ದುಬೈಗೆ ಹೋಗಿ ಬಾಕಿಯಾಗಿದ್ದ ಮಹಿಳೆ ಮತ್ತೆ ಊರಿಗೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ತಾಯಿಯ ಮನವಿಗೆ, ಮಕ್ಕಳ ಮೊರೆಗೆ ಸ್ಪಂದಿಸಿದ ಸಹೃದಯರು

ಸುದ್ದಿ ವರದಿಯ ಬಿಗ್ ಇಂಪಾಕ್ಟ್; ಮತ್ತೆ ಮನೆ ಸೇರಿದ ಶಶಿಕಲಾ

ತನ್ನ ಪರಿಚಯಸ್ಥರೊಂದಿಗೆ ಕೆಲಸಕ್ಕೆಂದು ವಿದೇಶಕ್ಕೆ ಹೋದ ಮಹಿಳೆ ಊರಿಗೆ ವಾಪಸ್ ಮರಳಲಾಗದೇ ತೊಂದರೆಗೆ ಸಿಲುಕಿದಾಗ, ಮಗಳನ್ನು ಊರಿಗೆ ವಾಪಸ್ ಕರೆಸಬೇಕೆಂದು ತಾಯಿ ಮಾಡಿದ ಮನವಿಯ ಆಧಾರದಲ್ಲಿ ಸುದ್ದಿ ಮೀಡಿಯ ಮಾಡಿದ ವರದಿ ಪರಿಣಾಮ ಅನೇಕರು ಮಾಡಿದ ಸ್ಪಂದನೆ ಮತ್ತು ಸಹಕಾರದ ಪರಿಣಾಮ ಮಹಿಳೆ ಸುರಕ್ಷಿತವಾಗಿ ಊರಿಗೆ ಮರಳಿದ್ದಾರೆ. ನಿನ್ನೆ ಬೆಳಿಗ್ಗೆ 7 ಗಂಟೆಗೆ ಅವರು ಕನಕಮಜಲಿನ ಬಾಡಿಗೆ ಮನೆಗೆ ಬಂದಿಳಿದ್ದಾರೆ.

ಕನಕಮಜಲು ಗ್ರಾಮದ ಸುಣ್ಣಮೂಲೆಯ ದಿ.ಕುಂಞಿರಾಮ ಮಣಿಯಾಣಿ – ರತ್ನಾವತಿ ದಂಪತಿಯ ಪುತ್ರಿ ಶಶಿಕಲಾ. ಅವರನ್ನು ಐನೆಕಿದು ಕೋಟೆಬೈಲಿನ ಬಾಲಕೃಷ್ಣರಿಗೆ ವಿವಾಹ ಮಾಡಿಕೊಡಲಾಗಿತ್ತು. 8 ವರ್ಷಗಳ ಹಿಂದೆ ಬಾಲಕೃಷ್ಣರು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಬಳಿಕ ಶಶಿಕಲಾ ತನ್ನ ಎರಡು ಪುಟ್ಟ ಹೆಣ್ಣು ಮಕ್ಕಳ ಜತೆ ತಾಯಿ ಮನೆ ಸೇರಿದ್ದರು. ತಾಯಿ ಮನೆಯಲ್ಲೇ ಇದ್ದ ಇವರು ತರುವಾಯ ಅಲ್ಲೇ ಪಕ್ಕದಲ್ಲಿ ಮನೆ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಿದ್ದರು.

