ದಿನಾಂಕ 20/07/2015 ರಂದು ಬೆಳಗ್ಗೆ 8:30 ರ ಸಮಯಕ್ಕೆ ಸುಳ್ಯ ತಾಲೂಕು ಅಮರಪಡ್ನೂರು ಗ್ರಾಮದ ನಡುಗಲ್ಲು ಎಂಬಲ್ಲಿಯ ನಿವಾಸಿ ರಾಮಕೃಷ್ಣ ಎಂಬುವರು ಸುಳ್ಯ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಸುಳ್ಯ ಪುತ್ತೂರು ರಾಜ್ಯ ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ, ಆರೋಪಿ ಅಮೃತೇಶ್ ಎಂಬವರು ಗಾಂಧಿನಗರ ಕಡೆಯಿಂದ ಸುಳ್ಯ ಜ್ಯೋತಿ ವೃತ್ತದ ಕಡೆಗೆ ತನ್ನ ಮೋಟಾರ್ ಸೈಕಲ್ ( KA 21 K 2341) ಅನ್ನು ಸವಾರಿ ಮಾಡಿಕೊಂಡು ಬರುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿ ನಿಂತಿದ್ದ ರಾಮಕೃಷ್ಣ ಎಂಬುವರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಮಕೃಷ್ಣ ಗೌಡರು ರಸ್ತೆಗೆ ಬಿದ್ದು ಜಖo ಗೊಂಡರು.
ಬಳಿಕ ಅವರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 28/07/2015 ರಂದು ಮೃತಪಟ್ಟಿದ್ದರು. ಆರೋಪಿ ಬೈಕ್ ಸವಾರ ಅಮೃತೇಶ್ ಆತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದೆ ಕಾರಣ ಎಂದು ಆರೋಪಿಯ ವಿರುದ್ದ ಆಗಿನ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ಬಿ. ಎಸ್. ಸತೀಶ್ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಮೇಲಿನ ಪ್ರಕರಣದಲ್ಲಿ ವಿಚಾರಣೆಯನ್ನು ನಡೆಸಿದ ಸುಳ್ಯ ಸಿವಿಲ್ ಜಡ್ಜ್ ಜೆ. ಎಮ್.ಎಫ್. ಸಿ. ಹಿರಿಯ ವಿಭಾಗದ ನ್ಯಾಯಾಧೀಶರಾದ ಯಂ.ಪುರುಷೋತ್ತಮ ರವರು ಆರೋಪಿಯ ವಿರುದ್ದ ಮಾಡಲಾದ ಆರೋಪವನ್ನು ಸಾಬೀತು ಪಡಿಸುವಲ್ಲಿ ಅಭಿಯೋಜನೆಯು ವಿಫಲವಾಗಿದೆ ಎಂಬ ಕಾರಣವನ್ನು ನೀಡಿ ಆರೋಪಿಯನ್ನು ದಿನಾಂಕ 08/03/2021 ರಂದು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ಸುಳ್ಯದ ನ್ಯಾಯವಾದಿಗಳಾದ ಯಂ. ವೆಂಕಪ್ಪ ಗೌಡ, ಚಂಪಾ ವಿ. ಗೌಡ ಹಾಗೂ ರಾಜೇಶ್ ಬಿ.ಜಿ.ಯವರು ವಾದಿಸಿದ್ದರು.