ಅಮರಮುಡ್ನೂರು ಗ್ರಾಮ ಪಂಚಾಯತ್ ವತಿಯಿಂದ ಏ.17 ರಂದು ನಡೆಯಲಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪೂರ್ವ ಭಾವಿ ಸಭೆಯು ಮಾ.24 ರಂದು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ರವರ ಅಧ್ಯಕ್ಷತೆಯಲ್ಲಿ
ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ವೇದಿಕೆಯಲ್ಲಿ ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮೀ, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಪಂಚಾಯತ್ ಅಧ್ಯಕ್ಷೆ ಪದ್ಮಪ್ರಿಯ ಮೇಲ್ತೋಟ, ತಾ.ಪಂ.ಸದಸ್ಯ ರಾಧಾಕೃಷ್ಣ ಬೊಳ್ಳೂರು, ಚೊಕ್ಕಾಡಿ ಪ್ರಾ. ಕೃ.ಪ.ಸ.ಸಂಘದ ಅಧ್ಯಕ್ಷ ರಾಘವೇಂದ್ರ ಪುಳಿಮಾರಡ್ಕ ಉಪಸ್ಥಿತರಿದ್ದರು. ಏ. 17 ರಂದು ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮರ ಸಹಕಾರ ಸದನದಲ್ಲಿ ನಡೆಯಲಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಜಿಲ್ಲಾಧಿಕಾರಿ ಮತ್ತು ತಾಲೂಕು ಆಡಳಿತದ ಎಲ್ಲಾ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಗ್ರಾಮಸ್ಥರು ಭಾಗವಹಿಸಲಿದ್ದಾರೆ. ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಕೈಗೊಂಡ ಯೋಜನೆಯ ಬಗ್ಗೆ ಮತ್ತು ಮೆಗಾ ಅಭಿವೃದ್ಧಿಯ ಕಾಮಗಾರಿಗಳ ಬಗ್ಗೆ ವಿವರವನ್ನು ಸಲ್ಲಿಸಬೇಕು. ಅಲ್ಲದೇ ಗ್ರಾಮದಲ್ಲಿರುವ ಮೂಲಭೂತ ಸಮಸ್ಯೆಯ ಬಗ್ಗೆ ಕಲೆ ಹಾಕಿ ಮಾಹಿತಿ ಸಂಗ್ರಹಿಸುವಂತೆ ಎ.ಸಿ.ಯವರು ಸೂಚನೆ ನೀಡಿದರು. ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು 20 ನಿಮಿಷದ ಜನಪರ ಕಾರ್ಯ ಯೋಜನೆಯ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡುವ ವ್ಯವಸ್ಥೆಗೆ ತಯಾರಾಗುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರು, ಸೊಸೈಟಿ ನಿರ್ದೇಶಕರು ಗ್ರಾಮದ ಕೆಲವು ಸಮಸ್ಯೆಗಳ ಬಗ್ಗೆ ಎ.ಸಿ.ಯವರ ಗಮನಕ್ಕೆ ತರುವ ಪ್ರಯತ್ನ ಮಾಡಿದರು. ಅಮರಮುಡ್ನೂರು ಪಂಚಾಯತ್ ಪಿ.ಡಿ ಒ. ಮತ್ತು ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.