ಸುಳ್ಯದ ವ್ಯಕ್ತಿಯೊಬ್ಬರ ಮಗಳು ದುಬೈಯಲ್ಲಿದ್ದು ಅವರ ಕೇಳಿಕೆಯ ಮೇರೆಗೆ ಎರಡು ವರ್ಷಗಳ ಹಿಂದೆ ಶಶಿಕಲಾ ದುಬೈಗೆ ಹೋಗಿ ಮನೆ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ೩ ತಿಂಗಳು ಕೆಲಸ ಮಾಡಿ, ಊರಿಗೆ ಮರಳಿದ್ದ ಶಶಿಕಲಾ, ಬಳಿಕ ದುಬೈಯಲ್ಲಿರುವಾಗ ಪರಿಚಯವಾಗಿದ್ದ ಮನೆಯೊಂದಕ್ಕೆ ಹೋಗಿ 6 ತಿಂಗಳು ಇದ್ದು ಬಂದಿದ್ದರು. ಕಳೆದ ವರ್ಷ ಫೆಬ್ರವರಿ ಯಲ್ಲಿ ಮೂರನೇ ಬಾರಿಗೆ ದುಬೈಗೆ ಹೋಗಿದ್ದ ಅವರು ನಂತರ ಕೆಲಸ ಇಲ್ಲದೆ ಸಂಕಷ್ಟಕ್ಕೊಳಗಾಗಿ ಅಲ್ಲೇ ಬಾಕಿಯಾಗಿದ್ದರು.

ಕನಕಮಜಲಿನಲ್ಲಿರುವ ತಾಯಿ ರತ್ನಾವತಿಯವರಿಗೆ ಮಗಳನ್ನು ಕಾಣದೆ ಹಾಗೂ ಶಶಿಕಲಾ ಅವರ ಮಕ್ಕಳಿಗೆ ತಾಯಿಯನ್ನು ಕಾಣದೆ ವೇದನೆಯಾಗಿತ್ತು. ಶಶಿಕಲಾ ಅವರನ್ನು ಊರಿಗೆ ಕರೆತರುವ ವ್ಯವಸ್ಥೆಯ ಕುರಿತು ರತ್ನಾವತಿಯವರು ಹಲವರೊಂದಿಗೆ ಹೇಳುತ್ತಿದ್ದರು. ಅವರ ಮನೆಯ ಸಮೀಪವೇ ಇರುವ ಸಾಮಾಜಿಕ ಧುರೀಣ ತೇಜಪ್ರಕಾಶ್ ಬುಡ್ಲೆಗುತ್ತುರವರು ಎರಡು ವಾರಗಳ ಹಿಂದೆ ಈ ತಾಯಿ ಮತ್ತು ಮೊಮ್ಮಕ್ಕಳನ್ನು ಸುದ್ದಿ ಕಛೇರಿಗೆ ಕರೆದುಕೊಂಡು ಬಂದರು.

ಒಂದು ವರ್ಷದ ಹಿಂದೆ ಹೋದ ಮಗಳು ವಾಪಸ್ ಬಂದಿಲ್ಲ. ದೂರವಾಣಿ ಕರೆ ಮಾಡುತ್ತಿದ್ದು ತನ್ನ ಪಾಸ್ ಪೋರ್ಟ್ ಸೇರಿದಂತೆ ಎಲ್ಲ ದಾಖಲೆಗಳನ್ನು ಈಗ ಕೆಲಸದಲ್ಲಿರುವ ಮನೆಯವರು ಹಿಡಿದಿಟ್ಟಿದ್ದಾರೆ. ವಾಪಸ್ ಬರಲು ಬಿಡುತ್ತಿಲ್ಲ ಎಂದು ಶಶಿಕಲಾ ನನ್ನೊಂದಿಗೆ ಹೇಳುತ್ತಿದ್ದಾಳೆ. ಮಗಳನ್ನು ಊರಿಗೆ ಕರೆಸಿಕೊಡಬೇಕು ಎಂದು ತಾನು ಸುಳ್ಯದ ಶಾಸಕರು, ಸಚಿವರು ಹಾಗೂ ಸರಕಾರವನ್ನು ಒತ್ತಾಯಿಸುವುದಾಗಿ ರತ್ನಾವತಿಯವರು ಸುದ್ದಿಯೊಂದಿಗೆ ತನ್ನ ಅಳಲು ಹೇಳಿಕೊಂಡರು.

