ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷದ ಅಂಗವಾಗಿ ಮಾ.27 ರಂದು ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ತಾಣವಾಗಿರುವ ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ವಿಜಯೋತ್ಸವದ ದಿನವನ್ನು ಆಚರಿಸಲಾಗುವುದು ಎಂದು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಹೇಳಿದರು.
ಮಾ.25 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 1837 ಮಾರ್ಚ್ 30 ರಿಂದ ಎಪ್ರಿಲ್ 5 ರ ವರೆಗೆ ಅಮರ ಸುಳ್ಯ ದ ರೈತಾಪಿ ಜನರು ಬ್ರಿಟಿಷ್ ರ ವಿರುದ್ಧ ಬಂಡೆದ್ದು ಅಮರಸುಳ್ಯ ರೈತ ಕ್ರಾಂತಿ ನಡೆಸಿ ಬ್ರಿಟಿಷರನ್ನು ಮಂಗಳೂರಿನಿಂದ ಓಡಿಸಿ ಎರಡು ವಾರಗಳ ಪರ್ಯಂತ ಕೆನರಾ ಜಿಲ್ಲೆಯನ್ನು ಆಳಿದರು. ಕೊನೆಗೆ ಬ್ರಿಟಿಷರ ಕುತಂತ್ರಕ್ಕೆ ಬಲಿಯಾಗಿ ಹುತಾತ್ಮರಾದರು ಎಂದು ವಿವರ ನೀಡಿದರು.
ಇದು ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷ. ಅದರ ಅಂಗವಾಗಿ ಕರ್ನಾಟಕದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟ ಸ್ಥಳವಾದ ಶಿವಪುರ, ವಿದುರಾಶ್ವಥ ಮತ್ತು ಸುಳ್ಯದ ಬೆಳ್ಳಾರೆ ಯಲ್ಲಿ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವ ನಡೆಸಲು ಕೇಂದ್ರ ಸರಕಾರ ಉದ್ದೇಶಿಸಿದ್ದು ಮಾ.27 ರಂದು ದಿನವಿಡೀ ಕಾರ್ಯಕ್ರಮ ನಡೆಯುವುದು. ಬೆಳ್ಳಾರೆ ಯ ಬಂಗ್ಲೆಗುಡ್ಡೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು, ಒಳನಾಡು ಇಲಾಖಾ ಸಚಿವ ಎಸ್. ಅಂಗಾರ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲ, ಸ್ವಾತಂತ್ರ್ಯ ಹೋರಾಟದ ಕುರಿತು ಸಾಹಿತಿ ಡಾ.ಪ್ರಭಾಕರ ಶಿಶಿಲ ಉಪನ್ಯಾಸ ನೀಡಲಿದ್ದಾರೆ. ಸಭಾ ಕಾರ್ಯಕ್ರಮಕ್ಕೂ ಮೊದಲು ಬೆಳ್ಳಾರೆ ಪೇಟೆಯಿಂದ ಐತಿಹಾಸಿಕ ಸ್ಥಳವಾದ ಬಂಗ್ಲೆಗುಡ್ಡೆ ತನಕ ಮೆರವಣಿಗೆ ನಡೆಯಲಿದೆ.
ಅಮೃತ ಮಹೋತ್ಸವ ಅಂಗವಾಗಿ ಬಂಗ್ಲೆಗುಡ್ಡೆಯಲ್ಲಿ ಒಂದು ಸ್ಮಾರಕ ಸೌಧ ನಿರ್ಮಿಸಲು ಉದ್ದೇಶಿಸಲಾಗಿದೆ. ರೈತಕ್ರಾಂತಿ ಬಗೆಗಿನ ವಸ್ತು ಸಂಗ್ರಹಾಲಯ ಗ್ರಂಥಲಾಯ ಮಾಡಲಾಗುವುದು. ಮಾ.30 ರಂದು ಬಂಗ್ಲೆಗುಡ್ಡೆಯಲ್ಲಿ ಅಮರ ಸುಳ್ಯ ರೈತಕ್ರಾಂತಿ ವಿಜಯೋತ್ಸವ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರಕಾರ, ರಾಜ್ಯ ಸರಕಾರ, ಜಿಲ್ಲಾಡಳಿತ, ಐವ ಕೇಂದ್ರ ಮಂಗಳೂರು, ಗ್ರಾ.ಪಂ. ಬೆಳ್ಳಾರೆ, ಸ್ನೇಹಿತರ ಕಲಾ ಸಂಘ, ಹೀಗೆ ಸಂಘ ಸಂಸ್ಥೆಗಳು ಸಹಕಾರದಲ್ಲಿ ಕಾರ್ಯಕ್ರಮ ನಡೆಯುವುದು.
ಪತ್ರಿಕಾಗೋಷ್ಠಿ ಯಲ್ಲಿ ಸಾಹಿತಿ ಡಾ.ಪ್ರಭಾಕರ ಶಿಶಿಲ, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಪನ್ನೆ, ಸ್ನೇಹಿತರ ಕಲಾ ಸಂಘದ ಅಧ್ಯಕ್ಷ ಸಂಜಯ್ ನೆಟ್ಟಾರು ಇದ್ದರು.