ಸುಳ್ಯದ ಜಯನಗರ ನಾರಾಜೆ ರಸ್ತೆಯ ಕಾಮಗಾರಿ ವಿವಿಧ ರೀತಿಯ ಪ್ರತಿಭಟನೆಗೆ ಕಾರಣವಾಗಿದೆ .
ಪರಿಶಿಷ್ಟ ಜಾತಿಯ ಅಭಿವೃದ್ಧಿ ನಿಧಿಯಿಂದ ಕಾಂಕ್ರೀಟೀಕರಣ ಕಾಮಗಾರಿ ಮಾಡುತ್ತಿರುವುದರಿಂದ ಆ ಕಾಮಗಾರಿಯು ಪರಿಶಿಷ್ಟರ ಕಾಲೊನಿಯ ಕಡೆಯಿಂದ ಆರಂಭ ಮಾಡಬೇಕೆಂದು ಸ್ಥಳೀಯ ದಲಿತ ಸಮುದಾಯದ ನಿವಾಸಿಗಳು ಮತ್ತು ದಲಿತ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದ್ದರಿಂದ ಆರಂಭಗೊಂಡಿದ್ದ ಕಾಮಗಾರಿ ಸ್ಥಗಿತಗೊಂಡಿತ್ತು.
ಇದರಿಂದ ಕಾಮಗಾರಿಗಾಗಿ ರಸ್ತೆ ಅಗೆದ ಪ್ರದೇಶದ ನಿವಾಸಿಗಳು ವ್ಯಗ್ರ ರಾಗಿದ್ದಾರೆ. ಈಗಾಗಲೇ ಕಾಮಗಾರಿ ಆರಂಭಗೊಳಿಸಿದಲ್ಲಿ ಕಾಂಕ್ರೀಟಿಕರಣ ಮಾಡಿ, ಇಲ್ಲದಿದ್ದಲ್ಲಿ ಅಗೆದ ಜಾಗದಲ್ಲಿ ಹಳೆಯ ರೀತಿಯಲ್ಲಿ ಡಾಮರೀಕರಣ ಮಾಡಿಕೊಡಿ ಎಂದು ಸ್ಥಳೀಯರು ಘಟನಾ ಸ್ಥಳದಲ್ಲಿ ಸೇರಿ ನಗರಪಂಚಾಯತ್ ನವರನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ನಿವಾಸಿ ಸಿಪಿಎಂ ಮುಖಂಡ ರಾಬರ್ಟ್ ಡಿಸೋಜ ನಾವು ರಸ್ತೆ ಅಭಿವೃದ್ಧಿಯ ಕಾರ್ಯಕ್ಕೆ, ಅಥವಾ ದಲಿತ ಸಮುದಾಯದ ಅಭಿವೃದ್ಧಿ ಕಾರ್ಯಕ್ಕೆ ತಡೆ ಮಾಡುತ್ತಿಲ್ಲ. ಇದೀಗ ಈ ರಸ್ತೆಗೆ ಸಂಬಂಧಿಸಿದಂತೆ ರಸ್ತೆಯ ಕಾಮಗಾರಿಗಾಗಿ ನಗರ ಪಂಚಾಯತ್ ವತಿಯಿಂದ ರಸ್ತೆಯನ್ನು ಅಗೆದು ಹಾಕಿದ್ದು, ಸಂಘಟನೆಗಳು ಪ್ರತಿಭಟನೆಗೆ ಇಳಿದಾಗ ಕಾಮಗಾರಿಯನ್ನು ನಿಲ್ಲಿಸಿರುವುದು ಸರಿಯಾದ ಕ್ರಮವಲ್ಲ .