ಅವರ ಹೇಳಿಕೆಯ ಆಧಾರದಲ್ಲಿ ಈ ಕುರಿತ ವಿಶೇಷ ಮಾನವೀಯ ಸ್ಟೋರಿಯು ಸುದ್ದಿ ಯುಟ್ಯೂಬ್ ಚಾನೆಲ್ ಹಾಗೂ ಫೇಸ್‌ಬುಕ್‌ನಲ್ಲಿ ಪ್ರಸಾರವಾಯಿತು. ಕೆಲವೇ ಗಂಟೆಗಳಲ್ಲಿ ಈ ವರದಿಯು ಸಾವಿರಾರು ಮಂದಿಯನ್ನು ತಲುಪಿ ಸಂಚಲನ ಸೃಷ್ಟಿಯಾಯಿತು, ಇದುವರೆಗೆ ಈ ಸ್ಟೋರಿಯನ್ನು 1 ಲಕ್ಷದ 10 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಸ್ಟೋರಿ ಪ್ರಕಟವಾದ ಬಳಿಕ ನೂರಾರು ಮಂದಿ ಸುದ್ದಿ ಕಛೇರಿ ಹಾಗೂ ಸುದ್ದಿ ಪ್ರತಿನಿಧಿಗಳಿಗೆ ಕರೆಮಾಡಿ ಈ ಕುರಿತ ಹೆಚ್ಚಿನ ಮಾಹಿತಿಯನ್ನು ಅಪೇಕ್ಷಿಸಿದರಲ್ಲದೆ ಸಂಬಂಧಪಟ್ಟ ಪಟ್ಟವರ ದೂರವಾಣಿ ಸಂಖ್ಯೆಗಳನ್ನೂ ಪಡೆದುಕೊಂಡರು. ದುಬೈ, ಕುವೈಟ್, ಅಜ್‌ಮಾನ್ ಸಹಿತ ವಿದೇಶದಲ್ಲಿರುವ ಹಲವು ಸಮಾಜಸೇವಾ ಸಂಘಟನೆಗಳು, ಮಂಗಳೂರಿನ ಬಳಕೆದಾರರ ವೇದಿಕೆಯ ಪ್ರತಿನಿಧಿಗಳು, ಸುಳ್ಯ ಪುತ್ತೂರಿನ ಹಲವು ಸಮಾಜಸೇವಾ ಮುಖಂಡರು ಹೀಗೆ ಸ್ಪಂದಿಸಿ ತಮ್ಮ ಪ್ರಯತ್ನ ಆರಂಭಿಸಿದರು. ತಮ್ಮ ಫೋನ್ ಮಾತುಕತೆಯ ವಿವರಗಳನ್ನು ಅವರು ಸುದ್ದಿಗೆ ಕಳುಹಿಸಿಕೊಟ್ಟಿದ್ದರು.

ಕೆಲವು ತಿಂಗಳ ಹಿಂದೆ ಈ ಮಹಿಳೆಯ ಕುರಿತಂತೆ ಮಾಹಿತಿ ಸಂಗ್ರಹಿಸಿದ್ದ ದುಬೈ ನಿವಾಸಿಗಳಾದ ಹರೀಶ್ ಕೋಡಿ ಮತ್ತು ಹಿದಾಯತ್ ಅಡ್ಡೂರ್ ಮತ್ತೆ ತಮ್ಮ ಪ್ರಯತ್ನ ನಡೆಸಿ ಶಶಿಕಲಾರನ್ನು ಸಂಪರ್ಕಿಸಿದರು. ರಫೀಕ್ ಅಲಿ ಶಶಿಕಲಾ ಅವರನ್ನು ಭೇಟಿ ಮಾಡಿದರು. ಊರಿಗೆ ಬಂದಿದ್ದ ದುಬೈಯ ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಧ್ಯಕ್ಷರಾದ ಹಸೈನಾರ್ ಅಮಾನಿಯವರು ಕನಕಮಜಲಿನ ರತ್ನಾವತಿಯವರ ಮನೆಗೂ ಭೇಟಿ ನೀಡಿದರು. ಕೆಸಿಎಫ್ ಸಂಘಟನೆಯ ಜೈನುದ್ದೀನ್ ಬೆಳ್ಳಾರೆಯವರು ದುಬೈಯಲ್ಲಿ ತಮ್ಮ ಪ್ರಯತ್ನ ನಡೆಸಿ ಆಕೆಯನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಆಲ್ ಇಂಡಿಯಾ ಮುಸ್ಲಿಂ ಡೆವಲೆಪ್‌ಮೆಂಟ್ ಫೋರಮ್‌ನ ಪದಾಧಿಕಾರಿಗಳು, ಕೂಡಾ ತಮ್ಮ ಪ್ರಯತ್ನ ನಡೆಸಿದರು. ಅಜ್‌ಮಾನ್ ಇಂಡಿಯನ್ ಎಸೋಸಿಯೇಶನ್, ಕನ್ನಡಿಗೆ ಫೆರೇಶನ್ ಸಂಘಟನೆಗಳು ವಿಶೇಷ ಪ್ರಯತ್ನ ನಡೆಸಿತು. ಹಲವರು ಆಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

ಭೇಟಿ ಮಾಡಿದವರಲ್ಲಿ ಶಶಿಕಲಾ ಅವರು ಊರಿಗೆ ಮರಳಲು ಆರಂಭದಲ್ಲಿ ಮನಸ್ಸು ಮಾಡಿರಲಿಲ್ಲ. ಇದಕ್ಕೆ ತನ್ನಲ್ಲಿ ಹಣವಿಲ್ಲದಿರುವುದು ಕಾರಣ ಎಂದು ಆಕೆ ಹೇಳಿಕೊಂಡಿದ್ದು, ಇಲ್ಲೇ ತನಗೆ ಒಂದು ಕೆಲಸಕೊಡಿಸಲು ಮನವಿ ಮಾಡಿಕೊಂಡಿದ್ದರು. ಆ ಪ್ರಯತ್ನಗಳು ನಡೆಯಿತಾದರೂ ರತ್ನಾವತಿಯವರಿಗೆ ಮಗಳು ಮನೆಗೆ ಮರಳಲೇ ಬೇಕೆಂಬ ಹಂಬಲವಿತ್ತು. ಕೊನೆಗೆ ಹಿದಾಯತ್ ಅಡ್ಡೂರ್ ಮತ್ತು ಹರೀಶ್ ಕೋಡಿ ಮತ್ತಿತರರು ಸಾಮಾಜಿಕ ಕಾರ್ಯಕರ್ತೆ ಛಾಯಾ ಕೃಷ್ಣಮೂರ್ತಿ, ಇಂಮ್ರಾನ್ ಎರ್ಮಾಳ್ ಮತ್ತಿತರರೊಂದಿಗೆ ನ್ಯಾಯವಾದಿ ಮೂಲಕ ಕಾನೂನು ತೊಡಕುಗಳ ನಿವಾರಣೆಗೆ ಮುಂದಾದರು. ಶಶಿಕಲಾ ಮೇಲಿದ್ದ ಪೊಲೀಸ್ ಕೇಸ್ ಇತ್ಯರ್ಥಗೊಳಿಸಿ, ಪಾಸ್‌ಪೋರ್ಟ್ ಕಳೆದುಹೋದ ಕಾರಣ ತಾತ್ಕಾಲಿಕ ವೈಟ್ ಪಾಸ್‌ಪೋರ್ಟ್ ಮಾಡಿ, ಇಮಿಗ್ರೇಶನ್ ದಂಡ ತೆತ್ತು, ಎಮರ್ಜೆನ್ಸಿ ಸರ್ಟಿಫಿಕೇಟ್ ಮಾಡಿ, ಕೊರೋನಾ ಪರೀಕ್ಷೆ ಮಾಡಿಸಿ, ಟಿಕೇಟ್ ಮಾಡಿ ಮನೆಗೆ ತಲುಪಿಸುವವರೆಗೆ ಅಜ್ಮಾನ್ ಇಂಡಿಯನ್ ಎಸೋಸಿಯೇಶನ್‌ನ ಈ ತಂಡ ಸಹಕಾರ ನೀಡಿತು. ಹರೀಶ್ ಕೋಡಿ ಮತ್ತಿತರರು ಇದಕ್ಕೆ ಸಂಬಂಧಪಟ್ಟ ವೆಚ್ಚವನ್ನೂ ಭರಿಸಲು ನೇತೃತ್ವ ವಹಿಸಿದರು. ಹರೀಶ್‌ರವರ ಪತ್ನಿ, ಸುದ್ದಿಯ ಮಾಜಿ ಉದ್ಯೋಗಿಯೂ ಆಗಿರುವ ಶ್ರೀಮತಿ ಮೀನಾ ಅವರೂ ಕೂಡಾ ಪೂರ್ಣ ಸಹಕಾರ ನೀಡಿದರು. ಇವರೆಲ್ಲರ ಪ್ರಯತ್ನದ ಫಲವಾಗಿ ಶಶಿಕಲಾ ಇದೀಗ ಊರು ಸೇರಿದ್ದಾರೆ.

