ದೈವ ನರ್ತನದ ಸಂದರ್ಭ ಯಕ್ಷಗಾನ ನಿಲ್ಲಿಸಿದ್ದೇವೆ, ಕಲೆಗೆ ಅಪಚಾರವಾಗಿಲ್ಲ. ಗೊಂದಲ ಸೃಷ್ಟಿಸುವುದು ಸರಿಯಲ್ಲ : ಆಡಳಿತ ಮಂಡಳಿ ಸ್ಪಷ್ಟನೆ
ಮಾ.18 ಮತ್ತು ಮಾ.19ರಂದು ನಡೆದ ಮಾವಿನಕಟ್ಟೆಯ ಉದಯಗಿರಿ ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದ ಒತ್ತೆಕೋಲದ ಸಾಂಸ್ಕೃತಿಕ ಕಾರ್ಯಕ್ರಮದ ಸಂದರ್ಭ ನಡೆದ ಮಕ್ಕಳ ಯಕ್ಷಗಾನ ಪ್ರದರ್ಶನವನ್ನು ದೈವ ನರ್ತನದ ಸಂದರ್ಭ ಆಡಳಿತ ಮಂಡಳಿ ಸೂಚನೆ ನೀಡಿ ನಿಲ್ಲಿಸಿದ ಹಾಗೂ ಆ ಬಳಿಕ ಕೆಲವು ಮಾಧ್ಯಮಗಳಲ್ಲಿ ಯಕ್ಷಗಾನಕ್ಕೆ ಅಪಮಾನವಾಗಿದೆ ಎಂಬ ವರದಿ ಪ್ರಕಟಗೊಂಡು ಚರ್ಚೆ ನಡೆದ ಹಿನ್ನೆಲೆಯಲ್ಲಿ ” ದೈವ ನರ್ತನದ ಸಂದರ್ಭ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಿಲ್ಲ. ಮಾ.18ರಂದು ರಾತ್ರಿ ನಡೆದ ಯಕ್ಷಗಾನವನ್ನು ದೈವ ನರ್ತನಕ್ಕೆ ಮೊದಲು ನಿಲ್ಲಿಸುವಂತೆ ಸೂಚಿಸಿದ್ದೇವೆ. ಆದರೆ ಅವರು ನಿಲ್ಲಿಸಿರಲಿಲ್ಲ. ದೈವ ನರ್ತನದ ಸಂದರ್ಭ ಯಕ್ಷಗಾನ ಮುಂದುವರೆಸುವುದು ಸರಿಯಲ್ಲದ ಕಾರಣ ನಿಲ್ಲಿಸಿದ್ದೇವೆ. ಯಕ್ಷಗಾನದ ಮೇಲೆ ಗೌರವವಿದೆ. ಅಭಿಮಾನವಿದೆ. ಯಕ್ಷಗಾನಕ್ಕೆ ಎಂದೂ ಅವಮಾನ ಮಾಡಿಲ್ಲ. ದೈವ ನರ್ತನ ಮುಗಿಸಿದ ಬಳಿಕ ಯಕ್ಷಗಾನ ಮುಂದುವರೆಸಬಹುದಿತ್ತು. ಗೊಂದಲ ಸೃಷ್ಟಿ ಮಾಡುವ ಉದ್ದೇಶದಿಂದ ಈ ರೀತಿ ಪ್ರಚಾರ ಮಾಡಲಾಗುತ್ತಿದೆ ” ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ಏನಿದು ಘಟನೆ ?: ಮಾವಿನಕಟ್ಟೆ ಒತ್ತೆಕೋಲ ದ ಸಂದರ್ಭ ಪ್ರತಿ ವರ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯಿಂದ ಮರುದಿನ ಮುಂಜಾನೆಯವರೆಗೆ ನಡೆಯುತ್ತಿತ್ತು. ಆದರೆ ಈ ಬಾರಿ ಎಲ್ಲಾ ಕಾರ್ಯಕ್ರಮಗಳು ಮಧ್ಯರಾತ್ರಿ ಯವರೆಗೆ ಮಾತ್ರ ನಡೆಸುವಂತೆ ನಿರ್ಧರಿಸಲಾಗಿತ್ತು. ಅದರಂತೆ ಮಾ.18ರಂದು ರಾತ್ರಿ ಮೇಲೇರಿಗೆ ಅಗ್ನಿಸ್ಪರ್ಶವಾದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿತ್ತು. ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾಕೇಂದ್ರ ವಳಲಂಬೆ ಹಾಗೂ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರ ಕಲಾಕ್ಷೇತ್ರ ಪಂಜ ಇದರ ವಿದ್ಯಾರ್ಥಿಗಳಿಂದ ಮೊದಲು ಭಾರ್ಗವ – ರಾಮ ಎಂಬ ಕಥಾಭಾಗ ಪ್ರದರ್ಶನವಾಯಿತು. ದೈವದ ಕುಳ್ಚಾಟ ಆರಂಭವಾಗುವಾಗ ಯಕ್ಷಗಾನ ನಿಲ್ಲಿಸುವಂತೆ ನಿರ್ದೇಶಕರಿಗೆ ಸೂಚಿಸಲಾಗಿತ್ತೆನ್ನಾಗಿದೆ. ಮೊದಲ ಪ್ರಸಂಗ ಮುಗಿದ ಬಳಿಕ ಸೇನೆಯಿಂದ ನಿವೃತ್ತರಾದ ಕ್ಯಾಪ್ಟನ್ ರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಯಕ್ಷಗಾನ ಗುರು ಹಾಗೂ ನಿರ್ದೇಶಕ ಗಿರೀಶ್ ನಡುಗಲ್ಲುರವರನ್ನು ಸನ್ಮಾನಿಸಲಾಗಿತ್ತು. ಇದರ ಬಳಿಕ ಮಾರಣಾಧ್ವರ ಪ್ರಸಂಗ ಆರಂಭಗೊಂಡಿತು. ಈ ಪ್ರಸಂಗ ಆರಂಭವಾಗಿ ಸ್ವಲ್ಪ ಹೊತ್ತಿನಲ್ಲಿ ದೈವದ ಕುಳ್ಚಾಟ ಆರಂಭವಾಯಿತು. ಹೀಗಾಗಿ ಆಡಳಿತ ಮಂಡಳಿಯವರು ಹೋಗಿ ಯಕ್ಷಗಾನ ನಿಲ್ಲಿಸುವಂತೆ ಸೂಚನೆ ನೀಡಿದರೆನ್ನಲಾಗಿದೆ. ಕೆಲವು ಬಾರಿ ನಿಲ್ಲಿಸುವಂತೆ ಹೇಳಿದರೂ ಪ್ರದರ್ಶನ ನಿಲ್ಲದೇ ಇದ್ದ ಕಾರಣ ಆಡಳಿತ ಮಂಡಳಿ ಅಧ್ಯಕ್ಷ ಎ.ವಿ.ತೀರ್ಥರಾಮರವರು ಹೋಗಿ ಮೈಕ್ ಆಫ್ ಮಾಡಿ ಯಕ್ಷಗಾನ ನಿಲ್ಲಿಸಿದರೆನ್ನಲಾಗಿದೆ. ಬಳಿಕ ದೈವದ ಕುಳಿಚಾಟ ಮುಂದುವರೆಯಿತು.
ಯಕ್ಷಗಾನ ಅರ್ಧದಲ್ಲೇ ನಿಂತು ರಂಗದಲ್ಲಿ ಮಂಗಳ ಹಾಡಲು ಅಸಾಧ್ಯವಾಯಿತು. ಕಲಾವಿದರೂ ಅಸಮಾಧಾನಗೊಂಡರು. ಚೌಕಿಯಲ್ಲಿ ಮಂಗಳ ಹಾಡಿ ಮುಗಿಸಲಾಯಿತು.
ಯಕ್ಷಗಾನವನ್ನು ಅರ್ಧದಲ್ಲೇ ನಿಲ್ಲಿಸಿ ಕಲೆಗೆ ಅಪಮಾನ ಮಾಡಲಾಗಿದೆ ಎಂಬ ಕೆಲವು ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ರೀತಿ ಪ್ರಚಾರ ನಡೆದ ಹಿನ್ನೆಲೆಯಲ್ಲಿ ಸುದ್ದಿ ಸಂಬಂಧ ಪಟ್ಟವರನ್ನು ಸಂಪರ್ಕಿಸಿ ವಿಚಾರಿಸಿತು.
* ಒತ್ತೆಕೋಲ ಮಹೋತ್ಸವದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದೆವು. ಆದರೆ ದೈವದ ಕುಳ್ಚಾಟ ಆರಂಭವಾಗುವಾಗ ಯಕ್ಷಗಾನ ನಿಲ್ಲಿಸುವಂತೆ ಹೇಳಿದ್ದೆವು. ಆದರೆ ಅವರು ನಿಲ್ಲಿಸಿರಲಿಲ್ಲ. ನಾಲ್ಕೈದು ಬಾರಿ ಅವರಲ್ಲಿನಿಲ್ಲಿಸುವಂತೆ ಹೇಳಿದರೂ ನಿಲ್ಲಿಸಲಿಲ್ಲ. ಹಾಗಾಗಿ ದೈವದ ಕುಳ್ಚಾಟ ಸಂದರ್ಭ ಯಕ್ಷಗಾನ ಆಡುವುದು ಸರಿಯಲ್ಲವಾದ್ದರಿಂದ ಆಡಳಿತ ಮಂಡಳಿ ತೀರ್ಮಾನದಂತೆ ಮೈಕ್ ಆಫ್ ಮಾಡಿ ಯಕ್ಷಗಾನ ನಿಲ್ಲಿಸಿದ್ದೇವೆ. ಮತ್ತು ಕುಳ್ಚಾಟ ಆದ ಬಳಿಕ ಮುಂದುವರಿಸುವಂತೆ ಹೇಳಿದ್ದೇವೆ. ಯಕ್ಷಗಾನದ ಬಗ್ಗೆ ಅಭಿಮಾನವಿದೆ. ಗೌರವವಿದೆ. ಕುಳ್ಚಾಟದ ಸಂದರ್ಭ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂಪ್ರದಾಯವಿಲ್ಲ. ಈ ಬಗ್ಗೆ ಗೊಂದಲ ಸೃಷ್ಠಿಸುವುದು ಸರಿಯಲ್ಲ.