ಅಗೆದು ಹಾಕಿರುವ ರಸ್ತೆಯನ್ನು ಮರುನಿರ್ಮಾಣ ಮಾಡಿಕೊಡಬೇಕು ಎಂದರು. ಸ್ಥಳೀಯ ನಿವಾಸಿ ಎಸ್ ವೈ ಅಬ್ದುಲ್ ರಹಿಮಾನ್ ಮಾತನಾಡಿ, ನಮ್ಮ ಈ ಪರಿಸರದಲ್ಲಿ ಸುಮಾರು 15ಕ್ಕೂ ಹೆಚ್ಚು ಮನೆಗಳಿದ್ದು ಈ ಎಲ್ಲಾ ಮನೆಯ ನಿವಾಸಿಗಳು ಇದೇ ರಸ್ತೆಯನ್ನು ಅವಲಂಬಿಸಿಕೊಂಡಿದ್ದೇವೆ.
ಇದೀಗ ರಸ್ತೆ ಅಭಿವೃದ್ಧಿಗೊಳ್ಳುತ್ತಿದೆ ಎಂದು ಸಂತೋಷದಲ್ಲಿ ಇದ್ದೆವು. ಆದರೆ ಕಾಮಗಾರಿ ಆರಂಭ ಮಾಡಿ ರಸ್ತೆ ಗಳನ್ನೆಲ್ಲಾ ಅಗೆದು ಹಾಕಿ ಇಲ್ಲಿ ನಡೆಯಬೇಕಾದ ಕಾಮಗಾರಿಯನ್ನು ಮತ್ತೊಂದೆಡೆಗೆ ಸ್ಥಳಾಂತರ ಮಾಡಿದರೆ ನಮಗೆ ತುಂಬಾ ಸಮಸ್ಯೆಯಾಗುತ್ತದೆ. ರಸ್ತೆ ಕಾಮಗಾರಿ ಎಲ್ಲಿ ಬೇಕಾದರೂ ಆಗಲಿ. ಈಗ ಅಗೆದು ಹಾಕಿರುವ ಈ ರಸ್ತೆಯನ್ನು ಮುಂಚಿನಂತೆ ಮಾಡಿಕೊಡಲಿ. ಕಾಮಗಾರಿ ಆರಂಭಗೊಂಡ ಸ್ಥಳವು ನಾರಾಜೆ ಕಾಲನಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ಮುಖ್ಯ ರಸ್ತೆಗೆ ತಾಗಿಕೊಂಡ ರಸ್ತೆ ಆದಕಾರಣ ಈ ಭಾಗದಲ್ಲಿ ವಾಹನ ಸಂಚಾರ ಗಳು ಹೆಚ್ಚಾಗಿ ಇರುತ್ತದೆ. ಮಳೆಗಾಲದಲ್ಲಿ ನೀರು ಹರಿದು ಪೈಪುಗಳು ಒಡೆದು ಹೋಗುತ್ತಿರುತ್ತದೆ. ಇವೆಲ್ಲವನ್ನು ಗಮನಿಸಿದರೆ ಕಾಂಕ್ರೀಟಿಕರಣ ಇದೇ ಜಾಗದಲ್ಲಿ ಆದರೆ ಉತ್ತಮ ಎಂದು ಹೇಳಿದರು.
ನ ಪಂ ಮಾಜಿ ಸದಸ್ಯೆ ಶ್ರೀಮತಿ ಜೂಲಿಯಾನ ಕ್ರಾಸ್ತ ಮಾತನಾಡಿ ಈಗಾಗಲೇ ಆರಂಭಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಎಂ. ರಾಮಚಂದ್ರ, ರಾಮಚಂದ್ರ ಭಟ್, ನವೀನ್ ಮಚಾದೊ, ಸುಂದರ ಕುತ್ಪಾಜೆ, ಸಲೀನ್, ಸೌಮ್ಯ, ಶರ್ಮಿಳಾ, ರಿಚರ್ಡ್ ಕ್ರಾಸ್ತ, ಶಿಯಾಬ್ ಮೊದಲಾದವರು ಉಪಸ್ಥಿತರಿದ್ದರು.