ಮೊನ್ನೆ ರಾತ್ರಿ ಹರೀಶ್ ಕೋಡಿ, ಶ್ರೀಮತಿ ಮೀನಾ ಅವರು ಶಶಿಕಲಾ ಅವರನ್ನು ದುಬೈ ಏರ್‌ಪೋರ್ಟ್‌ಗೆ ಬಿಟ್ಟು ಬಂದರು. ಇವರಲ್ಲದೆ ಛಾಯಾ, ಇಮ್ರಾನ್, ಹಿದಾಯತ್ ಅಡ್ಡೂರ್ ಮೊದಲಾದವರು ಈ ಕುರಿತ ವ್ಯವಸ್ಥೆಗಳನ್ನು ನೋಡಿಕೊಂಡರು. ಮಂಗಳೂರು ಏರ್‌ಪೋರ್ಟ್‌ಗೆ ಶಶಿಕಲಾ ಅವರ ಸಹೋದರ ರವಿ ಮತ್ತು ಅವರ ಪತ್ನಿ ತೆರಳಿ ಶಶಿಕಲಾ ಅವರನ್ನು ಕನಕಮಜಲಿಗೆ ಕರೆತಂದರು. ಬೆಳಿಗ್ಗೆ ೭ ಗಂಟೆಯ ವೇಳೆಗೆ ಅವರು ಕನಕಮಜಲು ತಲುಪಿದರು. ತಾಯಿ ಮಗಳನ್ನೂ, ಮಕ್ಕಳು ತಾಯಿಯನ್ನೂ ಕಂಡು ಆನಂದತುಂದಿಲರಾದರು.
ಶಶಿಕಲಾ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸಲು ಮುಂಚೂಣಿಯಲ್ಲಿದ್ದ ಸುದ್ದಿ ಬಳಗ ಕನಕಮಜಲಿಗೆ ನಿನ್ನೆ ಭೇಟಿ ನೀಡಿ, ಶಶಿಕಲಾ ಅವರನ್ನು ಮಾತನಾಡಿಸಿತು. ಈ ಸಂದರ್ಭ ರತ್ನಾವತಿ, ಶಶಿಕಲಾ ಸುದ್ದಿ ಚಾನೆಲ್ ಪ್ರಯತ್ನಕ್ಕೆ ಕೃತಜ್ಞತೆ ಸಲ್ಲಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.