– ಎ.ವಿ.ತೀರ್ಥರಾಮ
ಅಧ್ಯಕ್ಷರು, ಆಡಳಿತ ಮಂಡಳಿ
* ನಮಗೆ ಸಂಪ್ರದಾಯದಂತೆ ದೈವದ ಕಾರ್ಯ ಮಾಡಬೇಕಾಗುತ್ತದೆ. ಅದನ್ನು ಮಾಡಿದ್ದೇವೆ.
– ರಾಧಾಕೃಷ್ಣ ಮಾವಿನಕಟ್ಟೆ
ಪ್ರಧಾನ ಕಾರ್ಯದರ್ಶಿ
ಆಡಳಿತ ಮಂಡಳಿ
* ಯಕ್ಷಗಾನದ ಮೇಲೆ ಗೌರವ ಅಭಿಮಾನವಿದೆ. ಯಕ್ಷಗಾನ ಅರ್ಧಕ್ಕೆ ನಿಲ್ಲಿಸುವ ಉದ್ದೇಶ ನಮ್ಮಲ್ಲಿರಲಿಲ್ಲ. ಟೀಕೆ ಮಾಡುವ ಮೊದಲು ನಿಜ ಸ್ಥಿತಿ ಯೋಚಿಸಬೇಕು.
– ಗೋಪಿನಾಥ ಮೆತ್ತಡ್ಕ
ಕೋಶಾಧಿಕಾರಿ
ಆಡಳಿತ ಮಂಡಳಿ
* ಸಂಪ್ರದಾಯದಂತೆ ದೈವದ ಕಾರ್ಯ ನಡೆಯುತ್ತಿರುವಾಗ ಯಕ್ಷಗಾನವನ್ನು ಆಡಳಿತ ಮಂಡಳಿಯವರು ಅರ್ಧಕ್ಕೆ ನಿಲ್ಲಿಸಿರುವುದು ತಪ್ಪಲ್ಲ. ನಾನು ಇಲ್ಲಿ ಈ ಮೊದಲು ಯಕ್ಷಗಾನ ಸಂಘಟನೆ ಮಾಡಿದ್ದಾಗ ಆಡಳಿತ ಮಂಡಳಿಯವರು ಅರ್ಧಕ್ಕೆ ನಿಲ್ಲಿಸಿದ್ದಾರೆ. ಗೊಂದಲ ಸೃಷ್ಠಿಸುವ ಉದ್ದೇದಿಂದಲೇ ಯಾರೋ ಈ ರೀತಿ ಪ್ರಚಾರ ಮಾಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕಿಂತ ದೈವದ ಕಾರ್ಯ ದೊಡ್ಡದು.
– ಶೇಖರ ಮಣಿಯಾಣಿ
ಯಕ್ಷಗಾನ ಸಂಘಟಕರು, ಕಲಾವಿದರು
* ಕಾರ್ಯಕ್ರಮ ಆಯೋಜನೆಯ ಬಗ್ಗೆ ಅನುಭವವಿಲ್ಲದವರು ಮಾತ್ರ ಈ ರೀತಿ ಅಪಪ್ರಚಾರ ಮಾಡುತ್ತಾರೆ. ಯಕ್ಷಗಾನ ನಿಲ್ಲಿಸಿದುದರಿಂದ ಮಕ್ಕಳ ಪೋಷಕರಿಗೆ ನಿರಾಸೆಯಾಗಿರಬಹುದು. ಆದರೆ ಆ ಸಂದರ್ಭಕ್ಕಷ್ಟೆ ನಿಲ್ಲಿಸಿದ್ದೇವೆ. ಮತ್ತೆ ಮುಂದುವರಿಸಲು ಅವಕಾಶವಿತ್ತು.
– ಭಾಸ್ಕರ ಬಾಳೆತೋಟ
ಆಡಳಿತ ಸಮಿತಿ ಸದಸ್ಯರು
ಈ ವಿದ್ಯಮಾನದ ಕುರಿತಂತೆ ಪ್ರತಿಕ್ರಿಯೆ ಪಡೆಯಲು ಯಕ್ಷಗಾನದ ನಿರ್ದೇಶಕ ಗಿರೀಶ್ ಗಡಿಕಲ್ಲು ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ.