ಕೇರಳ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿ ಈ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿಗೆ ವಿವಿಧ ತಂತ್ರಗಾರಿಕೆಯನ್ನು ನಡೆಸುತ್ತಿದೆ. ಈಗಾಗಲೇ ಕಳೆದ ಚುನಾವಣೆಗಳಲ್ಲಿ ಮತಗಳಿಕೆಯಲ್ಲಿ ಗಮನಾರ್ಹ ನಿರ್ವಹಣೆಯನ್ನು ತೋರಿರುವ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ಕ್ಷೇತ್ರಗಳಿಗೆ ಕರ್ನಾಟಕದ ಹಲವು ಪ್ರಮುಖರನ್ನು ಪ್ರಭಾರಿಗಳನ್ನಾಗಿ ನೇಮಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಕೂಡ ಈ ತಂಡದಲ್ಲಿದ್ದಾರೆ. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಸುರೇಶ್ ಕಣೆಮರಡ್ಕರನ್ನು ತಿರುವನಂತಪುರದ ನೆಡುಮಾಂಗಾಡ್ ವಿಧಾನಸಭಾ ಕ್ಷೇತ್ರದ ಪ್ರಭಾರಿಗಳನ್ನಾಗಿ ನೇಮಿಸಲಾಗಿದ್ದು, ಕಳೆದ ಇಪ್ಪತ್ತು ದಿನಗಳಿಂದ ಆ ಕ್ಷೇತ್ರದಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಿರಿಯ ನಾಯಕ ಜೆ.ಆರ್. ಪದ್ಮಕುಮಾರ್ ಸ್ಪರ್ಧಿಸುತ್ತಿದ್ದಾರೆ. ಸುರೇಶ್ ಕಣೆಮರಡ್ಕರವರು ಕಳೆದ 2016 ನೇ ಕೇರಳ ಚುನಾವಣೆಯಲ್ಲಿ ಪಾಲಕ್ಕಾಡ್- ಮಲಂಬುಜ್ಹಾ ಕ್ಷೇತ್ರಗಳಲ್ಲಿ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದರು.