ ಸರಕಾರಕ್ಕೆ ಒತ್ತಾಯ
ಅಡಿಕೆ ಎಲೆ ಹಳದಿ ರೋಗ ಸಂಶೋಧನಾ ಕೇಂದ್ರ ಸುಳ್ಯದಲ್ಲೇ ಆಗಬೇಕು ಮತ್ತು ಸಂಶೋಧನೆ ಸುಳ್ಯದಿಂದಲೇ ಆರಂಭವಾಗಬೇಕು ಎಂದು ಸುಳ್ಯ ತಾಲೂಕು ರೈತ ಸಂಘ ಸರಕಾರವನ್ನು ಒತ್ತಾಯಿಸುವುದಾಗಿ ಸಂಘದ ಗೌರವಾಧ್ಯಕ್ಷ ಪದ್ಮನಾಭ ಗೌಡ ನೂಜಾಲು ಮತ್ತು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಹೇಳಿದ್ದಾರೆ.
ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೈತ ಸಂಘದ ಪದಾಧಿಕಾರಿಗಳು ಈ ಕುರಿತು ಆಗ್ರಹ ವ್ಯಕ್ತ ಪಡಿಸಿದರು.
ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿ, ಅಡಿಕೆ ಎಲೆ ಹಳದಿ ರೋಗದ ಕುರಿತು ಈ ಹಿಂದೆ ಮಂಗಳೂರಿನಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳಿದ್ದು ಸಭೆ ನಡೆದಾಗ ಹಳದಿ ಎಲೆ ರೋಗ ಇರುವ ಪ್ರದೇಶದ ಅಡಿಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ನಾವು ಒತ್ತಾಯಿಸಿದ್ದೆವು. ಆದರೆ ಅದು ಆಗಿಲ್ಲ. ಈಗ ಸರಕಾರ ಬಜೆಟ್ ನಲ್ಲಿ ಸಂಶೋಧನೆ ಗೆಂದು 25 ಕೋಟಿ ರೂ ಇಟ್ಟಿದೆ. ಇದು ರೈತರಿಗೆ ಉಪಯೋಗಕ್ಕೆ ಬರುವುದಿಲ್ಲ. ಆಕಾಶದಲ್ಲಿರುವ ನಕ್ಷತ್ರವನ್ನು ತೋರಿಸಿದಂತೆ ಆಗಿದೆ. ಅಡಿಕೆ ಎಲೆ ಹಳದಿ ರೋಗ ಆರಂಭಗೊಂಡಿರುವುದು ಸುಳ್ಯದಿಂದಲೇ ಆಗಿರುವುದರಿಂದ ಸಂಶೋಧನಾ ಕೇಂದ್ರ ಸುಳ್ಯದಲ್ಲೇ ಆರಂಭವಾಗಿ, ಇಲ್ಲಿಂದಲೇ ಆರಂಭವಾಗಬೇಕು ಮತ್ತು ಕಾಲಮಿತಿಯಲ್ಲಿ ಸಂಶೋಧನೆ ನಡೆಯಬೇಕು ಎಂದು ಒತ್ತಾಯಿಸಿದರು. ಸಂಶೋದನೆಗಳು ಈ ಹಿಂದೆ ಹಲವು ಆಗಿದೆ. ಆದು ಏನಾಗಿದೆ ? ಎಂದು ಪ್ರಶ್ನಿಸಿದ ಇವರು ಅಡಿಕೆ ಕೃಷಿ ಎಲೆ ಹಳದಿ ರೋಗ ಬಂದ ಪ್ರದೇಶದ ರೈತರ ಪೂರ್ಣ ಸಾಲ ಮನ್ನಾ ಮಾಡಬೇಕೆಂದು ಈಗಲೂ ಒತ್ತಾಯಿಸುವುದಾಗಿ ಹೇಳಿದರು.
ಗೌರವಾಧ್ಯಕ್ಷ ಪದ್ಮನಾಭ ಗೌಡ ನೂಜಾಲು ಮಾತನಾಡಿ ಅಡಿಕೆ ಎಲೆ ಹಳದಿ ರೋಗ ಸಂಶೋಧನೆ ಮೂಲ ವಿಚಾರಕ್ಕೆ ಹೋಗಲು ಇನ್ನೂ ಸಾಧ್ಯವಾಗಿಲ್ಲ. ಸರಕಾರ ಆರ್ಥಿಕ ವಾಗಿ ದುರ್ಬಲವಾಗಿರುವ ಅಡಿಕೆ ಕೃಷಿಕರಿಗೆ ಆರ್ಥಿಕ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಐತೂರಿನ ಪ್ರಸಾದ್ ಮೂಜೂರು ಎಂಬ ಕೃಷಿಕರ ಮನೆಗೆ ಅರಣ್ಯಾಧಿಕಾರಿಗಳು ರಾತ್ರಿ ವೇಳೆ ಮನೆಗಡ ನುಗ್ಗಿ ತೊಂದರೆ ನೀಡಿರುವ ಘಟನೆಯನ್ನು ಖಂಡಿಸುತ್ತೇವೆ ಎಂದ ಅವರು ಪ್ರಸಾದ್ ಘಟನೆಯ ಕುರಿತು ನೀಡಿರುವ ದೂರನ್ನು ದಾಖಲಿಸಿ ಪೋಲೀಸರು ತನಿಖೆ ನಡೆಸಬೇಕು ಎಂದು ಅವರು ಹೇಳಿದರು.
ರೈತ- ಕಾರ್ಮಿಕ ವಿರೋಧಿ ಕೃಷಿ ಕಾಯ್ದೆಗಳು ಹಾಗೂ ಕೃಷಿ ಕಾರ್ಮಿಕ ಸಂಹಿತೆಗಳ ರದ್ಧತಿಗಾಗಿ, ಆಹಾರ – ಉದ್ಯೋಗ – ಭೂಮಿ ಹಕ್ಕು ರಕ್ಷಣೆಗಾಗಿ, ಬೆಲೆ ಏರಿಕೆ, ಖಾಸಗೀಕರಣ ವಿರೋಧಿಸಿ ಮಾ.22 ರಂದು ವಿಧಾನ ಸೌಧ ಚಲೋ ಕಾರ್ಯಕ್ರಮ ಕ್ಕೆ ಸುಳ್ಯದಿಂದಲೂ ರೈತರ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ರಾದ ಭರತ್ ಕೊಂಪುಳಿ, ಶ್ರೀಧರ ಕೆ.ಕೆ., ದಿವಾಕರ ಪೈ ಅರಂಬೂರು, ಕೆ.ಆರ್.ಪ್ರಸಾದ್ ಇದ್ದರು.